ಸಂಪೂರ್ಣ ಬದಲಾಯ್ತು ಪಾಕ್ ತಂಡ; 12 ಅನುಭವಿ ಆಟಗಾರರಿಗೆ ಹೊಸ ಜವಾಬ್ದಾರಿ
Pakistan cricket: ಸತತ ಸೋಲುಗಳಿಂದ ಕಂಗೆಟ್ಟಿರುವ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಮಹತ್ವದ ಬದಲಾವಣೆಗೆ ಮುಂದಾಗಿದೆ. ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಗೆ ಹೊಸ ಕೋಚಿಂಗ್ ಸಿಬ್ಬಂದಿಯನ್ನು ನೇಮಿಸಿದೆ. ಅಜರ್ ಮಹಮೂದ್ ರೆಡ್-ಬಾಲ್ ತಂಡದ ಮುಖ್ಯ ಕೋಚ್ ಆಗಿದ್ದಾರೆ. ಅಬ್ದುಲ್ ರೆಹಮಾನ್ ಸ್ಪಿನ್ ಬೌಲಿಂಗ್ ಕೋಚ್ ಆಗಿ ಸೇರ್ಪಡೆಗೊಂಡಿದ್ದಾರೆ. ಈ ಬದಲಾವಣೆಗಳು ತಂಡದ ಪ್ರದರ್ಶನ ಸುಧಾರಿಸಲು ಮತ್ತು ಮುಂಬರುವ ಸರಣಿಯಲ್ಲಿ ಉತ್ತಮವಾಗಿ ಆಡಲು ಸಹಕಾರಿಯಾಗಲಿವೆ.

ಸತತ ಸೋಲುಗಳಿಂದ ಕಂಗೆಟ್ಟಿರುವ ಪಾಕಿಸ್ತಾನ ಕ್ರಿಕೆಟ್ (Pakistan cricket) ತಂಡದಲ್ಲಿ ಮಹತ್ವದ ಬದಲಾವಣೆಗೆ ಪಿಸಿಬಿ (PCB) ಮುಂದಾಗಿದೆ. ಇತ್ತೀಚೆಗಷ್ಟೇ ಮುಗಿದ ಏಷ್ಯಾಕಪ್‌ನಲ್ಲಿ ಭಾರತದ ವಿರುದ್ಧ ಆಡಿದ್ದ ಮೂರು ಪಂದ್ಯಗಳಲ್ಲಿ ಸೋತಿದ್ದ ಪಾಕಿಸ್ತಾನ ತಂಡ ಮುಜುಗರಕ್ಕೆ ಒಳಗಾಗಿತ್ತು. ಇದೀಗ ಪಾಕಿಸ್ತಾನ, ದಕ್ಷಿಣ ಆಫ್ರಿಕಾ ವಿರುದ್ಧ ತವರಿನಲ್ಲಿ ಎರಡು ಪಂದ್ಯಗಳ ಟೆಸ್ಟ್ ಸರಣಿಯನ್ನು ಆಡಲು ಸಜ್ಜಾಗಿದೆ. ಈ ಸರಣಿಗೆ ಇತ್ತೀಚೆಗೆ ಪಾಕ್ ತಂಡವನ್ನು ಸಹ ಘೋಷಿಸಲಾಗಿದೆ. ಈ ನಡುವೆ ಪಾಕಿಸ್ತಾನ ಕ್ರಿಕೆಟ್ ಮಂಡಳಿಯು ಈ ಸರಣಿಗೆ 12 ಅನುಭವಿಗಳನ್ನು ತಂಡಕ್ಕೆ ಸೇರಿಸಿಕೊಂಡಿದ್ದು, ಅವರು ವಿವಿಧ ಪಾತ್ರಗಳನ್ನು ನಿರ್ವಹಿಸಲಿದ್ದಾರೆ.
