Virat Kohli: ರೋಚಕ ಗೆಲುವಿನ ಖುಷಿಯಲ್ಲಿ ಆರ್ಸಿಬಿ ನಾಯಕ ವಿರಾಟ್ ಕೊಹ್ಲಿ ಆಡಿದ ಮಾತು ಕೇಳಿ
RCB vs DC, IPL 2021: ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯ ಮುಗಿದ ಬಳಿಕ ಈ ರೋಚಕ ಗೆಲುವಿನ ಬಗ್ಗೆ ಮಾತನಾಡಿರುವ ಆರ್ಸಿಬಿ ನಾಯಕ ವಿರಾಟ್ ಕೊಹ್ಲಿ ಕೆಲವೊಂದಿಷ್ಟು ಮಾಹಿತಿಯನ್ನು ಹಂಚಿಕೊಂಡಿದ್ದಾರೆ.
ಐಪಿಎಲ್ 2021ರ (IPL 2021) ಕೊನೇಯ ಲೀಗ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಟೇಬಲ್ ಟಾಪರ್ ಡೆಲ್ಲಿ ಕ್ಯಾಟಪಿಲ್ಸ್ (RCB vs DC) ವಿರುದ್ಧ ರೋಚಕ ಜಯ ಸಾಧಿಸಿ ಟೂರ್ನಿಯಲ್ಲಿ ಒಂಬತ್ತನೇ ಗೆಲುವು ದಾಖಲಿಸಿತು. ಶ್ರೀಕರ್ ಭರತ್ (KS Bharat) ಹಾಗೂ ಗ್ಲೆನ್ ಮ್ಯಾಕ್ಸ್ವೆಲ್ (Glenn Maxwell) ಅವರ ಶತಕದ ಜೊತೆಯಾಟದ ನೆರವಿನಿಂದ ಕೊನೇಯ ಎಸೆತದ ವರೆಗೂ ನಡೆದ ಪಂದ್ಯದಲ್ಲಿ ಆರ್ಸಿಬಿ 7 ವಿಕೆಟ್ಗಳಿಂದ ಗೆದ್ದು ಬೀಗಿತು. ಪಂದ್ಯವನ್ನು ಬಹುತೇಕ ಕೈ ಚೆಲ್ಲಿದ್ದ ಕೊಹ್ಲಿ ಪಡೆಗೆ ಅಂತಿಮ ಒಂದು ಎಸೆತದಲ್ಲಿ 5 ರನ್ಗಳು ಬೇಕಾಗಿದ್ದವು. ಈ ಸಂದರ್ಭ ಕ್ರೀಸ್ನಲ್ಲಿದ್ದ ಭರತ್ ಆವೇಶ್ ಖಾನ್ (Avesh Khan) ಅವರ ಪುಲ್ಟ್ರಾಸ್ ಬಾಲ್ ಅನ್ನು ಸಿಕ್ಸರ್ಗೆ ಕನ್ವರ್ಟ್ ಮಾಡಿದರು. ಇದಾಗಿದ್ದೇ ತಡ ಡಗೌಟ್ನಲ್ಲಿದ್ದ ಆರ್ಸಿಬಿ ಆಟಗಾರರು ಖುಷಿಯಿಂದ ಮೈದಾನಕ್ಕೆ ಓಡಿ ಬಂದರು. ಅದರಲ್ಲೂ ನಾಯಕ ವಿರಾಟ್ ಕೊಹ್ಲಿ (Virat Kohli) ಓಡಿ ಬಂದು ಭರತ್ ಅವರನ್ನ ತಬ್ಬಿಕೊಂಡರು.
ಪಂದ್ಯ ಮುಗಿದ ಬಳಿಕ ಈ ರೋಚಕ ಗೆಲುವಿನ ಬಗ್ಗೆ ಮಾತನಾಡಿರುವ ವಿರಾಟ್ ಕೊಹ್ಲಿ ಕೆಲವೊಂದಿಷ್ಟು ಮಾಹಿತಿಯನ್ನು ಹಂಚಿಕೊಂಡಿದ್ದಾರೆ. “ಇದೊಂದು ಊಹೆಗೂ ಸಿಲುಕದ ಪಂದ್ಯ. ಈ ಪಂದ್ಯದಲ್ಲಿ ಕಳೆದುಕೊಳ್ಳಲು ಏನೂ ಇರಲಿಲ್ಲ. ಆದರೆ, ಇದೊಂದು ಸ್ಪರ್ಧಾತ್ಮಕ ಆಟ. ಆರಂಭದಲ್ಲೇ ವಿಕೆಟ್ ಕಳೆದುಕೊಂಡು ಅದರಲ್ಲೂ ಟೇಬಲ್ ಟಾಪ್ನಲ್ಲಿರುವ ತಂಡವನ್ನು ಸೋಲಿಸಿರುವುದು ಖುಷಿ ನೀಡಿದೆ. ನಾವೀಗ ಅವರನ್ನು ಎರಡು ಬಾರಿ ಸೋಲಿಸಿದ್ದೇವೆ. ಕೆ. ಎಸ್ ಭರತ್ ಮತ್ತು ಗ್ಲೆನ್ ಮ್ಯಾಕ್ಸ್ವೆಲ್ ಪಂದ್ಯವನ್ನು ಮುಗಿಸಿದ್ದು ಊಹೆಗೂ ಮೀರಿದ್ದು” ಎಂದು ಕೊಹ್ಲಿ ಹೇಳಿದ್ದಾರೆ.
