AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆಫ್ರಿಕನ್ನರ ಮಿಂಚಿನ ದಾಳಿ: ಎರಡಂಕಿ ಮೊತ್ತಕ್ಕೆ ಆಸ್ಟ್ರೇಲಿಯಾ ಆಲೌಟ್!

ಸೌತ್ ಆಫ್ರಿಕಾ ಮತ್ತು ಆಸ್ಟ್ರೇಲಿಯಾ ನಡುವಣ ಮೂರು ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ಆಸೀಸ್ ಪಡೆ 214 ರನ್​ಗಳ ಅಮೋಘ ಗೆಲುವು ದಾಖಲಿಸಿದೆ. ಇದೀಗ ಉಭಯ ತಂಡಗಳ ನಡುವೆ ದ್ವಿತೀಯ ಟೆಸ್ಟ್ ಪಂದ್ಯವು ನಡೆಯುತ್ತಿದ್ದು, ಸರಣಿ ಗೆಲುವಿನ ಆಸೆಯನ್ನು ಜೀವಂತವಾಗಿರಿಸಿಕೊಳ್ಳಬೇಕಾದರೆ ಸೌತ್ ಆಫ್ರಿಕಾ ತಂಡವು ಈ ಪಂದ್ಯದಲ್ಲಿ ಗೆಲ್ಲಲೇಬೇಕು.

ಆಫ್ರಿಕನ್ನರ ಮಿಂಚಿನ ದಾಳಿ: ಎರಡಂಕಿ ಮೊತ್ತಕ್ಕೆ ಆಸ್ಟ್ರೇಲಿಯಾ ಆಲೌಟ್!
Australia Image Credit source: GettyImages
ಝಾಹಿರ್ ಯೂಸುಫ್
|

Updated on: Oct 22, 2026 | 7:30 AM

Share

ಸೌತ್ ಆಫ್ರಿಕಾ ವಿರುದ್ಧದ 2ನೇ ಟೆಸ್ಟ್ ಪಂದ್ಯದಲ್ಲಿ ಬಲಿಷ್ಠ ಆಸ್ಟ್ರೇಲಿಯಾ ತಂಡ ಹೀನಾಯ ಬ್ಯಾಟಿಂಗ್ ಕುಸಿತ ಕಂಡಿದೆ. ಕೆಬೆರ್ಹಾದ ಸೇಂಟ್ ಜಾರ್ಜ್ ಪಾರ್ಕ್ ಮೈದಾನದಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಸೌತ್ ಆಫ್ರಿಕಾ ತಂಡವು 425/9 ರನ್​ಗಳಿಸಿ ಡಿಕ್ಲೇರ್ ಘೋಷಿಸಿತು. ಇದಕ್ಕುತ್ತರವಾಗಿ ಮೊದಲ ಇನಿಂಗ್ಸ್ ಆಡಿದ ಆಸ್ಟ್ರೇಲಿಯಾ ತಂಡವು ಆಫ್ರಿಕನ್ನರ ಮಾರಕ ದಾಳಿಗೆ ತತ್ತರಿಸಿ ಕೇವಲ 99 ರನ್​ಗಳಿಗೆ ಆಲೌಟ್ ಆಗಿದೆ.

ಬವುಮಾ ಶತಕದ ಅಬ್ಬರ: ಸೌತ್ ಆಫ್ರಿಕಾ ಬೃಹತ್ ಮೊತ್ತ:

ಈ ಪಂದ್ಯದಲ್ಲಿ ಟಾಸ್ ಗೆದ್ದ ಆಸ್ಟ್ರೇಲಿಯಾ ತಂಡದ ನಾಯಕ ಪ್ಯಾಟ್ ಕಮಿನ್ಸ್ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟಿಂಗ್ ಮಾಡಿದ್ದ ಸೌತ್ ಆಫ್ರಿಕಾ ತಂಡದ ಪರ ನಾಯಕ ಟೆಂಬಾ ಬವುಮಾ ಆಕರ್ಷಕ 179 ರನ್​ಗಳ ಜವಾಬ್ದಾರಿಯುತ ಇನಿಂಗ್ಸ್​ ಆಡಿದರು. ಈ ಇನಿಂಗ್ಸ್ ನೆರವಿನೊಂದಿಗೆ ಸೌತ್ ಆಫ್ರಿಕಾ ತಂಡವು 9 ವಿಕೆಟ್ ನಷ್ಟಕ್ಕೆ 425 ರನ್‌ಗಳ ಬೃಹತ್ ಮೊತ್ತ ಕಲೆಹಾಕಿ ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿತ್ತು.

