ಬೆಂಗಳೂರಿನಲ್ಲಿ ಸ್ಪೇಸ್‌ಟೆಕ್ ಕೇಂದ್ರ ಸ್ಥಾಪನೆ, ಬಹುಮಹಡಿ ಕಟ್ಟಡಗಳಿಗೆ ಸೆಸ್: ಸಚಿವ ಸಂಪುಟ ನಿರ್ಧಾರ
ಕರ್ನಾಟಕ ಸಚಿವ ಸಂಪುಟವು ಬೆಂಗಳೂರಿನಲ್ಲಿ 10 ಕೋಟಿ ರೂಪಾಯಿ ವೆಚ್ಚದ ಸ್ಪೇಸ್‌ಟೆಕ್ ಕೇಂದ್ರ ಸ್ಥಾಪನೆಗೆ ಅನುಮೋದನೆ ನೀಡಿದೆ. ಎಲ್ಲಾ ಎತ್ತರದ ಕಟ್ಟಡಗಳಿಗೆ ಶೇಕಡಾ 1 ರ ಸೆಸ್ ವಿಧಿಸಲೂ ನಿರ್ಧರಿಸಲಾಗಿದೆ. ರಾಯಚೂರಿನಲ್ಲಿ ಕ್ಯಾನ್ಸರ್ ಚಿಕಿತ್ಸಾ ಘಟಕ ಸ್ಥಾಪನೆ ಮತ್ತು ಬಾಲ್ಯವಿವಾಹ ನಿಷೇಧ ಕಾಯ್ದೆಗೆ ತಿದ್ದುಪಡಿಗಳಿಗೂ ಅನುಮೋದನೆ ದೊರೆತಿದೆ.

ಬೆಂಗಳೂರು, ಜುಲೈ 24: ಬೆಂಗಳೂರಿನಲ್ಲಿ 10 ಕೋಟಿ ರೂ. ಅಂದಾಜು ಮೊತ್ತದಲ್ಲಿ ಸ್ಪೇಸ್‌ಟೆಕ್ ಕೇಂದ್ರ ಸ್ಥಾಪಿಸುವ ಪ್ರಸ್ತಾವಕ್ಕೆ ಸಚಿವ ಸಂಪುಟ (Karnataka Cabinet) ಅನುಮೋದನೆ ನೀಡಿದೆ. ಜತೆಗೆ, ರಾಜ್ಯದ ಎಲ್ಲ ಬಹುಮಹಡಿ, ಎತ್ತರದ ಕಟ್ಟಡಗಳಿಗೆ ಶೇ 1 ರ ಸೆಸ್ ವಿಧಿಸುವ ತೀರ್ಮಾನವನ್ನೂ ಕೈಗೊಳ್ಳಲಾಗಿದೆ. ಸಿಎಂ ಸಿದ್ದರಾಮಯ್ಯ (Siddaramaiah) ನೇತೃತ್ವದಲ್ಲಿ ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಹಲವು ಮಹತ್ವದ ನಿರ್ಧಾರಗಳನ್ನು ಕೈಗೊಳ್ಳಲಾಗಿದೆ. ಅವುಗಳಲ್ಲಿ ಸ್ಪೇಸ್‌ಟೆಕ್ ಕೇಂದ್ರ ಸ್ಥಾಪನೆ ಕೂಡ ಒಂದಾದಗಿದೆ. ಸಚಿವ ಸಂಪುಟ ಸಭೆಯ ಬಳಿಕ ವಿಧಾನಸೌಧದಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಕಾನೂನು ಸಚಿವ ಹೆಚ್ಕೆ ಪಾಟೀಲ್, ಸಂಪುಟ ನಿರ್ಧಾರಗಳ ಬಗ್ಗೆ ಮಾಹಿತಿ ನೀಡಿದರು.
ಕರ್ನಾಟಕ ಜಾಗತಿಕ ಸಾಮರ್ಥ್ಯ ಕೇಂದ್ರ ನೀತಿ 2024-29 ತಿದ್ದುಪಡಿ ಮಾಡಲು ಕ್ಯಾಬಿನೆಟ್ ಅನುಮೋದನೆ ನೀಡಿದೆ. ರಾಯಚೂರಿನಲ್ಲಿ 50 ಕೋಟಿ ರೂ. ವೆಚ್ಚದಲ್ಲಿ ಕಿದ್ವಾಯಿ ಪರಿಫೆರಲ್ ಕ್ಯಾನ್ಸರ್ ಚಿಕಿತ್ಸಾ ಘಟಕ ಸ್ಥಾಪನೆಗೆ ಒಪ್ಪಿಗೆ ನೀಡಲಾಗಿದೆ ಎಂದು ಪಾಟೀಲ್ ತಿಳಿಸಿದರು.
