BCCI: ಬಿಸಿಸಿಐ ಅಧ್ಯಕ್ಷ ಹುದ್ದೆಯಿಂದ ರೋಜರ್ ಬಿನ್ನಿ ವಜಾ? ರಾಜೀವ್ ಶುಕ್ಲಾ ಹಂಗಾಮಿ ಅಧ್ಯಕ್ಷ
BCCI: ಬಿಸಿಸಿಐ ಅಧ್ಯಕ್ಷ ರೋಜರ್ ಬಿನ್ನಿ ಅವರು ಶೀಘ್ರದಲ್ಲೇ ತಮ್ಮ ಹುದ್ದೆಗೆ ರಾಜೀನಾಮೆ ನೀಡುವ ಸಾಧ್ಯತೆಯಿದೆ. ರಾಜೀವ್ ಶುಕ್ಲಾ ಅವರು ಹಂಗಾಮಿ ಅಧ್ಯಕ್ಷರಾಗುವ ಸಾಧ್ಯತೆಯಿದೆ. ಬಿಸಿಸಿಐನ ವಾರ್ಷಿಕ ಸಾಮಾನ್ಯ ಸಭೆ ಮತ್ತು ಚುನಾವಣೆಗಳು ಮುಂದಿನ ತಿಂಗಳು ನಡೆಯಲಿವೆ. ಡ್ರೀಮ್ 11 ಪ್ರಾಯೋಜಕತ್ವ ಹಿಂತೆಗೆದುಕೊಂಡಿರುವುದರಿಂದ ಹೊಸ ಪ್ರಾಯೋಜಕರ ಆಯ್ಕೆಯೂ ಚರ್ಚೆಯಲ್ಲಿದೆ.

ವಿಶ್ವ ಕ್ರಿಕೆಟ್ನ ಅತ್ಯಂತ ಶ್ರೀಮಂತ ಕ್ರಿಕೆಟ್ ಮಂಡಳಿ ಬಿಸಿಸಿಐನ (BCCI) ಆಡಳಿತ ವಿಭಾಗದಲ್ಲಿ ಶೀಘ್ರದಲ್ಲೇ ದೊಡ್ಡ ಬದಲಾವಣೆಯಾಗಲಿದೆ ಎಂದು ವರದಿಯಾಗಿದೆ. ವರದಿಗಳ ಪ್ರಕಾರ, ಬಿಸಿಸಿಐನ ಹಾಲಿ ಅಧ್ಯಕ್ಷ ರೋಜರ್ ಬಿನ್ನಿ (Roger Binny) ಅವರು ಇಷ್ಟರಲ್ಲೇ ತಮ್ಮ ಹುದ್ದೆಗೆ ರಾಜೀನಾಮೆ ನೀಡಲಿದ್ದು, ಅವರ ಬದಲಿಗೆ ಪ್ರಸ್ತುತ ಮಂಡಳಿಯ ಉಪಾಧ್ಯಕ್ಷರಾಗಿರುವ ರಾಜೀವ್ ಶುಕ್ಲಾ (Rajiv Shukla) ಅವರನ್ನು ಹಂಗಾಮಿ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗುತ್ತದೆ ಎನ್ನಲಾಗುತ್ತಿದೆ. ವಾಸ್ತವವಾಗಿ ರೋಜರ್ ಬಿನ್ನಿ ಅವರು 2022 ರಲ್ಲಿ ಸೌರಭ್ ಗಂಗೂಲಿ ಅವರ ಬದಲಿಗೆ ಅಧ್ಯಕ್ಷ ಹುದ್ದೆಗೇರಿದ್ದರು. ಆದರೀಗ ಅವರಿಗೆ 70 ವರ್ಷ ವಯಸ್ಸಾಗಿದೆ. ಹೀಗಾಗಿ ಅವರು ಶೀಘ್ರದಲ್ಲೇ ಅಧ್ಯಕ್ಷ ಹುದ್ದೆಗೆ ರಾಜೀನಾಮೆ ನೀಡಬಹುದು ಎಂದು ವರದಿಯಾಗಿದೆ.
ವರದಿಗಳ ಪ್ರಕಾರ, ಆಗಸ್ಟ್ 27 ರಂದು ರಾಜೀವ್ ಶುಕ್ಲಾ ಅವರ ಅಧ್ಯಕ್ಷತೆಯಲ್ಲಿ ಬಿಸಿಸಿಐ ಅಧಿಕಾರಿಗಳ ಸಭೆ ನಡೆಯಿತು. ಈ ಸಭೆಯಲ್ಲಿ ಟೀಂ ಇಂಡಿಯಾದ ಜೆರ್ಸಿ ಪ್ರಾಯೋಜಕತ್ವವನ್ನು ಡ್ರೀಮ್ 11 ಹಿಂತೆಗೆದುಕೊಂಡಿರುವುದರಿಂದ ಹೊಸ ಪ್ರಾಯೋಜಕತ್ವದ ಬಗ್ಗೆಯೂ ಚರ್ಚಿಸಲಾಗಿದೆ ಎಂದು ವರದಿಯಾಗಿದೆ.
ನಿಯಮಗಳೇನು?
