ಮಹದಾಯಿ ವಿಚಾರದಲ್ಲಿ ಮತ್ತೆ ಗೋವಾ ಕ್ಯಾತೆ: ಸಿಎಂ ಪ್ರಮೋದ್ ಸಾವಂತ್ ಹೇಳಿಕೆಗೆ ಕರ್ನಾಟಕ ಸರ್ಕಾರ ಕಿಡಿ
ಮಹದಾಯಿ ವಿಚಾರವಾಗಿ ಗೋವಾ ಸರ್ಕಾರ ಮತ್ತೆ ಕ್ಯಾತೆ ತೆಗದಿದೆ. ಕೇಂದ್ರ ಸರ್ಕಾರವು ಮಹಾದಾಯಿ ಯೋಜನೆಗೆ ಯಾವುದೇ ಕಾರಣಕ್ಕೂ ಅನುಮೋದನೆ ನೀಡುವುದಿಲ್ಲವೆಂದು ಕೇಂದ್ರ ಸಚಿವ ಭೂಪೇಂದ್ರ ಯಾದವ್ ಹೇಳಿದ್ದಾರೆ ಎಂಬ ಗೋವಾ ಸಿಎಂ ಪ್ರಮೋದ್ ಸಾವಂತ್ ಮಾತು ಇದೀಗ ಕರ್ನಾಟಕ ಸರ್ಕಾರದ ಆಕ್ರೋಶಕ್ಕೆ ಕಾರಣವಾಗಿದೆ.

ಬೆಂಗಳೂರು, ಜುಲೈ 24: ಮಹದಾಯಿ ನದಿ (Mahadayi River) ವಿಚಾರದಲ್ಲಿ ಗೋವಾ (Goa) ಸರ್ಕಾರ ಪದೇ ಪದೇ ಕ್ಯಾತೆ ತೆಗೆಯುತ್ತಲೇ ಬಂದಿದೆ. ಕರ್ನಾಟಕವು (Karnataka) ಕಳಸಾ-ಬಂಡೂರಿ ನಾಲಾ ಯೋಜನೆಯಡಿ ಮಹದಾಯಿ ನದಿಯಿಂದ ನೀರನ್ನು ತಿರುಗಿಸಲು ಯೋಜಿಸಿದೆ. ಆದರೆ, ಗೋವಾ ಸರ್ಕಾರ ಇದಕ್ಕೆ ನಿರಂತರ ವಿರೋಧವನ್ನು ಮಾಡುತ್ತಲೇ ಬರುತ್ತಿದೆ. ಇದೀಗ ಮತ್ತೆ ಕ್ಯಾತೆ ತೆಗೆದಿದೆ. ಕೇಂದ್ರ ಸರ್ಕಾರವು ಮಹಾದಾಯಿ ಯೋಜನೆಗೆ ಯಾವುದೇ ಕಾರಣಕ್ಕೂ ಅನುಮೋದನೆ ನೀಡುವುದಿಲ್ಲವೆಂದು ಕೇಂದ್ರ ಪರಿಸರ ಮತ್ತು ಅರಣ್ಯ ಖಾತೆ ಸಚಿವರಾದ ಭೂಪೇಂದ್ರ ಯಾದವ್ ತಮಗೆ ತಿಳಿಸಿದ್ದಾರೆ ಎಂದು ಗೋವಾ ಸಿಎಂ ಪ್ರಮೋದ್ ಸಾವಂತ್ ಗೋವಾ ವಿಧಾನಸಭೆಯಲ್ಲಿ ಹೇಳಿಕೆ ನೀಡಿರುವುದು ಈಗ ಆಕ್ಷೇಪಕ್ಕೆ ಗುರಿಯಾಗಿದೆ.
ಕರ್ನಾಟಕಕ್ಕೆ ಅಘಾತ ತಂದಿದೆ: ಸಚಿವ ಹೆಚ್ಕೆ ಪಾಟೀಲ್
ಪ್ರಮೋದ್ ಸಾವಂತ್ ಮಹದಾಯಿ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಕಾನೂನು, ಸಂಸದೀಯ ವ್ಯವಹಾರಗಳ ಸಚಿವ ಹೆಚ್ಕೆ ಪಾಟೀಲ್, ಕೇಂದ್ರ ಸಚಿವ ಭೂಪೇಂದ್ರ ಯಾದವ್ ಮಹದಾಯಿ ಯೋಜನೆ ಮಾಡಲು ಪರವಾನಿಗೆ ಕೊಡುವುದಿಲ್ಲ ಎಂದು ಗೋವಾ ಸಿಎಂ ವಿಧಾನಸಭೆಯಲ್ಲಿ ಹೇಳಿದ್ದಾರೆ. ಈ ಹೇಳಿಕೆ ಸಹಜವಾಗಿ ಕರ್ನಾಟಕಕ್ಕೆ ಆಗುವ ಅನ್ಯಾಯವನ್ನು ತೆರೆದಿಟ್ಟಿದೆ. ಇದರಿಂದ ಕರ್ನಾಟಕ್ಕೆ ಅಘಾತ ಆಗಿದೆ ಎಂದಿದ್ದಾರೆ. ಅಷ್ಟೇ ಅಲ್ಲದೆ, ಮಹಾದಾಯಿ ಜಲವಿವಾದ ಸಂಬಂಧ ಅಂತರರಾಜ್ಯ ಜಲವಿವಾದದ ಕಾಯ್ದೆಯನ್ವಯ ಒಂದು ನ್ಯಾಯಾಧೀಕರಣ ರಚನೆಯಾಗಿ ಅದು ಅಂತಿಮ ತೀರ್ಪು ನೀಡಿ, ಆ ತೀರ್ಪು ಕೇಂದ್ರ ಸರ್ಕಾರದ ಗೆಜೆಟ್ನಲ್ಲಿ ಪ್ರಕಟಣೆಯಾಗಿ ನ್ಯಾಯಾಧೀಕರಣದ ತೀರ್ಪು ಜಾರಿಗೆ ಬಂದಿದೆ ಎಂದಿದ್ದಾರೆ.