ಆಫ್ರಿಕನ್ನರ ಮಿಂಚಿನ ದಾಳಿ: ಆಸೀಸ್ ಪಡೆ ತತ್ತರ:

ಈ ಬೃಹತ್ ಮೊತ್ತಕ್ಕೆ ಉತ್ತರವಾಗಿ ಮೊದಲ ಇನಿಂಗ್ಸ್ ಆಡಿದ ಆಸ್ಟ್ರೇಲಿಯಾ ತಂಡಕ್ಕೆ ಸೌತ್ ಆಫ್ರಿಕಾದ ಎಡಗೈ ವೇಗಿ ಮಾರ್ಕೊ ಯಾನ್ಸೆನ್ ಮಾರಕವಾಗಿ ಪರಿಣಮಿಸಿದರು. ಆರಂಭದಿಂದಲೇ ನಿಖರ ಲೈನ್ ಮತ್ತು ಲೆಂತ್ ಮೂಲಕ ದಾಳಿ ಸಂಘಟಿಸಿದ ಯಾನ್ಸೆನ್, ಕೇವಲ 33 ರನ್ ನೀಡಿ 5 ವಿಕೆಟ್ ಉರುಳಿಸಿದರು.

ಇವರಿಗೆ ಉತ್ತಮ ಸಾಥ್ ನೀಡಿದ ಕಗಿಸೊ ರಬಾಡ, ವಿಯಾನ್ ಮುಲ್ಡನ್ ತಲಾ 2 ವಿಕೆಟ್ ಕಬಳಿಸಿದರು. ಪರಿಣಾಮ ಆಸ್ಟ್ರೇಲಿಯಾ ತಂಡ ಕೇವಲ 99 ರನ್‌ಗಳಿಗೆ ಆಲೌಟ್ ಆಗಿ, 326 ರನ್‌ಗಳ ಬೃಹತ್ ಹಿನ್ನಡೆ ಅನುಭವಿಸಿತು. ಇದರ ಬೆನ್ನಲ್ಲೇ ಆಸ್ಟ್ರೇಲಿಯಾ ಮೇಲೆ ಫಾಲೋಆನ್ ಹೇರಿದ ಸೌತ್ ಆಫ್ರಿಕಾ ಆಸೀಸ್ ಪಡೆಯನ್ನು ದ್ವಿತೀಯ ಇನಿಂಗ್ಸ್ ಬ್ಯಾಟಿಂಗ್​ಗೆ ಆಹ್ವಾನಿಸಿದರು.

ಹೆಡ್ ಏಕಾಂಗಿ ಹೋರಾಟ:

ಫಾಲೋ-ಆನ್ ಪಡೆದು ದ್ವಿತೀಯ ಇನ್ನಿಂಗ್ಸ್ ಆರಂಭಿಸಿರುವ ಆಸ್ಟ್ರೇಲಿಯಾ ತಂಡವು 156 ರನ್​ಗಳಿಸುವಷ್ಟರಲ್ಲಿ 4 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದೆ. ಇದಾಗ್ಯೂ, ಸ್ಟಾರ್ ಬ್ಯಾಟರ್ ಟ್ರಾವಿಸ್ ಹೆಡ್ (87*) ಏಕಾಂಗಿ ಹೋರಾಟ ಮುಂದುವರೆಸಿದ್ದು, ಆಸ್ಟ್ರೇಲಿಯಾ ತಂಡವನ್ನು ಸೋಲಿನಿಂದ ಪಾರು ಮಾಡಲು ಕ್ರೀಸ್ ಕಚ್ಚಿ ಆಡುತ್ತಿದ್ದಾರೆ.

ಸದ್ಯ 170 ರನ್‌ಗಳ ಹಿನ್ನಡೆಯಲ್ಲಿರುವ ಆಸ್ಟ್ರೇಲಿಯಾ ತಂಡವು ಈ ಪಂದ್ಯವನ್ನು ಡ್ರಾನಲ್ಲಿ ಅಂತ್ಯಗೊಳಿಸಬೇಕಾದರೆ, 5ನೇ ದಿನದಾಟದಲ್ಲಿ ಆಲೌಟ್ ಆಗದೇ ಕ್ರೀಸ್ ಕಾಯ್ದುಕೊಳ್ಳಬೇಕಿದೆ. ಅತ್ತ ಸೌತ್ ಆಫ್ರಿಕಾ ತಂಡ ಇನ್ನುಳಿದ 6 ವಿಕೆಟ್‌ಗಳನ್ನು ಕಬಳಿಸಿದರೆ ಭರ್ಜರಿ ಗೆಲುವು ತನ್ನದಾಗಿಸಿಕೊಳ್ಳಲಿದೆ. ಹೀಗಾಗಿ, ಐದನೇ ದಿನದಾಟವು ಉಭಯ ತಂಡಗಳ ನಡುವೆ ರಣರೋಚಕ ಹೋರಾಟಕ್ಕೆ ಸಾಕ್ಷಿಯಾಗುವುದರಲ್ಲಿ ಯಾವುದೇ ಸಂಶಯವಿಲ್ಲ.

