IPL 2022: ಐಪಿಎಲ್ ಸೀಸನ್ 15 ರ ಲೀಗ್ ಹಂತದ ಪಂದ್ಯಗಳು ಮುಕ್ತಾಯದ ಹಂತಕ್ಕೆ ಬಂದು ನಿಂತಿದೆ. ಈಗಾಗಲೇ ಎಲ್ಲಾ ತಂಡಗಳು 13 ಪಂದ್ಯಗಳನ್ನಾಡಿದ್ದು, ಇನ್ನು ಕೇವಲ ಒಂದೊಂದು ಪಂದ್ಯ ಮಾತ್ರ ಉಳಿದಿವೆ. ಇದಾಗ್ಯೂ ಗುಜರಾತ್ ಟೈಟನ್ಸ್ (GT) ಹೊರತುಪಡಿಸಿ ಯಾವುದೇ ತಂಡ ಪ್ಲೇಆಫ್ ಖಚಿತ ಪಡಿಸಿಲ್ಲ ಎಂಬುದು ವಿಶೇಷ. ಅಂದರೆ ಉಳಿದ ಒಂದು ಪಂದ್ಯಗಳ ಮೂಲಕ 3 ತಂಡಗಳ ಪ್ಲೇಆಫ್ ಅರ್ಹತೆ ನಿರ್ಧಾರವಾಗಲಿದೆ. ಆದರೆ ಇಲ್ಲಿ ರಾಜಸ್ಥಾನ್ ರಾಯಲ್ಸ್ (RR) ಹಾಗೂ ಲಕ್ನೋ ಸೂಪರ್ ಜೈಂಟ್ಸ್ (LSG) 16 ಪಾಯಿಂಟ್ಸ್ನೊಂದಿಗೆ ಕ್ರಮವಾಗಿ 2ನೇ ಮತ್ತು 3ನೇ ಸ್ಥಾನದಲ್ಲಿದೆ. ಈ ತಂಡಗಳು ಮುಂದಿನ ಪಂದ್ಯ ಗೆದ್ದರೆ ನೇರವಾಗಿ ಪ್ಲೇಆಫ್ ಪ್ರವೇಶಿಸಲಿದೆ. ಇದಾಗ್ಯೂ ನಾಲ್ಕನೇ ಸ್ಥಾನವನ್ನು ಯಾವ ತಂಡ ಅಲಂಕರಿಸಲಿದೆ ಎಂಬುದೇ ಕುತೂಹಲ.
ಏಕೆಂದರೆ ನಾಲ್ಕನೇ ಸ್ಥಾನಕ್ಕಾಗಿ ಈಗಲೂ 4 ತಂಡಗಳ ನಡುವೆ ಪೈಪೋಟಿ ಇದೆ. ಅದರಲ್ಲಿ ಪ್ರಸ್ತುತ ಪಾಯಿಂಟ್ಸ್ ಟೇಬಲ್ನಲ್ಲಿ ನಾಲ್ಕನೇ ಸ್ಥಾನದಲ್ಲಿರುವ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಮುಂಚೂಣಿಯಲ್ಲಿದೆ. ಇದಲ್ಲದೆ ಆರ್ಸಿಬಿ ತಂಡಕ್ಕೂ ಪ್ಲೇಆಫ್ ಪ್ರವೇಶಿಸುವ ಅವಕಾಶವಿದೆ. ಏಕೆಂದರೆ ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಆರ್ಸಿಬಿ ತಂಡಗಳ ಪಾಯಿಂಟ್ಸ್ 14 ಇದ್ದು, ಕೊನೆಯ ಪಂದ್ಯದಲ್ಲಿ ಅತ್ಯುತ್ತಮ ನೆಟ್ ರನ್ ರೇಟ್ನೊಂದಿಗೆ ಗೆಲ್ಲುವ ತಂಡಕ್ಕೆ ಪ್ಲೇಆಫ್ ಅವಕಾಶ ದೊರೆಯಲಿದೆ.
