ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ನಿವೃತ್ತಿಗೆ ಡೇಟ್ ಫಿಕ್ಸ್?
Virat Kohli - Rohit Sharma: ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಈಗಾಗಲೇ ಟಿ20 ಹಾಗೂ ಟೆಸ್ಟ್ ಕ್ರಿಕೆಟ್ಗೆ ವಿದಾಯ ಹೇಳಿದ್ದಾರೆ. ಇದಾಗ್ಯೂ ಇಬ್ಬರು ಆಟಗಾರರು 2027 ರ ಏಕದಿನ ವಿಶ್ವಕಪ್ವರೆಗೆ ಟೀಮ್ ಇಂಡಿಯಾದಲ್ಲಿ ಮುಂದುವರೆಯಲು ನಿರ್ಧರಿಸಿದ್ದಾರೆ. ಇದರ ನಡುವೆ ಕೊಹ್ಲಿ ಹಾಗೂ ರೋಹಿತ್ ಶರ್ಮಾಗೆ ಬೀಳ್ಕೊಡಲು ಕ್ರಿಕೆಟ್ ಆಸ್ಟ್ರೇಲಿಯಾ ಪ್ಲ್ಯಾನ್ ರೂಪಿಸಿದೆ.

ಟಿ20 ಹಾಗೂ ಟೆಸ್ಟ್ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿರುವ ರೋಹಿತ್ ಶರ್ಮಾ (Rohit Sharma) ಹಾಗೂ ವಿರಾಟ್ ಕೊಹ್ಲಿ (Virat Kohli) ಈ ವರ್ಷಾಂತ್ಯದಲ್ಲಿ ಏಕದಿನ ಕ್ರಿಕೆಟ್ಗೂ ವಿದಾಯ ಹೇಳುವ ಸಾಧ್ಯತೆಯಿದೆ. ಇದನ್ನು ಪುಷ್ಠೀಕರಿಸುವಂತೆ ಇದೀಗ ಆಸ್ಟ್ರೇಲಿಯಾ ಕ್ರಿಕೆಟ್ ಮಂಡಳಿ ದಿಗ್ಗಜರಿಬ್ಬರಿಗೆ ವಿಶೇಷ ಬೀಳ್ಕೊಡುಗೆ ನೀಡಲು ಪ್ಲ್ಯಾನ್ ರೂಪಿಸಿರುವ ಮಾಹಿತಿ ಹೊರಬಿದ್ದಿದೆ. ಅಕ್ಟೋಬರ್ನಲ್ಲಿ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಏಕದಿನ ಸರಣಿಯ ವೇಳೆ ಕೊಹ್ಲಿ ಹಾಗೂ ರೋಹಿತ್ ಶರ್ಮಾಗೆ ವಿಶೇಷ ಗೌರವ ಸಲ್ಲಿಸಲು ಕ್ರಿಕೆಟ್ ಆಸ್ಟ್ರೇಲಿಯಾ ನಿರ್ಧರಿಸಿದೆ ಸಿಇಒ ಟಾಡ್ ಗ್ರೀನ್‌ಬರ್ಗ್ ತಿಳಿಸಿದ್ದಾರೆ.
ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾಗೆ ಇದುವೇ ಕೊನೆಯ ಆಸ್ಟ್ರೇಲಿಯಾ ಸರಣಿ. ಹೀಗಾಗಿ ಅವರಿಗೆ ಬೀಳ್ಕೊಡುಗೆ ನೀಡಲು ಕ್ರಿಕೆಟ್ ಆಸ್ಟ್ರೇಲಿಯಾ ಪ್ಲ್ಯಾನ್ ರೂಪಿಸುತ್ತಿದೆ. ಅದರಂತೆ ಅಕ್ಟೋಬರ್ನಲ್ಲಿ ನಡೆಯಲಿರುವ ಮೂರು ಪಂದ್ಯಗಳ ಏಕದಿನ ಸರಣಿ ವೇಳೆ ಅವರನ್ನು ಗೌರವಿಸಲಿದ್ದೇವೆ ಎಂದು ತಿಳಿಸಿದ್ದಾರೆ.
ಕ್ರಿಕೆಟ್ ಆಸ್ಟ್ರೇಲಿಯಾ ಸಿಇಒ ನೀಡಿರುವ ಈ ಹೇಳಿಕೆ ಬೆನ್ನಲ್ಲೇ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ 2027ರ ಏಕದಿನ ವಿಶ್ವಕಪ್ವರೆಗೆ ಮುಂದುವರೆಯುವುದಿಲ್ಲವಾ? ಎಂಬ ಪ್ರಶ್ನೆಯೊಂದು ಉದ್ಭವಿಸಿದೆ. ಏಕೆಂದರೆ 2027ರ ವೇಳೆಗೆ ರೋಹಿತ್ ಶರ್ಮಾ ಅವರ ವಯಸ್ಸು 40 ಆಗಿರಲಿದೆ. ಇನ್ನು ವಿರಾಟ್ ಕೊಹ್ಲಿಯ ಪ್ರಾಯ 38 ಕ್ಕೆ ಬಂದಿರಲಿದೆ.
