ನಾಯಕನಾಗಿ ರೋಹಿತ್ ಶರ್ಮಾ ಯುಗಾಂತ್ಯ..! ಹೇಗಿದೆ ಅವರ ನಾಯಕತ್ವದ ದಾಖಲೆ?

Rohit Sharma Captaincy Ends: ಆಸ್ಟ್ರೇಲಿಯಾ ಪ್ರವಾಸಕ್ಕೆ ಟೀಂ ಇಂಡಿಯಾ ಘೋಷಣೆಯಾಗಿದ್ದು, ರೋಹಿತ್ ಶರ್ಮಾ ಏಕದಿನ ನಾಯಕತ್ವದಿಂದ ಕೆಳಗಿಳಿದು, ಶುಭ್​ಮನ್ ಗಿಲ್ ನಾಯಕರಾಗಿದ್ದಾರೆ. 2025 ಚಾಂಪಿಯನ್ಸ್ ಟ್ರೋಫಿ ಗೆಲ್ಲಿಸಿಕೊಟ್ಟರೂ ರೋಹಿತ್ ನಾಯಕತ್ವದ ಯುಗ ಅಂತ್ಯಗೊಂಡಿದೆ. ಅತ್ಯಂತ ಯಶಸ್ವಿ ನಾಯಕನಾಗಿ, 72.5% ಗೆಲುವಿನ ದಾಖಲೆ ಹೊಂದಿದ್ದ ರೋಹಿತ್ ಇನ್ನು ಆಟಗಾರನಾಗಿ ಮುಂದುವರಿಯಲಿದ್ದಾರೆ. ಭಾರತೀಯ ಕ್ರಿಕೆಟ್‌ನಲ್ಲಿ ಇದು ಮಹತ್ವದ ಬದಲಾವಣೆಯ ಸಂಕೇತವಾಗಿದೆ.

ನಾಯಕನಾಗಿ ರೋಹಿತ್ ಶರ್ಮಾ ಯುಗಾಂತ್ಯ..! ಹೇಗಿದೆ ಅವರ ನಾಯಕತ್ವದ ದಾಖಲೆ?
Rohit Sharma

Updated on: Oct 04, 2025 | 4:05 PM

ಆಸ್ಟ್ರೇಲಿಯಾ ಪ್ರವಾಸಕ್ಕೆ ಇಂದು ಟೀಂ ಇಂಡಿಯಾವನ್ನು (India Squad For Australia Tour) ಪ್ರಕಟಿಸಲಾಗಿದೆ. ಈ ಪ್ರಕಟಣೆಯೊಂದಿಗೆ ಭಾರತೀಯ ಕ್ರಿಕೆಟ್‌ನಲ್ಲಿ ಹೊಸ ಯುಗ ಆರಂಭವಾಗಿದೆ. ಏಕೆಂದರೆ ದಿಗ್ಗಜ ರೋಹಿತ್ ಶರ್ಮಾರನ್ನು (Rohit Sharma) ಏಕದಿನ ತಂಡದ ನಾಯಕತ್ವದಿಂದ ಕೆಳಗಿಳಿಸಿ ಶುಭ್​ಮನ್ ಗಿಲ್​ಗೆ ಏಕದಿನ ತಂಡದ ನಾಯಕತ್ವ ನೀಡಲಾಗಿದೆ. ಇದರರ್ಥ ರೋಹಿತ್ ಶರ್ಮಾ ಇನ್ನು ಮುಂದೆ ನಾಯಕನಾಗಿ ತಂಡದಲ್ಲಿ ಕಾಣಿಸಿಕೊಳ್ಳುವುದಿಲ್ಲ. 2021ರ ಡಿಸೆಂಬರ್​ನಲ್ಲಿ ಭಾರತ ಏಕದಿನ ತಂಡದ ಪೂರ್ಣಾವಧಿ ನಾಯಕನಾಗಿ ಆಯ್ಕೆಯಾಗಿದ್ದ ರೋಹಿತ್ ಶರ್ಮಾ 2025 ರಲ್ಲಿ ತಮ್ಮ ಏಕದಿನ ನಾಯಕತ್ವವನ್ನು ಕಳೆದುಕೊಂಡಿದ್ದಾರೆ. ಚಾಂಪಿಯನ್ಸ್ ಟ್ರೋಫಿಯಲ್ಲಿ ತಂಡವನ್ನು ಮುನ್ನಡೆಸಿದ್ದ ರೋಹಿತ್ ಇದೀಗ ಆಟಗಾರನಾಗಿ ತಂಡದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಹಿಂದೆಯೇ ರೋಹಿತ್ ಟಿ20 ಹಾಗೂ ಟೆಸ್ಟ್ ಮಾದರಿಗೆ ವಿದಾಯ ಹೇಳಿರುವುದರಿಂದ ಅವರ ನಾಯಕತ್ವದ ಯುಗ ಮುಗಿದಿದೆ.

