- Kannada News Photo gallery Cricket photos Gujarat Titans IPL Ownership Change: Torrent Group Acquires Stake
IPL 2025: ಐಪಿಎಲ್ ಆರಂಭಕ್ಕೂ ಮುನ್ನ ಹೊಸ ಮಾಲೀಕನ ಕೈಸೇರಿದ ಚಾಂಪಿಯನ್ ತಂಡ
Gujarat Titans IPL Ownership Change: ತನ್ನ ಚೊಚ್ಚಲ ಆವೃತ್ತಿಯಲ್ಲಿಯೇ ಐಪಿಎಲ್ ಚಾಂಪಿಯನ್ ಆಗಿದ್ದ ಗುಜರಾತ್ ಟೈಟನ್ಸ್ ತಂಡದ ಮಾಲೀಕತ್ವದಲ್ಲಿ ಬದಲಾವಣೆಯಾಗಿದೆ. ಸಿವಿಸಿ ಕ್ಯಾಪಿಟಲ್ಸ್ ನಿಂದ ಟೊರೆಂಟ್ ಗ್ರೂಪ್ ಶೇ. 67 ರಷ್ಟು ಪಾಲನ್ನು ಖರೀದಿಸಿದೆ. ಈ ಒಪ್ಪಂದದ ಮೊತ್ತವನ್ನು ಬಹಿರಂಗಪಡಿಸಿಲ್ಲ. ಆದರೂ, ತಂಡದ ನಿರ್ವಹಣೆ, ನಾಯಕ, ಹಾಗೂ ಕೋಚ್ ಯಥಾವತ್ತಾಗಿ ಮುಂದುವರಿಯಲಿದೆ ಎಂದು ತಿಳಿದುಬಂದಿದೆ.
Updated on: Mar 17, 2025 | 8:59 PM

ಐಪಿಎಲ್ ಆರಂಭಕ್ಕೂ ಮುನ್ನ ಚೊಚ್ಚಲ ಆವೃತ್ತಿಯಲ್ಲೇ ಚಾಂಪಿಯನ್ ಪಟ್ಟಕ್ಕೇರಿದ್ದ ಗುಜರಾತ್ ಟೈಟನ್ಸ್ ತಂಡದ ಮಾಲೀಕರು ಬದಲಾಗಿದ್ದಾರೆ. ವಾಸ್ತವವಾಗಿ ಕಳೆದು ಕೆಲವು ದಿನಗಳಿಂದ ಹರಿದಾಡುತ್ತಿದ್ದ ಸುದ್ದಿಯಂತೆ ಇದೀಗ ಗುಜರಾತ್ ಟೈಟನ್ಸ್ ತಂಡ ಟೊರೆಂಟ್ ಗ್ರೂಪ್ ತೆಕ್ಕೆಗೆ ಸೇರಿದೆ. ಇದುವರೆಗೆ ಸಿವಿಸಿ ಕ್ಯಾಪಿಟಲ್ಸ್ ಒಡೆತನದಲ್ಲಿದ್ದ ಗುಜರಾತ್ ಟೈಟನ್ಸ್ ಫ್ರಾಂಚೈಸಿಯನ್ನು ತನ್ನ ಸ್ವಾಧೀನಕ್ಕೆ ತೆಗೆದುಕೊಂಡಿರುವುದಾಗಿ ಟೊರೆಂಟ್ ಗ್ರೂಪ್ ತಿಳಿಸಿದೆ.

ಅಹಮದಾಬಾದ್ ಮೂಲದ ಟೊರೆಂಟ್ ಗ್ರೂಪ್ ಭಾರತದ ವಿದ್ಯುತ್ ಮತ್ತು ಔಷಧ ವಲಯಗಳಲ್ಲಿ ಪ್ರಮುಖ ಕಂಪನಿಗಳಲ್ಲಿ ಒಂದಾಗಿದೆ. ಆದಾಗ್ಯೂ, ಈ ಕಂಪನಿಯು ಗುಜರಾತ್ ಫ್ರಾಂಚೈಸಿಯ 100 ಪ್ರತಿಶತ ಪಾಲನ್ನು ಖರೀದಿಸಿಲ್ಲ. ವರದಿಯ ಪ್ರಕಾರ, ಸಿವಿಸಿ ಕ್ಯಾಪಿಟಲ್ಸ್‌ನ ಅಂಗಸಂಸ್ಥೆ ಇರೇಲಿಯಾ ಸ್ಪೋರ್ಟ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಈ ಫ್ರಾಂಚೈಸಿಯನ್ನು ನಡೆಸುತ್ತಿತ್ತು. ಈಗ ಟೊರೆಂಟ್ ಗ್ರೂಪ್ ಶೇ. 67 ರಷ್ಟು ಪಾಲನ್ನು ಖರೀದಿಸುವ ಮೂಲಕ ಫ್ರಾಂಚೈಸಿಯ ಮೇಲೆ ಹಿಡಿತ ಸಾಧಿಸಿದೆ.

