Yuzvendra Chahal: ಹೊಸ ದಾಖಲೆ ಬರೆಯಲಿರುವ ಚಹಲ್

| Updated By: ಝಾಹಿರ್ ಯೂಸುಫ್

Updated on: Mar 29, 2022 | 3:40 PM

Yuzvendra Chahal: ಐಪಿಎಲ್ ವೃತ್ತಿಜೀವನದಲ್ಲಿ (912) ಹೆಚ್ಚು ಡಾಟ್ ಬಾಲ್‌ಗಳನ್ನು ಎಸೆದ ಬೌಲರ್‌ಗಳ ಪಟ್ಟಿಯಲ್ಲಿ ಚಹಲ್ 16ನೇ ಸ್ಥಾನದಲ್ಲಿದ್ದಾರೆ.

Yuzvendra Chahal: ಹೊಸ ದಾಖಲೆ ಬರೆಯಲಿರುವ ಚಹಲ್
Yuzvendra Chahal
Follow us on

ಐಪಿಎಲ್​ ಸೀಸನ್​ 15 ನಲ್ಲಿ ಯುಜ್ವೇಂದ್ರ ಚಹಲ್ ಅತ್ಯುತ್ತಮ ಸ್ಪಿನ್ನರ್‌ಗಳಲ್ಲಿ ಒಬ್ಬರು ಎಂಬುದರಲ್ಲಿ ಅನುಮಾನವೇ ಇಲ್ಲ. ಏಕೆಂದರೆ ಕಳೆದ ಮೂರು ಸೀಸನ್​ಗಳಲ್ಲಿ ಚಹಲ್ ಕನಿಷ್ಠ 18 ವಿಕೆಟ್​ಗಳನ್ನು ಪಡೆದಿದ್ದಾರೆ. ಆದರೆ ಅದು ಆರ್​ಸಿಬಿ ಪರವಾಗಿ ಎಂಬುದು ವಿಶೇಷ. ಈ ಬಾರಿ ಚಹಲ್ ರಾಜಸ್ಥಾನ್ ರಾಯಲ್ಸ್ ಪರ ಕಣಕ್ಕಿಳಿಯುತ್ತಿದ್ದಾರೆ. ಮುಂಬೈ ಇಂಡಿಯನ್ಸ್​ ತಂಡದೊಂದಿಗೆ 2013 ರಲ್ಲಿ ಐಪಿಎಲ್ ಅಭಿಯಾನ ಆರಂಭಿಸಿದ್ದ ಚಹಲ್, 2014 ರಲ್ಲಿ ಆರ್​ಸಿಬಿ ತಂಡದ ಪಾಲಾಗಿದ್ದರು. ಇದಾಗ್ಯೂ ಈ ಬಾರಿ ಚಹಲ್ ಅವರನ್ನು ಆರ್​ಸಿಬಿ ತಂಡವು ಉಳಿಸಿಕೊಂಡಿರಲಿಲ್ಲ. ಇತ್ತ ಮೆಗಾ ಹರಾಜಿನಲ್ಲಿ ಬರೋಬ್ಬರಿ 6.5 ಕೋಟಿ ನೀಡಿ ರಾಜಸ್ಥಾನ್ ರಾಯಲ್ಸ್ ತಂಡವು ಖರೀದಿಸಿತು.

ಇದೀಗ ಐಪಿಎಲ್​ನಲ್ಲಿ 114 ಪಂದ್ಯಗಳನ್ನಾಡಿರುವ ಚಹಲ್ ಒಟ್ಟು 139 ವಿಕೆಟ್​ಗಳನ್ನು ಪಡೆದಿದ್ದಾರೆ. ಈ ಬಾರಿ 11 ವಿಕೆಟ್ ಉರುಳಿಸಿದರೆ ಐಪಿಎಲ್​ನಲ್ಲಿ 150 ವಿಕೆಟ್ ಪಡೆದ ಬೌಲರ್​ಗಳ ಪಟ್ಟಿಯಲ್ಲಿ ಚಹಲ್ ಹೆಸರು ಕೂಡ ಕಾಣಿಸಿಕೊಳ್ಳಲಿದೆ. ಸದ್ಯ ಐಪಿಎಲ್​ನ ಅತ್ಯಧಿಕ ವಿಕೆಟ್ ಟೇಕರ್​ಗಳ ಪಟ್ಟಿಯಲ್ಲಿ ಚಹಲ್ 9ನೇ ಸ್ಥಾನದಲ್ಲಿದ್ದಾರೆ.

