
ಭಾರತೀಯ ಕ್ರಿಕೆಟ್ನಲ್ಲಿ (Team India) ಹೊಸ ಯುಗ ಆರಂಭವಾಗುತ್ತಿದೆ. ಹೊಸ ಕೋಚ್, ನೂತನ ನಾಯಕನನ್ನು ಆಯ್ಕೆ ಮಾಡಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಮಹತ್ವದ ಹೆಜ್ಜೆ ಇಟ್ಟಿದ್ದು ಪ್ರಯೋಗಕ್ಕೆ ಇಳಿದಂತೆ ಕಾಣುತ್ತಿದೆ. ಹೌದು, ಏಕದಿನ ಕ್ರಿಕೆಟ್ ತಂಡದ ನಾಯಕನಾಗಿ ಶೇ. 70ಕ್ಕಿಂತಲೂ ಹೆಚ್ಚಿನ ಗೆಲುವಿನ ಸರಾಸರಿ ಹೊಂದಿದ್ದರೂ ಕೂಡ ವಿರಾಟ್ ಕೊಹ್ಲಿ (Virat Kohli) ಅವರನ್ನು ನಾಯಕತ್ವದಿಂದ ಕೈಬಿಟ್ಟು ರೋಹಿತ್ ಶರ್ಮಾ (Rohit Sharma) ಅವರಿಗೆ ಈ ಜವಾಬ್ದಾರಿ ನೀಡಲಾಗಿದೆ. ಟಿ20 ನಾಯಕನಾಗಿ ಆಡಿದ ಮೊದಲ ಸರಣಿಯಲ್ಲೇ ಕ್ಲೀನ್ ಸ್ವೀಪ್ ಸಾಧನೆ ಮಾಡದ ರೋಹಿತ್ ಶರ್ಮಾ ಇದೀಗ ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿ (India vs South Africa) ನಡೆಯಲಿರುವ 3 ಪಂದ್ಯಗಳ ಏಕದಿನ ಕ್ರಿಕೆಟ್ ಸರಣಿಯಲ್ಲಿ ಹೇಗೆ ಕಾರ್ಯನಿರ್ವಹಿಸುತ್ತಾರೆ ಎಂಬುದು ಕುತೂಹಲ ಕೆರಳಿಸಿದೆ. ಕೊಹ್ಲಿಗೆ ಏಕದಿನ ನಾಯಕತ್ವದಿಂದ ಕೆಳಗಿಳಿಯಲು ಇಷ್ಟವಿಲ್ಲದಿದ್ದರೂ ಬಿಸಿಸಿಐ ಅವರನ್ನು ವಜಾಗೊಳಿಸಿದೆ ಎಂಬ ಮಾತುಗಳು ಕೂಡ ಕೇಳಿಬರುತ್ತಿದೆ.
ಇದರ ನಡುವೆ ನೂತನ ನಾಯಕನಾಗಿ ಆಯ್ಕೆಯಾಗಿರುವ ರೋಹಿತ್ ಶರ್ಮಾ ಅವರಿಗೆ ಸಂಬಳ ಎಷ್ಟು ಎಂದು ಅನೇಕರು ಹುಡುಕಾಡುತ್ತಿದ್ದಾರೆ. ಇದಕ್ಕೆ ಉತ್ತರ ಇಲ್ಲಿದೆ ನೋಡಿ. ಖಾಸಗಿ ಪತ್ರಿಕೆಯೊಂದು ಮಾಡಿರುವ ವರದಿಯ ಪ್ರಕಾರ, ಬಿಸಿಸಿಐನಿಂದ ರೋಹಿತ್ ಶರ್ಮಾ ಅವರ ಸ್ಯಾಲರಿಯಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ. ವಿರಾಟ್ ಕೊಹ್ಲಿ ಮತ್ತು ವೇಗಿ ಜಸ್ಪ್ರೀತ್ ಬುಮ್ರಾ ಜೊತೆಗೆ A+ ಒಪ್ಪಂದವನ್ನು ಹೊಂದುವ ಮೂಲಕ ಅವರು ವಾರ್ಷಿಕವಾಗಿ 7 ಕೋಟಿ ರೂಪಾಯಿ ಮೊತ್ತವನ್ನು ಪಡೆಯುತ್ತಾರೆ. ಹೀಗಾಗಿ ನಾಯಕನಾಗಿ ಯಾವುದೇ ಇತರೆ ಹಣವನ್ನು ಇವರು ಪಡೆಯುವುದಿಲ್ಲ ಎಂದು ಹೇಳಲಾಗಿದೆ.
