T20 World Cup 2022: ಟಿ20 ಸ್ಪೆಷಲಿಸ್ಟ್​ಗಳೇ ಈ ಬಾರಿಯ ವಿಶ್ವಕಪ್‌ನ ಫ್ಲಾಪ್ ಸ್ಟಾರ್‌ಗಳು..!

T20 World Cup 2022: ಈ ವಿಶ್ವಕಪ್ ಹಲವು ಆಟಗಾರರಿಗೆ ಪುನರ್​ಜನ್ಮ ನೀಡಿದ್ದರೆ, ಇನ್ನೂ ಕೆಲವು ಸ್ಟಾರ್ ಆಟಗಾರರು ಕಳಪೆ ಫಾರ್ಮ್​ಗೆ ಸಿಲುಕಿ ಬಳಲುತ್ತಿದ್ದಾರೆ. ಅವರಲ್ಲಿ ರೋಹಿತ್ ಶರ್ಮಾ, ಬೆನ್ ಸ್ಟೋಕ್ಸ್), ಬಾಬರ್ ಅಜಮ್ ಮತ್ತು ಡೇವಿಡ್ ವಾರ್ನರ್ ಸೇರಿದಂತೆ ಅನೇಕ ದಿಗ್ಗಜ ಬ್ಯಾಟ್ಸ್‌ಮನ್‌ಗಳು ಸೇರಿದ್ದಾರೆ.

T20 World Cup 2022: ಟಿ20 ಸ್ಪೆಷಲಿಸ್ಟ್​ಗಳೇ ಈ ಬಾರಿಯ ವಿಶ್ವಕಪ್‌ನ ಫ್ಲಾಪ್ ಸ್ಟಾರ್‌ಗಳು..!
ಟಿ20 ವಿಶ್ವಕಪ್​ನಲ್ಲಿ ರನ್ ಬರ ಎದುರಿಸುತ್ತಿರುವ ಕ್ರಿಕೆಟಿಗರು
Edited By:

Updated on: Nov 04, 2022 | 12:41 PM

2022 ರ ಟಿ20 ವಿಶ್ವಕಪ್ (T20 World Cup) ಪಂದ್ಯದಿಂದ ಪಂದ್ಯಕ್ಕೆ ರೋಚಕತೆ ಹೆಚ್ಚಿಸುತ್ತಿದ್ದು, ಕ್ರಿಕೆಟ್ ಅಭಿಮಾನಿಗಳಿಗೆ ಸಾಕಷ್ಟು ಮನರಂಜನೆ ನೀಡುತ್ತಿದೆ. ಇದಕ್ಕೆ ಪೂರಕವಾಗಿ ಈ ವಿಶ್ವಕಪ್‌ನಲ್ಲಿ ಹಲವು ಅಚ್ಚರಿಯ ಪಲಿತಾಂಶಗಳು ಹೊರಬಿದ್ದಿದ್ದು, ದುರ್ಬಲ ತಂಡಗಳೆಂದು ಕರೆಸಿಕೊಂಡಿದ್ದ ತಂಡಗಳು ಬಲಿಷ್ಠ ತಂಡಗಳಿಗೆ ನೀರು ಕುಡಿಸುವುದರಲ್ಲಿ ಯಶಸ್ವಿಯಾಗಿವೆ. ಅರ್ಹತಾ ಸುತ್ತಿನಲ್ಲೇ ನಮೀಬಿಯಾ ಮೊದಲ ಪಂದ್ಯದಲ್ಲಿಯೇ ಶ್ರೀಲಂಕಾಗೆ ಸೋಲಿನ ಶಾಕ್ ನೀಡಿತ್ತು. ಹಾಗೆಯೇ ಬಲಿಷ್ಠ ಆಂಗ್ಲರಿಗೆ ಐರ್ಲೆಂಡ್ ತಂಡ ಸೋಲುಣಿಸಿತ್ತು. ಇದೆಲ್ಲದರ ಹೊರತಾಗಿ ಈ ವಿಶ್ವಕಪ್ ಹಲವು ಆಟಗಾರರಿಗೆ ಪುನರ್​ಜನ್ಮ ನೀಡಿದ್ದರೆ, ಇನ್ನೂ ಕೆಲವು ಸ್ಟಾರ್ ಆಟಗಾರರು ಕಳಪೆ ಫಾರ್ಮ್​ಗೆ ಸಿಲುಕಿ ಬಳಲುತ್ತಿದ್ದಾರೆ. ಅವರಲ್ಲಿ ರೋಹಿತ್ ಶರ್ಮಾ (Rohit Sharma), ಬೆನ್ ಸ್ಟೋಕ್ಸ್ (Ben Stokes), ಬಾಬರ್ ಅಜಮ್ (Babar Azam) ಮತ್ತು ಡೇವಿಡ್ ವಾರ್ನರ್ (David Warner) ಸೇರಿದಂತೆ ಅನೇಕ ದಿಗ್ಗಜ ಬ್ಯಾಟ್ಸ್‌ಮನ್‌ಗಳು ಸೇರಿದ್ದಾರೆ. ಅಂತಹವರ ಪಟ್ಟಿ ಹೀಗಿದೆ

