IPL 2022: ಐಪಿಎಲ್ನ 69ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಮುಂಬೈ ಇಂಡಿಯನ್ಸ್ (DC vs MI) ಮುಖಾಮುಖಿಯಾಗಲಿದೆ. ಆದರೆ ಈ ಪಂದ್ಯವು ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಆರ್‌ಸಿಬಿ (RCB) ಪಾಲಿಗೆ ನಿರ್ಣಾಯಕ. ಏಕೆಂದರೆ ಈ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಗೆದ್ದರೆ ಮಾತ್ರ ಪ್ಲೇಆಫ್ಗೆ ಅರ್ಹತೆ ಪಡೆಯಬಹುದು. ಹಾಗೆಯೇ ಮುಂಬೈ ಇಂಡಿಯನ್ಸ್ ಗೆದ್ದರೆ ಆರ್ಸಿಬಿಗೆ ಪ್ಲೇಆಫ್ ಚಾನ್ಸ್ ಸಿಗಲಿದೆ. ಹಾಗಾಗಿ ಡೆಲ್ಲಿ – ಮುಂಬೈ (MI vs DC) ಕದನವು ಆರ್‌ಸಿಬಿ ತಂಡದ ಪ್ಲೇಆಫ್ ಅನ್ನು ನಿರ್ಧರಿಸಲಿದೆ. ಹೀಗಾಗಿಯೇ ಇಂದಿನ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಗೆಲ್ಲಬೇಕೆಂದು ಆರ್‌ಸಿಬಿ ಅಭಿಮಾನಿಗಳು ಬಯಸುತ್ತಿದ್ದಾರೆ. ಒಂದು ವೇಳೆ ಡೆಲ್ಲಿ ಕ್ಯಾಪಿಟಲ್ಸ್ ಗೆದ್ದರೆ ಆರ್‌ಸಿಬಿ ತಂಡವು ಐಪಿಎಲ್ನಿಂದ ಹೊರಬೀಳಲಿದೆ. ಇದಾಗ್ಯೂ ಈ ಪಂದ್ಯದ ಫಲಿತಾಂಶ ಮುಂಬೈ ಇಂಡಿಯನ್ಸ್ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ.
ಏಕೆಂದರೆ ಆಡಿರುವ 13 ಪಂದ್ಯಗಳಲ್ಲಿ ಮುಂಬೈ ಇಂಡಿಯನ್ಸ್ ಕೇವಲ 3 ಗೆಲುವು ದಾಖಲಿಸಿ ಪಾಯಿಂಟ್ಸ್ ಟೇಬಲ್ನಲ್ಲಿ ಕೊನೆಯ ಸ್ಥಾನದಲ್ಲಿದೆ. ಮುಂಬೈ ಗೆದ್ದರೆ ಆರ್ಸಿಬಿಗೆ ಪ್ಲೇಆಫ್ ಚಾನ್ಸ್ ಸಿಗಲಿದೆ. ಸೋತರೆ ಡೆಲ್ಲಿ ಕ್ಯಾಪಿಟಲ್ಸ್ ಪ್ಲೇಆಫ್ ಪ್ರವೇಶಿಸಲಿದೆ. ಹೀಗಾಗಿಯೇ ಖುದ್ದು ವಿರಾಟ್ ಕೊಹ್ಲಿ, ಫಾಫ್ ಡುಪ್ಲೆಸಿಸ್ ಸೇರಿದಂತೆ ಬಹುತೇಕ ಆರ್‌ಸಿಬಿ ಆಟಗಾರರು ಮುಂಬೈ ಇಂಡಿಯನ್ಸ್ ಗೆಲ್ಲಲಿ ಎಂದು ಬಯಸಿದ್ದಾರೆ.
