
ಆಸ್ಟ್ರೇಲಿಯಾ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಮೊದಲ ಎರಡು ಪಂದ್ಯಗಳಲ್ಲಿ ಗೆಲುವು ಸಾಧಿಸುವ ಮೂಲಕ ಭಾರತ (India vs Australia) 2-0 ಅಂತರದಿಂದ ಸರಣಿ ವಶಪಡಿಸಿಕೊಂಡಾಗಿದೆ. ಭಾನುವಾರ ಇಂದೋರ್ನಲ್ಲಿ ನಡೆದ ದ್ವಿತೀಯ ಪಂದ್ಯದಲ್ಲಿ ಶುಭ್ಮನ್ ಗಿಲ್ ಹಾಗೂ ಶ್ರೇಯಸ್ ಅಯ್ಯರ್ ಅವರ ಮನಮೋಹಕ ಶತಕದ ನೆರವಿನಿಂದ ಟೀಮ್ ಇಂಡಿಯಾ ಬೃಹತ್ ಮೊತ್ತ ಕಲೆಹಾಕಿ ಜಯ ಸಾಧಿಸಿತು. ಇದೀಗ ಭಾರತ ಸರಣಿ ಕ್ಲೀನ್ಸ್ವೀಪ್ ಮೇಲೆ ಕಣ್ಣಿಟ್ಟಿರುವ ಭಾರತ ತಂಡ ರಾಜ್ಕೋಟ್ಗೆ ತಲುಪಿದೆ. ಆದರೆ, ರೋಹಿತ್ ಶರ್ಮಾ ಮಾತ್ರ ಇನ್ನೂ ಬಂದಿಲ್ಲ.
ಭಾರತ ಹಾಗೂ ಆಸ್ಟ್ರೇಲಿಯಾ ನಡುವಣ ಅಂತಿಮ ಮೂರನೇ ಏಕದಿನ ಪಂದ್ಯ ರಾಜ್ಕೋಟ್ನ ಸೌರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಂನಲ್ಲಿ ಸೆಪ್ಟೆಂಬರ್ 27 ರಂದು ನಡೆಯಲಿದೆ. ಇದಕ್ಕಾಗಿ ಟೀಮ್ ಇಂಡಿಯಾ ಆಟಗಾರರು ರಾಜ್ಕೋಟ್ಗೆ ತಲುಪಿದ್ದಾರೆ.
ವಿರಾಟ್ ಕೊಹ್ಲಿ, ಹಾರ್ದಿಕ್ ಪಾಂಡ್ಯ, ರೋಹಿತ್ ಶರ್ಮಾ ಹಾಗೂ ಇನ್ನೂ ಕೆಲ ಆಟಗಾರರು ಮೊದಲೆರಡು ಏಕದಿನ ಪಂದ್ಯದಿಂದ ವಿಶ್ರಾಂತಿ ಪಡೆದುಕೊಂಡಿದ್ದರು. ಇವರು ಮೂರನೇ ಪಂದ್ಯದಲ್ಲಿ ಆಡಲಿದ್ದಾರೆ. ಕೊಹ್ಲಿ, ಪಾಂಡ್ಯ ಸೇರಿದಂತೆ ಉಳಿದ ಆಟಗಾರರೆಲ್ಲ ತಂಡ ಸೇರಿದ್ದಾರೆ. ಹಿಟ್ಮ್ಯಾನ್ ಇನ್ನೂ ಬಂದಿಲ್ಲ ಎನ್ನಲಾಗಿದೆ. ಮೂಲಗಳ ಪ್ರಕಾರ ರೋಹಿತ್ ಇಂದು ತಂಡ ಸೇರಿಕೊಳ್ಳುತ್ತಾರಂತೆ.
