T20 World Cup 2024: ಉಗ್ರರ ದಾಳಿ ಭೀತಿ ಬಗ್ಗೆ ರೋಹಿತ್ ಶರ್ಮಾ ಹೇಳಿದ್ದೇನು?
T20 World Cup 2024: ಟಿ20 ವಿಶ್ವಕಪ್ನಲ್ಲಿ ಟೀಮ್ ಇಂಡಿಯಾ ಜೂನ್ 5 ರಂದು ಅಭಿಯಾನ ಆರಂಭಿಸಲಿದೆ. ಬುಧವಾರ ನ್ಯೂಯಾರ್ಕ್ನಲ್ಲಿ ನಡೆಯಲಿರುವ ಈ ಪಂದ್ಯದಲ್ಲಿ ಭಾರತ ತಂಡವು ಐರ್ಲೆಂಡ್ ತಂಡವನ್ನು ಎದುರಿಸಲಿದೆ. ಹಾಗೆಯೇ ಜೂನ್ 9 ರಂದು ನಡೆಯಲಿರುವ ಹೈವೋಲ್ಟೆಜ್ ಪಂದ್ಯದಲ್ಲಿ ಭಾರತ ಮತ್ತು ಪಾಕಿಸ್ತಾನ್ ತಂಡಗಳು ಸೆಣಸಲಿದೆ.
T20 World Cup 2024: ಟಿ20 ವಿಶ್ವಕಪ್ ಗೆಲ್ಲುವ ಇರಾದೆಯೊಂದಿಗೆ ಟೀಮ್ ಇಂಡಿಯಾ ಇಂದು (ಜೂ.5) ವಿಶ್ವಕಪ್ ಅಭಿಯಾನ ಆರಂಭಿಸಲಿದೆ. ನ್ಯೂಯಾರ್ಕ್ನಲ್ಲಿ ನಡೆಯಲಿರುವ ಟಿ20 ವಿಶ್ವಕಪ್ನ 8ನೇ ಪಂದ್ಯದಲ್ಲಿ ಭಾರತ ಮತ್ತು ಐರ್ಲೆಂಡ್ ತಂಡಗಳು ಸೆಣಸಲಿದೆ. ಈ ಪಂದ್ಯಕ್ಕೂ ಮುನ್ನ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಪತ್ರಿಕಾಗೋಷ್ಠಿಯಲ್ಲಿ ಕಾಣಿಸಿಕೊಂಡಿದ್ದರು. ಈ ವೇಳೆ ಹಿಟ್ಮ್ಯಾನ್ ಮಾತನಾಡಿದ ಪ್ರಮುಖ ಅಂಶಗಳ ವಿವರಗಳು ಈ ಕೆಳಗಿನಂತಿದೆ…
ಉಗ್ರರ ದಾಳಿ ಭೀತಿ ಮತ್ತು ಸುರಕ್ಷತೆ ಬಗ್ಗೆ ನಿಮ್ಮ ಅನಿಸಿಕೆಯೇನು?
ಭಾರತದ ಪಂದ್ಯಗಳಿಗೆ ಉಗ್ರರ ಬೆದರಿಕೆ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ರೋಹಿತ್ ಶರ್ಮಾ, ನಮಗೆ ಆಟಗಾರರ ಸುರಕ್ಷತೆ ಹೇಗೆ ಮುಖ್ಯವೊ, ಹಾಗೆಯೇ ಅಭಿಮಾನಿಗಳ ಸುರಕ್ಷತೆ ಸಹ ಮುಖ್ಯ. ಹೀಗಾಗಿ ಮೈದಾನದ ಒಳಗೆ ಯಾರು ಸಹ ಬರಬಾರದು. ಅಲ್ಲದೆ ಆಯಾ ದೇಶದ ನಿಯಮಗಳನ್ನು ಅನುಸರಿಸುವುದು ಬಹಳ ಮುಖ್ಯ ಎಂದು ತಿಳಿಸಿದರು.