ಒಂದು ವೇಳೆ ಈ ಬಾರಿ 11 ವಿಕೆಟ್ ಕಬಳಿಸಿದರೆ ಐಪಿಎಲ್​ನಲ್ಲಿ 150 ವಿಕೆಟ್ ಪಡೆದ ಆರನೇ ಬೌಲರ್ ಎನಿಸಿಕೊಳ್ಳಲಿದ್ದಾರೆ. ಜೊತೆಗೆ ಈ ಸಾಧನೆ ಮಾಡಿದ ಭಾರತದ ನಾಲ್ಕನೇ ಬೌಲರ್ ಎಂಬ ದಾಖಲೆಯನ್ನೂ ಕೂಡ ಬರೆಯಲಿದ್ದಾರೆ. ಸದ್ಯ ಹರ್ಭಜನ್ ಸಿಂಗ್ (150), ಪಿಯೂಷ್ ಚಾವ್ಲಾ (157), ಮತ್ತು ಅಮಿತ್ ಮಿಶ್ರಾ (166) ಮಾತ್ರ ಐಪಿಎಲ್​ನಲ್ಲಿ 150 ಕ್ಕೂ ಅಧಿಕ ವಿಕೆಟ್ ಪಡೆದ ಭಾರತೀಯ ಬೌಲರ್​ಗಳು ಎನಿಸಿಕೊಂಡಿದ್ದಾರೆ.

ವಿಶೇಷ ಎಂದರೆ ಐಪಿಎಲ್​ನಲ್ಲಿ ಸನ್‌ರೈಸರ್ಸ್ ಹೈದರಾಬಾದ್, ಡೆಲ್ಲಿ ಕ್ಯಾಪಿಟಲ್ಸ್, ಕೋಲ್ಕತ್ತಾ ನೈಟ್ ರೈಡರ್ಸ್, ಚೆನ್ನೈ ಸೂಪರ್ ಕಿಂಗ್ಸ್, ಮುಂಬೈ ಇಂಡಿಯನ್ಸ್ ಮತ್ತು ಪಂಜಾಬ್ ಕಿಂಗ್ಸ್ ವಿರುದ್ಧ ತಲಾ 20 ವಿಕೆಟ್ ಪಡೆದ ಏಕೈಕ ಬೌಲರ್ ಎಂಬ ದಾಖಲೆ ಯುಜುವೇಂದ್ರ ಚಹಲ್ ಹೆಸರಿನಲ್ಲಿದೆ.
ಕಳೆದ 9 ಸೀಸನ್​ಗಳಲ್ಲಿ ಮುಂಬೈ ಮತ್ತು ಪಂಜಾಬ್ ಕಿಂಗ್ಸ್ ವಿರುದ್ಧ ಕ್ರಮವಾಗಿ 22 ಮತ್ತು 25 ವಿಕೆಟ್‌ಗಳನ್ನು ಪಡೆದಿದ್ದಾರೆ.

ಹಾಗೆಯೇ ಐಪಿಎಲ್ ವೃತ್ತಿಜೀವನದಲ್ಲಿ (912) ಹೆಚ್ಚು ಡಾಟ್ ಬಾಲ್‌ಗಳನ್ನು ಎಸೆದ ಬೌಲರ್‌ಗಳ ಪಟ್ಟಿಯಲ್ಲಿ ಚಹಲ್ 16ನೇ ಸ್ಥಾನದಲ್ಲಿದ್ದಾರೆ. ಯುಎಇಯಲ್ಲಿ ನಡೆದ ಕಳೆದ ಐಪಿಎಲ್ ಆವೃತ್ತಿಯಲ್ಲಿ ಅವರು ಒಟ್ಟು 127 ಡಾಟ್ ಬಾಲ್‌ಗಳನ್ನು ಎಸೆದಿದ್ದರು. ಇದೀಗ ಎಸ್​ಆರ್​ಹೆಚ್​ ವಿರುದ್ದದ ಪಂದ್ಯದೊಂದಿಗೆ ರಾಜಸ್ಥಾನ್ ರಾಯಲ್ಸ್ ಪರ ಕಣಕ್ಕಿಳಿಯಲಿರುವ ಚಹಲ್ ಈ ಬಾರಿ ಹಲವು ದಾಖಲೆಗಳನ್ನು ನಿರ್ಮಿಸುವ ಇರಾದೆಯಲ್ಲಿದೆ.

ಇದನ್ನೂ ಓದಿ: IPL ಆಡಿದ್ದ 11 ಪಾಕಿಸ್ತಾನಿ ಆಟಗಾರರು ಯಾರು ಗೊತ್ತಾ?

ಇದನ್ನೂ ಓದಿ:  IPL 2022: ಇವರೇ RCB ಪರ ಹ್ಯಾಟ್ರಿಕ್ ವಿಕೆಟ್ ಪಡೆದ ಮೂವರು ಬೌಲರುಗಳು