ರೋಹಿತ್ ಶರ್ಮಾ

ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಈ ವಿಶ್ವಕಪ್​ನಲ್ಲಿ ಆಡಿರುವ 4 ಪಂದ್ಯಗಳಲ್ಲಿ ಕೇವಲ 18.50 ಸರಾಸರಿಯಲ್ಲಿ 74 ರನ್ ಗಳಿಸಿದ್ದಾರೆ. ಏತನ್ಮಧ್ಯೆ, ಅವರ ಸ್ಟ್ರೈಕ್ ರೇಟ್ 108.82 ಆಗಿದೆ. ನೆದರ್ಲೆಂಡ್ಸ್ ವಿರುದ್ಧದ ಪಂದ್ಯದಲ್ಲಿ ರೋಹಿತ್ ಬ್ಯಾಟ್ 53 ರನ್ ಗಳಿಸಿತ್ತು. ಆದರೆ ಇದರ ಹೊರತಾಗಿ ದೊಡ್ಡ ಮೊತ್ತ ಗಳಿಸುವಲ್ಲಿ ರೋಹಿತ್ ಸತತವಾಗಿ ವಿಫಲರಾಗಿದ್ದಾರೆ. ಇದುವರೆಗೆ ಅವರು ಪಾಕಿಸ್ತಾನ ವಿರುದ್ಧ 4, ನೆದರ್ಲೆಂಡ್ಸ್ ವಿರುದ್ಧ 53, ದಕ್ಷಿಣ ಆಫ್ರಿಕಾ ವಿರುದ್ಧ 15 ಮತ್ತು ಬಾಂಗ್ಲಾದೇಶ ವಿರುದ್ಧ 2 ರನ್ ಗಳಿಸಿದ್ದಾರೆ.

ಬೆನ್ ಸ್ಟೋಕ್ಸ್

ಇಂಗ್ಲೆಂಡ್‌ನ ದಿಗ್ಗಜ ಆಲ್‌ರೌಂಡರ್ ಬೆನ್ ಸ್ಟೋಕ್ಸ್ ಟಿ20 ವಿಶ್ವಕಪ್‌ನಲ್ಲಿ ಇದುವರೆಗೆ ಒಟ್ಟು 3 ಇನ್ನಿಂಗ್ಸ್‌ಗಳನ್ನು ಆಡಿದ್ದಾರೆ. ಅದರಲ್ಲಿ ಅವರು 84.21 ಸ್ಟ್ರೈಕ್ ರೇಟ್​ನಲ್ಲಿ ಗಳಿಸಿದ್ದು 16 ರನ್ ಮಾತ್ರ. ಇಲ್ಲಿಯವರೆಗೆ ಟಿ20 ವಿಶ್ವಕಪ್‌ನಲ್ಲಿ ಅವರು ಅಫ್ಘಾನಿಸ್ತಾನ ವಿರುದ್ಧ 2, ಐರ್ಲೆಂಡ್ ವಿರುದ್ಧ 6 ಮತ್ತು ನ್ಯೂಜಿಲೆಂಡ್ ವಿರುದ್ಧ 8 ರನ್ ಗಳಿಸಿದ್ದಾರೆ.