ಅದರಲ್ಲೂ ಒಂದು ಹೆಜ್ಜೆ ಮುಂದೆ ಹೋಗಿರುವ ವಿರಾಟ್ ಕೊಹ್ಲಿ, ಶನಿವಾರ ಮುಂಬೈ ಇಂಡಿಯನ್ಸ್ಗೆ ಹೆಚ್ಚುವರಿ 25 ಮಂದಿ ಬೆಂಬಲಿಗರು (ಆರ್‌ಸಿಬಿ ಆಟಗಾರರು ಮತ್ತು ಸಹಾಯಕ ಸಿಬ್ಬಂದಿ ಸೇರಿದಂತೆ) ಇರಲಿದ್ದಾರೆ. ಅವರು ಕ್ರೀಡಾಂಗಣದಿಂದ ಹುರಿದುಂಬಿಸುವುದನ್ನು ಸಹ ಕಾಣಬಹುದು ಎಂದಿದ್ದಾರೆ. ಈ ಮೂಲಕ ಪರೋಕ್ಷವಾಗಿ ಮುಂಬೈ ಇಂಡಿಯನ್ಸ್ ನಮ್ಮ ಸಪೋರ್ಟ್ ಎಂದು ತಿಳಿಸಿದ್ದಾರೆ. ಇತ್ತ ಆರ್‌ಸಿಬಿ ಅಭಿಮಾನಿಗಳು ಕೂಡ ಇಂದಿನ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಗೆಲ್ಲಬೇಕೆಂದು ಬಯಸುತ್ತಿದ್ದಾರೆ.
ಇದರ ಬೆನ್ನಲ್ಲೇ ಮಾಜಿ ಆರ್‌ಸಿಬಿ ಆಟಗಾರ ವಾಸಿಂ ಜಾಫರ್ ಹಂಚಿಕೊಂಡಿರುವ ಪೋಸ್ಟ್ವೊಂದು ಸಿಕ್ಕಾಪಟ್ಟೆ ವೈರಲ್ ಆಗಿದೆ. ಪಂದ್ಯವಾಡುತ್ತಿರುವುದು ಅವರು, ಆದರೆ ಪಂದ್ಯ ನಮ್ಮದು ಎಂಬ ಪೋಸ್ಟ್ವೊಂದನ್ನು ಜಾಫರ್ ಟ್ವಿಟರ್ನಲ್ಲಿ ಶೇರ್ ಮಾಡಿದ್ದಾರೆ. ಜೊತೆಗೆ ಇವತ್ತು ಆರ್‌ಸಿಬಿ ಅಂದರೆ ರಾಯಲ್ ಚಾಲೆಂಜರ್ಸ್ ಬಾಂಬೆ (RCB=Royal Challengers Bombay) ಎಂಬ ಕ್ಯಾಪ್ಷನ್ ನೀಡಿದ್ದಾರೆ.
Tonight, RCB = Royal Challengers Bombay ? #MIvDC #IPL2022 pic.twitter.com/leQm04ozXG
— Wasim Jaffer (@WasimJaffer14) May 21, 2022
ಇಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಮುಂಬೈ ಇಂಡಿಯನ್ಸ್ ಪಂದ್ಯವಾಡುತ್ತಿದ್ದರೂ, ಪಂದ್ಯದ ಫಲಿತಾಂಶ ಆರ್ಸಿಬಿಗೆ ಮುಖ್ಯ. ಹೀಗಾಗಿ ಆರ್‌ಸಿಬಿ ಅಭಿಮಾನಿಗಳ ಪಾಲಿಗೆ ಇದು ರಾಯಲ್ ಚಾಲೆಂಜರ್ಸ್ ಬಾಂಬೆ (ಮುಂಬೈ) ಪಂದ್ಯ ಎಂದು ವಾಸಿಂ ಜಾಫರ್ ಹಾಸ್ಯ ಚಟಾಕಿ ಹಾರಿಸಿದ್ದಾರೆ. ಒಟ್ಟಿನಲ್ಲಿ ಇಂದಿನ ಪಂದ್ಯವು ಮುಂಬೈ ಇಂಡಿಯನ್ಸ್ ಅಭಿಮಾನಿಗಳಿಗಿಂತ ಆರ್‌ಸಿಬಿ ಅಭಿಮಾನಿಗಳಿಗೆ ಬಹುಮುಖ್ಯ ಪಂದ್ಯವಾಗಿ ಮಾರ್ಪಟ್ಟಿದೆ. ಹೀಗಾಗಿ ಈ ಪಂದ್ಯದಲ್ಲಿ ಯಾರು ಗೆಲ್ತಾರೆ ಎಂಬುದೇ ಡೆಲ್ಲಿ ಕ್ಯಾಪಿಟಲ್ಸ್, ಮುಂಬೈ ಇಂಡಿಯನ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳ ಅಭಿಮಾನಿಗಳ ಕುತೂಹಲ.
ಹೆಚ್ಚಿನ IPL 2022 ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.