
ಟೀಮ್ ಇಂಡಿಯಾ ವಿಕೆಟ್ ಕೀಪರ್ ಬ್ಯಾಟರ್ ರಿಷಭ್ ಪಂತ್ ಗಂಭೀರವಾಗಿ ಗಾಯಗೊಂಡಿದ್ದಾರೆ. ಮ್ಯಾಂಚೆಸ್ಟರ್ನ ಓಲ್ಡ್ ಟ್ರಾಫೋರ್ಡ್ ಮೈದಾನದಲ್ಲಿ ನಡೆಯುತ್ತಿರುವ ಇಂಗ್ಲೆಂಡ್ ವಿರುದ್ಧದ 4ನೇ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್ ವೇಳೆ ಕ್ರಿಸ್ ವೋಕ್ಸ್ ಎಸೆದ ಚೆಂಡು ರಿಷಭ್ ಪಂತ್ ಅವರ ಬಲಗಾಲಿಗೆ ಬಡಿದಿದೆ. ಇದರಿಂದ ಗಂಭೀರವಾಗಿ ಗಾಯಗೊಂಡಿರುವ ಅವರು ಅರ್ಧದಲ್ಲೇ ಬ್ಯಾಟಿಂಗ್ ನಿಲ್ಲಿಸಿ ಮೈದಾನ ತೊರೆದಿದ್ದಾರೆ. ಅಷ್ಟೇ ಅಲ್ಲದೆ ತೀವ್ರವಾಗಿ ಗಾಯಗೊಂಡಿರುವ ಅವರನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದೆ ಎಂದು ಬಿಸಿಸಿಐ ತಿಳಿಸಿದೆ.
ಇತ್ತ ತೀವ್ರವಾಗಿ ಗಾಯಗೊಂಡಿರುವ ಕಾರಣ ರಿಷಭ್ ಪಂತ್ 4ನೇ ಟೆಸ್ಟ್ ಪಂದ್ಯದಲ್ಲಿ ಕಣಕ್ಕಿಳಿಯುವುದು ಅನುಮಾನ ಎನ್ನಲಾಗುತ್ತಿದೆ. ಒಂದು ವೇಳೆ ಪಂತ್ ಈ ಪಂದ್ಯದಿಂದ ಹೊರಗುಳಿದರೆ ಬದಲಿಗೆ ವಿಕೆಟ್ ಕೀಪರ್ ಆಗಿ ಧ್ರುವ್ ಜುರೇಲ್ ಕಣಕ್ಕಿಳಿಯಲಿದ್ದಾರೆ. ಹೀಗೆ ಬದಲಿಯಾಗಿ ಕಣಕ್ಕಿಳಿದರೂ ಜುರೇಲ್ಗೆ ಬ್ಯಾಟಿಂಗ್ ಮಾಡಲು ಅವಕಾಶ ಸಿಗುವುದಿಲ್ಲ ಎಂಬುದೇ ಸತ್ಯ. ಏಕೆಂದರೆ ಐಸಿಸಿ ನಿಯಮದ ಪ್ರಕಾರ ತಲೆ ಅಥವಾ ಕುತ್ತಿಗೆಯ ಭಾಗಕ್ಕೆ ಗಾಯವಾದರೆ ಮಾತ್ರ ಕನ್ಕ್ಯುಶನ್ ಸಬ್ಸ್ಟಿಟ್ಯೂಟ್ನನ್ನು ಕಣಕ್ಕಿಳಿಸಬಹುದು.
ಪಂದ್ಯದ ನಡುವೆ ಆಟಗಾರನ ತಲೆಯ ಭಾಗಕ್ಕೆ ಅಥವಾ ಕುತ್ತಿಗೆಯ ಭಾಗಕ್ಕೆ ಗಾಯವಾದರೆ ಕನ್ಕ್ಯುಶನ್ ಸಬ್ಸ್ಟಿಟ್ಯೂಟ್ ಆಯ್ಕೆ ಮೂಲಕ ಬದಲಿ ಆಟಗಾರನನ್ನು ಕಣಕ್ಕಿಳಿಸಬಹುದು. ಇಂತಹದೊಂದು ನಿಯಮ ರೂಪಿಸಿರುವ ಐಸಿಸಿ, ಇತರೆ ಗಂಭೀರ ಗಾಯಗಳಾದ ವೇಳೆ ಬದಲಿ ಆಟಗಾರನನ್ನು ಕಣಕ್ಕಿಳಿಸುವ ಆಯ್ಕೆಯನ್ನು ನೀಡಿಲ್ಲ ಎಂಬುದೇ ಅಚ್ಚರಿ.
ಹೀಗಾಗಿಯೇ ಲಾರ್ಡ್ಸ್ ಟೆಸ್ಟ್ ಪಂದ್ಯದ ವೇಳೆ ಇಂಗ್ಲೆಂಡ್ ಸ್ಪಿನ್ನರ್ ಶೊಯೆಬ್ ಬಶೀರ್ ಅವರ ಕೈಗೆ ಗಂಭೀರ ಗಾಯವಾಗಿದ್ದರೂ, ಪಂದ್ಯದಿಂದ ಹೊರಗುಳಿದಿರಲಿಲ್ಲ. ಅಲ್ಲದೆ ಕೊನೆಯ ದಿನದಾಟದಂದು ಕೈಗೆ ಬ್ಯಾಂಡೇಜ್ ಹಾಕಿ 5.5 ಓವರ್ಗಳನ್ನು ಎಸೆದಿದ್ದರು. ಇಲ್ಲಿ ಬಶೀರ್ ಗಂಭೀರವಾಗಿ ಗಾಯಗೊಂಡಿದ್ದರೂ ಇಂಗ್ಲೆಂಡ್ ತಂಡಕ್ಕೆ ಕನ್ಕ್ಯುಶನ್ ಸಬ್ಸ್ಟಿಟ್ಯೂಟ್ ಆಯ್ಕೆ ಬಳಸಲು ಅವಕಾಶ ನೀಡಿರಲಿಲ್ಲ. ಇದಕ್ಕೆ ಕಾರಣ ಐಸಿಸಿಯ ಕನ್ಕ್ಯುಶನ್ ಸಬ್ ನಿಯಮ.
