IND vs AUS: ಆರಂಭಿಕನಾಗಿಯೂ ರೋಹಿತ್ ಫೇಲ್; ನಿವೃತ್ತಿ ಘೋಷಿಸಿ ಎಂದ ಫ್ಯಾನ್ಸ್

Rohit Sharma's Failure: ಆಸ್ಟ್ರೇಲಿಯಾದ ಮೆಲ್ಬೋರ್ನ್‌ನಲ್ಲಿ ನಡೆಯುತ್ತಿರುವ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡಕ್ಕೆ ಆರಂಭಿಕ ಆಘಾತ ಎದುರಾಗಿದೆ. ನಾಯಕ ರೋಹಿತ್ ಶರ್ಮಾ ಕೇವಲ 3 ರನ್‌ಗಳಿಗೆ ಔಟ್ ಆದರು. ಪ್ಯಾಟ್ ಕಮಿನ್ಸ್ ರೋಹಿತ್ ಅವರನ್ನು ಔಟ್ ಮಾಡುವ ಮೂಲಕ ಭಾರತಕ್ಕೆ ಆರಂಭಿಕ ಆಘಾತ ನೀಡಿದರು. ಇಡೀ ಸರಣಿಯಲ್ಲಿ ಕಳಪೆ ಫಾರ್ಮ್​ನಿಂದ ಬಳಲುತ್ತಿರುವ ರೋಹಿತ್ ಶರ್ಮಾ 4ನೇ ಟೆಸ್ಟ್ ಪಂದ್ಯದಲ್ಲೂ ಬಿಗ್ ಇನ್ನಿಂಗ್ಸ್ ಆಡುವಲ್ಲಿ ವಿಫಲರಾಗಿದ್ದಾರೆ.

IND vs AUS: ಆರಂಭಿಕನಾಗಿಯೂ ರೋಹಿತ್ ಫೇಲ್; ನಿವೃತ್ತಿ ಘೋಷಿಸಿ ಎಂದ ಫ್ಯಾನ್ಸ್
ರೋಹಿತ್ ಶರ್ಮಾ
Follow us
ಪೃಥ್ವಿಶಂಕರ
|

Updated on:Dec 27, 2024 | 12:00 PM

ಉಸ್ಮಾನ್ ಖವಾಜಾ, ಸ್ಯಾಮ್ ಕೊನ್‌ಸ್ಟನ್ಸ್, ಮಾರ್ನಸ್ ಲಬುಶೇನ್ ಅವರ ಅರ್ಧ ಶತಕ ಮತ್ತು ಅನುಭವಿ ಬ್ಯಾಟ್ಸ್‌ಮನ್ ಸ್ಟೀವ್ ಸ್ಮಿತ್ ಅವರ ಶತಕದಿಂದಾಗಿ ಆಸ್ಟ್ರೇಲಿಯಾ ಮೆಲ್ಬೋರ್ನ್ ಟೆಸ್ಟ್‌ನಲ್ಲಿ ತನ್ನ ಮೊದಲ ಇನ್ನಿಂಗ್ಸ್‌ನಲ್ಲಿ 474 ರನ್ ಕಲೆ ಹಾಕಿದೆ. ಆಸೀಸ್ ಬ್ಯಾಟಿಂಗ್‌ ನೋಡಿದವರು ಟೀಂ ಇಂಡಿಯಾದಿಂದಲೂ ಅದೇ ರೀತಿಯ ಪ್ರದರ್ಶನವನ್ನು ನಿರೀಕ್ಷಿಸಿದ್ದರು. ಆದರೆ ತನ್ನ ಮೊದಲ ಇನ್ನಿಂಗ್ಸ್ ಆರಂಭಿಸಿದ್ದ ಟೀಂ ಇಂಡಿಯಾಕ್ಕೆ ಆರಂಭಿಕ ಆಘಾತ ಎದುರಾಯಿತು. ಮಧ್ಯಮ ಕ್ರಮಾಂಕದಿಂದ ಮತ್ತೆ ಆರಂಭಿಕನಾಗಿ ಬಡ್ತಿ ಪಡೆದಿದ್ದ ನಾಯಕ ರೋಹಿತ್ ಶರ್ಮಾ ಈ ಬಾರಿಯೂ ವಿಫಲರಾದರು. ತಮ್ಮ ಬ್ಯಾಟಿಂಗ್ ಕ್ರಮಾಂಕವನ್ನು ಬದಲಾಯಿಸುವುದಕ್ಕಾಗಿಯೇ ಶುಭ್​ಮನ್ ಗಿಲ್​ರನ್ನು 4ನೇ ಟೆಸ್ಟ್​ನಿಂದ ಹೊರಗಿಟ್ಟಿದ ರೋಹಿತ್ ಮೊದಲ ಇನ್ನಿಂಗ್ಸ್​ನಲ್ಲಿ ಕೇವಲ 3 ರನ್ ಗಳಿಸಿ ಆಸ್ಟ್ರೇಲಿಯಾದ ನಾಯಕ ಪ್ಯಾಟ್ ಕಮಿನ್ಸ್ ಎಸೆತದಲ್ಲಿ ಪೆವಿಲಿಯನ್ ಸೇರಿಕೊಂಡರು. ಇತ್ತ ಕಮಿನ್ಸ್ ರೋಹಿತ್ ವಿಕೆಟ್ ಕಬಳಿಸಿದ್ದು ಮಾತ್ರವಲ್ಲದೆ ನಾಯಕತ್ವದ ಪಾಠವನ್ನೂ ಹೇಳಿಕೊಟ್ಟರು.

