ಬೆಂಗಳೂರು ಕಾಲ್ತುಳಿತ: ಆರ್ಸಿಬಿ ವಿರುದ್ಧ ಕ್ರಿಮಿನಲ್ ಕೇಸ್, ಪೊಲೀಸರ ವಿರುದ್ಧ ಇಲಾಖಾ ತನಿಖೆಗೆ ಸಂಪುಟ ನಿರ್ಧಾರ
ಬೆಂಗಳೂರು ಕಾಲ್ತುಳಿತ ಘಟನೆ ಸಂಬಂಧ ಕರ್ನಾಟಕ ಸಚಿವ ಸಂಪುಟ ಗುರುವಾರ ಮಹತ್ವದ ತೀರ್ಮಾನ ಕೈಗೊಂಡಿದೆ. ಆರ್ಸಿಬಿ, ಡಿಎನ್ಎ ಹಾಗೂ ಕೆಎಸ್ಸಿಎ ವಿರುದ್ಧ ಕ್ರಿಮಿನಲ್ ಕೇಸ್ ಹಾಗೂ ಪೊಲೀಸರ ವಿರುದ್ಧ ಇಲಾಖಾ ತನಿಖೆಗೆ ಸಂಪುಟ ನಿರ್ಧರಿಸಿದೆ. ಇದರೊಂದಿಗೆ, ಆರ್ಸಿಬಿ ಸಂಕಷ್ಟಕ್ಕೆ ಸಿಲುಕಲಿದೆ. ಸಂಪುಟ ಕೈಗೊಂಡ ನಿರ್ಧಾರಗಳ ಮಾಹಿತಿ ಇಲ್ಲಿದೆ.

ಬೆಂಗಳೂರು, ಜುಲೈ 24: ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡ ಐಪಿಎಲ್ (IPL) ಟ್ರೋಫಿ ಗೆದ್ದ ಸಂಭ್ರಮಾಚರಣೆ ವೇಳೆ ಚಿನ್ನಸ್ವಾಮಿ ಸ್ಟೇಡಿಯಂ ಬಳಿ 11 ಮಂದಿಯ ಸಾವಿಗೆ ಕಾರಣವಾದ ಕಾಲ್ತುಳಿತ ಪ್ರಕರಣ ಸಂಬಂಧ ಪೊಲೀಸರ ವಿರುದ್ಧ ಇಲಾಖಾ ತನಿಖೆಗೆ ಕರ್ನಾಟಕ ಸಚಿವ ಸಂಪುಟ ನಿರ್ಧರಿಸಿದೆ. ಅಷ್ಟೇ ಅಲ್ಲದೆ ಆರ್ಸಿಬಿ, ಇವೆಂಟ್ ಮ್ಯಾನೇಜ್ಮೆಂಟ್ ಕಂಪನಿ ಡಿಎನ್ಎ ಹಾಗೂ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (KSCA) ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಲು ಕೂಡ ಸಚಿವ ಸಂಪುಟ ತೀರ್ಮಾನಿಸಿದೆ. ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಗುರುವಾರ ನಡೆದ ಸಂಪುಟ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.
ಕಾಲ್ತುಳಿತ ಘಟನೆ ಸಂಬಂಧ ನ್ಯಾಯಮೂರ್ತಿ ಡಿ. ಮೈಕಲ್ ಕುನ್ಹಾ ಏಕ ಸದಸ್ಯ ಆಯೋಗ ಸಲ್ಲಿಸಿದ್ದ ವರದಿ ಬಗ್ಗೆ ಸಂಪುಟ ಸಭೆಯಲ್ಲಿ ಚರ್ಚಿಸಲಾಯಿತು. ನಂತರ ಆರ್ಸಿಬಿ, ಡಿಎನ್ಎ ಹಾಗೂ ಕೆಎಸ್ಸಿಎ ವಿರುದ್ಧ ಕ್ರಮಕ್ಕೆ ತೀರ್ಮಾನಿಸಲಾಯಿತು. ಪೊಲೀಸ್ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಕೂಡ ಕುನ್ಹಾ ವರದಿಯಲ್ಲಿ ಶಿಫಾರಸು ಮಾಡಲಾಗಿತ್ತು.
