ಶೇಷ ಭಾರತ ತಂಡ ಪ್ರಕಟ: ಇಬ್ಬರು ಕನ್ನಡಿಗರಿಗೆ ಸ್ಥಾನ
Rest of India squad: ಇನ್ನು ಟೀಮ್ ಇಂಡಿಯಾವನ್ನು ಪ್ರತಿನಿಧಿಸಿರುವ ಕೆಎಸ್ ಭರತ್ ಹಾಗೂ ನವದೀಪ್ ಸೈನಿ ಕೂಡ ಶೇಷ ಭಾರತ ತಂಡದಲ್ಲಿದ್ದಾರೆ. ಇವರ ಜೊತೆಗೆ ಯುವ ದಾಂಡಿಗರಾದ ಸರ್ಫರಾಝ್ ಖಾನ್ ಹಾಗೂ ರೋಹನ್ ಕುನ್ನುಮ್ಮಲ್ ಕೂಡ ಆಯ್ಕೆಯಾಗಿದ್ದಾರೆ. ಅದರಂತೆ ಶೇಷ ಭಾರತ ತಂಡ ಈ ಕೆಳಗಿನಂತಿದೆ.
Irani Cup 2023: ಇರಾನಿ ಕಪ್ 2023ರ ಪಂದ್ಯಕ್ಕಾಗಿ ಶೇಷ ಭಾರತ ತಂಡವನ್ನು (Rest of India Squad) ಪ್ರಕಟಿಸಲಾಗಿದೆ. 15 ಸದಸ್ಯರ ಈ ತಂಡವನ್ನು ಹನುಮ ವಿಹಾರಿ ಮುನ್ನಡೆಸಲಿದ್ದಾರೆ. ಇನ್ನು ಈ ಬಳಗದಲ್ಲಿ ಇಬ್ಬರು ಕನ್ನಡಿಗರು ಸ್ಥಾನ ಪಡೆದಿರುವುದು ವಿಶೇಷ. ಕಳೆದ ಬಾರಿ ಶೇಷ ಭಾರತ ತಂಡವನ್ನು ಮುನ್ನಡೆಸಿದ್ದ ಕನ್ನಡಿಗ ಮಯಾಂಕ್ ಅಗರ್ವಾಲ್ ಹಾಗೂ ಕರ್ನಾಟಕದ ಯುವ ವೇಗಿ ವಿಧ್ವತ್ ಕಾವೇರಪ್ಪ 15 ಸದಸ್ಯರ ಬಳಗದಲ್ಲಿ ಕಾಣಿಸಿಕೊಂಡಿದ್ದಾರೆ.
ಇನ್ನು ಟೀಮ್ ಇಂಡಿಯಾವನ್ನು ಪ್ರತಿನಿಧಿಸಿರುವ ಕೆಎಸ್ ಭರತ್ ಹಾಗೂ ನವದೀಪ್ ಸೈನಿ ಕೂಡ ಶೇಷ ಭಾರತ ತಂಡದಲ್ಲಿದ್ದಾರೆ. ಇವರ ಜೊತೆಗೆ ಯುವ ದಾಂಡಿಗರಾದ ಸರ್ಫರಾಝ್ ಖಾನ್ ಹಾಗೂ ರೋಹನ್ ಕುನ್ನುಮ್ಮಲ್ ಕೂಡ ಆಯ್ಕೆಯಾಗಿದ್ದಾರೆ. ಅದರಂತೆ ಶೇಷ ಭಾರತ ತಂಡ ಈ ಕೆಳಗಿನಂತಿದೆ.
ಶೇಷ ಭಾರತ ತಂಡ: ಹನುಮ ವಿಹಾರಿ (ನಾಯಕ), ಕೆಎಸ್ ಭರತ್, ಮಯಾಂಕ್ ಅಗರ್ವಾಲ್, ಯಶ್ ಧುಲ್, ಶಮ್ಸ್ ಮುಲಾನಿ, ಸಾಯಿ ಸುದರ್ಶನ್, ಸರ್ಫರಾಝ್ ಖಾನ್, ಪುಲ್ಕಿತ್ ನಾರಂಗ್, ಸೌರಭ್ ಕುಮಾರ್, ಯಶ್ ದಯಾಳ್, ನವದೀಪ್ ಸೈನಿ, ವಿಧ್ವತ್ ಕಾವೇರಪ್ಪ, ಆಕಾಶ್ ದೀಪ್, ರೋಹನ್ ಕುನ್ನುಮ್ಮಲ್, ಧ್ರುವ ಜುರೆಲ್.
ಏನಿದು ಇರಾನಿ ಕಪ್?