ಭಾರತ-ಪಾಕಿಸ್ತಾನ ನಡುವಿನ ಪಂದ್ಯಕ್ಕೆ ಉಗ್ರರ ದಾಳಿ ಭೀತಿ ಎದುರಾಗಿದ್ದು, ನ್ಯೂಯಾರ್ಕ್ ಪೊಲೀಸ್ ಇಲಾಖೆ ಬಿಗಿ ಭದ್ರತೆ ಕೈಗೊಂಡಿದೆ. ಪಂದ್ಯಕ್ಕಾಗಿ ಸ್ನೈಪರ್‌ಗಳನ್ನು ಸಹ ನಿಯೋಜಿಸಲಾಗಿದೆ. ಆದರೆ ಭಾರತ ತಂಡದ ಅಭ್ಯಾಸ ಪಂದ್ಯದ ವೇಳೆ ಅಭಿಮಾನಿಯೊಬ್ಬರು ಮೈದಾನಕ್ಕೆ ನುಗ್ಗಿದ್ದರು. ಅಲ್ಲದೆ ಆತನನ್ನು ನ್ಯೂಯಾರ್ಕ್ ಪೊಲೀಸರು ಬಂಧಿಸಿದ್ದರು. ಹೀಗಾಗಿಯೇ ಎಲ್ಲರೂ ಆಯಾ ದೇಶದ ನಿಯಮಗಳನ್ನು ಅನುಸರಿಸಬೇಕೆಂದು, ಈ ಮೂಲಕ ಸುರಕ್ಷತೆಗೆ ಯಾವುದೇ ಭಂಗ ತರದಂತೆ ಅಭಿಮಾನಿಗಳಲ್ಲಿ ರೋಹಿತ್ ಶರ್ಮಾ ಮನವಿ ಮಾಡಿದ್ದಾರೆ.
ಸ್ಪಿನ್ ಸಂಯೋಜನೆ ಹೇಗಿರುತ್ತದೆ?
ಐರ್ಲೆಂಡ್ ವಿರುದ್ಧ ಯಾವ ಸ್ಪಿನ್ನರ್‌ಗಳನ್ನು ಕಣಕ್ಕಿಳಿಸುತ್ತೀರಿ ಎಂದು ಕೇಳಿದಾಗ, ಅದು ನನಗೆ ಗೊತ್ತಿಲ್ಲ. ನಾವು ನಾಲ್ಕು ಸ್ಪಿನ್ನರ್‌ಗಳಿಗೂ ಅವಕಾಶ ನೀಡಬಹುದು ಎಂದರು. ಏಕೆಂದರೆ ಬಾಂಗ್ಲಾದೇಶದ ವಿರುದ್ಧ ಎಲ್ಲಾ ಮೂರು ಸ್ಪಿನ್ನರ್‌ಗಳು ಉತ್ತಮವಾಗಿ ಬೌಲಿಂಗ್ ಮಾಡಿದ್ದಾರೆ. ಹೀಗಾಗಿ ಐರ್ಲೆಂಡ್ ವಿರುದ್ಧ ಎಷ್ಟು ಮಂದಿ ಸ್ಪಿ್ನರ್ ಆಡಲಿದ್ದಾರೆ ಎಂಬುದು ಇನ್ನೂ ಕೂಡ ನಿರ್ಧಾರವಾಗಿಲ್ಲ ಎಂದರು.
ನ್ಯೂಯಾರ್ಕ್ನಲ್ಲಿ ಎಷ್ಟು ರನ್ಗಳಿಸಬಹುದು?
ನ್ಯೂಯಾರ್ಕ್ ಪಿಚ್‌ನಲ್ಲಿ 140-150 ರನ್ಗಳಿಸುವುದು ಸಹ ಉತ್ತಮ ಸ್ಕೋರ್ ಆಗಲಿದೆ ಎಂದು ರೋಹಿತ್ ಶರ್ಮಾ ಅಭಿಪ್ರಾಯಪಟ್ಟರು. ಇದಾಗ್ಯೂ ನಮ್ಮ ಗಮನವು ಪಿಚ್ ಮೇಲೆ ಅಲ್ಲ. ಬ್ಯಾಟಿಂಗ್, ಬೌಲಿಂಗ್ ಮತ್ತು ಫೀಲ್ಡಿಂಗ್‌ನಲ್ಲಿ ಉತ್ತಮ ಪ್ರದರ್ಶನ ನೀಡುವುದರ ಮೇಲೆ ಆಗಿದೆ. ಹೀಗಾಗಿ ಪರಿಸ್ಥಿತಿಗೆ ಅನುಗುಣವಾಗಿ ಆಡಲಿದ್ದೇವೆ ಎಂದರು.
