
ಭಾರತ ತಂಡದಲ್ಲಿ ಎಲ್ಲವೂ ಸರಿಯಿಲ್ಲ ಎಂಬ ಸುದ್ದಿ ಬೆನ್ನಲ್ಲೇ ಇದೀಗ ಮತ್ತೊಂದು ಸ್ಫೋಟಕ ವರದಿಯೊಂದು ಬಹಿರಂಗವಾಗಿದೆ. ಟೀಮ್ ಇಂಡಿಯಾ ಕೋಚ್ ಗೌತಮ್ ಗಂಭೀರ್ ಹಿರಿಯ ಆಟಗಾರರಾದ ವಿರಾಟ್ ಕೊಹ್ಲಿ (Virat Kohli) ಹಾಗೂ ರೋಹಿತ್ ಶರ್ಮಾ (Rohit Sharma) ಜೊತೆ ವೈಮನಸ್ಸು ಹೊಂದಿದ್ದಾರೆ. ಇದೇ ಕಾರಣಕ್ಕಾಗಿ ಬಿಸಿಸಿಐ ತುರ್ತು ಸಭೆ ಕರೆದಿದೆ ಎಂದು ವರದಿಯಾಗಿದೆ.
ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ತಂಡದ ಹಿತಾಸಕ್ತಿಗಾಗಿ ಕೋಚ್ ಗೌತಮ್ ಗಂಭೀರ್ ಜೊತೆ ಹೊಂದಿಕೊಂಡು ಹೋಗುತ್ತಿದ್ದಾರೆ. ಆದರೆ ಮೂವರ ನಡುವೆ ಭಿನ್ನಾಭಿಪ್ರಾಯಗಳಿವೆ. ಅಲ್ಲದೆ ಸಂವಹನದ ಕೊರತೆ ಕೂಡ ಬೆಳೆಯುತ್ತಿದೆ.
ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿರುವ ಬಿಸಿಸಿಐ, ರಾಯ್ಪುರದಲ್ಲಿ ವಿಶೇಷ ಸಭೆ ಕರೆದಿದೆ. ಈ ಸಭೆಯಲ್ಲಿ ಟೀಮ್ ಇಂಡಿಯಾ ಮುಖ್ಯ ಕೋಚ್ ಗೌತಮ್ ಗಂಭೀರ್ ಹಾಗೂ ಆಯ್ಕೆ ಸಮಿತಿ ಮುಖ್ಯಸ್ಥ ಅಜಿತ್ ಅಗರ್ಕರ್ ಭಾಗವಹಿಸಲಿದ್ದಾರೆ.
ಅತ್ತ ಎರಡನೇ ಏಕದಿನ ಪಂದ್ಯ ನಡೆಯಲಿರುವುದು ಕೂಡ ರಾಯ್ಪುರದಲ್ಲಿ. ಹೀಗಾಗಿ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಅವರನ್ನು ಸಹ ಈ ಸಭೆಗೆ ಕರೆಯುವ ಸಾಧ್ಯತೆಯನ್ನು ಸಹ ತಳ್ಳಿ ಹಾಕುವಂತಿಲ್ಲ.
ಗೌತಮ್ ಗಂಭೀರ್ ಭಾರತ ತಂಡದ ಮುಖ್ಯ ಕೋಚ್ ಆದ ಬಳಿಕ ಟೀಮ್ ಇಂಡಿಯಾದಲ್ಲಿ ಮಹತ್ವದ ಬದಲಾವಣೆಯಾಗಿದೆ. ಅದರಲ್ಲೂ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಟೆಸ್ಟ್ ಕ್ರಿಕೆಟ್ ಗೆ ದಿಢೀರ್ ನಿವೃತ್ತಿ ಘೋಷಿಸಲು ಗಂಭೀರ್ ಕಾರಣ ಎನ್ನಲಾಗುತ್ತಿದೆ.
ಅಷ್ಟೇ ಅಲ್ಲದೆ ಗೌತಮ್ ಗಂಭೀರ್, ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಅವರನ್ನು ಏಕದಿನ ತಂಡದಿಂದಲೂ ಹೊರಹಾಕಲು ಬಯಸಿದ್ದಾರೆ ಎಂಬ ಸುದ್ದಿಗಳು ಹರಿದಾಡುತ್ತಿದೆ. ಆದರೆ ಇಬ್ಬರು ದಿಗ್ಗಜರು ಭರ್ಜರಿ ಪ್ರದರ್ಶನದ ಮೂಲಕ ಗಂಭೀರ್ ಲೆಕ್ಕಾಚಾರಗಳನ್ನು ಬುಡಮೇಲು ಮಾಡುತ್ತಿದ್ದಾರೆ.
ಇದನ್ನೂ ಓದಿ: IPL 2026: ಐಪಿಎಲ್ ಹರಾಜಿಗೆ 1355 ಹೆಸರು ರಿಜಿಸ್ಟರ್: ಎಷ್ಟು ಮಂದಿಗೆ ಸಿಗಲಿದೆ ಚಾನ್ಸ್?
ಇತ್ತ ಲೆಕ್ಕಾಚಾರ ತಲೆಕೆಳಗಾಗುತ್ತಿದ್ದಂತೆ ಗೌತಮ್ ಗಂಭೀರ್ ಹಾಗೂ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಜೊತೆ ಒಡಕು ಮೂಡಲಾರಂಭಿಸಿದೆ ಎಂದು ವರದಿಯಾಗಿದೆ. ಇದರಿಂದ ಟೀಮ್ ಇಂಡಿಯಾದಲ್ಲಿ ಆಂತರಿಕ ಸಮಸ್ಯೆ ತಲೆದೂರುವ ಸಾಧ್ಯತೆಯನ್ನು ಮನಗಂಡಿರುವ ಬಿಸಿಸಿಐ ತುರ್ತು ಸಭೆ ಕರೆದಿದೆ.