IND vs WI: ಜಡೇಜಾ ಸ್ಪಿನ್ ಜಾದೂ.. ಎರಡನೇ ಟೆಸ್ಟ್ನಲ್ಲೂ ಮುಗ್ಗರಿಸಿದ ವೆಸ್ಟ್ ಇಂಡೀಸ್
India vs West Indies 2nd Test: ಭಾರತ ಹಾಗೂ ವೆಸ್ಟ್ ಇಂಡೀಸ್ ನಡುವಿನ ಎರಡನೇ ಟೆಸ್ಟ್‌ನ ಎರಡನೇ ದಿನದಾಟ ಮುಕ್ತಾಯಗೊಂಡಿದೆ. ಭಾರತ 5 ವಿಕೆಟ್‌ಗೆ 518 ರನ್‌ಗಳಿಗೆ ಇನ್ನಿಂಗ್ಸ್ ಡಿಕ್ಲೇರ್ ಮಾಡಿದೆ; ಜೈಸ್ವಾಲ್ ಮತ್ತು ಗಿಲ್ ಶತಕ ಬಾರಿಸಿದರು. ದಿನದಾಟದ ಅಂತ್ಯಕ್ಕೆ ವೆಸ್ಟ್ ಇಂಡೀಸ್ 4 ವಿಕೆಟ್‌ಗೆ 140 ರನ್ ಗಳಿಸಿ, 378 ರನ್ ಹಿನ್ನಡೆಯಲ್ಲಿದೆ. ರವೀಂದ್ರ ಜಡೇಜಾ 3 ವಿಕೆಟ್ ಪಡೆದು ಮಿಂಚಿದ್ದಾರೆ.

ಭಾರತ ಮತ್ತು ವೆಸ್ಟ್ ಇಂಡೀಸ್ (India vs West Indies) ನಡುವಿನ ಎರಡನೇ ಟೆಸ್ಟ್ ಪಂದ್ಯದ ಎರಡನೇ ದಿನದಾಟ ಮುಕ್ತಾಯಗೊಂಡಿದೆ. ಭಾರತ ತನ್ನ ಮೊದಲ ಇನ್ನಿಂಗ್ಸ್ ಅನ್ನು ಐದು ವಿಕೆಟ್ ನಷ್ಟಕ್ಕೆ 518 ರನ್ ಗಳಿಸಿ ಡಿಕ್ಲೇರ್ ಮಾಡಿಕೊಂಡಿತು. ದಿನದಾಟದ ಅಂತ್ಯಕ್ಕೆ ವೆಸ್ಟ್ ಇಂಡೀಸ್ ತಂಡ ನಾಲ್ಕು ವಿಕೆಟ್ ನಷ್ಟಕ್ಕೆ 140 ರನ್ ಗಳಿಸಿ ಭಾರತಕ್ಕಿಂತ 378 ರನ್ ಹಿನ್ನಡೆಯಲ್ಲಿದೆ. ಆಟದ ಅಂತ್ಯಕ್ಕೆ ಶೈ ಹೋಪ್ 31 ರನ್ ಗಳಿಸಿದರೆ, ಟೆವಿನ್ ಇಮ್ಲಾಚ್ 14 ರನ್ ಗಳಿಸಿ ಅಜೇಯರಾಗಿ ಉಳಿದಿದ್ದಾರೆ. ಭಾರತದ ಪರ ರವೀಂದ್ರ ಜಡೇಜಾ ಇಲ್ಲಿಯವರೆಗೆ ಮೂರು ವಿಕೆಟ್ ಕಬಳಿಸಿದ್ದರೆ, ಕುಲ್ದೀಪ್ ಯಾದವ್ ಒಂದು ವಿಕೆಟ್ ಪಡೆದಿದ್ದಾರೆ.