ಸೌತ್ ಆಫ್ರಿಕಾ ಪ್ಲೇಯಿಂಗ್ 11: ಐಡೆನ್ ಮಾರ್ಕ್ರಾಮ್ , ಮಾರ್ಕ್ಸ್ ಅಕೆರ್ಮನ್ , ಡೇವಿಡ್ ಬೆಡಿಂಗ್ಹ್ಯಾಮ್ , ಟೆಂಬಾ ಬವುಮಾ (ನಾಯಕ) , ಮ್ಯಾಥ್ಯೂ ಬ್ರೀಟ್ಝ್​ಕೆ , ರಯಾನ್ ರಿಕಲ್ಟನ್ (ವಿಕೆಟ್ ಕೀಪರ್ ) ವಿಯಾನ್ ಮುಲ್ಡರ್ , ಮಾರ್ಕೊ ಯಾನ್ಸೆನ್ , ಸೈಮನ್ ಹಾರ್ಮರ್ , ಕಗಿಸೊ ರಬಾಡ , ಅನ್ರಿಕ್ ನೋಕಿಯ.

ಇದನ್ನೂ ಓದಿ: ಹೊಸ ವಿಶ್ವ ದಾಖಲೆ: ಟಿ20 ಕ್ರಿಕೆಟ್​ನಲ್ಲಿ ಇತಿಹಾಸ ಬರೆದ ಸ್ಮೃತಿ-ಶಫಾಲಿ

ಆಸ್ಟ್ರೇಲಿಯಾ ಪ್ಲೇಯಿಂಗ್ 11: ನಿಕ್ ಮ್ಯಾಡಿನ್ಸನ್ , ಟ್ರಾವಿಸ್ ಹೆಡ್ , ಮಾರ್ನಸ್ ಲಾಬುಶೇನ್ , ಸ್ಟೀವ್ ಸ್ಮಿತ್ , ಮ್ಯಾಟ್ ರೆನ್ಶಾ , ಅಲೆಕ್ಸ್ ಕ್ಯಾರಿ (ವಿಕೆಟ್ ಕೀಪರ್) ಬ್ಯೂ ವೆಬ್‌ಸ್ಟರ್ , ಪ್ಯಾಟ್ ಕಮ್ಮಿನ್ಸ್ (ನಾಯಕ) , ಮಿಚೆಲ್ ಸ್ಟಾರ್ಕ್ , ಜೋಶ್ ಹೇಝಲ್​ವುಡ್ , ಸ್ಕಾಟ್ ಬೋಲ್ಯಾಂಡ್.

Follow Us
ಝಾಹಿರ್ ಯೂಸುಫ್
ಝಾಹಿರ್ ಯೂಸುಫ್

ಟಿವಿ9 ಡಿಜಿಟಲ್ ಮುಖ್ಯ ಉಪ ಸಂಪಾದಕ. 10 ವರ್ಷಗಳಿಂದ ಕನ್ನಡ ಡಿಜಿಟಲ್​ ಮಾಧ್ಯಮದಲ್ಲಿ ಪತ್ರಿಕಾ ವೃತ್ತಿ. ಕ್ರೀಡಾ ಸುದ್ದಿ, ದೀರ್ಘ ಲೇಖನ, ವಿಶ್ಲೇಷಣೆ, ಹೀಗೆ ಎಲ್ಲ ತರಹದ ಬರಹದಲ್ಲೂ ಅನುಭವ. ಪ್ರಸ್ತುತ ವಿದ್ಯಮಾನಗಳ ವ್ಯಾಖ್ಯಾನ, ಚರ್ಚೆಯಲ್ಲಿ ನೈಪುಣ್ಯ. ಈ ಹಿಂದೆ ಉದಯವಾಣಿ, ನ್ಯೂಸ್ 18 ಕನ್ನಡ ಡಿಜಿಟಲ್​​ನಲ್ಲಿ ಕೆಲಸ ಮಾಡಿದ ಅನುಭವ. ಆಸಕ್ತಿದಾಯಕ ವಿಷಯ ಕ್ರೀಡೆ, ಸಿನಿಮಾ ಮತ್ತು ರಾಜಕೀಯ.

Read More