ಬರೋಬ್ಬರಿ 175 ರನ್ ನೀಡಿದ ಯುಜ್ವೇಂದ್ರ ಚಹಲ್
Middlesex vs Northamptonshire: ಕೌಂಟಿ ಚಾಂಪಿಯನ್ಶಿಪ್ ಟೆಸ್ಟ್ ಟೂರ್ನಿಯ 38ನೇ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಮಿಡ್ಲ್‌ಸೆಕ್ಸ್ ತಂಡವು ಮೊದಲ ಇನಿಂಗ್ಸ್ನಲ್ಲಿ 625 ರನ್ ಕಲೆಹಾಕಿದೆ. ಇದಕ್ಕುತ್ತರವಾಗಿ ಪ್ರಥಮ ಇನಿಂಗ್ಸ್ ಶುರು ಮಾಡಿರುವ ನಾರ್ಥಾಂಪ್ಟನ್‌ಶೈರ್ ತಂಡವು 2ನೇ ದಿನದಾಟದ ಅಂತ್ಯಕ್ಕೆ 4 ವಿಕೆಟ್ ಕಳೆದುಕೊಂಡು 126 ರನ್ ಗಳಿಸಿದೆ.

ಇಂಗ್ಲೆಂಡ್ನಲ್ಲಿ ನಡೆಯುತ್ತಿರುವ ಕೌಂಟಿ ಚಾಂಪಿಯನ್ಶಿಪ್ ಡಿವಿಷನ್-2 ಟೂರ್ನಿಯ 38ನೇ ಪಂದ್ಯದಲ್ಲಿ ಯುಜ್ವೇಂದ್ರ ಚಹಲ್ ಬರೋಬ್ಬರಿ 175 ರನ್ಗಳನ್ನು ನೀಡಿದ್ದಾರೆ. ನಾರ್ತ್ವುಡ್ನ ಎಂಟಿಎಸ್ ಗ್ರೌಂಡ್ನಲ್ಲಿ ನಡೆಯುತ್ತಿರುವ ಮಿಡ್ಲ್‌ಸೆಕ್ಸ್ ವಿರುದ್ಧದ ಈ ಪಂದ್ಯದಲ್ಲಿ ಟಾಸ್ ಗೆದ್ದ ನಾರ್ಥಾಂಪ್ಟನ್‌ಶೈರ್ ತಂಡದ ನಾಯಕ ಲೂಯಿಸ್ ಮೆಕ್‌ಮ್ಯಾನಸ್ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಇನಿಂಗ್ಸ್ ಆರಂಭಿಸಿದ ಮಿಡ್ಲ್‌ಸೆಕ್ಸ್ ಪರ ಆರಂಭಿಕ ದಾಂಡಿಗರಾದ ಸ್ಯಾಮ್ ರಾಬ್ಸನ್ (57) ಹಾಗೂ ಮ್ಯಾಕ್ಸ್ ಹೋಲ್ಡನ್ (151) ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದರು.
ಇನ್ನು ಮೂರನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸಿದ ಕೇನ್ ವಿಲಿಯಮ್ಸನ್ 114 ರನ್ಗಳ ಇನಿಂಗ್ಸ್ ಆಡಿದರು. ಹಾಗೆಯೇ ನಾಯಕ ಲ್ಯೂಸ್ ಡು ಪ್ಲೂಯ್ ಅಜೇಯ 105 ರನ್ ಬಾರಿಸಿದರು. ಈ ಮೂಲಕ ಮಿಡ್ಲ್‌ಸೆಕ್ಸ್ ತಂಡವು ಮೊದಲ ಇನಿಂಗ್ಸ್ನಲ್ಲೇ ಪರಾಕ್ರಮ ಮರೆದರು.
ಚಹಲ್ ದುಬಾರಿ:
ಮಿಡ್ಲ್‌ಸೆಕ್ಸ್ ಬ್ಯಾಟರ್ಗಳ ಅಬ್ಬರ ನಡುವೆ ನಾರ್ಥಾಂಪ್ಟನ್‌ಶೈರ್ ತಂಡದ ಪರ ಕಣಕ್ಕಿಳಿದ ಭಾರತದ ಸ್ಪಿನ್ನರ್ ಯುಜ್ವೇಂದ್ರ ಚಹಲ್ ದುಬಾರಿಯಾಗಿ ಪರಿಣಮಿಸಿದರು. 43 ಓವರ್ಗಳನ್ನು ಎಸೆದ ಚಹಲ್ ನೀಡಿರುವುದು ಬರೋಬ್ಬರಿ 175 ರನ್ಗಳು. ಇದರ ನಡುವೆ ಒಂದೇ ಒಂದು ವಿಕೆಟ್ ಪಡೆಯಲು ಕೂಡ ಸಾಧ್ಯವಾಗಿಲ್ಲ. ಅಂದರೆ ಯುಜ್ವೇಂದ್ರ ಚಹಲ್ ಪ್ರತಿ ಓವರ್ಗೆ 4.10 ರ ಸರಾಸರಿಯಲ್ಲಿ ರನ್ ಬಿಟ್ಟು ಕೊಟ್ಟರು.