ಜಡೇಜಾ ಜಾದೂಗೆ ವಿಂಡೀಸ್ ತತ್ತರ
ಬ್ಯಾಟಿಂಗ್ ಆರಂಭಿಸಿದ ವೆಸ್ಟ್ ಇಂಡೀಸ್ ತಂಡಕ್ಕೆ ಎಂದಿನಿಂದ ಆರಂಭಿಕ ಆಘಾತ ಎದುರಾಯಿತು. ಆರಂಭಿಕ ಜಾನ್ ಕ್ಯಾಂಪ್‌ಬೆಲ್ 10 ರನ್ ಗಳಿಸಿ ಔಟಾದರು. ನಂತರ ತೇಜ್‌ನಾರಾಯಣ್ ಚಂದ್ರಪಾಲ್ ಮತ್ತು ಅಲಿಕ್ ಅಥನಾಜೆ ಎರಡನೇ ವಿಕೆಟ್‌ಗೆ 66 ರನ್ ಜೊತೆಯಾಟವನ್ನಾಡಿದರು. ಆದರೆ ಜಡೇಜಾ, ಚಂದ್ರಪಾಲ್ ಅವರನ್ನು 34 ರನ್‌ಗಳಿಗೆ ಪೆವಿಲಿಯನ್‌ಗಟ್ಟುವ ಮೂಲಕ ಈ ಜೊತೆಯಾಟ ಮುರಿದರು. ನಂತರ ಕುಲ್ದೀಪ್, ಅಥನಾಜೆ ವಿಕೆಟ್ ಪಡೆದು ವೆಸ್ಟ್ ಇಂಡೀಸ್‌ಗೆ ಮೂರನೇ ಹೊಡೆತ ನೀಡಿದರು. ಅಥನಾಜೆ 41 ರನ್ ಗಳಿಸಿ ಔಟಾದರು. ನಂತರ ಬಂದ ನಾಯಕ ರೋಸ್ಟನ್ ಚೇಸ್ ಖಾತೆ ತೆರೆಯದೆ ಜಡೇಜಾಗೆ ಬಲಿಯಾದರು.
ದ್ವಿಶತಕ ವಂಚಿತ ಜೈಸ್ವಾಲ್
ಇದಕ್ಕೂ ಮೊದಲು 318 ರನ್ಗಳಿಂದ ಎರಡನೇ ದಿನದಾಟವನ್ನು ಮುಂದುವರೆಸಿದ ಭಾರತಕ್ಕೆ ಉತ್ತಮ ಆರಂಭ ಸಿಗಲಿಲ್ಲ. ದ್ವಿಶತಕದತ್ತ ಸಾಗುತ್ತಿದ್ದ ಯಶಸ್ವಿ ಜೈಸ್ವಾಲ್ ರನೌಟ್ಗೆ ಬಲಿಯಾದರು. ನಂತರ ಗಿಲ್, ನಿತೀಶ್ ರೆಡ್ಡಿ ಅವರೊಂದಿಗೆ ನಾಲ್ಕನೇ ವಿಕೆಟ್‌ಗೆ 91 ರನ್‌ಗಳ ಪಾಲುದಾರಿಕೆಯನ್ನು ಹಂಚಿಕೊಂಡರು. ಆದರೆ ಅರ್ಧಶತಕದಂಚಿನಲ್ಲಿ ಎಡವಿದ ನಿತೀಶ್ 43 ರನ್‌ಗಳಿಗೆ ಔಟಾದರು. ನಂತರ ಗೇರ್ ಬದಲಿಸಿದ ಗಿಲ್, ಎರಡನೇ ಸೆಷನ್‌ನಲ್ಲಿ ತಮ್ಮ 10 ನೇ ಟೆಸ್ಟ್ ಶತಕವನ್ನು ಪೂರೈಸಿದರು.
IND vs WI: ಶರವೇಗದಲ್ಲಿ ಬಂದ ಕ್ಯಾಚ್ ಸುದರ್ಶನ್ ಕೈಯೊಳಗೆ ಕುಳಿತಿದ್ದು ಹೇಗೆ ನೋಡಿ
ಗಿಲ್ ಅಜೇಯ ಶತಕ
ಇತ್ತ ಜುರೆಲ್ ಕೂಡ ಅರ್ಧಶತಕದ ಸಮೀಪದಲ್ಲಿ ಎಡವಿ 44 ರನ್‌ಗಳಿಗೆ ಔಟಾದರು. ಅಂತಿಮವಾಗಿ ಭಾರತ ಐದು ವಿಕೆಟ್ ನಷ್ಟಕ್ಕೆ 518 ರನ್ ಗಳಿಸಿ ಇನ್ನಿಂಗ್ಸ್ ಡಿಕ್ಲೇರ್ ಮಾಡಿತು. ತಂಡದ ಪರ ಯಶಸ್ವಿ ಜೈಸ್ವಾಲ್, ನಾಯಕ ಶುಭ್ಮನ್ ಗಿಲ್ ಶತಕ ಬಾರಿಸಿದರು. ಗಿಲ್ 129 ರನ್ ಗಳಿಸಿ ಅಜೇಯರಾಗಿ ಉಳಿದರು. ವೆಸ್ಟ್ ಇಂಡೀಸ್ ಪರ ಜೋಮೆಲ್ ವಾರಿಕನ್ ಮೂರು ವಿಕೆಟ್ ಪಡೆದರೆ, ರೋಸ್ಟನ್ ಚೇಸ್ ಒಂದು ವಿಕೆಟ್ ಪಡೆದರು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:58 pm, Sat, 11 October 25
