IPL 2025: ತಾನು ಎದುರಿಸಿದ ಅತ್ಯಂತ ಕಠಿಣ ಬೌಲರ್ ಯಾರೆಂದು ತಿಳಿಸಿದ ವಿರಾಟ್ ಕೊಹ್ಲಿ
IPL 2025: ರಂಗು ರಂಗಿನ ಕ್ರಿಕೆಟ್ ಟೂರ್ನಿ ಇಂಡಿಯನ್ ಪ್ರೀಮಿಯರ್ ಲೀಗ್ನ 18ನೇ ಆವೃತ್ತಿಯ ಆರಂಭಕ್ಕೆ ವೇದಿಕೆ ಸಿದ್ಧವಾಗಿದೆ. ಮಾರ್ಚ್ 22 ರಂದು ಕೊಲ್ಕತ್ತಾದ ಈಡನ್ ಗಾರ್ಡನ್ಸ್ ಮೈದಾನದಲ್ಲಿ ಐಪಿಎಲ್ 2025ರ ಉದ್ಘಾಟನಾ ಪಂದ್ಯ ನಡೆಯಲಿದ್ದು, ಈ ಮ್ಯಾಚ್ನಲ್ಲಿ ಹಾಲಿ ಚಾಂಪಿಯನ್ ಕೊಲ್ಕತ್ತಾ ನೈಟ್ ರೈಡರ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಮುಖಾಮುಖಿಯಾಗಲಿದೆ.
Updated on: Mar 17, 2025 | 2:10 PM

ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್-18 ಆರಂಭಕ್ಕೆ ಕೌಂಟ್ ಡೌನ್ ಶುರುವಾಗಿದೆ. ಮಾರ್ಚ್ 22 ರಿಂದ ಆರಂಭವಾಗಲಿರುವ ಐಪಿಎಲ್ಗಾಗಿ ದಾಖಲೆಗಳ ಸರದಾರ ವಿರಾಟ್ ಕೊಹ್ಲಿ ಕೂಡ ಸಜ್ಜಾಗುತ್ತಿದ್ದಾರೆ. ಈ ಸಜ್ಜಾಗುವಿಕೆಯ ನಡುವೆ ಕಿಂಗ್ ಕೊಹ್ಲಿ ತನ್ನ ಅತ್ಯಂತ ಕಠಿಣ ಪ್ರತಿಸ್ಪರ್ಧಿ ಯಾರೆಂಬುದನ್ನು ಬಹಿರಂಗಪಡಿಸಿದ್ದಾರೆ.

ಆರ್ಸಿಬಿ ನಡೆಸಿದ ವಿಶೇಷ ಸಂದರ್ಶನದಲ್ಲಿ ಮಾತನಾಡಿದ ವಿರಾಟ್ ಕೊಹ್ಲಿ, ಐಪಿಎಲ್‌ನಲ್ಲಿ ನಾನೆದುರಿಸಿದ ಅತ್ಯಂತ ಕಠಿಣ ಬೌಲರ್ ಎಂದರೆ ಅದು ಜಸ್ಪ್ರೀತ್ ಬುಮ್ರಾ ಎಂದಿದ್ದಾರೆ. ಬುಮ್ರಾ ವಿಶ್ವದ ಅತ್ಯುತ್ತಮ ಬೌಲರ್. ಅವರನ್ನು ಎದುರಿಸುವುದು ಅಂದುಕೊಂಡಷ್ಟು ಸುಲಭವಲ್ಲ ಎಂದು ಕೊಹ್ಲಿ ಹೇಳಿದ್ದಾರೆ.

ಜಸ್ಪ್ರೀತ್ ಬುಮ್ರಾ ಐಪಿಎಲ್‌ನಲ್ಲಿ ಕೆಲವು ಬಾರಿ ನನ್ನನ್ನು ಔಟ್ ಮಾಡಿದ್ದಾರೆ. ಅವರನ್ನು ನೆಟ್ಸ್ನಲ್ಲೂ ಎದುರಿಸುವುದು ಸಹ ಮ್ಯಾಚ್ ಆಡಿದಂತಿರುತ್ತದೆ. ಅವರನ್ನು ಎದುರಿಸಲು ನಾವು ಯಾವಾಗಲೂ, ಪ್ರತಿ ಚೆಂಡಿಗೂ ಮೈಂಡ್ ಗೇಮ್ನೊಂದಿಗೆ ಸಿದ್ಧವಾಗಿರಬೇಕು ಎಂದು ವಿರಾಟ್ ಕೊಹ್ಲಿ ಬುಮ್ರಾ ಬೌಲಿಂಗ್ ಅನ್ನು ಪ್ರಶಂಸಿದ್ದಾರೆ.

ಅಂದಹಾಗೆ ಐಪಿಎಲ್‌ನಲ್ಲಿ ವಿರಾಟ್ ಕೊಹ್ಲಿ ಹಾಗೂ ಜಸ್ಪ್ರೀತ್ ಬುಮ್ರಾ 16 ಇನಿಂಗ್ಸ್ಗಳಲ್ಲಿ ಮುಖಾಮುಖಿಯಾಗಿದ್ದಾರೆ. ಈ ವೇಳೆ ಬುಮ್ರಾ ಎಸೆದ 95 ಎಸೆತಗಳನ್ನು ಎದುರಿಸಿರುವ ಕೊಹ್ಲಿ 140 ರನ್ ಗಳಿಸಿದ್ದಾರೆ. ಇದರ ನಡುವೆ 5 ಬಾರಿ ವಿಕೆಟ್ ಅನ್ನು ಸಹ ಒಪ್ಪಿಸಿದ್ದಾರೆ. ಇನ್ನು ಬುಮ್ರಾ-ಕೊಹ್ಲಿ ಮುಖಾಮುಖಿಯಲ್ಲಿ ಮೂಡಿಬಂದಿರುವ ಫೋರ್ಗಳ ಸಂಖ್ಯೆ 15. ಹಾಗೆಯೇ ಬುಮ್ರಾ ಎಸೆತಗಳಲ್ಲಿ ಕೊಹ್ಲಿ ಕೇವಲ 5 ಸಿಕ್ಸ್ ಮಾತ್ರ ಬಾರಿಸಿದ್ದಾರೆ.

ಇದೀಗ ವಿರಾಟ್ ಕೊಹ್ಲಿ ಹಾಗೂ ಜಸ್ಪ್ರೀತ್ ಬುಮ್ರಾ ಮತ್ತೆ ಮುಖಾಮುಖಿಯಾಗಲು ಸಜ್ಜಾಗುತ್ತಿದ್ದಾರೆ. ಏಪ್ರಿಲ್ 7 ರಂದು ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆಯಲಿರುವ ಐಪಿಎಲ್ನ 21ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಮುಂಬೈ ಇಂಡಿಯನ್ಸ್ ತಂಡಗಳು ಮುಖಾಮುಖಿಯಾಗಲಿದೆ. ಈ ಪಂದ್ಯದಲ್ಲಿ ಬುಮ್ರಾ-ಕೊಹ್ಲಿ ನಡುವಣ ಜಿದ್ದಾಜಿದ್ದಿಯನ್ನು ಮತ್ತೆ ವೀಕ್ಷಿಸಬಹುದು.



















