
ಟೀಮ್ ಇಂಡಿಯಾದ ಯುವ ವಿಕೆಟ್ ಕೀಪರ್ ಬ್ಯಾಟ್ಸ್ಮನ್ ರಿಷಭ್ ಪಂತ್ (Rishabh Pant) ಕಳೆದ ವರ್ಷ ಡಿಸೆಂಬರ್‌ನಲ್ಲಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಪವಾಡಸದೃಶವಾಗಿ ಪಾರಾಗಿದ್ದರು. ದೆಹಲಿಯಿಂದ ರೂರ್ಕಿಯಲ್ಲಿರುವ ತನ್ನ ಮನೆಗೆ ಪ್ರಯಾಣಿಸುತ್ತಿದ್ದಾಗ ಹರಿದ್ವಾರ ಜಿಲ್ಲೆಯ ಮಂಗಳೌರ್ ಮತ್ತು ನರ್ಸನ್ ನಡುವಿನ ಡಿವೈಡರ್‌ಗೆ ಪಂತ್ ಅವರ ಕಾರು ಡಿಕ್ಕಿ ಹೊಡೆದಿತ್ತು. ಇದರಿಂದ ಗಂಭೀರವಾಗಿ ಗಾಯಗೊಂಡಿದ್ದ ಅವರನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದರು. ಇದಾದ ಬಳಿಕ ಆಸ್ಪತ್ರೆಯಿಂದ ಡಿಸ್ಚಾರ್ಚ್ ಆಗಿರುವ ಪಂತ್ ಇದೀಗ ಮನೆಯಲ್ಲಿಯೇ ಚಿಕಿತ್ಸೆ ಮುಂದುವರೆಸಿದ್ದಾರೆ.
ಈ ಭೀಕರ ಅಪಘಾತದ ಬಳಿಕ ರಿಷಭ್ ಪಂತ್ ಎಲ್ಲೂ ತಮ್ಮ ಕೆಟ್ಟ ಅನುಭವವನ್ನು ಹಂಚಿಕೊಂಡಿರಲಿಲ್ಲ. ಅದರಲ್ಲೂ ಪ್ರಸ್ತುತ ಆರೋಗ್ಯ ಪರಿಸ್ಥಿತಿಯ ಬಗ್ಗೆ ಮಾಹಿತಿಯನ್ನು ಬಹಿರಂಗಪಡಿಸಿರಲಿಲ್ಲ. ಇದೀಗ ಶುಶ್ರೂಷೆಯ ವಿಡಿಯೋವೊಂದನ್ನು ಸೋಷಿಯಲ್ ಮೀಡಿಯಾದಲ್ಲಿ ಖುದ್ದು ಪಂತ್ ಹಂಚಿಕೊಂಡಿದ್ದಾರೆ.
ಈ ವಿಡಿಯೋದಲ್ಲಿ ರಿಷಭ್ ಪಂತ್ ಈಜುಕೊಳದಲ್ಲಿ ನಡೆಯುತ್ತಿರುವುದನ್ನು ಕಾಣಬಹುದು. ಅಪಘಾತದಿಂದಾಗಿ ಅವರ ಕಾಲಿಗೆ ಗಂಭೀರವಾದ ಗಾಯವಾಗಿದ್ದು, ಇದೀಗ ಪಾದಗಳಿಗೆ ಶಕ್ತಿ ತುಂಬುವ ಸಲುವಾಗಿ ಶುಶ್ರೂಷೆ ನೀಡಲಾಗುತ್ತಿದೆ. ಅದರ ಭಾಗವಾಗಿ ನೀರಿನಲ್ಲಿ ನಡೆಯುತ್ತಿರುವ ವಿಡಿಯೋವನ್ನು ಪಂತ್ ಹಂಚಿಕೊಂಡಿದ್ದಾರೆ.
ಇನ್ನು ಈ ವಿಡಿಯೋಗೆ ಸಣ್ಣಪುಟ್ಟ ವಿಷಯಗಳಿಗೂ, ದೊಡ್ಡ ವಿಷಯಗಳಿಗೂ…ಎಲ್ಲದಕ್ಕೂ ನಾನು ಕೃತಜ್ಞನಾಗಿರುವೆ ಎಂದು ಕ್ಯಾಪ್ಶನ್ ನೀಡಿದ್ದಾರೆ. ಒಟ್ಟಿನಲ್ಲಿ ನಡೆಯಲು ಯತ್ನಿಸುತ್ತಿರುವ ವಿಡಿಯೋ ಹಂಚಿಕೊಳ್ಳುವ ಮೂಲಕ ರಿಷಭ್ ಪಂತ್ ಶೀಘ್ರದಲ್ಲೇ ಗುಣಮುಖನಾಗಲಿದ್ದೇನೆ ಎಂಬ ಸಂದೇಶ ರವಾನಿಸಿದ್ದಾರೆ. ಇನ್ನು ಈ ವಿಡಿಯೋಗೆ ಪ್ರತಿಕ್ರಿಯಿಸಿರುವ ಬಿಸಿಸಿಐ ಟ್ವಿಟರ್ ಹ್ಯಾಂಡಲ್, ಮತ್ತಷ್ಟು ಬಲಿಷ್ಠವಾಗಲಿ ಎಂದು ಹಾರೈಸಿದ್ದಾರೆ.
Grateful for small thing, big things and everything in between. ?#RP17 pic.twitter.com/NE9Do72Thr
— Rishabh Pant (@RishabhPant17) March 15, 2023
ಸದ್ಯ ಚಿಕಿತ್ಸೆಯಲ್ಲಿರುವ ರಿಷಭ್ ಪಂತ್ ಟೀಮ್ ಇಂಡಿಯಾಗೆ ಕಂಬ್ಯಾಕ್ ಮಾಡಲು ಕನಿಷ್ಠ 5-6 ತಿಂಗಳು ತೆಗೆದುಕೊಳ್ಳಲಿದ್ದಾರೆ ಎಂದು ತಿಳಿದು ಬಂದಿದೆ. ಇದರಿಂದ ಮುಂಬರುವ ಐಪಿಎಲ್, ವಿಶ್ವ ಟೆಸ್ಟ್ ಚಾಂಪಿಯನ್ಸ್ ಹಾಗೂ ಏಕದಿನ ವಿಶ್ವಕಪ್ ಸೇರಿದಂತೆ ಪ್ರಮುಖ ಟೂರ್ನಿಗಳಲ್ಲಿ ಯುವ ಸ್ಪೋಟಕ ದಾಂಡಿಗ ಕಾಣಿಸಿಕೊಳ್ಳುವುದಿಲ್ಲ.
Published On - 7:52 pm, Wed, 15 March 23