‘ಯಾರಿಂದಲೂ ಅವರ ಸ್ಥಾನ ತುಂಬಲಾಗುವುದಿಲ್ಲ’; ಜಡೇಜಾಗಾಗಿ ಸಿಎಸ್‌ಕೆ ಜೊತೆ ಜಿದ್ದಿಗೆ ಬಿದ್ದ ಧೋನಿ..!

IPL 2023: ತಂಡದ ನಾಯ ಧೋನಿ, ಜಡೇಜಾ ಅವರನ್ನು ತಂಡದೊಂದಿಗೆ ಇರಿಸಿಕೊಳ್ಳಲು ಬಯಸಿದ್ದು, ಈ ಬಗ್ಗೆ ಫ್ರಾಂಚೈಸಿ ಜೊತೆ ಮಾತನಾಡಿದ್ದಾರೆ ಎಂದು ವರದಿಯಾಗಿದೆ.

‘ಯಾರಿಂದಲೂ ಅವರ ಸ್ಥಾನ ತುಂಬಲಾಗುವುದಿಲ್ಲ’; ಜಡೇಜಾಗಾಗಿ ಸಿಎಸ್‌ಕೆ ಜೊತೆ ಜಿದ್ದಿಗೆ ಬಿದ್ದ ಧೋನಿ..!
ಜಡೇಜಾ, ಧೋನಿ
Follow us
| Updated By: Digi Tech Desk

Updated on:Nov 04, 2022 | 12:34 PM

ಐಪಿಎಲ್ ಇತಿಹಾಸದಲ್ಲಿ ಎರಡನೇ ಅತ್ಯಂತ ಯಶಸ್ವಿ ತಂಡವಾದ ಚೆನ್ನೈ ಸೂಪರ್ ಕಿಂಗ್ಸ್ (Chennai Super Kings ) ಮತ್ತು ಅದರ ಸ್ಟಾರ್ ಆಲ್‌ರೌಂಡರ್ ರವೀಂದ್ರ ಜಡೇಜಾ (Ravindra Jadeja) ನಡುವಿನ ಸಂಬಂಧ ಹದಗೆಟ್ಟಿರುವುದು ಎಲ್ಲರಿಗೂ ತಿಳಿದಿರುವ ವಿಚಾರವೇ. ಸುಮಾರು 6 ತಿಂಗಳಿನಿಂದ ಈ ವಿಷಯದ ಬಗ್ಗೆ ಸಾಕಷ್ಟು ಚರ್ಚೆ ನಡೆಯುತ್ತಿದೆ. ಇದೆಲ್ಲದರ ನಡುವೆ ಈ ಆವೃತ್ತಿಯ ಐಪಿಎಲ್ ಆರಂಭಕ್ಕೂ ಮುನ್ನ ನಡೆಯುವ ಮಿನಿ ಹರಾಜಿಗೂ ಮೊದಲೇ ಸಿಎಸ್​ಕೆ ತಂಡ ಜಡೇಜಾರನ್ನು ತಂಡದಿಂದ ಕೈಬಿಡಲಿದೆ ಎಂಬ ಸುದ್ದಿ ಹರಿದಾಡುತ್ತಿದೆ. ಆದರೆ ಈಗ ಸಿಎಸ್‌ಕೆ ನಾಯಕ ಎಂಎಸ್ ಧೋನಿ (MS Dhoni) ಈ ವದಂತಿಗಳಿಗೆ ತೆರೆ ಎಳೆಯಲು ಮುಂದಾಗಿದ್ದು, ಜಡೇಜಾರನ್ನು ಚೆನ್ನೈ ತಂಡದಲ್ಲಿಯೇ ಉಳಿಸಿಕೊಳ್ಳಲು ಫ್ರಾಂಚೈಸಿಯೊಂದಿಗೆ ಜಿದ್ದಿಗೆ ಬಿದ್ದಿದ್ದಾರೆ ಎಂದು ವರದಿಯಾಗಿದೆ.