ಒಂದು ವೇಳೆ ಮುಂದಿನ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಮುಂಬೈ ಇಂಡಿಯನ್ಸ್ ವಿರುದ್ದ ಹಾಗೂ ಆರ್ಸಿಬಿ ಗುಜರಾತ್ ಟೈಟನ್ಸ್ ವಿರುದ್ದ ಸೋತರೆ, ಮತ್ತೆರಡು ತಂಡಗಳು ಪ್ಲೇಆಫ್ ರೇಸ್ನಲ್ಲಿ ಕಾಣಿಸಿಕೊಳ್ಳಲಿದೆ. ಅಂದರೆ ನಾಲ್ಕನೇ ಸ್ಥಾನ ಪಡೆಯುವ ತಂಡವು 14 ಪಾಯಿಂಟ್ಸ್ನಲ್ಲೇ ಉಳಿದರೆ ಕೆಕೆಆರ್, ಪಂಜಾಬ್ ಕಿಂಗ್ಸ್ ಹಾಗೂ ಎಸ್ಆರ್ಹೆಚ್ ತಂಡಗಳು ಪ್ಲೇಆಫ್ ರೇಸ್ನಲ್ಲಿ ಕಾಣಿಸಿಕೊಳ್ಳಲಿದೆ. ಅಂದರೆ ಈ ತಂಡಗಳ ಪಾಯಿಂಟ್ಸ್ 12 ಇದ್ದು, ಕೊನೆಯ ಪಂದ್ಯದಲ್ಲಿ ಗೆಲ್ಲುವ ಮೂಲಕ ಈ ತಂಡಗಳು ಕೂಡ 14 ಪಾಯಿಂಟ್ಸ್ಗಳಿಸಬಹುದು.
ಹೀಗಾಗಿ ಆರ್ಸಿಬಿ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಮುಂದಿನ ಪಂದ್ಯಗಳಲ್ಲಿ ಸೋತರೆ ಕೆಕೆಆರ್, ಪಂಜಾಬ್ ಕಿಂಗ್ಸ್ ಹಾಗೂ ಎಸ್ಆರ್ಹೆಚ್ ತಂಡಗಳ ಪ್ಲೇಆಫ್ ಆಸೆ ಜೀವಂತವಿರಲಿದೆ. ಆದರೆ ಗುರುವಾರ ನಡೆಯಲಿರುವ ಪಂದ್ಯದಲ್ಲಿ ಆರ್ಸಿಬಿ ತಂಡವು ಗುಜರಾತ್ ಟೈಟನ್ಸ್ ವಿರುದ್ದ ಗೆದ್ದರೆ ಈ ಮೂರು ತಂಡಗಳು ಪ್ಲೇಆಫ್ ರೇಸ್ನಿಂದ ಹೊರಬೀಳಲಿದೆ.
ಏಕೆಂದರೆ ಮುಂದಿನ ಗೆಲುವಿನೊಂದಿಗೆ ಆರ್ಸಿಬಿ ತಂಡದ ಪಾಯಿಂಟ್ಸ್ 16 ಆಗಲಿದೆ. ಇತ್ತ ಪಾಯಿಂಟ್ಸ್ ಟೇಬಲ್ನಲ್ಲಿ ನಾಲ್ಕನೇ ಸ್ಥಾನದಲ್ಲಿರುವ ತಂಡವು 14 ಪಾಯಿಂಟ್ಸ್ ಹೊಂದಿದ್ದರೆ ಮಾತ್ರ ಪಂಜಾಬ್ ಕಿಂಗ್ಸ್, ಕೆಕೆಆರ್ ಹಾಗೂ ಎಸ್ಆರ್ಹೆಚ್ ತಂಡಗಳಿಗೆ ಚಾನ್ಸ್ ಇರಲಿದೆ. ಹೀಗಾಗಿ ಗುಜರಾತ್ ಟೈಟನ್ಸ್ ವಿರುದ್ದದ ಆರ್ಸಿಬಿಯ ಫಲಿತಾಂಶ 3 ತಂಡಗಳ ಪ್ಲೇಆಫ್ ಅವಕಾಶವನ್ನು ನಿರ್ಧರಿಸಲಿದೆ. ಒಂದು ವೇಳೆ ಆರ್ಸಿಬಿ ಸೋತರೂ, ಮುಂದಿನ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ದ ಡೆಲ್ಲಿ ಕ್ಯಾಪಿಟಲ್ಸ್ ಗೆದ್ದರೆ ಕೆಕೆಆರ್, ಆರ್ಸಿಬಿ, ಪಂಜಾಬ್ ಕಿಂಗ್ಸ್ ಹಾಗೂ ಎಸ್ಆರ್ಹೆಚ್ ತಂಡಗಳು ಪ್ಲೇಆಫ್ ರೇಸ್ನಿಂದ ಹೊರಬೀಳಲಿದೆ. ಹೀಗಾಗಿ ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಆರ್ಸಿಬಿ ತಂಡಗಳ ಫಲಿತಾಂಶಗಳ ಮೇಲೆ ಇದೀಗ ಎಲ್ಲರ ಕಣ್ಣುನೆಟ್ಟಿದೆ.
ಹೆಚ್ಚಿನ IPL 2022 ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.