ಅತ್ಯಂತ ಯಶಸ್ವಿ ನಾಯಕ ರೋಹಿತ್

ರೋಹಿತ್ ಶರ್ಮಾ 56 ಏಕದಿನ ಪಂದ್ಯಗಳಲ್ಲಿ ಭಾರತ ತಂಡವನ್ನು ಮುನ್ನಡೆಸಿದ್ದಾರೆ . ಈ ಅವಧಿಯಲ್ಲಿ ಟೀಂ ಇಂಡಿಯಾ 42 ಪಂದ್ಯಗಳನ್ನು ಗೆದ್ದಿದ್ದು ಕೇವಲ 12 ಪಂದ್ಯಗಳಲ್ಲಿ ಮಾತ್ರ ಸೋತಿದೆ. ಉಳಿದಂತೆ ಒಂದು ಪಂದ್ಯ ಟೈ ಆಗಿದ್ದರೆ, ಇನ್ನೊಂದು ಪಂದ್ಯ ಫಲಿತಾಂಶವಿಲ್ಲದೆ ಅಂತ್ಯಗೊಂಡಿದೆ. ಏಕದಿನ ನಾಯಕನಾಗಿ ಎರಡು ಬಾರಿ ಏಷ್ಯಾಕಪ್ ಗೆಲ್ಲಿಸಿಕೊಟ್ಟಿರುವ ರೋಹಿತ್, 2018 ಮತ್ತು 2023 ರ ಏಷ್ಯಾಕಪ್​ನಲ್ಲಿ ತಂಡವನ್ನು ಚಾಂಪಿಯನ್ ಪಟ್ಟಕ್ಕೇರಿಸಿದ್ದರು. ಹಾಗೆಯೇ ಇದೇ ವರ್ಷ ನಡೆದಿದ್ದ 2025 ರಲ್ಲಿ ಚಾಂಪಿಯನ್ಸ್ ಟ್ರೋಫಿಯಲ್ಲೂ ತಂಡವನ್ನು ಪ್ರಶಸ್ತಿಯತ್ತ ಮುನ್ನಡೆಸಿದ್ದರು. ಈ ಮೂಲಕ 12 ವರ್ಷಗಳ ನಂತರ ಭಾರತ ತಂಡ ಚಾಂಪಿಯನ್ಸ್ ಟ್ರೋಫಿಯನ್ನು ಗೆದ್ದುಕೊಂಡಿತ್ತು.