ಬಿಸಿಸಿಐ ಸಂವಿಧಾನದ ಪ್ರಕಾರ, ಯಾವುದೇ ಅಧಿಕಾರಿ 70 ವರ್ಷ ವಯಸ್ಸಿನ ನಂತರ ತಮ್ಮ ಹುದ್ದೆಯಲ್ಲಿ ಮುಂದುವರೆಯುವಂತಿಲ್ಲ. ಹೀಗಾಗಿ 70 ವರ್ಷದ ರೋಜರ್ ಬಿನ್ನಿ ಅಧ್ಯಕ್ಷ ಹುದ್ದೆಯಲ್ಲಿ ಉಳಿಯಲು ಅನರ್ಹರಾಗುತ್ತಾರೆ. ವರದಿಗಳ ಪ್ರಕಾರ, 2020 ರಿಂದ ಬಿಸಿಸಿಐ ಉಪಾಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿರುವ ರಾಜೀವ್ ಶುಕ್ಲಾ ಕೆಲವು ತಿಂಗಳುಗಳ ಕಾಲ ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಹೊಸ ಅಧ್ಯಕ್ಷರನ್ನು ಆಯ್ಕೆ ಮಾಡುವವರೆಗೆ ಅವರು ಹಂಗಾಮಿ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಲಿದ್ದಾರೆ.
ರೋಜರ್ ಬಿನ್ನಿ 1983 ರಲ್ಲಿ ಏಕದಿನ ವಿಶ್ವಕಪ್ ಗೆದ್ದ ತಂಡದ ಸದಸ್ಯರಾಗಿದ್ದರು. ಟೀಂ ಇಂಡಿಯಾದ ಮಾಜಿ ನಾಯಕ ಸೌರಭ್ ಗಂಗೂಲಿ ಬದಲಿಗೆ ಅವರನ್ನು 2022 ರಲ್ಲಿ ಬಿಸಿಸಿಐ ಅಧ್ಯಕ್ಷರನ್ನಾಗಿ ಮಾಡಲಾಯಿತು. ಸೌರಭ್ ಗಂಗೂಲಿ 2019 ರಿಂದ 2022 ರವರೆಗೆ ಬಿಸಿಸಿಐ ಅಧ್ಯಕ್ಷರಾಗಿದ್ದರು.
ಮುಂದಿನ ತಿಂಗಳು ಚುನಾವಣೆ
ರಾಷ್ಟ್ರೀಯ ಕ್ರೀಡಾ ಆಡಳಿತ ಕಾಯ್ದೆ ಜಾರಿಗೆ ಬಂದಿದ್ದರೂ, ಬಿಸಿಸಿಐ ಮುಂದಿನ ತಿಂಗಳು ತನ್ನ ವಾರ್ಷಿಕ ಸಾಮಾನ್ಯ ಸಭೆ (ಎಜಿಎಂ) ಮತ್ತು ಚುನಾವಣೆಗಳನ್ನು ನಡೆಸಲಿದೆ. ಏಕೆಂದರೆ ಈ ಕಾಯ್ದೆ ಇನ್ನೂ ಔಪಚಾರಿಕವಾಗಿ ಜಾರಿಗೆ ಬಂದಿಲ್ಲ. ವರದಿಗಳ ಪ್ರಕಾರ, ಕಾಯ್ದೆ ಜಾರಿಗೆ ಬರಲು ಇನ್ನೂ ನಾಲ್ಕರಿಂದ ಐದು ತಿಂಗಳುಗಳು ಬೇಕಾಗಬಹುದು. ಆದ್ದರಿಂದ, ಮುಂಬರುವ ಚುನಾವಣೆಗಳನ್ನು ಮುಂದೂಡದೆ, ನಡೆಸಲು ತೀರ್ಮಾನಿಸಲಾಗಿದೆ.
ಬಿಸಿಸಿಐ ಜೊತೆ ಒಪ್ಪಂದಕ್ಕೆ ಮುಂದಾದ 65 ಸಾವಿರ ಕೋಟಿ ರೂ. ಮೌಲ್ಯದ ಕಂಪನಿ
ಸುಪ್ರೀಂ ಕೋರ್ಟ್‌ನ ಲೋಧಾ ಸಮಿತಿಯ ಶಿಫಾರಸುಗಳ ನಂತರ ರೂಪಿಸಲಾದ ಸಂವಿಧಾನದ ಅಡಿಯಲ್ಲಿ ಬಿಸಿಸಿಐ ಕಾರ್ಯನಿರ್ವಹಿಸುತ್ತದೆ. ಹೊಸ ಕಾನೂನು ಜಾರಿಗೆ ಬರುವವರೆಗೆ ಬಿಸಿಸಿಐ ಮತ್ತು ಅದರ ರಾಜ್ಯ ಸಂಘಗಳು ಈ ಚೌಕಟ್ಟನ್ನು ಅನುಸರಿಸಬೇಕಾಗುತ್ತದೆ. ಮುಂದಿನ ಸೂಚನೆ ಬರುವವರೆಗೆ ರಾಷ್ಟ್ರೀಯ ಮತ್ತು ರಾಜ್ಯ ಮಟ್ಟದ ಚುನಾವಣೆಗಳು ಅಸ್ತಿತ್ವದಲ್ಲಿರುವ ಸಂವಿಧಾನದ ಅಡಿಯಲ್ಲಿ ನಡೆಯಲಿವೆ ಎಂದು ಯುವ ವ್ಯವಹಾರ ಮತ್ತು ಕ್ರೀಡಾ ಸಚಿವಾಲಯ (MYAS) ಸ್ಪಷ್ಟಪಡಿಸಿದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 2:57 pm, Fri, 29 August 25
