ಭಾರತ ತಂಡದ ಮಾಜಿ ಕ್ರಿಕೆಟಿಗ ಹಾಗೂ 1983ರ ವಿಶ್ವಕಪ್ ವಿಜೇತ ತಂಡದ ಸದಸ್ಯರಾಗಿದ್ದ ಕರ್ನಾಟಕದ ರೋಜರ್ ಬಿನ್ನಿ (Roger Binny) ಅವರು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ(ಬಿಸಿಸಿಐ) ನೂತನ ಅಧ್ಯಕ್ಷರಾಗಿ (BCCI New President) ಆಯ್ಕೆಯಾಗಿದ್ದಾರೆ. ಇವರು ಬಿಸಿಸಿಐಯ 36ನೇ ಅಧ್ಯಕ್ಷರು. ಮುಂಬೈನಲ್ಲಿ ನಡೆದ ಬಿಸಿಸಿಐ ಎಜಿಎಂನಲ್ಲಿ ಇವರ ನೇಮಕವನ್ನು ಘೋಷಿಸಲಾಯಿತು. ಈ ಮೂಲಕ ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಸೌರವ್ ಗಂಗೂಲಿ ಅವರ ಸ್ಥಾನವನ್ನು ಬಿನ್ನಿ ತುಂಬಿದ್ದಾರೆ. 67 ವರ್ಷದ ಬಿನ್ನಿ ಅವರು ಬಿಸಿಸಿಐ ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ ಏಕೈಕ ಅಭ್ಯರ್ಥಿಯಾಗಿದ್ದರು. ಅಂತೆಯೆ ಜಯ್ ಶಾ ಬಿಸಿಸಿಐ ಕಾರ್ಯದರ್ಶಿಯಾಗಿ ಮುಂದುವರಿಯಲಿದ್ದಾರೆ. ಬಿಸಿಸಿಐನ ಹಾಲಿ ಅಧ್ಯಕ್ಷರಾದ ಸೌರವ್ ಗಂಗೂಲಿ (Sourav Ganguly) ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಅಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿದೆ.
Former India cricketer Roger Binny appointed as the next BCCI President taking over from Sourav Ganguly.
(File Pic) pic.twitter.com/Tndldfc2el
— ANI (@ANI) October 18, 2022
ರೋಜರ್ ಬಿನ್ನಿ ಈ ಹಿಂದೆ ಬಿಸಿಸಿಐ ಆಯ್ಕೆ ಸಮಿತಿಯ ಸದಸ್ಯರಾಗಿ ಸೇವೆ ಸಲ್ಲಿಸಿದ್ದರು. ಬಿಸಿಸಿಐ ಅಧ್ಯಕ್ಷ ಸ್ಥಾನಕ್ಕೆ ಅಕ್ಟೋಬರ್ 11 ಮತ್ತು 12 ರಂದು ಅಭ್ಯರ್ಥಿಗಳು ನಾಮಪತ್ರಗಳನ್ನು ಸಲ್ಲಿಸಿದ್ದರು. ಅಕ್ಟೋಬರ್ 13 ರಂದು ಎಲ್ಲಾ ನಾಮಪತ್ರಗಳ ಪರಿಶೀಲನೆ ಕಾರ್ಯ ಜರುಗಿತ್ತು. ಇಂದು ಮುಂಬೈನಲ್ಲಿ ಬಿಸಿಸಿಐ ಚುನಾವಣೆ ನಡೆದಿದ್ದು, ಇದರಲ್ಲಿ ರೋಜರ್ ಬಿನ್ನಿ ಅವರನ್ನು ನೂತನ ಬಿಸಿಸಿಐ ಅಧ್ಯಕ್ಷರಾಗಿ ಆಯ್ಕೆ ಮಾಡಲಾಗಿದೆ.
