Rohit Sharma: ರೋಚಕ ಗೆಲುವಿನ ಬಳಿಕ ರೋಹಿತ್ ಶರ್ಮಾ ಹೊಗಳಿದ್ದು ಮಾತ್ರ ಈ ಒಬ್ಬ ಆಟಗಾರನನ್ನು

| Updated By: Vinay Bhat

Updated on: Feb 17, 2022 | 8:58 AM

IND vs WI T20, Ravi Bishnoi: ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಟಿ20 ಪಂದ್ಯ ಮುಗಿದ ಬಳಿಕ ಮಾತನಾಡಿದ ನಾಯಕ ರೋಹಿತ್ ಶರ್ಮಾ, ಪ್ರಮುಖವಾಗಿ ಪದಾರ್ಪಣೆ ಪಂದ್ಯದಲ್ಲೇ ಮಿಂಚಿನ ಪ್ರದರ್ಶನ ತೋರಿದ ರವಿ ಬಿಷ್ಟೋಯ್ ಅವರನ್ನು ಹಾಡಿಹೊಗಳಿದ್ದಾರೆ.

Rohit Sharma: ರೋಚಕ ಗೆಲುವಿನ ಬಳಿಕ ರೋಹಿತ್ ಶರ್ಮಾ ಹೊಗಳಿದ್ದು ಮಾತ್ರ ಈ ಒಬ್ಬ ಆಟಗಾರನನ್ನು
Rohit Sharma IND vs WI 1st T20
Follow us on

ಕೋಲ್ಕತ್ತಾದ ಈಡನ್ ಗಾರ್ಡನ್ಸ್​​ ಸ್ಟೇಡಿಯಂನಲ್ಲಿ ನಡೆದ ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಭಾರತ (India vs West Indies) ರೋಚಕ ಗೆಲುವು ಸಾಧಿಸಿತು. ಮೊದಲು ಟಾಸ್ ಸೋತು ಬ್ಯಾಟಿಂಗ್ ಮಾಡಿದ ಕೆರಿಬಿಯನ್ನರು ಭಾರತದ ಯುವ ಸ್ಪಿನ್ನರ್ ರವಿ ಬಿಷ್ಣೋಯಿ – Ravi Bishnoi (17ಕ್ಕೆ 2) ಮಾರಕ ದಾಳಿ ನಡುವೆಯೂ ನಿಕೋಲಸ್ ಪೂರನ್ (61 ರನ್, 43 ಎಸೆತ, 4 ಬೌಂಡರಿ, 5 ಸಿಕ್ಸರ್) ಅಬ್ಬರದ ಬ್ಯಾಟಿಂಗ್ ನೆರವಿನಿಂದ 7 ವಿಕೆಟ್‌ಗೆ 157 ರನ್ ಗಳಿಸಿತು. ಬಳಿಕ ಭಾರತ ತಂಡ ನಾಯಕ ರೋಹಿತ್ ಶರ್ಮ (Rohit Sharma) (40 ರನ್, 19 ಎಸೆತ, 4 ಬೌಂಡರಿ, 3 ಸಿಕ್ಸರ್) ಬಿರುಸಿನ ಬ್ಯಾಟಿಂಗ್ ನೆರವಿನಿಂದ 18.5 ಓವರ್‌ಗಳಲ್ಲಿ 4 ವಿಕೆಟ್‌ಗೆ 162 ರನ್ ಬಾರಿಸಿ ಗೆಲುವು ನಗೆ ಬೀರಿತು. ಪಂದ್ಯ ಮುಗಿದ ಬಳಿಕ ಮಾತನಾಡಿದ ನಾಯಕ ರೋಹಿತ್ ಶರ್ಮಾ ಏನು ಹೇಳಿದರು ಎಂಬುದನ್ನು ಕೇಳಿ.

“ಈ ಪಂದ್ಯವನ್ನು ನಾವು ಇನ್ನೂ ಕೊಂಚ ಬೇಗ ಮುಗಿಸಬೇಕಿತ್ತು. ಆದರೆ, ಗೆದ್ದಿರುವುದು ಖುಷಿ ನೀಡಿದೆ, ಈ ಗೆಲುವಿನಿಂದ ನಮ್ಮಲ್ಲಿನ ಆತ್ಮವಿಶ್ವಾಸ ಮತ್ತಷ್ಟು ಹೆಚ್ಚಿದೆ. ಎದುರಾಳಿಯನ್ನು ಸಾಧಾರಣ ಮೊತ್ತಕ್ಕೆ ಕಟ್ಟುಹಾಕುವಲ್ಲಿ ನಮ್ಮ ಬೌಲರ್​ಗಳು ಯಶಸ್ವಿಯಾದರು. ಬ್ಯಾಟಿಂಗ್​ನಲ್ಲಿ ನಾವು ನಿರೀಕ್ಷೆಗೆ ತಕ್ಕ ಪ್ರದರ್ಶನ ನೀಡಲಿಲ್ಲ. ಇದರಿಂದ ಕಲಿಯಬೇಕಾಗಿರುವುದು ಸಾಕಷ್ಟಿದೆ,” ಎಂದು ರೋಹಿತ್ ಶರ್ಮಾ ಹೇಳಿದ್ದಾರೆ.