ಕ್ರಿಮಿನಲ್ ಕೇಸ್: ಯಾರಿಗೆಲ್ಲ ಸಂಕಷ್ಟ?
ಇದೀಗ ಸಚಿವ ಸಂಪುಟ ಕ್ರಿಮಿನಲ್ ಕೇಸ್ಗೆ ತೀರ್ಮಾನ ಕೈಗೊಂಡಿರುವುದರಿಂದ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ಅಧ್ಯಕ್ಷ ರಘುರಾಮ್ ಭಟ್, ಮಾಜಿ ಕಾರ್ಯದರ್ಶಿ ಎ.ಶಂಕರ್, ಮಾಜಿ ಖಜಾಂಚಿ ಜಯರಾಂ, ಆರ್ಸಿಬಿ ತಂಡದ ರಾಜೇಶ್ ಮೆನನ್, ಡಿಎನ್ಎ ನೆಟ್ವರ್ಕ್ ಲಿಮಿಟೆಡ್ ಎಂಡಿ ವೆಂಕಟ್ ವರ್ಧನ್ , ಡಿಎನ್ಎ ನೆಟ್ವರ್ಕ್ ಲಿಮಿಟೆಡ್ ಉಪಾಧ್ಯಕ್ಷ ಸುನೀಲ್ ಮಾಥೂರ್ ಇವರಿಗೆ ಸಂಕಷ್ಟ ಎದುರಾಗಲಿದೆ.
ಬೆಂಗಳೂರು ನಗರ ಮಾಜಿ ಪೊಲೀಸ್ ಕಮಿಷನರ್ ಬಿ.ದಯಾನಂದ್, ಐಪಿಎಸ್ ಅಧಿಕಾರಿಗಳಾದ ವಿಕಾಸ್ ಕುಮಾರ್ ವಿಕಾಸ್, ಶೇಖರ್, ಕಬ್ಬನ್ ಪಾರ್ಕ್ ಸಬ್ ಡಿವಿಷನ್ ಎಸಿಪಿ ಬಾಲಕೃಷ್ಣ, ಕಬ್ಬನ್ ಪಾರ್ಕ್ ಠಾಣೆಯ ಪಿಐ ಗಿರೀಶ್ ವಿರುದ್ಧವೂ ಪ್ರಕರಣ ದಾಖಲಾಗಲಿದೆ.
ಇದನ್ನೂ ಓದಿ: ಬೆಂಗಳೂರು ಕಾಲ್ತುಳಿತ: ವಿರಾಟ್ ಕೊಹ್ಲಿ ಮೇಲೂ ಕೇಸ್ ಆಗುತ್ತಾ? ಪರಮೇಶ್ವರ್ ಕೊಟ್ಟರು ಮಹತ್ವದ ಮಾಹಿತಿ
ಜೂನ್ 4 ರಂದು ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂ ಬಳಿ ಸಂಭವಿಸಿದ ಕಾಲ್ತುಳಿತದಲ್ಲಿ 11 ಮಂದಿ ಮೃತಪಟ್ಟಿದ್ದರು. ಸುಮಾರು 40 ಮಂದಿ ಗಾಯಗೊಂಡಿದ್ದರು. ಘಟನೆಯು ದೇಶದಾದ್ಯಂತ ತೀವ್ರ ಚರ್ಚೆಗೆ ಗ್ರಾಸವಾಗಿತ್ತು. ರಾಜಕೀಯವಾಗಿಯೂ ತೀವ್ರ ಗದ್ದಲಕ್ಕೆ ಕಾರಣವಾಗಿತ್ತು.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 12:51 pm, Thu, 24 July 25