ವಾಸ್ತವವಾಗಿ, ಕಳೆದ ಐಪಿಎಲ್‌ನ ಮೊದಲಾರ್ಧದಲ್ಲಿ ಚೆನ್ನೈ ತಂಡ ಜಡೇಜಾ ನಾಯಕತ್ವದಲ್ಲಿ ಕಳಪೆ ಪ್ರದರ್ಶನ ನೀಡಿತ್ತು. ಹೀಗಾಗಿ ಜಡೇಜಾರನ್ನು ಐಪಿಎಲ್ ಮಧ್ಯದಲ್ಲಿಯೇ ನಾಯಕತ್ವದಿಂದ ಕೇಳಗಿಳಿಸಿ, ಮತ್ತೆ ಧೋನಿಗೆ ನಾಯಕತ್ವವಹಿಸಲಾಗಿತ್ತು. ಇದರ ನಡುವೆ ಜಡೇಜಾ ಕೂಡ ಮಧ್ಯದಲ್ಲಿಯೇ ಐಪಿಎಲ್ ತೊರೆದಿದ್ದರು. ಆ ನಂತರ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಚೆನ್ನೈಗೆ ಸಂಬಂಧಿಸಿದ್ದ ಎಲ್ಲಾ ಪೋಸ್ಟ್‌ಗಳನ್ನು ಡಿಲೀಟ್ ಮಾಡಿದ್ದರು. ಆಗಿನಿಂದ ಫ್ರಾಂಚೈಸಿ ಹಾಗೂ ಜಡೇಜಾ ನಡುವೆ ಏನೇನೂ ಸರಿ ಇಲ್ಲ ಎಂಬ ಟಾಕ್ ಆರಂಭವಾಗಿತ್ತು.

ಸಿಎಸ್‌ಕೆಯಲ್ಲಿ ಉಳಿಸಿಕೊಳ್ಳಲು ಧೋನಿ ಪ್ರಯತ್ನ

ಸಿಎಸ್​ಕೆ ಇದೀಗ ಐಪಿಎಲ್‌ನ ಮುಂದಿನ ಸೀಸನ್‌ಗಾಗಿ ತಯಾರಿ ಆರಂಭಿಸಿದೆ. ನವೆಂಬರ್ 15 ವರ್ಗಾವಣೆಗೆ ಕೊನೆಯ ದಿನಾಂಕವಾಗಿದ್ದು, ತಂಡದಲ್ಲಿ ಉಳಿಸಿಕೊಳ್ಳಬೇಕಾದ ಆಟಗಾರ ಹಾಗೂ ಬಿಡುಗಡೆಗೊಳಿಸಬೇಕಾದ ಆಟಗಾರರ ಬಗ್ಗೆ ಚೆನ್ನೈ ಪಾಳಾಯದಲ್ಲಿ ಚರ್ಚೆ ಶುರುವಾಗಿದೆ. ಈ ಮುನ್ನ ಜಡೇಜಾರನ್ನು ತಂಡದಿಂದ ಬೇರೆ ತಂಡಕ್ಕೆ ವರ್ಗಾಯಿಸಲಿದೆ ಎಂದು ಕೆಲವು ವರದಿಗಳು ಹೇಳಿದ್ದವು. ಆದರೆ ಈಗ ಫ್ರಾಂಚೈಸ್, ಜಡೇಜಾ ಅವರನ್ನು ಬೇರೊಂದು ತಂಡಕ್ಕೆ ವರ್ಗಾಯಿಸುವುದಿಲ್ಲ ಎಂದು ತಿಳಿದುಬಂದಿದೆ. ಏಕೆಂದರೆ ತಂಡದ ನಾಯ ಧೋನಿ, ಜಡೇಜಾ ಅವರನ್ನು ತಂಡದೊಂದಿಗೆ ಇರಿಸಿಕೊಳ್ಳಲು ಬಯಸಿದ್ದು, ಈ ಬಗ್ಗೆ ಫ್ರಾಂಚೈಸಿ ಜೊತೆ ಮಾತನಾಡಿದ್ದಾರೆ ಎಂದು ವರದಿಯಾಗಿದೆ.