ಬಾಬರ್ ಆಜಂ

ಈ ಟಿ20 ವಿಶ್ವಕಪ್​ನಲ್ಲಿ ಪಾಕಿಸ್ತಾನ ತಂಡದ ನಾಯಕ ಬಾಬರ್ ಅಜಮ್ ಸಂಪೂರ್ಣವಾಗಿ ಫೇಲ್ ಆಗಿದ್ದಾರೆ. ಅವರ ಬ್ಯಾಟ್​ನಿಂದ ಇದುವರೆಗೆ ಯಾವುದೇ ದೊಡ್ಡ ಇನ್ನಿಂಗ್ಸ್ ಬಂದಿಲ್ಲ. ಈ ಟೂರ್ನಿಯಲ್ಲಿ ಇದುವರೆಗೆ ಆಡಿರುವ 4 ಪಂದ್ಯಗಳಲ್ಲಿ ಕೇವಲ 14 ರನ್ ಸೇರಿಸುವಲ್ಲಿ ಯಶಸ್ವಿಯಾಗಿರುವ ಬಾಬರ್, 44.66 ರ ಸ್ಟ್ರೈಕ್ ರೇಟ್​ನಲ್ಲಿ ರನ್ ಕಲೆಹಾಕಿದ್ದಾರೆ. ಬಾಬರ್ ಇದುವರೆಗೆ ಟಿ20 ವಿಶ್ವಕಪ್‌ನಲ್ಲಿ ಭಾರತದ ವಿರುದ್ಧ 0, ಜಿಂಬಾಬ್ವೆ ವಿರುದ್ಧ 4, ನೆದರ್‌ಲ್ಯಾಂಡ್ ವಿರುದ್ಧ 4 ಮತ್ತು ದಕ್ಷಿಣ ಆಫ್ರಿಕಾ ವಿರುದ್ಧ 6 ರನ್ ಗಳಿಸಿದ್ದಾರೆ.

ಡೇವಿಡ್ ವಾರ್ನರ್

ಆಸ್ಟ್ರೇಲಿಯ ತಂಡದ ಸ್ಟಾರ್ ಓಪನರ್ ಡೇವಿಡ್ ವಾರ್ನರ್ ಈ ಬಾರಿಯ ಟಿ 20 ವಿಶ್ವಕಪ್‌ನಲ್ಲಿ ಇದುವರೆಗೆ ಸಂಪೂರ್ಣವಾಗಿ ವಿಫಲರಾಗಿದ್ದಾರೆ. ವಿಶ್ವಕಪ್‌ನಲ್ಲಿ 3 ಇನ್ನಿಂಗ್ಸ್‌ಗಳನ್ನು ಆಡಿರುವ ವಾರ್ನರ್ ಕೇವಲ 19 ರನ್ ಗಳಿಸಿದ್ದಾರೆ. ವಾರ್ನರ್ ಈ ಟೂರ್ನಿಯಲ್ಲಿ ನ್ಯೂಜಿಲೆಂಡ್ ವಿರುದ್ಧ 5, ಶ್ರೀಲಂಕಾ ವಿರುದ್ಧ 11 ಮತ್ತು ಐರ್ಲೆಂಡ್ ವಿರುದ್ಧ 3 ರನ್ ಗಳಿಸಿದ್ದಾರೆ.

ಇದನ್ನೂ ಓದಿ: ಬ್ಯಾಟಿಗೆ ಒಂದೂ ಬಾಲ್ ತಾಗಲಿಲ್ಲ; ಕೋಪದಿಂದ ಬ್ಯಾಟ್ ಬೀಸಾಡಿದ ಪಾಕ್ ಬ್ಯಾಟ್ಸ್​ಮನ್..! ವಿಡಿಯೋ

ಗ್ಲೆನ್ ಮ್ಯಾಕ್ಸ್‌ವೆಲ್

ಆಸ್ಟ್ರೇಲಿಯಾದ ಬ್ಯಾಟ್ಸ್‌ಮನ್ ಗ್ಲೆನ್ ಮ್ಯಾಕ್ಸ್‌ವೆಲ್ ತಮ್ಮ ಅಬ್ಬರದ ಬ್ಯಾಟಿಂಗ್‌ಗೆ ಹೆಸರುವಾಸಿಯಾಗಿದ್ದಾರೆ. ಆದರೆ ಈ ಬಾರಿಯ ಟಿ20 ವಿಶ್ವಕಪ್‌ನಲ್ಲಿ ಅವರ ಬ್ಯಾಟ್ ಇನ್ನೂ ಬೃಹತ್ ಇನ್ನಿಂಗ್ಸ್ ಕಟ್ಟಿಲ್ಲ. ಈ ವಿಶ್ವಕಪ್‌ನಲ್ಲಿ ಅವರು ಮೂರು ಇನ್ನಿಂಗ್ಸ್‌ಗಳಲ್ಲಿ 21.33 ಸರಾಸರಿ ಮತ್ತು 156.09 ಸ್ಟ್ರೈಕ್ ರೇಟ್‌ನಲ್ಲಿ ಒಟ್ಟು 64 ರನ್ ಗಳಿಸಿದ್ದಾರೆ. ಅದೇ ಸಮಯದಲ್ಲಿ ಅವರ ಗರಿಷ್ಠ ಸ್ಕೋರ್ 28 ರನ್ ಆಗಿದ್ದು, ಈ ಟೂರ್ನಿಯಲ್ಲಿ ಇದುವರೆಗೆ ನ್ಯೂಜಿಲೆಂಡ್ ವಿರುದ್ಧ 28, ಶ್ರೀಲಂಕಾ ವಿರುದ್ಧ 23 ಮತ್ತು ಐರ್ಲೆಂಡ್ ವಿರುದ್ಧ 13 ರನ್ ಗಳಿಸಿದ್ದಾರೆ.