ಹೀಗಾಗಿ ಮುಂಬರುವ ಏಕದಿನ ಸರಣಿಗಳು ವಿರಾಟ್ ಕೊಹ್ಲಿ ಹಾಗೂ ಶರ್ಮಾ ಪಾಲಿಗೆ ನಿರ್ಣಾಯಕ. ಅದರಲ್ಲೂ ಆಸ್ಟ್ರೇಲಿಯಾ ವಿರುದ್ಧ ನಡೆಯಲಿರುವ 3 ಪಂದ್ಯಗಳ ಬಳಿಕ ಇಬ್ಬರ ಏಕದಿನ ವಿಶ್ವಕಪ್ ಭವಿಷ್ಯ ಕೂಡ ನಿರ್ಧಾರವಾಗಲಿದೆ. ಏಕೆಂದರೆ ಮುಂಬರುವ ಏಕದಿನ ವಿಶ್ವಕಪ್ ನಡೆಯಲಿರುವುದು ಸೌತ್ ಆಫ್ರಿಕಾ, ಝಿಂಬಾಬ್ವೆ ಹಾಗೂ ನಮೀಬಿಯಾದಲ್ಲಿ.
ಆಫ್ರಿಕಾದ ಪಿಚ್ಗಳು ವೇಗದ ಬೌಲಿಂಗ್ಗೆ ಸಹಕಾರಿ. ಇತ್ತ ಆಸ್ಟ್ರೇಲಿಯಾದಲ್ಲಿರುವುದು ಕೂಡ ಸೀಮ್ ಬೌಲಿಂಗ್ಗೆ ಸಹಕಾರಿಯಾಗುವಂತಹ ಪಿಚ್ಗಳು. ಈ ಪಿಚ್ಗಳಲ್ಲಿ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ವಿಫಲರಾದರೆ, ಏಕದಿನ ತಂಡದಿಂದ ಹೊರಬೀಳುವುದು ಖಚಿತ.
ಏಕೆಂದರೆ 2027ರ ಏಕದಿನ ವಿಶ್ವಕಪ್ಗೂ ಒಂದು ವರ್ಷ ಮುಂಚಿತವಾಗಿ ಭಾರತ ತಂಡದ ರೂಪುರೇಷೆಗಳು ಸಿದ್ಧವಾಗಲಿದೆ. ಅದಕ್ಕೂ ಮುನ್ನ ಟೀಮ್ ಇಂಡಿಯಾ ಆಸ್ಟ್ರೇಲಿಯಾ ಹಾಗೂ ಸೌತ್ ಆಫ್ರಿಕಾ ವಿರುದ್ಧ ತಲಾ 3 ಏಕದಿನ ಪಂದ್ಯಗಳ ಸರಣಿಯನ್ನು ಆಡಲಿದೆ.
ಈ ಸರಣಿಗಳಲ್ಲಿ ಉತ್ತಮ ಪ್ರದರ್ಶನ ನೀಡಿದರೆ ಮಾತ್ರ, ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಅವರನ್ನು ಏಕದಿನ ತಂಡದಲ್ಲಿ ಉಳಿಸಿಕೊಳ್ಳಬಹುದು. ಒಂದು ವೇಳೆ ವಿಫಲರಾದರೆ ಅಕ್ಟೋಬರ್ 25 ರಂದು ನಡೆಯಲಿರುವ ಮ್ಯಾಚ್ ಕಿಂಗ್ ಕೊಹ್ಲಿ ಹಾಗೂ ಹಿಟ್ಮ್ಯಾನ್ ಪಾಲಿನ ಕೊನೆಯ ಅಂತಾರಾಷ್ಟ್ರೀಯ ಪಂದ್ಯವಾಗಿರಲಿದೆ.
ಇದನ್ನೂ ಓದಿ: ಕೈ ಕೊಟ್ಟ ಅದೃಷ್ಟ… ಡಕ್ ವೈಭವ್ ಸೂರ್ಯವಂಶಿ ಗೋಲ್ಡನ್ ಡಕ್..!
ಭಾರತ ಮತ್ತು ಆಸ್ಟ್ರೇಲಿಯಾ ಸರಣಿ ಯಾವಾಗ?
ಭಾರತ ಮತ್ತು ಆಸ್ಟ್ರೇಲಿಯಾ ನಡುವಣ ಏಕದಿನ ಸರಣಿಯು ಅಕ್ಟೋಬರ್ 19 ರಿಂದ ಶುರುವಾಗಲಿದೆ. ಮೂರು ಪಂದ್ಯಗಳ ಈ ಸರಣಿಯ ಮೊದಲ ಮ್ಯಾಚ್ ಪರ್ತ್ನಲ್ಲಿ ನಡೆದರೆ, ಅಕ್ಟೋಬರ್ 23 ರಂದು ಅಡಿಲೇಡ್ನಲ್ಲಿ 2ನೇ ಪಂದ್ಯ ಜರುಗಲಿದೆ. ಹಾಗೆಯೇ ಅಕ್ಟೋಬರ್ 25 ರಂದು ನಡೆಯುವ ಕೊನೆಯ ಏಕದಿನ ಪಂದ್ಯಕ್ಕೆ ಸಿಡ್ನಿ ಕ್ರಿಕೆಟ್ ಗ್ರೌಂಡ್ ಆತಿಥ್ಯವಹಿಸಲಿದೆ.
