ಈ ಬಾರಿಯ ಐಪಿಎಲ್ ಮೆಗಾ ಹರಾಜಿನ ನಂತರ ನಡೆಯುತ್ತಿರುವ ಕಾರಣ ಎಲ್ಲಾ ತಂಡಗಳಲ್ಲೂ ಹೊಸ ಹೊಸ ಮುಖಗಳು ಕಾಣಿಸಿಕೊಳ್ಳುತ್ತಿವೆ. ಅದರಂತೆ ಹೊಸ ತಂಡದೊಂದಿಗೆ ಐಪಿಎಲ್‌ನ ಹೊಸ ಸೀಸನ್ ಆರಂಭಕ್ಕೆ ಟೀಂ ಇಂಡಿಯಾ ವಿಕೆಟ್ ಕೀಪರ್ ರಿಷಬ್ ಪಂತ್ ಸಿದ್ಧರಾಗಿದ್ದಾರೆ. ಕಳೆದ ಆವೃತ್ತಿಯವರೆಗೆ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕರಾಗಿದ್ದ ಪಂತ್, ಈಗ ಲಕ್ನೋ ಸೂಪರ್ ಜೈಂಟ್ಸ್ ತಂಡದ ನಾಯಕತ್ವ ವಹಿಸಿಕೊಳ್ಳಲಿದ್ದಾರೆ. ಆದರೆ ಈ ಸೀಸನ್ ಆರಂಭಕ್ಕೂ ಮುನ್ನ, ಪಂತ್ ಯಾರನ್ನೋ ಮೂರ್ಖ ಎಂದು ಕರೆಯುತ್ತಿರುವ ವೀಡಿಯೊ ಸೊಶೀಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ. ಹಾಗಿದ್ರೆ ಪಂತ್ ಯಾರನ್ನು ಮೂರ್ಖ ಎಂದು ಕರೆದರು ಎಂಬುದನ್ನು ನೋಡುವುದಾದರೆ..
ಐಪಿಎಲ್ ಹೊಸ ಸೀಸನ್ ಆರಂಭವಾಗುವ ಮುನ್ನ ಪಂತ್ ಅವರ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಇದರಲ್ಲಿ ಪಂತ್ ಜೊತೆಗೆ ಇನ್ನಿಬ್ಬರು ವೀಕ್ಷಕ ವಿವರಣೆಗಾರರು ಕುಳಿತಿರುವುದನ್ನು ನಾವು ಕಾಣಬಹುದಾಗಿದೆ. ವಿಡಿಯೋ ಮುಂದುವರೆದಂತೆ ಪಂತ್, ಯಾರನ್ನೋ ಪದೇ ಪದೇ ಮೂರ್ಖ ಎಂದು ಕರೆಯುತ್ತಿರುವುದನ್ನು ಕಾಣಬಹುದು. ಒಂದೆರಡು ಬಾರಿಯಲ್ಲ, ಬದಲಿಗೆ ಹಲವು ಬಾರಿ ಮೂರ್ಖ, ಮೂರ್ಖ, ಮೂರ್ಖ ಎಂದು ಹೇಳುವ ಪಂತ್, ಮೂರ್ಖ ಎಂದು ಹೇಳುವುದಕ್ಕೆ ಕೆಲವು ಬಾರಿ ಕಷ್ಟ ಪಡುವುದನ್ನು ಈ ವಿಡಿಯೋದಲ್ಲಿ ನೋಡಬಹುದು. ಆದಾಗ್ಯೂ ಪಂತ್, ಮತ್ತೆ ಮತ್ತೆ ಮೂರ್ಖ ಎಂದು ಹೇಳುವುದನ್ನು ಮುಂದುವರೆಸಿದ್ದಾರೆ. ಅಷ್ಟಕ್ಕೂ ಪಂತ್ ತನ್ನನ್ನು ತಾನು ಮೂರ್ಖ ಎಂದು ಕರೆದುಕೊಂಡರಾ ಅಥವಾ ಬೇರೆ ಇನ್ನ್ಯಾರಿಗಾದರೂ ಈ ರೀತಿ ಹೇಳಿದರಾ ಎಂಬುದು ಈ ವಿಡಿಯೋದಲ್ಲಿ ಸ್ಪಷ್ಟವಾಗಿಲ್ಲ. ಆದಾಗ್ಯೂ ಪಂತ್ ಈ ರೀತಿ ಹೇಳಿರುವುದನ್ನು ಕೆಲವು ದಿನಗಳ ಹಿಂದೆ ನಡೆದಿದ್ದ ಅದೊಂದು ಘಟನೆಗೆ ತಾಳೆ ಹಾಕಲಾಗುತ್ತಿದೆ.
