ಐಸಿಸಿ ಟಿ20 ವಿಶ್ವಕಪ್ 2022 ರಲ್ಲಿ (T20 World Cup) ತನ್ನ ಕೊನೆಯ ಪಂದ್ಯವನ್ನಾಡಲು ಟೀಮ್ ಇಂಡಿಯಾ ಮೆಲ್ಬೋರ್ನ್ಗೆ (Melbourne) ಬಂದಿಳಿದಿದೆ. ಬಾಂಗ್ಲಾದೇಶ ವಿರುದ್ಧ 5 ರನ್ಗಳ ರೋಚಕ ಗೆಲುವು ಸಾಧಿಸಿ ಗುರುವಾರ ಮೆಲ್ಬೋರ್ನ್ಗೆ ಬಂದಿದ್ದು ಮುಂದಿನ ಪಂದ್ಯಕ್ಕಾಗಿ ಇಂದಿನಿಂದ ಅಭ್ಯಾಸ ಶುರು ಮಾಡಲಿದೆ. ಮೊಹಮ್ಮದ್ ಸಿರಾಜ್, ರಿಷಭ್ ಪಂತ್, ಯುಜ್ವೇಂದ್ರ ಚಹಲ್ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಫೋಟೋ ಹಂಚಿಕೊಂಡಿದ್ದು ‘ಟ್ರಾವೆಲ್ ಟು ಮೆಲ್ಬೋರ್ನ್’ ಎಂದು ಬರೆದುಕೊಂಡಿದ್ದಾರೆ. ಇಂದು ನೆಟ್ನಲ್ಲಿ ವಿರಾಟ್ ಕೊಹ್ಲಿ (Virat Kohli), ಸೂರ್ಯಕುಮಾರ್, ರೋಹಿತ್ ಕಠಿಣ ಬ್ಯಾಟಿಂಗ್ ಅಭ್ಯಾಸ ನಡೆಸಲಿದ್ದರೆ.
ದಕ್ಷಿಣ ಆಫ್ರಿಕಾ ವಿರುದ್ಧ ಪಾಕಿಸ್ತಾನ ತಂಡ ಗೆಲುವು ಸಾಧಿಸಿದ ಪರಿಣಾಮ ಭಾರತದ ಸೆಮಿ ಫೈನಲ್ ಹಾದಿ ಕೂಡ ಕಠಿಣವಾಗಿದ್ದು ಉಳಿದ ಒಂದು ಪಂದ್ಯದಲ್ಲಿ ಗೆಲ್ಲಲೇ ಬೇಕಾದ ಒತ್ತಡಕ್ಕೆ ಸಿಲುಕಿದೆ. ನವೆಂಬರ್ 6 ಭಾನುವಾರದಂದು ಭಾರತ ತಂಡ ಜಿಂಬಾಬ್ವೆ ವಿರುದ್ಧ ಸೂಪರ್ 12 ಹಂತದ ಕೊನೆಯ ಪಂದ್ಯವನ್ನು ಆಡಲಿದೆ. ಮೆಲ್ಬೋರ್ನ್ ಕ್ರಿಕೆಟ್ ಗ್ರೌಂಡ್ನಲ್ಲಿ ಈ ಪಂದ್ಯ ಆಯೋಜಿಸಲಾಗಿದ್ದು, ಭಾರತಕ್ಕೆ ಮಾಡು ಇಲ್ಲವೇ ಮಡಿ ಪಂದ್ಯ. ಭಾರತ ಸೆಮಿಫೈನಲ್ ತಲುಪಲು ಜಿಂಬಾಬ್ವೆ ವಿರುದ್ಧ ಗೆಲುವು ಮುಖ್ಯವಾಗಿದೆ.
ಪಾಯಿಂಟ್ ಟೇಬಲ್ ಗಮನಿಸುವುದಾದರೆ ಗ್ರೂಪ್ 2 ರಲ್ಲಿ ಎಲ್ಲ ತಂಡಗಳು ನಾಲ್ಕು ಪಂದ್ಯಗಳನ್ನು ಆಡಿದೆ. ಇದರಲ್ಲಿ ಭಾರತ ಮೂರು ಪಂದ್ಯದಲ್ಲಿ ಗೆದ್ದರೆ ಒಂದು ಪಂದ್ಯ ಸೋತು 6 ಅಂಕ ಸಂಪಾದಿಸಿದೆ. +0.730 ರನ್ರೇಟ್ ಹೊಂದಿದೆ. ಎರಡು ಸೋಲಿನೊಂದಿಗೆ ದಕ್ಷಿಣ ಆಫ್ರಿಕಾ 5 ಪಡೆದುಕೊಂಡಿದೆ. ಆದರೆ, ರನ್ರೇಟ್ನಲ್ಲಿ (+1.441) ಭಾರತಕ್ಕಿಂತ ಮುಂದಿದೆ. ಪಾಕಿಸ್ತಾನ ಮೂರನೇ ಸ್ಥಾನದಲ್ಲಿದ್ದು ಎರಡು ಗೆಲುವು ಎರಡು ಸೋಲುಂಡು 4 ಅಂಕ ಪಡೆದು +1.117 ರನ್ರೇಟ್ ಹೊಂದಿದೆ. ಬಾಂಗ್ಲಾದೇಶ ಕೂಡ ಪಾಕ್ ರೀತಿಯಲ್ಲಿದ್ದು ಆದರೆ ರನ್ರೇಟ್ -1.276 ಇದೆ. ಜಿಂಬಾಬ್ವೆ ಹಾಗೂ ನೆದರ್ಲೆಂಡ್ಸ್ ತಂಡ ಈಗಗಲೇ ಟೂರ್ನಿಯಿಂದ ಹೊರಬಿದ್ದಿದೆ.
ಟೀಮ್ ಇಂಡಿಯಾ ಪರ ವಿರಾಟ್ ಕೊಹ್ಲಿ ಹಾಗೂ ಸೂರ್ಯಕುಮಾರ್ ಯಾದವ್ ಭರ್ಜರಿ ಫಾರ್ಮ್ನಲ್ಲಿದ್ದಾರೆ. ಕೆಎಲ್ ರಾಹುಲ್ ಕೂಡ ಲಯ ಕಂಡುಕೊಂಡಿರುವುದು ಸಂತಸದ ವಿಚಾರ. ಕಳೆದ ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ಇವರು ಅರ್ಧಶತಕ ಸಿಡಿಸಿ ಮಿಂಚಿದ್ದರು. ಆದರೆ, ರೋಹಿತ್ ಶರ್ಮಾ ಹಾಗೂ ಹಾರ್ದಿಕ್ ಪಾಂಡ್ಯ ಬ್ಯಾಟ್ ಸದ್ದು ಮಡುತ್ತಿಲ್ಲ. ದಿನೇಶ್ ಕಾರ್ತಿಕ್ ಕೂಡ ಪದೇ ಪದೇ ವೈಫಲ್ಯ ಅನುಭವಿಸುತ್ತಿದ್ದಾರೆ. ಅರ್ಶ್ದೀಪ್ ಸಿಂಗ್ ಪ್ರಮುಖ ವಿಕೆಟ್ ಟೇಕಿಂಗ್ ಬೌಲರ್ ಆಗಿ ಗುರುತಿಸಿಕೊಂಡಿದ್ದಾರೆ. ಭುವನೇಶ್ವರ್, ಶಮಿ ಕೂಡ ಇವರಿಗೆ ಉತ್ತಮ ಸಾಥ್ ನೀಡುತ್ತಿದ್ದಾರೆ.