ವಿಶೇಷ ಎಂದರೆ ಇದು ಪ್ರಥಮ ದರ್ಜೆ ಕ್ರಿಕೆಟ್ನಲ್ಲಿ ಚಹಲ್ ಅವರ 2ನೇ ಕಳಪೆ ಪ್ರದರ್ಶನವಾಗಿದೆ. ಇದಕ್ಕೂ ಮುನ್ನ 2012 ರಲ್ಲಿ ತಮಿಳನಾಡು ವಿರುದ್ಧದ ಪಂದ್ಯದಲ್ಲಿ ಹರ್ಯಾಣ ಪರ ಕಣಕ್ಕಿಳಿದಿದ್ದ ಯುಜ್ವೇಂದ್ರ ಚಹಲ್ 235 ರನ್ಗಳನ್ನು ನೀಡಿದ್ದರು. ಇದೀಗ ಕೌಂಟಿ ಟೆಸ್ಟ್ ಕ್ರಿಕೆಟ್ನಲ್ಲೂ 175 ರನ್ ಬಿಟ್ಟು ಕೊಡುವ ಮೂಲಕ ದುಬಾರಿ ಎನಿಸಿಕೊಂಡಿದ್ದಾರೆ.
ಬೃಹತ್ ಮೊತ್ತ ಪೇರಿಸಿದ ಮಿಡ್ಲ್‌ಸೆಕ್ಸ್:
ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಮಿಡ್ಲ್‌ಸೆಕ್ಸ್ ಪರ ಮ್ಯಾಕ್ಸ್ ಹೋಲ್ಡನ್ (151), ಕೇನ್ ವಿಲಿಯಮ್ಸನ್ (114) ಹಾಗೂ ಲ್ಯೂಸ್ ಡು ಪ್ಲೂಯ್ (105) ಭರ್ಜರಿ ಶತಕ ಸಿಡಿಸಿದರು. ಈ ಶತಕಗಳ ನೆರವಿನೊಂದಿಗೆ ಮಿಡ್ಲ್‌ಸೆಕ್ಸ್ ತಂಡವು ಮೊದಲ ಇನಿಂಗ್ಸ್ನಲ್ಲಿ 8 ವಿಕೆಟ್ ಕಳೆದುಕೊಂಡು 625 ರನ್ ಬಾರಿಸಿ ಡಿಕ್ಲೇರ್ ಘೋಷಿಸಿದೆ.
ಇದಕ್ಕುತ್ತರವಾಗಿ ಮೊದಲ ಇನಿಂಗ್ಸ್ ಶುರು ಮಾಡಿರುವ ನಾರ್ಥಾಂಪ್ಟನ್‌ಶೈರ್ ತಂಡವು 2ನೇ ದಿನದಾಟದ ಅಂತ್ಯಕ್ಕೆ 4 ವಿಕೆಟ್ ಕಳೆದುಕೊಂಡು 126 ರನ್ ಕಲೆಹಾಕಿದೆ.
ಮಿಡ್ಲ್‌ಸೆಕ್ಸ್ ಪ್ಲೇಯಿಂಗ್ 11: ಸ್ಯಾಮ್ ರಾಬ್ಸನ್ , ಮ್ಯಾಕ್ಸ್ ಹೋಲ್ಡನ್ , ಕೇನ್ ವಿಲಿಯಮ್ಸನ್ , ಲ್ಯೂಸ್ ಡು ಪ್ಲೂಯ್ (ನಾಯಕ) , ರಿಯಾನ್ ಹಿಗ್ಗಿನ್ಸ್ , ಬೆನ್ ಗೆಡೆಸ್ , ಜೋ ಕ್ರಾಕ್ನೆಲ್ (ವಿಕೆಟ್ ಕೀಪರ್) , ಜಾಫರ್ ಗೋಹರ್ , ಟೋಬಿ ರೋಲ್ಯಾಂಡ್-ಜೋನ್ಸ್ , ಟಾಮ್ ಹೆಲ್ಮ್ , ನೋಹ್ ಕಾರ್ನ್ವೆಲ್.
ಇದನ್ನೂ ಓದಿ: ಟಾಸ್ ಸೋಲುವುದರಲ್ಲೂ ವಿಶ್ವ ದಾಖಲೆ ನಿರ್ಮಿಸಿದ ಟೀಮ್ ಇಂಡಿಯಾ
ನಾರ್ಥಾಂಪ್ಟನ್‌ಶೈರ್ ಪ್ಲೇಯಿಂಗ್ 11: ರಿಕಾರ್ಡೊ ವಾಸ್ಕೊನ್ಸೆಲೋಸ್ , ಲೂಯಿಸ್ ಮೆಕ್‌ಮ್ಯಾನಸ್ (ನಾಯಕ) , ಆದಿ ಶರ್ಮಾ , ಜೇಮ್ಸ್ ಸೇಲ್ಸ್ , ಜಾರ್ಜ್ ಬಾರ್ಟ್ಲೆಟ್ , ಸೈಫ್ ಜೈಬ್ , ರಾಬ್ ಕಿಯೋಘ್ , ಡೊಮಿನಿಕ್ ಲೀಚ್ , ಬೆನ್ ಸ್ಯಾಂಡರ್ಸನ್ , ಲಿಯಾಮ್ ಗುತ್ರೀ , ಯುಜ್ವೇಂದ್ರ ಚಹಲ್.