Rishabh Pant recreating the ‘Stupid, Stupid, Stupid!’ of Sunil Gavaskar. 🤣pic.twitter.com/JhrK34luWh
— Mufaddal Vohra (@mufaddal_vohra) March 17, 2025
ವಿಷಯವೇನೆಂದರೆ, ಕಳೆದ ವರ್ಷದ ಕೊನೆಯಲ್ಲಿ ಟೀಂ ಇಂಡಿಯಾ ಆಸ್ಟ್ರೇಲಿಯಾ ಪ್ರವಾಸ ಮಾಡಿತ್ತು. ಈ ಪ್ರವಾಸದಲ್ಲಿ ಐದು ಪಂದ್ಯಗಳ ಟೆಸ್ಟ್ ಸರಣಿ ಆಡಿದ್ದ ಟೀಂ ಇಂಡಿಯಾ, ಒಂದು ಪಂದ್ಯದಲ್ಲಿ ಕಠಿಣ ಪರಿಸ್ಥಿತಿಯಲ್ಲಿ ಸಿಲುಕಿಕೊಂಡಿತ್ತು. ಅಂತಹ ಸಮಯದಲ್ಲಿ, ರಿಷಬ್ ಪಂತ್ ಕ್ರೀಸ್‌ನಲ್ಲಿದ್ದರು. ಆದರೆ ತಂಡದ ಪರಿಸ್ಥಿತಿಯನ್ನು ಅರಿತು ಎಚ್ಚರಿಕೆಯಿಂದ ಬ್ಯಾಟಿಂಗ್ ಮಾಡಬೇಕಿದ್ದ ಪಂತ್, ಬೇಡದ ಶಾಟ್ ಆಡಿ ವಿಕೆಟ್ ಒಪ್ಪಿಸಿದರು. ಪಂತ್ ಈ ರೀತಿ ಬೇಡದ ಶಾಟ್ ಆಡಿ ಔಟಾಗಿದ್ದು, ವೀಕ್ಷಕ ವಿವರಣೆಗಾರರಾಗಿದ್ದ ಗವಾಸ್ಕರ್ ಅವರನ್ನು ಕೆರಳಿಸಿತು. ಹೀಗಾಗಿ ಗವಾಸ್ಕರ್, ಪಂತ್ಗೆ ಮೂರ್ಖ ಎಂದು ಬೈದಿದ್ದರು.
ಇದನ್ನೂ ಓದಿ: IPL 2025: ಐಪಿಎಲ್ ಆರಂಭಕ್ಕೂ ಮುನ್ನ ತಂಡದ ಶಕ್ತಿ ಏನೆಂಬುದನ್ನು ವಿವರಿಸಿದ ಹಾರ್ದಿಕ್ ಪಾಂಡ್ಯ
ಗವಾಸ್ಕರ್, ತಮ್ಮದೇ ಆದ ಶೈಲಿಯಲ್ಲಿ, ಪಂತ್ಗೆ ಮೂರು ಬಾರಿ ಮೂರ್ಖ ಎಂದು ಬೈದಿದ್ದರು. ಅದರ ವಿಡಿಯೋ ಆಗ ಸಾಕಷ್ಟು ವೈರಲ್ ಆಗಿತ್ತು. ಪಂದ್ಯದ ಬಳಿಕ ಪಂತ್ ಕೂಡ ಈ ವಿಡಿಯೋ ನೋಡಿರುವುದರಲ್ಲಿ ಯಾವುದೇ ಅನುಮಾನವಿಲ್ಲ. ಇದೀಗ ಐಪಿಎಲ್ ಸೀಸನ್ ಪ್ರಾರಂಭವಾಗುವ ಮೊದಲು ಪಂತ್, ತನಗೆ ಬೈದಿದ್ದ ಬೈಗುಳವನ್ನು ಪುನರುಚ್ಚಿಸಿದ್ದಾರೆ. ಅದರ ವಿಡಿಯೋ ಈಗ ಎಲ್ಲೆಡೆ ವೈರಲ್ ಆಗುತ್ತಿದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