ದೆಹಲಿಗೆ ಇಂದು ಸಿಎಂ, ಡಿಸಿಎಂ: ಪ್ರವಾಸಕ್ಕೆ ಮುನ್ನಾ ದಿನ ರಹಸ್ಯವಾಗಿ ಹಾಸನಕ್ಕೆ ತೆರಳಿ ಡಿಕೆ ಶಿವಕುಮಾರ್ ಪೂಜೆ!
ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ಇಂದು ದೆಹಲಿಗೆ ತೆರಳಲಿದ್ದಾರೆ. ಕಳೆದ ಬಾರಿ ದೆಹಲಿಯಿಂದಲೇ, ‘ನಾನೇ 5 ವರ್ಷ ಸಿಎಂ’ ಎಂದು ಸಿದ್ದರಾಮಯ್ಯ ಹೇಳಿದ ದಿನ ರಾಹುಲ್ ಗಾಂಧಿ ಭೇಟಿ ಇಬ್ಬರಿಗೂ ಸಾಧ್ಯವಾಗಿರಲಿಲ್ಲ. ಇದೀಗ ಮತ್ತೆ ದೆಹಲಿಗೆ ತೆರಳಲಿರುವ ಇಬ್ಬರು ನಾಯಕರಿಗೆ ರಾಹುಲ್ ಗಾಂಧಿ ಜೊತೆಗೆ ಭೇಟಿ ಭಾಗ್ಯ ಸಿಗುತ್ತದೆಯಾ ಎಂಬ ಪ್ರಶ್ನೆ ಮೂಡಿದೆ. ಇದರ ಮಧ್ಯೆ, ಅನಾರೋಗ್ಯದಿಂದ ವಿಶ್ರಾಂತಿಯಲ್ಲಿದ್ದಾಗಲೇ ಡಿಕೆ ಶಿವಕುಮಾರ್ ಗುಟ್ಟಾಗಿ ಸಲ್ಲಿಸಿರುವ ಪೂಜೆ ಕುತೂಹಲಕ್ಕೆ ಕಾರಣವಾಗಿದೆ.

ಹಾಸನ, ಜುಲೈ 24: ಪೊಲೀಸ್ ಭದ್ರತೆ ಇಲ್ಲ, ಬೆಂಗಾವಲು ಪಡೆ ಇಲ್ಲ, ಕಾರ್ಯಕ್ರಮ ಪಟ್ಟಿಯಲ್ಲಿ ಯಾವುದೇ ಸುಳಿವು ಇರಲಿಲ್ಲ! ಆದರೂ ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ಬುಧವಾರ ರಾತ್ರಿ ದಿಢೀರನೆ ಹಾಸನದ ನಾಗರ ನವಿಲೆ ದೇಗುಲಕ್ಕೆ (Nagara Navile Temple) ಗುಟ್ಟಾಗಿ ತೆರಳಿ ಪೂಜೆ ಸಲ್ಲಿಸಿದ್ದಾರೆ. ಏಕಾಂಗಿಯಾಗಿ ದೇವರ ದರ್ಶನ ಪಡೆದಿದ್ದಾರೆ. ಅರ್ಚನೆ, ಪೂಜೆ ಮಾಡಿಸಿ ಗಿರಿಸಿದ್ದೇಶ್ವರ ದೇವರಿಗೆ ಅಭಿಷೇಕ ಸಲ್ಲಿಸಿದ್ದಾರೆ. ಲೋಕ ಕಲ್ಯಾಣಕ್ಕಾಗಿ ಸರ್ವರಿಗೂ ಒಳಿತಾಗಲಿ ಎಂದು ಪೂಜೆ ಮಾಡಲು ಅರ್ಚಕರಿಗೆ ಹೇಳಿದ್ದಾರೆ. ಅದಾ ನಂತರ ಸಂಕಲ್ಪವೊಂದನ್ನು ಮಾಡಿ ಪೂಜೆ ಸಲ್ಲಿಸಿ ಮರಳಿದ್ದಾರೆ.
ಡಿಕೆ ಶಿವಕುಮಾರ್ ದೇವರ ದರ್ಶನ ಪಡೆಯುವುದು, ದೇಗುಲಗಳಿಗೆ ತೆರಳುವುದು ಹೊಸ ವಿಷಯವೇನಲ್ಲ. ಆದರೆ, ಎರಡು ದಿನ ವಿಶ್ರಾಂತಿ ಪಡೆಯುವುದಾಗಿ ಹೇಳಿದ್ದ ಅವರು, ಸದ್ದಿಲ್ಲದೇ ನಾಗದೇವರಿಗೆ ಪೂಜೆ ಸಲ್ಲಿಸಿರುವುದು ಅಚ್ಚರಿ ಮತ್ತು ಕುತೂಹಲಕ್ಕೆ ಕಾರಣವಾಗಿದೆ.
ನಾಗರ ನವಿಲೆ ದರ್ಶನ ಪಡೆದ ನಂತರ ಸಿಎಂ ಆಗಿದ್ದ ಯಡಿಯೂರಪ್ಪ!
ದಶಕದ ಹಿಂದೆ ಈ ಭಾಗಕ್ಕೆ ಬರ ಅಧ್ಯಯನಕ್ಕೆ ಬಂದಿದ್ದ ಬಿಜೆಪಿ ನಾಯಕ ಬಿಎಸ್ ಯಡಿಯೂರಪ್ಪ ನಾಗರ ನವಿಲೆ ಕ್ಷೇತ್ರದಲ್ಲಿ ನಾಗದೇವರ ಆಶೀರ್ವಾದ ಪಡೆದಿದ್ದರು. ಬಳಿಕ ಅವರು ಸಿಎಂ ಆಗಿದ್ದರು ಎಂದು ಸ್ಥಳೀಯರು ಹೇಳುತ್ತಿದ್ದಾರೆ. ಈಗ ಡಿಸಿಎಂ ಡಿಕೆ ಶಿವಕುಮಾರ್ ಭೇಟಿ ಹಿಂದೆ ಯಾವ ಸಂಕಲ್ಪದ ಲೆಕ್ಕಾಚಾರ ಅಡಗಿದೆ ಎಂಬ ಚರ್ಚೆ ನಡೆಯುತ್ತಿದೆ.