ಇದನ್ನೂ ಓದಿ: T20 World Cup 2022: ಟಿ20 ಸ್ಪೆಷಲಿಸ್ಟ್​ಗಳೇ ಈ ಬಾರಿಯ ವಿಶ್ವಕಪ್‌ನ ಫ್ಲಾಪ್ ಸ್ಟಾರ್‌ಗಳು..!

ಮ್ಯಾನೇಜ್‌ಮೆಂಟ್‌ಗೆ ನಿರ್ಧಾರ ತಿಳಿಸಿದ ಧೋನಿ

ಜಡೇಜಾ ಅವರ ಸಾಮರ್ಥ್ಯದ ಮೇಲೆ ಅಪಾರ ನಂಬಿಕೆ ಹೊಂದಿರುವ ತಂಡದ ನಾಯಕ ಧೋನಿ, ಜಡೇಜಾ ಬಗ್ಗೆ ತನ್ನ ನಿಲ್ಲುವುನ್ನು ಫ್ರಾಂಚೈಸಿ ಮುಂದೆ ಸ್ಪಷ್ಟಪಡಿಸಿದ್ದು, ಜಡೇಜಾ ಅವರನ್ನು ತಂಡದಿಂದ ಬಿಡುಗಡೆ ಮಾಡುವುದು ಸರಿಯಿಲ್ಲ. ಅಲ್ಲದೆ ಜಡೇಜಾ ತಂಡದ ಪ್ರಮುಖ ಆಟಗಾರನಾಗಿದ್ದು, ಅವರ ಸ್ಥಾನವನ್ನು ಬೇರೆ ಯಾವುದೇ ಆಟಗಾರಿನಿಂದ ತುಂಬಲು ಸಾಧ್ಯವಿಲ್ಲ ಎಂದಿದ್ದಾರೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.

ಜಡೇಜಾ ಸಿಎಸ್‌ಕೆ ಸಂಪರ್ಕದಲ್ಲಿಲ್ಲ

ಮಾಧ್ಯಮ ವರದಿಗಳ ಪ್ರಕಾರ, ಜಡೇಜಾ ದೀರ್ಘಕಾಲದಿಂದ ಸಿಎಸ್‌ಕೆ ಮ್ಯಾನೇಜ್‌ಮೆಂಟ್‌ನೊಂದಿಗೆ ಸಂಪರ್ಕದಲ್ಲಿಲ್ಲ. ಗಾಯದ ಕಾರಣ, ಜಡೇಜಾ ಎರಡು ಪಂದ್ಯಗಳನ್ನು ಆಡಿದ ನಂತರ ಏಷ್ಯಾಕಪ್ 2022 ರಿಂದಲೂ ಹೊರಗುಳಿದಿದ್ದರು. ಗಾಯದ ಕಾರಣ, ಅವರು ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಟಿ20 ವಿಶ್ವಕಪ್‌ನಿಂದ ಹೊರಗುಳಿಯಬೇಕಾಯಿತು. ಅವರ ಬದಲಿಗೆ ಅಕ್ಷರ್ ಪಟೇಲ್ ತಂಡದಲ್ಲಿ ಸ್ಥಾನ ಪಡೆದಿದ್ದರು. ಈಗ ಇಂಜುರಿಯಿಂದ ಚೇತರಿಸಿಕೊಳ್ಳುತ್ತಿರುವ ಜಡೇಜಾ ಮೈದಾನಕ್ಕೆ ಮರಳಲು ಸಿದ್ಧತೆ ನಡೆಸಿದ್ದಾರೆ.

ಇನ್ನಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 12:16 pm, Fri, 4 November 22