ಶಾರ್ದೂಲ್ ಠಾಕೂರ್ ಅರ್ಧಂಬರ್ಧ ಆಟಗಾರ: ಮಾಜಿ ಕ್ರಿಕೆಟಿಗ ಟೀಕೆ
ಭಾರತೀಯ ಆಟಗಾರರು ಎರಡನೇ ಏಕದಿನ ಮುಗಿದ ಬಳಿಕ ಇಂದೋರ್ನಲ್ಲಿ ಹೆಚ್ಚು ವಿಶ್ರಾಂತಿಯನ್ನು ತೆಗೆದುಕೊಳ್ಳದೆ ಕೆಎಲ್ ರಾಹುಲ್, ಸೂರ್ಯಕುಮಾರ್ ಯಾದವ್, ಶ್ರೇಯಸ್ ಅಯ್ಯರ್, ರವೀಂದ್ರ ಜಡೇಜಾ, ಆರ್. ಅಶ್ವಿನ್ ಸೇರಿದಂತೆ ಇಬ್ಬರು ಆಟಗಾರರನ್ನು ಹೊರತು ಪಡಿಸಿ ಉಳಿದೆಲ್ಲ ಪ್ಲೇಯರ್ಸ್ ರಾಜ್ಕೋಟ್ಗೆ ಬಂದಿದ್ದಾರೆ. ಶುಭ್ಮನ್ ಗಿಲ್ ಹಾಗೂ ಶಾರ್ದೂಲ್ ಠಾಕೂರ್ ಪ್ರಯಾಣ ಬೆಳೆಸಿಲ್ಲ.
ಅಂತಿಮ ಏಕದಿನ ಪಂದ್ಯದಿಂದ ಗಿಲ್ ಹಾಗೂ ಠಾಕೂರ್ಗೆ ವಿಶ್ರಾಂತಿ ನೀಡಲು ಟೀಮ್ ಮ್ಯಾನೇಜ್ಮೆಂಟ್ ನಿರ್ಧರಿಸಿದೆ. ಇವರಿಬ್ಬರು ಭಾರತವು ತಮ್ಮ ಐಸಿಸಿ ಏಕದಿನ ವಿಶ್ವಕಪ್ ಪ್ರಯಾಣವನ್ನು ಪ್ರಾರಂಭಿಸುವ ಗುವಾಹಟಿಯಲ್ಲಿ ತಂಡವನ್ನು ಸೇರಿಕೊಳ್ಳಲಿದ್ದಾರೆ.
ಆಸ್ಟ್ರೇಲಿಯಾ ವಿರುದ್ಧದ ಮೂರನೇ ಮತ್ತು ಅಂತಿಮ ಏಕದಿನ ಪಂದ್ಯದಲ್ಲಿ ರೋಹಿತ್ ಶರ್ಮಾ ಭಾರತ ತಂಡದ ನಾಯಕತ್ವವನ್ನು ವಹಿಸಿಕೊಳ್ಳಲಿದ್ದಾರೆ. ಇವರ ಜೊತೆಗೆ ಹಾರ್ದಿಕ್, ಕುಲ್ದೀಪ್ ಕೂಡ ಕಮ್ಬ್ಯಾಕ್ ಮಾಡುತ್ತಾರೆ. ವಿಶ್ರಾಂತಿಯ ಕಾರಣ ಜಸ್ಪ್ರೀತ್ ಬುಮ್ರಾ ಎರಡನೇ ಏಕದಿನ ಪಂದ್ಯದಲ್ಲಿ ಆಡಲಿಲ್ಲ. ತಂಡದ ಮ್ಯಾನೇಜ್ಮೆಂಟ್ ಅವರಿಗೆ ಕುಟುಂಬವನ್ನು ನೋಡಲು ಮತ್ತು ಸ್ವಲ್ಪ ವಿರಾಮ ತೆಗೆದುಕೊಳ್ಳಲು ಅವಕಾಶ ಮಾಡಿಕೊಟ್ಟಿತು. ಬುಮ್ರಾ 3ನೇ ಏಕದಿನಕ್ಕೆ ಲಭ್ಯರಾಗಿದ್ದಾರೆ.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