ಸೀಮಿತ ಓವರ್ಗಳ ನಾಯಕತ್ವ ಪಡೆದುಕೊಂಡ ಬಗ್ಗೆ ರೋಹಿತ್ ಶರ್ಮಾ ಪ್ರತಿಕ್ರಿಯೆ ನೀಡಿದ್ದು, ವಿರಾಟ್ ಕೊಹ್ಲಿ ಈಗಲೂ ನಮ್ಮ ನಾಯಕನಾಗಿದ್ದಾರೆ. ಅವರ ಅನುಭವ, ಬ್ಯಾಟಿಂಗ್ ನಮಗೆ ಅತೀ ಅಗತ್ಯ. ಅದು ಯಾವುದನ್ನೂ ಕಳೆದುಕೊಳ್ಳಲಾರೆವು ಎಂದು ಕೊಹ್ಲಿಯನ್ನು ಹಾಡಿಹೊಗಳಿದ್ದಾರೆ. “ಕೊಹ್ಲಿ ಈಗಲೂ ನಮ್ಮ ನಾಯಕ. ಎಷ್ಟೋ ಸಂದರ್ಭಗಳಲ್ಲಿ ಅವರು ತಂಡದ ಗೆಲುವಿಗೆ ಕಾರಣರಾಗಿದ್ದಾರೆ. ತಂಡದಲ್ಲಿ ಅವರ ಉಪಸ್ಥಿತಿ ತುಂಬಾ ಮುಖ್ಯ. ಕೊಹ್ಲಿಯಂತಹ ಆಟಗಾರ ತಂಡಕ್ಕೆ ಯಾವತ್ತೂ ಮುಖ್ಯ”, ಎಂದು ನೂತನ ನಾಯಕ ರೋಹಿತ್ ಹೇಳಿದ್ದಾರೆ.
ಇನ್ನು ವಿರಾಟ್ ಕೊಹ್ಲಿಯನ್ನು ನಾಯಕತ್ವದಿಂದ ಕೆಳಗಿಳಿಸಿದ ಬಗ್ಗೆ ಮಾತನಾಡಿದ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ, “ವಿರಾಟ್ ಕೊಹ್ಲಿ ಅವರು ಇಂಗ್ಲೆಂಡ್ ಪ್ರವಾಸದ ಬಳಿಕ ಟಿ20 ತಂಡದ ನಾಯಕತ್ವ ತ್ಯಜಿಸುವ ನಿರ್ಧಾರಕ್ಕೆ ಬಂದಿದ್ದರು. ಆ ನಿರ್ಧಾರ ತೆಗೆದುಕೊಳ್ಳಬೇಡಿ ಎಂದು ಬಿಸಿಸಿಐ ಕೊಹ್ಲಿಗೆ ಮನವಿ ಮಾಡಿತ್ತು. ಆದರೆ, ಕೊಹ್ಲಿ ಇದಕ್ಕೆ ಕಿವಿಗೊಡದೆ ಟಿ20 ಟೀಮ್ನ ನಾಯಕತ್ವ ಬಿಟ್ಟು ಕೆಳಗಿಳಿಯುವ ನಿರ್ಧಾರ ಘೋಷಿಸಿದರು. ಸೀಮಿತ ಓವರ್ಗಳ ಎರಡು ಮಾದರಿ ಕ್ರಿಕೆಟ್ಗೆ ಇಬ್ಬರಿಬ್ಬರು ನಾಯಕರು ಇರುವುದು ಸಮಂಜಸ ಎನಿಸುವುದಿಲ್ಲ. ಟಿ20 ಮತ್ತು ಏಕದಿನಕ್ಕೆ ಎರಡಕ್ಕೂ ಒಬ್ಬರೇ ನಾಯಕರಿರಬೇಕು. ಹೀಗಾಗಿ, ಟಿ20 ಜೊತೆಗೆ ಓಡಿಐ ತಂಡದ ನಾಯಕತ್ವ ಎರಡನ್ನೂ ರೋಹಿತ್ ಶರ್ಮಾ ಅವರೊಬ್ಬರಿಗೇ ನೀಡಬೇಕೆಂದು ಬಿಸಿಸಿಐ ಮತ್ತು ಆಯ್ಕೆಗಾರರ ಸಮಿತಿ ಒಮ್ಮತದಿಂದ ನಿರ್ಧಾರ ತೆಗೆದುಕೊಂಡಿತು”, ಎಂದು ಗಂಗೂಲಿ ತಿಳಿಸಿದ್ಧಾರೆ.
(Rohit Sharma remuneration after BCCI chosen as Team India Captain Here is the Salary of India Captain)