ಕರ್ನಾಟಕವು ಕಳಸಾ-ಬಂಡೂರಿ ಯೋಜನೆಗೆ 7.56 ಟಿಎಂಸಿ ಅಡಿ ನೀರನ್ನು ಮಲಪ್ರಭಾ ಕಣಿವೆಗೆ ತಿರುಗಿಸಿಕೊಳ್ಳಲು ತನ್ನ ಕೋರಿಕೆ ಸಲ್ಲಿಸಿತ್ತು. ಇದರಲ್ಲಿ 3.90 ಟಿಎಂಸಿ ನೀರನ್ನು ಕರ್ನಾಟಕದ ಪಾಲಿಗೆ ಹಂಚಿಕೆ ಮಾಡಿದೆ. ಅಂತರ್ ಕಣಿವೆ ತಿರುಗಿಸುವಿಕೆಯನ್ನು ಕರ್ನಾಟಕದ ಕಡೆಯಿಂದ ಮಾಡಿಕೊಳ್ಳಲು ನ್ಯಾಯಾಧೀಕರಣ ಒಪ್ಪಿದೆ. ಈ ಯೋಜನೆ ಜಾರಿಗೊಳಿಸಲು ಪ್ರಸ್ತಾವನೆಯನ್ನು ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರಕ್ಕೆ ಕರ್ನಾಟಕ ಮಂಜೂರಿಗಾಗಿ/ತೀರುವಳಿಗಾಗಿ ಅರ್ಜಿ ಸಲ್ಲಿಸಿತ್ತು. 10.6 ಹೆಕ್ಟೇರ್ ಅರಣ್ಯ ಭೂಮಿ ಕಾಳಿ ಮತ್ತು ಸಹ್ಯಾದ್ರಿ ಹುಲಿ ಕಾಯ್ದಿಟ್ಟ ಪ್ರದೇಶದಲ್ಲಿ ಬರುತ್ತದೆ ಎಂದು ಗೋವಾ ಆಕ್ಷೇಪಿಸಲು ಪ್ರಾರಂಭಿಸಿತು. ಈ ಹಿನ್ನೆಲೆಯಲ್ಲಿ ದಿನಾಂಕ: 23.01.2024 ರಂದು ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರವು ಈ ಅರಣ್ಯ ಪ್ರದೇಶವನ್ನು ಬಳಕೆ ಮಾಡಿಕೊಳ್ಳಲು ಶಿಫಾರಸ್ಸು ಮಾಡಿದೆ. ಸರ್ವೋಚ್ಛ ನ್ಯಾಯಾಲಯವು ಕರ್ನಾಟಕದ ಮಹಾದಾಯಿ ತಡೆಹಿಡಿಯಬೇಕೆಂಬ ಯಾವುದೇ ಆದೇಶ ನೀಡಿಲ್ಲ ಎಂದು ಹೆಚ್ಕೆ ಪಾಟೀಲ್ ಹೇಳಿದ್ದಾರೆ.
ನ್ಯಾಯಾಂಗದ ಯಾವುದೇ ಅಡೆತಡೆ ಇಲ್ಲದಿದ್ದರೂ ಕರ್ನಾಟಕದ ವಿರುದ್ಧ ಮಲತಾಯಿ ಧೋರಣೆ ಅನುಸರಿಸುತ್ತಾ ಇರುವುದು ಒಕ್ಕೂಟ ವ್ಯವಸ್ಥೆಗೆ ಮಾಡುತ್ತಿರುವ ಅನ್ಯಾ ಎಂದು ಸಚಿವ ಪಾಟೀಲ್ ಬೇಸರ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ದೆಹಲಿಗೆ ಇಂದು ಸಿಎಂ, ಡಿಸಿಎಂ: ಪ್ರವಾಸಕ್ಕೆ ಮುನ್ನಾ ದಿನ ರಹಸ್ಯವಾಗಿ ಹಾಸನಕ್ಕೆ ತೆರಳಿ ಡಿಕೆ ಶಿವಕುಮಾರ್ ಪೂಜೆ!
ಸದ್ಯ, ಅಂತರರಾಜ್ಯ ಜಲವಿವಾದ ಕಾಯ್ದೆಯಡಿಯಲ್ಲಿ ನ್ಯಾಯಾಧೀಕರಣದಿಂದ ಇತ್ಯರ್ಥಗೊಂಡಿರುವ ಯೋಜನೆಗಳನ್ನು ಅನುಷ್ಠಾನಗೊಳಿಸಲು ಕರ್ನಾಟಕಕ್ಕೆ ಕೇಂದ್ರ ಸರ್ಕಾರವು ತಾನು ನೀಡಬೇಕಾದ ಮಂಜೂರಾತಿಗಳನ್ನು ತಕ್ಷಣ ನೀಡದಿರುವುದು ಜನರ ಆಕ್ರೋಶಕ್ಕೆ ಕಾರಣವಾಗುತ್ತಿದೆ. ಇದರ ಜೊತೆಗೆ ಉತ್ತರ ಕರ್ನಾಟಕ ಜನರ ಹಾಗೂ ರೈತರ ಹಿತ ಗಮನಿಸಿ, ಯೋಜನೆಗೆ ತಕ್ಷಣ ಅನುಮತಿ ನೀಡಬೇಕೆಂದು ಸಚಿವ ಪಾಟೀಲ್ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ.