ರಾಜ್ಯದ ಎಲ್ಲ ಬಹುಮಹಡಿ, ಎತ್ತರದ ಕಟ್ಟಡಗಳಿಗೆ ಸೆಸ್
ಕರ್ನಾಟಕದ ಎಲ್ಲ ಬಹುಮಹಡಿ ಮತ್ತು ಎತ್ತರದ ಕಟ್ಟಡಗಳಿಗೆ ಶೇ 1ರಷ್ಟು ಸೆಸ್ ಹಾಕಲು ಸಚಿವ ಸಂಪುಟ ಸಭೆ ನಿರ್ಧರಿಸಿದೆ. ಅಗ್ನಿಶಾಮಕ ದಳದ ಕಾಯ್ದೆ ಅನ್ವಯ ಆಗುವ ಕಟ್ಟಡಗಳಿಗೆ ಶೇ 1 ರ ಸೆಸ್ ವಿಧಿಸಲಾಗುತ್ತದೆ. ವಾಣಿಜ್ಯ ಕಟ್ಟಡಗಳು, ಕೈಗಾರಿಕೆಗಳು, ಶಿಕ್ಷಣ ಸಂಸ್ಥೆಗಳು, ಆಸ್ಪತ್ರೆ ಕಟ್ಟಡಗಳು, ಅಪಾರ್ಟ್ಮೆಂಟ್ಗಳು ಸೇರಿ ಎತ್ತರದ ಬಹುಮಹಡಿ ಕಟ್ಟಡಗಳಿಗೆ ಸೆಸ್ ವಿಧಿಸಲಾಗುತ್ತದೆ ಎಂದು ಹೆಚ್ಕೆ ಪಾಟೀಲ್ ಮಾಹಿತಿ ನೀಡಿದರು.
ಬೆಂಗಳೂರು ಕಾಲ್ತುಳಿತ ಪ್ರಕರಣ ಸಂಬಂಧ ನ್ಯಾಯಮೂರ್ತಿ ಡಿ. ಮೈಕಲ್ ಕುನ್ಹಾ ಏಕ ಸದಸ್ಯ ಆಯೋಗ ಸಲ್ಲಿಸಿದ್ದ ವರದಿಯನ್ನು ಅಂಗೀಕರಿಸಲಾಗಿದೆ. ಘಟನೆಗೆ ಸಂಬಂಧಿಸಿದ ಖಾಸಗಿ ಸಂಸ್ಥೆ ವಿರುದ್ದ ಕಾನೂನು ಕ್ರಮ ಜರುಗಿಸಲಾಗುತ್ತದೆ. ಸಂಬಂಧಿಸಿದ ಸರ್ಕಾರಿ ಅಧಿಕಾರಿಗಳ ವಿರುದ್ಧ ಇಲಾಖಾ ತನಿಖೆಗೆ ನಿರ್ಧಾರ ಮಾಡಲಾಗಿದೆ ಎಂದು ಅವರು ಮಾಹಿತಿ ನೀಡಿದರು.
ಇದನ್ನೂ ಓದಿ: ಬೆಂಗಳೂರು ಕಾಲ್ತುಳಿತ: ಆರ್ಸಿಬಿ ವಿರುದ್ಧ ಕ್ರಿಮಿನಲ್ ಕೇಸ್, ಪೊಲೀಸರ ವಿರುದ್ಧ ಇಲಾಖಾ ತನಿಖೆಗೆ ಸಂಪುಟ ನಿರ್ಧಾರ
ಬಾಲ್ಯ ವಿವಾಹ ನಿಷೇಧ ತಿದ್ದುಪಡಿ ಕಾಯ್ದೆ 2025ಕ್ಕೆ ಕ್ಯಾಬಿನೆಟ್ ಒಪ್ಪಿಗೆ
‘ಬಾಲ್ಯ ವಿವಾಹ ನಿಷೇಧ ತಿದ್ದುಪಡಿ ಕಾಯ್ದೆ 2025’ಕ್ಕೆ ಕ್ಯಾಬಿನೆಟ್ ಅನುಮೋದನೆ ನೀಡಿದೆ. ಬಾಲ್ಯ ವಿವಾಹ ತಡೆಯುವುದಕ್ಕಾಗಿ, ನಿಶ್ಚಿತಾರ್ಥ ಮಾತುಕತೆಯಲ್ಲಿ ಭಾಗಿಯಾದವರ ವಿರುದ್ಧವೂ ಕ್ರಮ ಕೈಗೊಳ್ಳುವ ಬಗ್ಗೆ ಈ ಕಾಯ್ದೆಯಲ್ಲಿ ಉಲ್ಲೇಖಿಸಲಾಗಿದೆ. ತೊಟ್ಟಿಲು ಮದುವೆಯಾದರೂ ಶಿಕ್ಷೆ ಇರಲಿದೆ. ಬಾಲ್ಯ ವಿವಾಹಕ್ಕೆ ಕುಟುಂಬಸ್ಥರು ಒಪ್ಪಿದರೂ ಕ್ರಮ ಕೈಗೊಳ್ಳಲಾಗುವುದು. ಯಾರೇ ಒತ್ತಡ ಹಾಕಿದರೂ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ತಿಳಿಸಿದರು.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 2:15 pm, Thu, 24 July 25