ಪ್ರಮುಖವಾಗಿ ಪದಾರ್ಪಣೆ ಪಂದ್ಯದಲ್ಲೇ ಮಿಂಚಿನ ಪ್ರದರ್ಶನ ತೋರಿದ ರವಿ ಬಿಷ್ಟೋಯ್ ಅವರನ್ನು ಹಾಡಿಹೊಗಳಿರುವ ಹಿಟ್​ಮ್ಯಾನ್, “ರವಿ ಬಿಷ್ಟೋಯ್ ಒಬ್ಬ ಪ್ರತಿಭಾವಂತ ಆಟಗಾರ. ಅದಕ್ಕಾಗಿಯೆ ಅವರನ್ನ ಡ್ರಾಫ್ಟ್ ಮಾಡದೆ ನೇರವಾಗಿ ಈ ಪಂದ್ಯದಲ್ಲಿ ಕಣಕ್ಕಿಳಿಸಿದೆವು. ಅವರ ಬೌಲಿಂಗ್​ನಲ್ಲಿ ಸಾಕಷ್ಟು ವಿಭಿನ್ನತೆಯಿದೆ. ಜೊತೆಗೆ ಅತ್ಯುತ್ತಮ ಕೌಶಲ್ಯವನ್ನು ಹೊಂದಿದ್ದಾರೆ. ಬಿಷ್ಟೋಯ್ ಪಂದ್ಯದ ಯಾವುದೇ ಹಂತದಲ್ಲಿ ಬೌಲಿಂಗ್ ಮಾಡುವ ಸಾಮರ್ಥ್ಯ ಹೊಂದಿದ್ದಾರೆ. ಹೀಗಾಗಿ ನಮಗೆ ಇತರೆ ಬೌಲರ್‌ಗಳನ್ನು ರೋಟೆಟ್ ಮಾಡಲು ಆಯ್ಕೆಗಳು ಸಿಗುತ್ತದೆ. ಭಾರತಕ್ಕಾಗಿ ಅವರ ಮೊದಲ ಪಂದ್ಯವನ್ನು ಆಡಿದ್ದು ಸಂತಸ ನೀಡಿದೆ, ಅವರು ಉಜ್ವಲ ಭವಿಷ್ಯವನ್ನು ಹೊಂದಿದ್ದಾರೆ,” ಎಂದು ರೋಹಿತ್ ಹೇಳಿದ್ದಾರೆ.

ಇನ್ನು ಶ್ರೇಯಸ್ ಅಯ್ಯರ್ ಅವರನ್ನು ಆಡಿಸದೆ ಬಗ್ಗೆ ಮೌನ ಮುರಿದ ರೋಹಿತ್, “ಶ್ರೇಯಸ್ ಅಯ್ಯರ್ ಅವರಂತಹ ಅನುಭವಿ ಆಟಗಾರ ಆಡುವ ಹನ್ನೊಂದರ ಬಳಗದಲ್ಲಿ ಇಲ್ಲದಿರುವುದು ತುಂಬಾ ಕಷ್ಟಕರವಾಗಿತ್ತು. ಆದರೆ ನಮಗೆ ಮಧ್ಯದಲ್ಲಿ ಬೌಲ್ ಮಾಡಲು ಒಬ್ಬ ಆಟಗಾರನ ಅವಶ್ಯಕತೆಯಿದೆ. ಅದಕ್ಕಾಗಿಯೇ ನಾವು ಅವನನ್ನು ಪಂದ್ಯಕ್ಕೆ ಸೇರಿಸಲು ಸಾಧ್ಯವಾಗಲಿಲ್ಲ. ವಿಶ್ವಕಪ್ ದೃಷ್ಟಿಯಿಂದ ನಾವು ಈಗಿನಿಂದಲೇ ಕೆಲವು ಮಹತ್ವದ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಿದೆ. ಶ್ರೇಯಸ್​ಗೂ ಈ ಬಗ್ಗೆ ನಾವು ಸ್ಪಷ್ಟ ಪಡಿಸಿದ್ದೇವೆ. ಅವರು ಇದನ್ನು ಅರ್ಥ ಮಾಡಿಕೊಳ್ಳುತ್ತಾರೆ.”

“ಸಾಕಷ್ಟು ಸಮಯದಿಂದ ನಾನು ಇಶಾನ್ ಕಿಶನ್ ಜೊತೆ ಮಾತನಾಡುತ್ತಿದ್ದೇನೆ. ಮುಂಬೈ ಇಂಡಿಯನ್ಸ್​ನಲ್ಲಿರುವಾಗ ಅವರು ಮಧ್ಯಮ ಕ್ರಮಾಂಕದಲ್ಲಿ ಆಡುತ್ತಿದ್ದರು. ಆದರೆ, ಅದು ಅವರ ಸ್ಥಾನವಲ್ಲ. ಆರಂಭಿಕನಾಗಿ ಅವರು ಯಶಸ್ಸು ಸಾಧಿಸುತ್ತಾರೆ. ಆಟಗಾರರು ಯಾವ ಸ್ಥಾನದಲ್ಲಿ ಆಡುತ್ತಾರೆ, ಅವರಿಗೆ ಯಾವ ಸ್ಥಾನ ಸೂಕ್ತ ಎಂಬುದನ್ನು ತಿಳಿಯುವುದು ಮುಖ್ಯ,” ಎಂದು ರೋಹಿತ್ ಹೇಳಿದ್ದಾರೆ.

IND vs WI T20: ಟಿ20ಯಲ್ಲೂ ಭಾರತ ಶುಭಾರಂಭ: ರೋಹಿತ್ ನಾಯಕತ್ವದ ಗೆಲುವಿನ ಓಟ ಮುಂದುವರಿಕೆ