IPL 2025: ಬೆಂಗಳೂರಿನಲ್ಲಿ ಶನಿವಾರವೂ ಮಳೆ; ಆರ್​ಸಿಬಿ- ಸಿಎಸ್​ಕೆ ಪಂದ್ಯ ನಡೆಯುವುದು ಡೌಟ್..!

Bengaluru Weather: ಐಪಿಎಲ್ 2025ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಚೆನ್ನೈ ಸೂಪರ್ ಕಿಂಗ್ಸ್ ನಡುವಿನ ಮಹತ್ವದ ಪಂದ್ಯಕ್ಕೆ ಬೆಂಗಳೂರಿನಲ್ಲಿ ಮಳೆಯ ಭೀತಿ ಎದುರಾಗಿದೆ. ಮೇ 3 ರಂದು ನಡೆಯಬೇಕಿರುವ ಈ ಪಂದ್ಯ ಮಳೆಯಿಂದ ರದ್ದಾದರೆ ಆರ್ಸಿಬಿ ಪ್ಲೇಆಫ್ ಗೆ ಅರ್ಹತೆ ಪಡೆಯುವುದು ಕಷ್ಟವಾಗಬಹುದು. ಆರ್ಸಿಬಿ ಈಗಾಗಲೇ ಉತ್ತಮ ಪ್ರದರ್ಶನ ನೀಡಿದ್ದರೂ, ಮಳೆಯಿಂದಾಗಿ ಪಂದ್ಯ ರದ್ದಾದರೆ ಅವರಿಗೆ ಒಂದು ಅಂಕ ಮಾತ್ರ ಸಿಗಲಿದೆ.

IPL 2025: ಬೆಂಗಳೂರಿನಲ್ಲಿ ಶನಿವಾರವೂ ಮಳೆ; ಆರ್​ಸಿಬಿ- ಸಿಎಸ್​ಕೆ ಪಂದ್ಯ ನಡೆಯುವುದು ಡೌಟ್..!
Rcb Vs Csk Weather

Updated on: May 02, 2025 | 9:22 PM

ಐಪಿಎಲ್ 2025  (IPL 2025)ರ ಲೀಗ್ ಹಂತ ಮುಗಿಯುವತ್ತಾ ಸಾಗಿದೆ. ಈಗಾಗಲೇ ಎಲ್ಲಾ ತಂಡಗಳು ತಲಾ 10 ಪಂದ್ಯಗಳನ್ನು ಆಡಿವೆಯಾದರೂ ಇದುವರೆಗೆ ಯಾವ ತಂಡಕ್ಕೂ ಫ್ಲೇ ಆಫ್ ಟಿಕೆಟ್ ಖಚಿತವಾಗಿಲ್ಲ. ಇದೀಗ ಮೇ 3 ರ ಶನಿವಾರದಂದು ನಡೆಯಲ್ಲಿರುವ 11ನೇ ಪಂದ್ಯವನ್ನು ಗೆದ್ದು ಪ್ಲೇಆಫ್‌ ಟಿಕೆಟ್ ಪಡೆಯುವ ಇರಾದೆಯಲ್ಲಿ ಆರ್​ಸಿಬಿ ಇದೆ. ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಚೆನ್ನೈ ಸೂಪರ್ ಕಿಂಗ್ಸ್ (RCB vs CSK) ನಡುವೆ ಈ ಸೀಸನ್​ನ 52 ನೇ ಪಂದ್ಯ ನಡೆಯಲಿದೆ. ಆದರೆ ಈ ಪಂದ್ಯ ನಡೆಯುವುದು ಭಾಗಶಃ ಅನುಮಾನ ಎಂದು ಹೇಳಲಾಗುತ್ತಿದೆ. ಏಕೆಂದರೆ ಮೇ 3 ರಂದು ಬೆಂಗಳೂರಿನಲ್ಲಿ ಭಾರಿ ಮಳೆಯಾಗಲಿದೆ ಎಂದು ಹವಾಮಾನ (Bengaluru Weather) ಇಲಾಖೆ ತನ್ನ ವರದಿಯಲ್ಲಿ ತಿಳಿಸಿದೆ.

ಬೆಂಗಳೂರಿನಲ್ಲಿ ಹವಾಮಾನ ಹೇಗಿರುತ್ತದೆ?