ಬಿಸಿಸಿಐನ ಇತರೆ ಸ್ಥಾನದಲ್ಲಿ ಕೂಡ ಮಹತ್ತರ ಬದಲಾವಣೆ ಆಗಿದ್ದು, ಮುಂಬೈನ ಬಿಜೆಪಿಯ ಪ್ರಭಾವಿ ನಾಯಕ ಆಶಿಶ್ ಶೀಲರ್ ಖಜಾಂಚಿ ಸ್ಥಾನಕ್ಕೆ ಆಯ್ಕೆಯಾಗಿದ್ದಾರೆ. ಪ್ರಸ್ತುತ ಖಜಾಂಚಿ ಅರುಣ್ ಸಿಂಗ್ ಧುಮಲ್ ಐಪಿಎಲ್ ಚೇರ್ಮನ್ ಆಗಿ ಆಯ್ಕೆಯಾಗಿದ್ದಾರೆ. ಈ ಸ್ಥಾನದ ಮೇಲೆ ಕಣ್ಣಿಟ್ಟಿದ್ದ ರಾಜೀವ್ ಶುಕ್ಲಾ ಉಪಾಧ್ಯಕ್ಷರಾಗಿ ಮುಂದುವರಿಯಲಿದ್ದಾರೆ. ಇನ್ನು ಅಸ್ಸಾಂ ಕ್ರಿಕೆಟ್ ಅಸೋಸಿಯೇಷನ್‌ನ ದೇವಜಿತ್ ಸೈಕೀಯಾ ನೂತನ ಜಂಟಿ ಕಾರ್ಯದರ್ಶಿಯಾಗಿದ್ದಾರೆ. ಜಗಮೋಹನ್ ದಾಲ್ಮಿಯಾ ಅವರ ಪುತ್ರ ಅವಿಶೇಕ್ ದಾಲ್ಮಿಯಾ, ಐಪಿಎಲ್ ಆಡಳಿತ ಮಂಡಳಿಯ ಸದಸ್ಯರಾಗಿ ಇರಲಿದ್ದಾರೆ. ಕಳೆದ ಬಿಸಿಸಿಐನಲ್ಲಿ ಐಪಿಎಲ್ ಜಿಸಿಯಲ್ಲಿದ್ದ ಮಾಮನ್ ಮಜುಂದಾರ್ ಅಪೆಕ್ಸ್ ಕೌನ್ಸಿಲ್‌ಗೆ ಬರಲಿದ್ದಾರೆ.
1955 ಜುಲೈ 19ರಂದು ಜನಿಸಿರುವ ಬಿಸಿಸಿಐ ನೂತನ ಅಧ್ಯಕ್ಷ ರೋಜರ್ ಬಿನ್ನಿ 1979ರಿಂದ 1987ರವರೆಗೆ ಭಾರತ ಕ್ರಿಕೆಟ್ ತಂಡದ ಸದಸ್ಯರಾಗಿದ್ದರು. ಬಲಗೈ ಬ್ಯಾಟಿಂಗ್ ಶೈಲಿ ಮತ್ತು ಬಲಗೈ ಮಧ್ಯಮ ವೇಗದ ಬೌಲರ್ ಆಗಿದ್ದರು. ತವರು ಅಂಗಣ ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರಿಕೆಟ್ ಕ್ರೀಡಾಂಗಣದಲ್ಲಿ 1979ಲ್ಲಿ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ರೋಜರ್ ಬಿನ್ನಿ ಅಂತರರಾಷ್ಟ್ರೀಯ ಟೆಸ್ಟ್ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದರು. ತಮ್ಮ ಚೊಚ್ಚಲ ಟೆಸ್ಟ್ ಪಂದ್ಯದಲ್ಲಿ ಅವರು 46 ರನ್ ಗಳಿಸಿದ್ದರು. ಆ ಮೂಲಕ ಎಲ್ಲರ ಗಮನ ಸೆಳೆದಿದ್ದರು.
ಭಾರತದ ಪರ 27 ಟೆಸ್ಟ್ ಪಂದ್ಯಗಳನ್ನು ಆಡಿರುವ ರೋಜರ್ ಬಿನ್ನಿ ಬ್ಯಾಟಿಂಗ್‌ನಲ್ಲಿ 23.06 ಸರಾಸರಿಯಲ್ಲಿ 830 ರನ್ ಗಳಿಸಿದ್ದಾರೆ ಮತ್ತು 5 ಅರ್ಧಶತಕ ಬಾರಿಸಿದ್ದಾರೆ. ಇನ್ನು 72 ಏಕದಿನ ಪಂದ್ಯಗಳನ್ನು ಆಡಿರುವ ಅವರು, 16.13 ಸರಾಸರಿಯಲ್ಲಿ 629 ರನ್ ಗಳಿಸಿದ್ದಾರೆ ಮತ್ತು 1 ಅರ್ಧಶತಕ ಬಾರಿಸಿದ್ದಾರೆ. ಬೌಲಿಂಗ್‌ನಲ್ಲಿ 27 ಟೆಸ್ಟ್ ಪಂದ್ಯಗಳಿಂದ 47 ವಿಕೆಟ್ ಪಡೆದುಕೊಂಡಿದ್ದಾರೆ ಮತ್ತು 2 ಬಾರಿ 5 ವಿಕೆಟ್ ಗೊಂಚಲು ಗಳಿಸಿದ್ದಾರೆ. ಇನ್ನು 72 ಏಕದಿನ ಪಂದ್ಯಗಳಿಂದ 77 ವಿಕೆಟ್ ಪಡೆದುಕೊಂಡ ಸಾಧನೆ ಮಾಡಿದ್ದಾರೆ.
Published On - 1:06 pm, Tue, 18 October 22