ನೀವು ಸೌತ್ ಆಫ್ರಿಕಾ-ಶ್ರೀಲಂಕಾ ಪಂದ್ಯವನ್ನು ನೋಡಿದ್ದೀರಾ?
ಈ ಪ್ರಶ್ನೆಗೆ ರೋಹಿತ್ ಶರ್ಮಾ ಇಲ್ಲ, ಪಂದ್ಯವನ್ನು ವೀಕ್ಷಿಸಲು ಸಾಧ್ಯವಾಗಿಲ್ಲ ಎಂದು ಉತ್ತರಿಸಿದ್ದಾರೆ. ಸೋಮವಾರವಷ್ಟೇ ನನ್ನ ಫ್ಯಾಮಿಲಿ ನ್ಯೂಯಾರ್ಕ್ ತಲುಪಿದೆ. ಹೀಗಾಗಿ ಪಂದ್ಯ ವೀಕ್ಷಿಸಲು ಸಾಧ್ಯವಾಗಿರಲಿಲ್ಲ ಎಂದರು.
ಕೋಚ್ ರಾಹುಲ್ ದ್ರಾವಿಡ್ ಅವರ ಕೊನೆಯ ಟೂರ್ನಿಯಲ್ಲವೇ?
ಈ ಬಾರಿಯ ಟಿ20 ವಿಶ್ವಕಪ್ ಟೀಮ್ ಇಂಡಿಯಾದ ಕೋಚ್ ರಾಹುಲ್ ದ್ರಾವಿಡ್ ಅವರ ಕೊನೆಯ ಟೂರ್ನಿಯಲ್ಲವೇ? ಎಂಬ ಪ್ರಶ್ನೆಗೆ ರೋಹಿತ್ ಶರ್ಮಾ ಭಾವುಕರಾದರು. ರಾಹುಲ್ ದ್ರಾವಿಡ್ ಅವರನ್ನು ಟೀಮ್ ಇಂಡಿಯಾದ ಮುಖ್ಯ ಕೋಚ್ ಆಗಿ ಉಳಿಯುವಂತೆ ಕೇಳಿಕೊಂಡರೂ ಅವರು ಒಪ್ಪಲಿಲ್ಲ. ಇದಕ್ಕಿಂತ ಹೆಚ್ಚಿಗೆ ಈಗ ಏನನ್ನೂ ಹೇಳಲು ಸಾಧ್ಯವಿಲ್ಲ ಎಂದರು.
ಇದನ್ನೂ ಓದಿ: Yusuf Pathan: ಕಾಂಗ್ರೆಸ್ ಅಭ್ಯರ್ಥಿ ವಿರುದ್ಧ ಭರ್ಜರಿ ಜಯ ಸಾಧಿಸಿದ ಯೂಸುಫ್ ಪಠಾಣ್
ಅಲ್ಲದೆ ಈ ಬಾರಿಯ ಟಿ20 ವಿಶ್ವಕಪ್ನಲ್ಲಿ ಟೀಮ್ ಇಂಡಿಯಾ ಭರ್ಜರಿ ಪ್ರದರ್ಶನ ನೀಡುವ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ. ಈ ಮೂಲಕ ಭಾರತ ತಂಡದ ನಾಯಕ ರೋಹಿತ್ ಶರ್ಮಾ ಟ್ರೋಫಿ ಎತ್ತಿ ಹಿಡಿಯುವ ಆತ್ಮ ವಿಶ್ವಾಸದಲ್ಲಿದ್ದಾರೆ.