ಈಗಾಗಲೇ ಬೆಂಗಳೂರಿನಲ್ಲಿ ಕಳೆದ ಎರಡು ದಿನಗಳಿಂದ ಧಾರಕಾರವಾಗಿ ಮಳೆ ಸುರಿಯುತ್ತಿದೆ. ಸಂಜೆಯ ವೇಳೆಗೆ ಆರಂಭವಾಗುವ ಮಳೆ ರಾತ್ರಿಯಿಡಿ ಸುರಿಯುತ್ತಿದೆ. ಹೀಗಾಗಿ ಆರ್‌ಸಿಬಿ ಮತ್ತು ಸಿಎಸ್‌ಕೆ ನಡುವಿನ ಪಂದ್ಯಕ್ಕೂ ಮಳೆ ಅಡ್ಡಿಪಡಿಸಬಹುದೆಂಬ ಆತಂಕದಲ್ಲಿ ಅಭಿಮಾನಿಗಳಿದ್ದಾರೆ. ಅಭಿಮಾನಿಗಳ ಈ ಆತಂಕಕ್ಕೆ ಪೂರಕವಾಗಿ ಶನಿವಾರವೂ ಬೆಂಗಳೂರಿನಲ್ಲಿ ಮಳೆಯಾಗುವ ಸಾಧ್ಯತೆಯಿದ್ದು, ಹವಾಮಾನ ಮುನ್ಸೂಚನೆಯ ಪ್ರಕಾರ, ಮೇ 3 ರ ರಾತ್ರಿ ಮಳೆಯಾಗುವ ಸಾಧ್ಯತೆ ಶೇ. 43 ರಷ್ಟಿದೆ ಎಂದು ವರದಿಯಾಗಿದೆ. ಹಾಗೆಯೇ ತಾಪಮಾನವು 31 ರಿಂದ 22 ಡಿಗ್ರಿಗಳವರೆಗೆ ಇರಬಹುದು. ಗಾಳಿಯ ವೇಗ ಗಂಟೆಗೆ 5 ಕಿಲೋಮೀಟರ್‌ಗಳವರೆಗೆ ಇರಲಿದ್ದು, ಆರ್ದ್ರತೆಯು 61% ವರೆಗೆ ಇರುತ್ತದೆ ಎಂದು ನಿರೀಕ್ಷಿಸಲಾಗಿದೆ.

IPL 2025: ಆರ್​ಸಿಬಿ- ಸಿಎಸ್​ಕೆ ಲಾಸ್ಟ್ ಫೈಟ್; ಪಂದ್ಯ ಎಲ್ಲಿ ಯಾವಾಗ ಎಷ್ಟು ಗಂಟೆಗೆ ಆರಂಭ?

ಪಂದ್ಯ ರದ್ದಾದರೆ ಆರ್‌ಸಿಬಿಗೆ ನಷ್ಟ

ಐಪಿಎಲ್ 2025 ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಅದ್ಭುತ ಆಟ ಪ್ರದರ್ಶಿಸಿದೆ. ಇಲ್ಲಿಯವರೆಗೆ ಆಡಿರುವ 10 ಪಂದ್ಯಗಳಲ್ಲಿ ತಂಡವು 7 ಪಂದ್ಯಗಳನ್ನು ಗೆದ್ದು 3 ಪಂದ್ಯಗಳನ್ನು ಸೋತಿದೆ. ಈ ಮೂಲಕ 14 ಅಂಕಗಳೊಂದಿಗೆ ಆರ್‌ಸಿಬಿ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದು ಪ್ಲೇಆಫ್ ತಲುಪುವ ಹೊಸ್ತಿಲಿನಲ್ಲಿದೆ. ಇಂತಹ ಪರಿಸ್ಥಿತಿಯಲ್ಲಿ, ಆರ್‌ಸಿಬಿ ಮತ್ತು ಸಿಎಸ್‌ಕೆ ನಡುವಿನ ಪಂದ್ಯ ಮಳೆಯಿಂದ ರದ್ದಾದರೆ, ಚೆನ್ನೈ ತಂಡಕ್ಕೆ ಯಾವುದೇ ಸಮಸ್ಯೆ ಇಲ್ಲ. ಏಕೆಂದರೆ ಮೇಲೆ ಹೇಳಿದಂತೆ ಚೆನ್ನೈ ತಂಡ ಈಗಾಗಲೇ ಪ್ಲೇಆಫ್ ರೇಸ್‌ನಿಂದ ಹೊರಗಿದೆ. ಆದರೆ, ಆರ್​ಸಿಬಿಗೆ ಮಾತ್ರ ಭಾರಿ ನಷ್ಟವಾಗಲಿದೆ. ಆರ್​ಸಿಬಿ ಈಗಿರುವ ಫಾರ್ಮ್​ ನೋಡಿದರೆ, ಚೆನ್ನೈ ತಂಡವನ್ನು ಸುಲಭವಾಗಿ ಮಣಿಸಿ ಪ್ಲೇಆಫ್​ಗೆ ಟಿಕೆಟ್ ಖಚಿತಪಡಿಸಿಕೊಳ್ಳಬಹುದಾಗಿದೆ. ಆದರೆ ಮಳೆಯಿಂದ ಈ ಪಂದ್ಯ ರದ್ದಾದರೆ, ಉಭಯ ತಂಡಗಳಿಗೆ ತಲಾ ಒಂದೊಂದು ಅಂಕ ಸಿಗಲಿದೆ. ಆಗ ಪ್ಲೇಆಫ್‌ಗೇರಲು ಆರ್​ಸಿಬಿ ಇನ್ನೊಂದು ಪಂದ್ಯವನ್ನು ಗೆಲ್ಲಲೇಬೇಕಾಗುತ್ತದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