“ನಾವು 160+ ರನ್ ಚೇಸ್ ಮಾಡಬೇಕಿತ್ತು. ಒಂದಾ ಆಲೌಟ್ ಆಗುತ್ತೇವೆ ಅಥವಾ ಗೆಲ್ಲಲು ಸಾಧ್ಯವಿಲ್ಲ ಎಂದು ಭಾವಿಸಿದ್ದೆ. ಆದರೆ, ನಮ್ಮೆಲ್ಲ ಯೋಚನೆಯನ್ನು ಇವರಿಬ್ಬರು (ಭರತ್-ಮ್ಯಾಕ್ಸ್ವೆಲ್) ಸುಳ್ಳು ಮಾಡಿದರು. ಈ ಗೆಲುವಿನಿಂದ ನಮ್ಮಲ್ಲಿ ತುಂಬಾ ಆತ್ಮವಿಶ್ವಾಸ ಬಂದಿದೆ. ಯಾವುದೇ ಸಂದರ್ಭದಲ್ಲಿ ಪಂದ್ಯವನ್ನು ಹಿಡಿತಕ್ಕೆ ತರುವ ಕಲೆ ಗೊತ್ತಾಗಿದೆ. ಈ ಟೂರ್ನಿಯಲ್ಲಿ ನಾವು ಟಾರ್ಗೆಟ್ ಬೆನ್ನಟ್ಟಿದ್ದು ಕೆಲವು ಪಂದ್ಯಗಳಲ್ಲಿ ಮಾತ್ರ. ನಂಬರ್ 3 ನಮ್ಮ ತಂಡದಲ್ಲಿ ದೊಡ್ಡ ಸಮಸ್ಯೆಯೇ ಅಲ್ಲ. ಈ ಹಿಂದೆ ಈ ಜಾಗದಲ್ಲಿ ಕ್ರಿಸ್ಟಿಯನ್ ಅವರನ್ನು ಆಡಿಸಿದೆವು. ಅವರು ಮಧ್ಯಮ ಕ್ರಮಾಂಕದಲ್ಲಿ ಉತ್ತಮ ಬ್ಯಾಟಿಂಗ್ ನಡೆಸುತ್ತಾರೆ. ಆದರೆ, ಈ ಬಾರಿ ಅದು ಕಾರ್ಯರೂಪಕ್ಕೆ ಬರಲಿಲ್ಲ. ಭರತ್ ನಂ. 3 ಮಾತ್ರವಲ್ಲ, ಅವರು ಯಾವುದೇ ಕ್ರಮಾಂಕದಲ್ಲಿ ಬೇಕಾದರು ಆಡುವ ಸಾಮರ್ಥ್ಯ ಹೊಂದಿದ್ದಾರೆ” ಎಂಬುದು ಕೊಹ್ಲಿ ಮಾತು.
ಇನ್ನು ಡೆಲ್ಲಿ ತಂಡದ ನಾಯಕ ರಿಷಭ್ ಪಂತ್ ಮಾತನಾಡಿ ನಾವು ಈ ಪಂದ್ಯದಲ್ಲಿ ಫೀಲ್ಡಿಂಗ್ ವಿಭಾಗದಲ್ಲಿ ಸಾಕಷ್ಟು ತಪ್ಪು ಮಾಡಿದೆವು ಎಂದು ಹೇಳಿದ್ದಾರೆ. “ಆರ್ಸಿಬಿ ತಂಡ ಗೆಲುವಿಗೆ ಅರ್ಹವಾಗಿದೆ. ನಾವು ಬ್ಯಾಟಿಂಗ್ ಇನ್ನಿಂಗ್ಸ್ನ ಮಧ್ಯದಲ್ಲಿ ಸಾಕಷ್ಟು ವಿಕೆಟ್ಗಳನ್ನು ಕಳೆದುಕೊಂಡೆವು. ಇದರಿಂದ ಸವಾಲಿನ ಟಾರ್ಗೆಟ್ ನೀಡಲು ಸಾಧ್ಯವಾಗಲಿಲ್ಲ. ಡ್ಯೂ ಇದ್ದ ಕಾರಣ ಬೌಲರ್ಗಳಿಗೂ ಕಷ್ಟವಾಯಿತು. ಮುಂದಿನ ಪಂದ್ಯದಲ್ಲಿ ಶೇ. 100 ರಷ್ಟು ಪರಿಶ್ರಮ ಹಾಕುತ್ತೇವೆ” ಎಂದು ಹೇಳಿದ್ದಾರೆ.
SRH vs MI: ಮನೀಶ್ ಪಾಂಡೆ ಏಕಾಂಗಿ ಹೋರಾಟ ವ್ಯರ್ಥ; ಗೆಲುವಿನೊಂದಿಗೆ ಐಪಿಎಲ್ ಪಯಣ ಮುಗಿಸಿದ ಮುಂಬೈ
(RCB Captain Virat Kohli said A last-ball six Unbelievable after win over table-toppers Delhi Capitals)