ಅಂದರೆ ಆಟಗಾರನ ತಲೆಯ ಭಾಗಕ್ಕೆ ಅಥವಾ ಕುತ್ತಿಗೆಯ ಭಾಗಕ್ಕೆ ಗಾಯವಾದರೆ ಮಾತ್ರ ಕನ್ಕ್ಯುಶನ್ ಸಬ್ ಆಯ್ಕೆ ಮೂಲಕ ಬೇರೊಬ್ಬ ಆಟಗಾರನನ್ನು ಕಣಕ್ಕಿಳಿಸಬಹುದು ಎಂದು ತಿಳಿಸಲಾಗಿದೆ. ಇದೀಗ ರಿಷಭ್ ಪಂತ್ ಅವರ ಕಾಲಿಗೆ ಗಾಯವಾಗಿದೆ. ಈ ಗಾಯದ ಕಾರಣ ರಿಷಭ್ ಪಂತ್ ಹೊರಗುಳಿದರೆ ಟೀಮ್ ಇಂಡಿಯಾಗೆ ಕನ್ಕ್ಯುಶನ್ ಸಬ್ ಆಯ್ಕೆ ಸಿಗುವುದಿಲ್ಲ. ಬದಲಾಗಿ ಹೆಚ್ಚುವರಿ ವಿಕೆಟ್ ಕೀಪರ್ನನ್ನು ಬಳಸಿಕೊಳ್ಳಲು ಮಾತ್ರ ಅವಕಾಶ ನೀಡಲಿದ್ದಾರೆ.
ಹೀಗಾಗಿ ಮ್ಯಾಂಚೆಸ್ಟರ್ ಟೆಸ್ಟ್ ಪಂದ್ಯದಿಂದ ರಿಷಭ್ ಪಂತ್ ಹೊರಗುಳಿದರೆ ಧ್ರುವ್ ಜುರೇಲ್ ಕೇವಲ ವಿಕೆಟ್ ಕೀಪರ್ ಆಗಿ ಮಾತ್ರ ಕಾಣಿಸಿಕೊಳ್ಳಬಹುದು. ಇದರ ಹೊರತಾಗಿ ಅವರಿಗೆ ಬ್ಯಾಟಿಂಗ್ಗೆ ಅವಕಾಶ ನೀಡುವ ಸಾಧ್ಯತೆಯಿಲ್ಲ. ಅದರಂತೆ ಪಂತ್ ಪಂದ್ಯದಿಂದ ಹೊರಬಿದ್ದರೆ ಟೀಮ್ ಇಂಡಿಯಾ 10 ಬ್ಯಾಟರ್ಗಳೊಂದಿಗೆ ದ್ವಿತೀಯ ಇನಿಂಗ್ಸ್ ಆಡಬೇಕಾಗಿ ಬರಬಹುದು.
ರಿಷಭ್ ಪಂತ್ ಅವರ ಗಾಯದ ಬೆನ್ನಲ್ಲೇ ಕನ್ಕ್ಯುಶನ್ ಸಬ್ ನಿಯಮವು ಚರ್ಚೆಗೀಡಾಗಿದೆ. ತಲೆ ಮತ್ತು ಕುತ್ತಿಗೆ ಗಾಯಗಳನ್ನು ಗಂಭೀರವಾಗಿ ಪರಿಗಣಿಸಿರುವ ಐಸಿಸಿ ತೀವ್ರ ಗಾಯಗಳಾದಾಗ ಏಕೆ ಬದಲಿ ಆಟಗಾರನ ಆಯ್ಕೆ ನೀಡುತ್ತಿಲ್ಲ ಎಂದು ಕೆಲ ಮಾಜಿ ಆಟಗಾರರು ಪ್ರಶ್ನಿಸಿದ್ದಾರೆ.
ಇದನ್ನೂ ಓದಿ: Ayush Mhatre: ಆಯುಷ್ ಆರ್ಭಟಕ್ಕೆ ಮೆಕಲಂ ದಾಖಲೆ ಧೂಳೀಪಟ
ಅಲ್ಲದೆ ಇಂತಹ ಸಂದರ್ಭಗಳಲ್ಲಿ ಮ್ಯಚ್ ರೆಫರಿ ಕೂಡ ದೃಢ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾದ ಅಗತ್ಯತೆ ಇದೆ ಎಂದು ಅನೇಕರು ಅಭಿಪ್ರಾಯಪಟ್ಟಿದ್ದಾರೆ. ಹೀಗಾಗಿ ಮ್ಯಾಂಚೆಸ್ಟರ್ ಟೆಸ್ಟ್ ಪಂದ್ಯದ ದ್ವಿತೀಯ ಇನಿಂಗ್ಸ್ಗೂ ಮುನ್ನ ಕನ್ಕ್ಯುಶನ್ ಸಬ್ ನಿಯಮದಲ್ಲಿ ಬದಲಾವಣೆಯಾಗಲಿದೆಯಾ ಕಾದು ನೋಡಬೇಕಿದೆ.
Published On - 11:56 am, Thu, 24 July 25