ಕೆಎಲ್ ರಾಹುಲ್

ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ಭಾರತದ ಆರಂಭಿಕ ಆಟಗಾರ ಕೆಎಲ್ ರಾಹುಲ್ ಅತ್ಯುತ್ತಮ ಇನ್ನಿಂಗ್ಸ್ ಆಡಿ, ಅರ್ಧಶತಕ ಬಾರಿಸಿದ್ದರು. ಆದರೆ ಹಿಂದಿನ ಪಂದ್ಯಗಳಲ್ಲಿ ಸಂಪೂರ್ಣವಾಗಿ ವಿಫಲರಾಗಿದ್ದ ರಾಹುಲ್ ಇದುವರೆಗೆ ಆಡಿರುವ ನಾಲ್ಕು ಪಂದ್ಯಗಳಲ್ಲಿ ಕೇವಲ 18ರ ಸರಾಸರಿಯಲ್ಲಿ 72 ರನ್ ಗಳಿಸಿದ್ದಾರೆ. ಈ ಪಂದ್ಯಾವಳಿಯಲ್ಲಿ ಅವರು ಪಾಕಿಸ್ತಾನ ವಿರುದ್ಧ 4, ನೆದರ್ಲ್ಯಾಂಡ್ಸ್ ವಿರುದ್ಧ 9, ದಕ್ಷಿಣ ಆಫ್ರಿಕಾ ವಿರುದ್ಧ 9 ಮತ್ತು ಬಾಂಗ್ಲಾದೇಶ ವಿರುದ್ಧ 50 ರನ್ ಗಳಿಸಿದ್ದಾರೆ.

ಮಿಚೆಲ್ ಮಾರ್ಷ್

ಈ ಬಾರಿಯ ಟಿ20 ವಿಶ್ವಕಪ್‌ನಲ್ಲಿ ಆಸ್ಟ್ರೇಲಿಯಾದ ಬ್ಯಾಟ್ಸ್‌ಮನ್ ಮಿಚೆಲ್ ಮಾರ್ಷ್ ಕೂಡ ಲಯದಲ್ಲಿಲ್ಲ. ಮಿಚೆಲ್ ಮಾರ್ಷ್ ಇದುವರೆಗೆ ಆಡಿರುವ 3 ಇನ್ನಿಂಗ್ಸ್‌ಗಳಲ್ಲಿ 20.33 ಸರಾಸರಿಯಲ್ಲಿ 61 ರನ್ ಗಳಿಸಿದ್ದಾರೆ. ಅದೇ ಸಮಯದಲ್ಲಿ ಅವರ ಸ್ಟ್ರೈಕ್ ರೇಟ್ ಕೂಡ 119.60 ಆಗಿದೆ. ಅವರ ಗರಿಷ್ಠ ಸ್ಕೋರ್ 28 ರನ್ ಆಗಿದ್ದು, ಈ ಟೂರ್ನಿಯಲ್ಲಿ ಇದುವರೆಗೆ ನ್ಯೂಜಿಲೆಂಡ್ ವಿರುದ್ಧ 16, ಶ್ರೀಲಂಕಾ ವಿರುದ್ಧ 17 ಮತ್ತು ಐರ್ಲೆಂಡ್ ವಿರುದ್ಧ 28 ರನ್ ಗಳಿಸಿದ್ದಾರೆ.

ಇನ್ನಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 11:46 am, Fri, 4 November 22