ರೋಹಿತ್ ಶರ್ಮಾ ಫ್ಲಾಪ್ ಶೋ

ಈ ಪಂದ್ಯದಲ್ಲಿ ಯಶಸ್ವಿ ಜೈಸ್ವಾಲ್ ಅವರೊಂದಿಗೆ ಭಾರತದ ಇನ್ನಿಂಗ್ಸ್ ಆರಂಭಿಸಿದ ರೋಹಿತ್ ಶರ್ಮಾ ಎರಡನೇ ಓವರ್​ನಲ್ಲೇ ಪೆವಿಲಿಯನ್ ಹಾದಿ ಹಿಡಿದರು. ಕಮಿನ್ಸ್ ಬೌಲ್ ಮಾಡಿದ ಎರಡನೇ ಓವರ್​ನ ಕೊನೆಯ ಎಸೆತದಲ್ಲಿ ರೋಹಿತ್ ಶರ್ಮಾ ವಿಕೆಟ್ ಒಪ್ಪಿಸಿದರು. ಈ ಮೂಲಕ ಪ್ಯಾಟ್ ಕಮಿನ್ಸ್ ಟೆಸ್ಟ್ ಕ್ರಿಕೆಟ್‌ನಲ್ಲಿ 7ನೇ ಬಾರಿಗೆ ರೋಹಿತ್ ಶರ್ಮಾ ಅವರನ್ನು ಔಟ್ ಮಾಡಿದ ದಾಖಲೆ ಮಾಡಿದರು. ಇಲ್ಲಿಯವರೆಗೆ, ರೋಹಿತ್ ಕಮಿನ್ಸ್ ವಿರುದ್ಧ 199 ಎಸೆತಗಳನ್ನು ಆಡಿದ್ದು 18.14 ಸರಾಸರಿಯಲ್ಲಿ ರನ್ ಕಲೆಹಾಕಿದ್ದು, ಆಡಿರುವ 13 ಇನ್ನಿಂಗ್ಸ್‌ಗಳಲ್ಲಿ 7 ಬಾರಿ ಕಮಿನ್ಸ್​ಗೆ ಬಲಿಯಾಗಿದ್ದಾರೆ.

ಟೆಸ್ಟ್ ಕ್ರಿಕೆಟ್‌ನಲ್ಲಿ ಕಳೆದ 14 ಇನ್ನಿಂಗ್ಸ್‌ಗಳಲ್ಲಿ ರೋಹಿತ್ ಶರ್ಮಾ ಅವರ ಫಾರ್ಮ್ ತುಂಬಾ ಕಳಪೆಯಾಗಿದೆ. ಕಳೆದ 14 ಇನ್ನಿಂಗ್ಸ್‌ಗಳಲ್ಲಿ ಅವರು ಕೇವಲ 155 ರನ್ ಗಳಿಸಲಷ್ಟೇ ಶಕ್ತರಾಗಿದ್ದಾರೆ. ಈ ಅವಧಿಯಲ್ಲಿ, ಅವರ ಸರಾಸರಿ ಕೇವಲ 11.07 ಆಗಿದ್ದು, ಒಮ್ಮೆ ಮಾತ್ರ 50 ರನ್ ಗಡಿ ದಾಟಿದ್ದಾರೆ. ಹೀಗಿರುವಾಗ ನಾಯಕನ ಜೊತೆಗೆ ತಂಡದಲ್ಲಿ ಅವರ ಸ್ಥಾನದ ಬಗ್ಗೆ ಈಗ ಹಲವು ಪ್ರಶ್ನೆಗಳು ಎದ್ದಿವೆ.