ಪಾಕ್ ತಂಡಕ್ಕೆ 12 ಅನುಭವಿಗಳ ಸೇರ್ಪಡೆ
ಪಾಕಿಸ್ತಾನ ಕ್ರಿಕೆಟ್ ಮಂಡಳಿಯು ದಕ್ಷಿಣ ಆಫ್ರಿಕಾ ವಿರುದ್ಧದ ಎರಡು ಟೆಸ್ಟ್ ಸರಣಿಗೆ ಹೊಸ ಕೋಚಿಂಗ್ ಸಿಬ್ಬಂದಿಯನ್ನು ಘೋಷಿಸಿದೆ. ವಿಶೇಷವಾಗಿ 2025-27ರ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಅನ್ನು ಉತ್ತಮ ರೀತಿಯಲು ಪ್ರಾರಂಭಿಸಲು ತಯಾರಿ ನಡೆಸುತ್ತಿರುವ ಪಾಕ್ ಮಂಡಳಿ, ಮಾಜಿ ಆಲ್‌ರೌಂಡರ್ ಅಜರ್ ಮಹಮೂದ್ ಅವರನ್ನು ರೆಡ್ -ಬಾಲ್ ತಂಡದ ಮುಖ್ಯ ಕೋಚ್ ಆಗಿ ನೇಮಿಸಿದೆ. ಹಾಗೆಯೇ ಮಾಜಿ ಸ್ಪಿನ್ನರ್ ಅಬ್ದುಲ್ ರೆಹಮಾನ್ ಈಗ ಸ್ಪಿನ್ ಬೌಲಿಂಗ್ ಕೋಚ್ ಆಗಿ ಸೇವೆ ಸಲ್ಲಿಸಲಿದ್ದಾರೆ. ಅಬ್ದುಲ್ ಮಜೀದ್ ಅವರನ್ನು ಫೀಲ್ಡಿಂಗ್ ಕೋಚ್ ಆಗಿ ನೇಮಿಸಲಾಗಿದೆ. ಇವರಲ್ಲದೆ, ಮಾಜಿ ಓಪನರ್ ಇಮ್ರಾನ್ ಫರ್ಹತ್ ಅವರನ್ನು ಬ್ಯಾಟಿಂಗ್ ಕೋಚ್ ಆಗಿ ನೇಮಿಸಲಾಗಿದೆ.
ತಂಡದ ನಿರ್ವಹಣೆಯ ವ್ಯವಸ್ಥಾಪಕರಾಗಿ ನವೇದ್ ಅಕ್ರಮ್ ಚೀಮಾ, ಫಿಸಿಯೋ ಆಗಿ ಕ್ಲಿಫ್ ಡೀಕನ್, ಕಾರ್ಯಕ್ಷಮತೆ ವಿಶ್ಲೇಷಕರಾಗಿ ತಲ್ಹಾ ಬಟ್, ಕಂಡೀಷನಿಂಗ್ ತರಬೇತುದಾರರಾಗಿ ಗ್ರಾಂಟ್ ಲುಡೆನ್, ಮಾಧ್ಯಮ ವ್ಯವಸ್ಥಾಪಕರಾಗಿ ಸಯ್ಯದ್ ನಯೀಮ್ ಗಿಲಾನಿ, ಭದ್ರತಾ ವ್ಯವಸ್ಥಾಪಕರಾಗಿ ಇರ್ತಾಜಾ ಕೊಮೈಲ್, ತಂಡದ ವೈದ್ಯರಾಗಿ ಡಾ. ವಾಜಿದ್ ಅಲಿ ರಫೈ ಮತ್ತು ಮೊಹಮ್ಮದ್ ಎಹ್ಸಾನ್ ನೇಮಕಗೊಂಡಿದ್ದಾರೆ.
ಏಷ್ಯಾಕಪ್‌ನಲ್ಲಿ ನಾಲ್ಕನೇ ಬಾರಿಗೆ ಸೊನ್ನೆ ಸುತ್ತಿದ ಸೈಮ್ ಅಯೂಬ್
ಲಾಹೋರ್‌ನಲ್ಲಿ ಸರಣಿಯ ಮೊದಲ ಪಂದ್ಯ
ದಕ್ಷಿಣ ಆಫ್ರಿಕಾ ವಿರುದ್ಧದ ಈ ಸರಣಿಯ ಮೊದಲ ಟೆಸ್ಟ್ ಪಂದ್ಯವು ಅಕ್ಟೋಬರ್ 12 ರಿಂದ ಲಾಹೋರ್‌ನ ಗಡಾಫಿ ಕ್ರೀಡಾಂಗಣದಲ್ಲಿ ಆರಂಭವಾಗಲಿದ್ದು, ಎರಡನೇ ಪಂದ್ಯವು ಅಕ್ಟೋಬರ್ 20 ರಿಂದ ರಾವಲ್ಪಿಂಡಿ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯಲಿದೆ. ಜನವರಿ 2021 ರಲ್ಲಿ ಪಾಕಿಸ್ತಾನವು, ದಕ್ಷಿಣ ಆಫ್ರಿಕಾವನ್ನು 2-0 ಅಂತರದಿಂದ ಸೋಲಿಸಿದ ನಂತರ ಇದು ಪಾಕಿಸ್ತಾನದಲ್ಲಿ ದಕ್ಷಿಣ ಆಫ್ರಿಕಾದ ಮೊದಲ ಟೆಸ್ಟ್ ಸರಣಿಯಾಗಿದೆ. ಈ ಸರಣಿಯ ನಂತರ , ಎರಡೂ ತಂಡಗಳು ಮೂರು ಪಂದ್ಯಗಳ ಟಿ20 ಸರಣಿ ಮತ್ತು ಮೂರು ಪಂದ್ಯಗಳ ಏಕದಿನ ಸರಣಿಯನ್ನು ಸಹ ಆಡಲಿವೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:51 pm, Wed, 8 October 25