ಝಡ್.ಆರ್ ಇರಾನಿ ಅಥವಾ ಝಲ್ ಇರಾನಿ, ಇವರು ಬಿಸಿಸಿಐನ ಮಾಜಿ ಅಧ್ಯಕ್ಷರು. ಲಂಡನ್‌ನಲ್ಲಿ ಚಾರ್ಟರ್ಡ್ ಅಕೌಂಟೆನ್ಸಿ ಅಧ್ಯಯನ ಮಾಡಿದ್ದ ಇರಾನಿ ಅವರು ಸ್ವಾತಂತ್ರ್ಯ ಪೂರ್ವದಲ್ಲಿ ದೆಹಲಿಯ ರೋಶನಾರಾ ಕ್ಲಬ್ ಮತ್ತು ಮುಂಬೈನ ಪಾರ್ಸಿ ಜಿಮ್ಖಾನಾ ಕ್ಲಬ್ ಪರ ಕ್ರಿಕೆಟ್ ಆಡುತ್ತಿದ್ದರು. ಅಷ್ಟೇ ಅಲ್ಲದೆ 1928-29 ರಿಂದ 1945-46 ಮತ್ತು 1948-49 ರಿಂದ 1961-62 ಅವರು ಭಾರತ ಕ್ರಿಕೆಟ್ ಮಂಡಳಿಯ ಖಜಾಂಚಿಯಾಗಿ ಸೇವೆ ಸಲ್ಲಿಸಿದ್ದರು.
1966 ರಲ್ಲಿ ಬಿಸಿಸಿಐ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದ ಇರಾನಿ ಅವರು ಭಾರತೀಯ ಕ್ರಿಕೆಟ್ ಅನ್ನು ಪ್ರಗತಿಪಥದತ್ತ ಸಾಗಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಈ ಮೂಲಕ ಸ್ವಾತಂತ್ರ ಭಾರತದಲ್ಲಿ ಕ್ರಿಕೆಟ್ ಅನ್ನು ಬೆಳೆಸುವಲ್ಲಿ ತಮ್ಮದೆಯಾದ ಕೊಡುಗೆ ನೀಡಿದ್ದಾರೆ. ಅವರ ಸ್ಮರಾರ್ಥ ಇರಾನಿ ಕಪ್ ಅನ್ನು ಆಯೋಜಿಸಲಾಗುತ್ತದೆ.
ವಿಶೇಷ ಎಂದರೆ ಇರಾನಿ ಕಪ್ನಲ್ಲಿ ಹಾಲಿ ರಣಜಿ ಚಾಂಪಿಯನ್ ತಂಡ ಹಾಗೂ ಶೇಷ ಭಾರತ ತಂಡ ಏಕೈಕ ಟೆಸ್ಟ್ ಪಂದ್ಯದಲ್ಲಿ ಮುಖಾಮುಖಿಯಾಗುತ್ತದೆ. ಅಂದರೆ ಇಲ್ಲಿ ಶೇಷ ಭಾರತ ತಂಡದಲ್ಲಿ ರಣಜಿ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ನೀಡಿದ ಆಟಗಾರರನ್ನು ಬಿಸಿಸಿಐ ಆಯ್ಕೆ ಮಾಡುತ್ತದೆ. ಅದರಂತೆ ಈ ಬಾರಿಯ ರಣಜಿ ಚಾಂಪಿಯನ್ ಸೌರಾಷ್ಟ್ರ ವಿರುದ್ಧ ಶೇಷ ಭಾರತ ತಂಡ ಸೆಣಸಲಿದೆ.
ಅದರಂತೆ 2023 ರ ರಣಜಿ ಟೂರ್ನಿ ಚಾಂಪಿಯನ್ ಸೌರಾಷ್ಟ್ರ ಹಾಗೂ ಶೇಷ ಭಾರತ ತಂಡ ಅಕ್ಟೋಬರ್ 5 ರಂದು ರಾಜ್‌ಕೋಟ್‌ನ ಸೌರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಂನಲ್ಲಿ ಮುಖಾಮುಖಿಯಾಗಲಿದೆ.
ಇದನ್ನೂ ಓದಿ: ಟೀಮ್ ಇಂಡಿಯಾ ಪರ ಸತತ 4 ಸಿಕ್ಸ್ ಸಿಡಿಸಿದ್ದು ಮೂವರು ಬ್ಯಾಟರ್ಗಳು ಮಾತ್ರ..!
ಸೌರಾಷ್ಟ್ರ ತಂಡ: ಜಯದೇವ್ ಉನಾದ್ಕತ್ (ನಾಯಕ), ಚೇತೇಶ್ವರ ಪೂಜಾರ, ಶೆಲ್ಡನ್ ಜಾಕ್ಸನ್, ಅರ್ಪಿತ್ ವಾಸವಾಡ, ಹಾರ್ವಿಕ್ ದೇಸಾಯಿ, ಧರ್ಮೇಂದ್ರಸಿನ್ಹ್ ಜಡೇಜಾ, ಪ್ರೇರಕ್ ಮಂಕಡ್, ಚಿರಾಗ್ ಜಾನಿ, ಜಯ್ ಗೋಹಿಲ್, ಪಾರ್ಥ್ ಭುತ್, ವಿಶ್ವರಾಜ್‌ಸಿನ್ಹ್ ಜಡೇಜಾ, ಸಮರ್ಥ್ ವ್ಯಾಸ್, ಯುವ್ ಪಟ್ಯಾ, ಎಸ್. ದೇವಾಂಗ್ ಕರಮ್ತಾ.