ಯಡಿಯೂರಪ್ಪ ನಾಗರ ನವಿಲೆ ಕ್ಷೇತ್ರಕ್ಕೆ ಭೇಟಿ ನೀಡಿದ್ದ ಸಂದರ್ಭದ ಸಂಗ್ರಹ ಚಿತ್ರ
ರಾಹುಲ್ ಗಾಂಧಿ ಭೇಟಿಗೆ ಸಿಗುತ್ತಾ ಅವಕಾಶ?
ಕೆಲ ದಿನಗಳ ಹಿಂದೆ ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ದೆಹಲಿ ಪ್ರವಾಸ ಅಪೂರ್ಣವಾಗಿತ್ತು. ರಾಹುಲ್ ಗಾಂಧಿ ಭೇಟಿಗೆ ಅವಕಾಶ ಸಿಕ್ಕಿರಲಿಲ್ಲ. ಸಿದ್ದರಾಮಯ್ಯ ದೆಹಲಿ ಪ್ರವಾಸದ ವೇಳೆಯೇ ರಾಜ್ಯ ಉಸ್ತುವಾರಿ ರಣದೀಪ್ ಸುರ್ಜೆವಾಲಾ ರಾಜ್ಯದಲ್ಲಿ ಕುಳಿತುಕೊಂಡು ಶಾಸಕರ ಜತೆ ಸಭೆ ನಡೆಸಿದ್ದರು. ಇದೇ ವೇಳೆ, ‘ನಾನೇ ಐದು ವರ್ಷ ಸಿಎಂ’ ಎಂದು ಸಿದ್ದರಾಮಯ್ಯ ಹೇಳಿದ್ದರು.
ಸಿದ್ದರಾಮಯ್ಯ ಹೇಳಿಕೆ ಬಳಿಕ ಇದೀಗ ಮತ್ತೆ ಸಿಎಂ ಮತ್ತು ಡಿಸಿಎಂ ಇಬ್ಬರೂ ದೆಹಲಿಗೆ ಪ್ರಯಾಣ ಬೆಳೆಸಲಿದ್ದಾರೆ. ದೆಹಲಿಯಲ್ಲಿ ಹಿಂದುಳಿದ ವರ್ಗಗಳ ಘಟಕದಿಂದ ನ್ಯಾಯ್ ಸಮಾವೇಶ ಆಯೋಜನೆಗೊಂಡಿದೆ. ಹಿಂದುಳಿದ ವರ್ಗಗಳ ಸಲಹಾ ಮಂಡಳಿ ಅಸ್ತಿತ್ವಕ್ಕೆ ಬಂದು ಸಿಎಂ ಸಿದ್ದರಾಮಯ್ಯ ಮೊದಲ ಸಭೆಯ ನೇತೃತ್ವ ವಹಿಸಿದ್ದರು. ಅದಾದ ಬಳಿಕ ಸಿದ್ದರಾಮಯ್ಯ ಭಾಗವಹಿಸುತ್ತಿರುವ ಮೊಟ್ಟ ಮೊದಲ ಎಐಸಿಸಿ ಕಾರ್ಯಕ್ರಮ ಇದಾಗಿದೆ. ಕಾರ್ಯಕ್ರಮದಲ್ಲಿ ರಾಹುಲ್ ಗಾಂಧಿ ಮತ್ತು ಮಲ್ಲಿಕಾರ್ಜುನ ಖರ್ಗೆ ಕೂಡ ಭಾಗವಹಿಸಲಿದ್ದಾರೆ. ಹೀಗಾಗಿ, ಸಿದ್ದರಾಮಯ್ಯ ಹಾಗೂ ಡಿಕೆಶಿ ಕೈಗೆ ರಾಹುಲ್ ಗಾಂಧಿ ಇವತ್ತು ಸಿಗುತ್ತಾರಾ ಅಥವಾ ಕೇವಲ ವೇದಿಕೆ ಕಾರ್ಯಕ್ರಮಕ್ಕೆ ಮಾತ್ರ ರಾಹುಲ್ ಭೇಟಿ ಸೀಮಿತವಾಗುತ್ತದೆಯೇ ಎಂಬುದು ಕುತೂಹಲ ಮೂಡಿಸಿದೆ.
ಇದನ್ನೂ ಓದಿ: ಡಿಕೆ ಶಿವಕುಮಾರ್‌ಗೆ ಅನಾರೋಗ್ಯ: 3 ದಿನ ಸಾರ್ವಜನಿಕರ ಭೇಟಿ ಇಲ್ಲ, ಆಗಿದ್ದೇನು?
ಒಟ್ಟಿನಲ್ಲಿ, ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್ ಅವರ ದೆಹಲಿ ಪ್ರವಾಸ ಮತ್ತೊಮ್ಮೆ ಗಮನ ಸೆಳೆದಿದೆ. ಇದರ ಮಧ್ಯೆ ಡಿಕೆ ಶಿವಕುಮಾರ್ ರಹಸ್ಯವಾಗಿ ದೇಗುಲಕ್ಕೆ ಭೇಟಿ ನೀಡಿದ್ದು ಕುತೂಹಲಕ್ಕೆ ಕಾರಣವಾಗಿದೆ.