ಆದಾಗ್ಯೂ ಎಷ್ಟು ಮೊತ್ತಕ್ಕೆ ಈ ಒಪ್ಪಂದ ನಡೆದಿದೆ ಎಂಬುದನ್ನು ಇದುವರೆಗೆ ಬಹಿರಂಗವಾಗಿಲ್ಲ. ಉಳಿದಂತೆ ಸಿವಿಸಿ ಕ್ಯಾಪಿಟಲ್ಸ್ ತನ್ನ ಬಳಿಯೇ ಫ್ರಾಂಚೈಸಿಯ ಶೇ 33 ರಷ್ಟು ಪಾಲನ್ನು ಉಳಿಸಿಕೊಂಡಿದೆ. ವಾಸ್ತವವಾಗಿ 2021 ರಲ್ಲಿ ಬಿಸಿಸಿಐ ನಡೆಸಿದ ಇ-ಹರಾಜಿನಲ್ಲಿ ಸಿವಿಸಿ ಕ್ಯಾಪಿಟಲ್ಸ್ ಅಹಮದಾಬಾದ್ ಫ್ರಾಂಚೈಸಿಗೆ ಅತಿ ಹೆಚ್ಚು ಬಿಡ್ ಮಾಡಿ ಬರೋಬ್ಬರಿ 5600 ಕೋಟಿ ರೂ.ಗೆ ಗುಜರಾತ್ ತಂಡದ ಮಾಲೀಕತ್ವ ಪಡೆದುಕೊಂಡಿತ್ತು.

ಈ ಮೂಲಕ ಐಪಿಎಲ್ ಇತಿಹಾಸದಲ್ಲಿ ಎರಡನೇ ಅತ್ಯಂತ ದುಬಾರಿ ಫ್ರಾಂಚೈಸಿ ಎನಿಸಿಕೊಂಡಿತ್ತು. ಅದೇ ವರ್ಷ ಅಂದರೆ 2021 ರಲ್ಲಿ ನಡೆದಿದ್ದ ಇ-ಹರಾಜಿನಲ್ಲಿ ಲಕ್ನೋ ಫ್ರಾಂಚೈಸಿಯನ್ನು ಗೋಯೆಂಕಾ ಗ್ರೂಪ್ 7 ಸಾವಿರ ಕೋಟಿ ರೂ.ಗಳಿಗಿಂತ ಹೆಚ್ಚು ಬಿಡ್ ಮಾಡುವ ಖರೀದಿಸಿತ್ತು. ಈ ಮೂಲಕ ಅತ್ಯಂತ ದುಬಾರಿ ಫ್ರಾಂಚೈಸಿ ಎಂಬ ದಾಖಲೆಯನ್ನು ಲಕ್ನೋ ಬರೆದಿತ್ತು.

ಐಪಿಎಲ್ ಆರಂಭಕ್ಕೂ ಮುನ್ನ ಮಾಲೀಕರು ಬದಲಾದರು ತಂಡದ ನಿರ್ವಹಣೆಯ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಕಳೆದ ಸೀಸನ್ನಲ್ಲಿ ತಂಡದ ನಾಯಕರಾಗಿದ್ದ ಶುಭ್ಮನ್ ಗಿಲ್ ಈ ಬಾರಿಯೂ ತಂಡವನ್ನು ಮುನ್ನಡೆಸಲಿದ್ದಾರೆ. ಹಾಗೆಯೇ ಮುಖ್ಯ ಕೋಚ್ ಆಗಿ ಆಶಿಶ್ ನೆಹ್ರಾ ಮುಂದುವರೆದರೆ, ವಿಕ್ರಮ್ ಸೋಲಂಕಿ ಫ್ರಾಂಚೈಸಿಯ ಕ್ರಿಕೆಟ್ ನಿರ್ದೇಶಕರಾಗಿ ಉಳಿಯಲಿದ್ದಾರೆ.



















