ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ (Rohit Sharma) ಸುದೀರ್ಘ ರಜೆಯ ಬಳಿಕ ತವರಿಗೆ ಮರಳಿದ್ದಾರೆ. 2023ರ ಏಕದಿನ ವಿಶ್ವಕಪ್‌ನ ಫೈನಲ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧದ ಸೋಲಿನ ನಂತರ ರೋಹಿತ್ ಸಾರ್ವಜನಿಕರ ಮುಂದೆ ಕಾಣಿಸಿಕೊಂಡಿರಲಿಲ್ಲ. ವಿಶ್ವಕಪ್ ನವೆಂಬರ್ 19 ರಂದು ಕೊನೆಗೊಂಡಿತ್ತು ಮತ್ತು ಅದರ ನಂತರ ಹಿಟ್ಮ್ಯಾನ್ ತಮ್ಮ ಕುಟುಂಬದೊಂದಿಗೆ ವಿದೇಶಿ ಪ್ರವಾಸ ತೆರಳಿದ್ದರು. ಇದೀಗ ರೋಹಿತ್ ಭಾರತಕ್ಕೆ ಬಂದಿದ್ದಾರೆ.
ರೋಹಿತ್ ಶರ್ಮಾ ಮುಂಬೈ ವಿಮಾನ ನಿಲ್ದಾಣದಲ್ಲಿ ಪತ್ನಿ ರಿತಿಕಾ ಸಜ್ದೇಹ್ ಮತ್ತು ಮಗಳು ಸಮೈರಾ ಅವರೊಂದಿಗೆ ಕಾಣಿಸಿಕೊಂಡಿದ್ದಾರೆ. ಏರ್ಪೋರ್ಟ್ನಲ್ಲಿ ಅವರ ವಿಡಿಯೋಗಳು ಮತ್ತು ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿವೆ. ಅಭಿಮಾನಿಗಳು ರೋಹಿತ್ ಶರ್ಮಾ ಅವರನ್ನು ವಿಮಾನ ನಿಲ್ದಾಣದಲ್ಲಿ ಸ್ವಾಗತಿಸಿದರು. ರೋಹಿತ್ ಮೊಗದಲ್ಲಿ ದೊಡ್ಡ ನಗು ಇರಲಿಲ್ಲ. ವಿಶ್ವಕಪ್ ಸೋಲಿನಿಂದ ಹೊರಬಂದಂತೆ ಕಾಣುತ್ತಿಲ್ಲ. ಇದನ್ನು ಕಂಡು ಅಭಿಮಾನಿಗಳು ಕೂಡ ಬೇಸರಗೊಂಡಿದ್ದಾರೆ.
IPL 2024: ಐಪಿಎಲ್ ಆಡದಂತೆ ಸ್ಟಾರ್ ಆಟಗಾರನಿಗೆ ಸೂಚನೆ..!
ವಿಶ್ವಕಪ್ ಮುಗಿದ ತಕ್ಷಣ ರೋಹಿತ್ ಶರ್ಮಾ ಅವರು ತಮ್ಮ ಕುಟುಂಬದೊಂದಿಗೆ ಲಂಡನ್‌ಗೆ ತೆರಳಿದ್ದರು. ರೋಹಿತ್ ಹೊರತುಪಡಿಸಿ, ವಿರಾಟ್ ಕೊಹ್ಲಿ-ಅನುಷ್ಕಾ ಶರ್ಮಾ ಮತ್ತು ರವೀಂದ್ರ ಜಡೇಜಾ ಸೇರಿದಂತೆ ಇತರ ಆಟಗಾರರು ತಮ್ಮ ವಿದೇಶಿ ಪ್ರವಾಸಕ್ಕೆ ಹೋಗಿದ್ದರು.
ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ದಕ್ಷಿಣ ಆಫ್ರಿಕಾ ಪ್ರವಾಸದಿಂದ ವಿರಾಮ ತೆಗೆದುಕೊಂಡಿದ್ದಾರೆ. ಅವರು ಕೇವಲ ಟೆಸ್ಟ್ ಸರಣಿಯ ಭಾಗವಾಗಲಿದ್ದಾರೆ. ಏಕದಿನ ಮತ್ತು ಟಿ-20 ನಲ್ಲಿ ಆಡದಿರಲು ನಿರ್ಧರಿಸಿದ್ದಾರೆ. ರೋಹಿತ್ ಜೊತೆಗೆ, ವಿರಾಟ್ ಕೊಹ್ಲಿ ಕೂಡ ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿ ವೈಟ್ ಬಾಲ್ ಸರಣಿಯ ಭಾಗವಾಗುವುದಿಲ್ಲ.
ರೋಹಿತ್ ಶರ್ಮಾ ನಾಯಕತ್ವದಲ್ಲಿ ಟೀಮ್ ಇಂಡಿಯಾ ವಿಶ್ವಕಪ್‌ನಲ್ಲಿ ಅದ್ಭುತ ಪ್ರದರ್ಶನ ನೀಡಿತು. ಸತತ 10 ಪಂದ್ಯಗಳನ್ನು ಗೆದ್ದಿದೆ. ಆದರೆ, ಫೈನಲ್ ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಸೋತಿದ್ದು, ಇದರೊಂದಿಗೆ ವಿಶ್ವಕಪ್ ಗೆಲ್ಲುವ ಕನಸು ಕೂಡ ಭಗ್ನಗೊಂಡಿತು. ವಿಶ್ವಕಪ್ ಗೆಲ್ಲಲು ಇದಕ್ಕಿಂತ ಉತ್ತಮ ಅವಕಾಶ ಮತ್ತೊಂದಿಲ್ಲ ಎಂದು ಅಭಿಮಾನಿಗಳು ನಿರೀಕ್ಷಿಸಿದ್ದರು. ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಅವರು ಮುಂದಿನ ಏಕದಿನ ವಿಶ್ವಕಪ್ ಆಡುವುದು ಅನುಮಾನ. ಟಿ20 ವಿಶ್ವಕಪ್‌ನಲ್ಲಿ ರೋಹಿತ್ ನಾಯಕನಾಗಿ ಮುನ್ನಡೆಸಲಿದ್ದಾರೆ ಎನ್ನಲಾಗಿದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