ಅತಿ ಹೆಚ್ಚು ಗೆಲುವಿನ ಶೇಕಡಾವಾರು

ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ರೋಹಿತ್ ಶರ್ಮಾ ಅತಿ ಹೆಚ್ಚು ಗೆಲುವಿನ ಶೇಕಡಾವಾರು ಪ್ರಮಾಣವನ್ನು ಹೊಂದಿದ್ದು, ಅವರ ನಾಯಕತ್ವದಲ್ಲಿ ತಂಡದ ಗೆಲುವಿನ ಶೇಕಡಾವಾರು 72.5% ಆಗಿದೆ. ರೋಹಿತ್ ಹೊರತುಪಡಿಸಿದರೆ ಬೇರೆ ಯಾವುದೇ ನಾಯಕನ ಗೆಲುವಿನ ಶೇಕಡಾವಾರು 70% ಕ್ಕಿಂತ ಹೆಚ್ಚಿಲ್ಲ. ಆಸ್ಟ್ರೇಲಿಯಾದ ರಿಕಿ ಪಾಂಟಿಂಗ್ 67.9 % , ಅಫ್ಘಾನಿಸ್ತಾನದ ಅಸ್ಗರ್ ಅಫ್ಘಾನ್ 67.8 % ಮತ್ತು ಆಸ್ಟ್ರೇಲಿಯಾದ ಸ್ಟೀವ್ ವಾ 66.3 % ಗೆಲುವಿನ ಶೇಕಡಾವಾರು ಹೊಂದಿದ್ದಾರೆ. ಇಲ್ಲಿ ಗಮನಿಸಬೇಕಾದ ಸಂಗತಿಯೆಂದರೆ ಈ ಎಲ್ಲಾ ನಾಯಕರು ಕನಿಷ್ಠ 100 ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ತಂಡವನ್ನು ಮುನ್ನಡೆಸಿದ್ದಾರೆ.

ಆಸ್ಟ್ರೇಲಿಯಾ ವಿರುದ್ಧದ ಏಕದಿನ, ಟಿ20 ಸರಣಿಗೆ ಟೀಂ ಇಂಡಿಯಾ ಪ್ರಕಟ; ಗಿಲ್​ಗೆ ಏಕದಿನ ನಾಯಕತ್ವ

ರೋಹಿತ್ ಏಕದಿನ ಕ್ರಿಕೆಟ್‌ನಲ್ಲಿ ನಾಯಕನಾಗಿ ಶೇ.77.27 ರಷ್ಟು ಪಂದ್ಯಗಳನ್ನು ಗೆದ್ದಿದ್ದು, ಇದು ವಿಶ್ವದ ಎರಡನೇ ಅತಿ ಹೆಚ್ಚು ಗೆಲುವಿನ ಶೇಕಡಾವಾರು ಆಗಿದೆ. ವೆಸ್ಟ್ ಇಂಡೀಸ್‌ನ ಕ್ಲೈವ್ ಲಾಯ್ಡ್ ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದು, ಅವರ ನಾಯಕತ್ವದಲ್ಲಿ ತಂಡ ಶೇ .77.71 ರಷ್ಟು ಪಂದ್ಯಗಳನ್ನು ಗೆದ್ದಿದೆ. ಉಳಿದಂತೆ ಐಸಿಸಿ ಟೂರ್ನಮೆಂಟ್‌ಗಳಲ್ಲಿ ರೋಹಿತ್ ಅವರ ಗೆಲುವಿನ ಶೇಕಡಾವಾರು 87.1% ರಷ್ಟಿದ್ದು, ಇದು ಇತರ ಎಲ್ಲಾ ನಾಯಕರಿಗಿಂತ ಅತ್ಯಧಿಕವಾಗಿದೆ. ರೋಹಿತ್ ಹೊರತುಪಡಿಸಿದರೆ ಐಸಿಸಿ ಈವೆಂಟ್‌ನಲ್ಲಿ ಬೇರೆ ಯಾವುದೇ ನಾಯಕ ಶೇ .80 ರಷ್ಟು ಪಂದ್ಯಗಳನ್ನು ಗೆದ್ದಿಲ್ಲ . ಇದರರ್ಥ ನಾಯಕತ್ವದ ವಿಚಾರದಲ್ಲಿ ರೋಹಿತ್​ಗೆ ರೋಹಿತ್ತೇ ಸರಿಸಾಟಿ ಎನ್ನಬಹುದು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 4:03 pm, Sat, 4 October 25

Follow Us