ನಾಯಕತ್ವದ ಪಾಠ ಮಾಡಿದ ಕಮಿನ್ಸ್

ಕಮಿನ್ಸ್ ರೋಹಿತ್ ವಿಕೆಟ್ ಕಬಳಿಸಿದ್ದು ಮಾತ್ರವಲ್ಲದೆ ನಾಯಕತ್ವದ ಪಾಠವನ್ನೂ ಹೇಳಿಕೊಟ್ಟರು. ಏಕೆಂದರೆ ಆಸ್ಟ್ರೇಲಿಯಾದ ಅತ್ಯುತ್ತಮ ಬ್ಯಾಟಿಂಗ್‌ಗೆ ರೋಹಿತ್ ಶರ್ಮಾ ಅವರ ಕಳಪೆ ನಾಯಕತ್ವವೂ ಕಾರಣವಾಗಿತ್ತು. ಸ್ಪಿನ್ನರ್‌ಗಳಿಗೆ ವಿಕೆಟ್ ಸಹಕಾರಿಯಾಗುತ್ತಿದ್ದರೂ ರೋಹಿತ್ ವೇಗದ ಬೌಲರ್‌ಗಳಿಂದಲೇ ಹೆಚ್ಚು ಬೌಲಿಂಗ್ ಮಾಡಿಸಿದರು. ಮತ್ತೋರ್ವ ಸ್ಪಿನ್ನರ್ ವಾಷಿಂಗ್ಟನ್ ಸುಂದರ್ ಅವರನ್ನು ತಂಡಕ್ಕೆ ಸೇರಿಸಿಕೊಂಡಿದ್ದರೂ ಸಮಯಕ್ಕೆ ಸರಿಯಾಗಿ ಅವರನ್ನು ಬಳಸಿಕೊಳ್ಳಲಿಲ್ಲ. ಇದರಿಂದಾಗಿ 299 ರನ್‌ಗಳಿಗೆ 6 ವಿಕೆಟ್‌ ಪತನದ ನಡುವೆಯೂ ಆಸ್ಟ್ರೇಲಿಯಾ ತ್ವರಿತವಾಗಿ ರನ್ ಗಳಿಸಿ 474 ರನ್ ಕಲೆಹಾಕಿತು.

ಆದರೆ ಕಮಿನ್ಸ್ ತನ್ನ ಬುದ್ಧಿವಂತಿಕೆಯಿಂದ ಎರಡನೇ ಓವರ್‌ನಲ್ಲಿಯೇ ರೋಹಿತ್‌ನ ವಿಕೆಟ್ ಪಡೆದರು. ವಾಸ್ತವವಾಗಿ ಜೋಶ್ ಹೇಜಲ್‌ವುಡ್ ಬದಲಿಯಾಗಿ ತಂಡಕ್ಕೆ ಬಂದಿರುವ ಸ್ಕಾಟ್ ಬೋಲ್ಯಾಂಡ್ ತಂಡದ ಮತ್ತೊಬ್ಬ ಪ್ರಮುಖ ವೇಗದ ಬೌಲರ್ ಆಗಿದ್ದಾರೆ. ಆದಾಗ್ಯೂ ಬೋಲ್ಯಾಂಡ್‌ಗೆ ಎರಡನೇ ಓವರ್ ನೀಡುವ ಬದಲು ಕಮಿನ್ಸ್ ತಾವೇ ಬೌಲಿಂಗ್ ಮಾಡುವ ಜವಬ್ದಾರಿ ತೆಗೆದುಕೊಂಡರು. ಬೋಲ್ಯಾಂಡ್‌ ಪ್ರಮುಖ ಬೌಲರ್ ಆಗಿದ್ದರೂ ಕಮಿನ್ಸ್ ಸಂದರ್ಭಕ್ಕೆ ಅನುಸಾರವಾಗಿ ಬೌಲಿಂಗ್‌ನಲ್ಲಿ ಬದಲಾವಣೆ ತಂದಿದ್ದು ರೋಹಿತ್​ಗೆ ದೊಡ್ಡ ಪಾಠವಾಗಿತ್ತು. ಕೆಎಲ್ ರಾಹುಲ್ ರೂಪದಲ್ಲಿ ಕಮಿನ್ಸ್ ಭಾರತದ ಎರಡನೇ ವಿಕೆಟ್ ಪಡೆದರು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 11:58 am, Fri, 27 December 24