ಹಿಟ್​ಮ್ಯಾನ್ ಆರ್ಭಟ: ರೋಹಿತ್ ಶರ್ಮಾಗೆ ಸ್ಪೆಷಲ್ ಗಿಫ್ಟ್ ನೀಡಿದ ನೀತಾ ಅಂಬಾನಿ

MI vs LSG: ಐಪಿಎಲ್ 2026ರಲ್ಲಿ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ನಡೆದ ಜಿದ್ದಾಜಿದ್ದಿನ ಹೋರಾಟದಲ್ಲಿ ಮುಂಬೈ ಇಂಡಿಯನ್ಸ್ ತಂಡ ಐತಿಹಾಸಿಕ ಜಯ ದಾಖಲಿಸಿದೆ. ಗಾಯದ ಸಮಸ್ಯೆಯಿಂದ ಚೇತರಿಸಿಕೊಂಡು ಮೈದಾನಕ್ಕೆ ಮರಳಿದ ರೋಹಿತ್ ಶರ್ಮಾ, ಸಿಡಿಲಬ್ಬರದ ಬ್ಯಾಟಿಂಗ್ ಮೂಲಕ ತಂಡಕ್ಕೆ ಗೆಲುವು ತಂದುಕೊಟ್ಟಿದ್ದಾರೆ.

ಹಿಟ್​ಮ್ಯಾನ್ ಆರ್ಭಟ: ರೋಹಿತ್ ಶರ್ಮಾಗೆ ಸ್ಪೆಷಲ್ ಗಿಫ್ಟ್ ನೀಡಿದ ನೀತಾ ಅಂಬಾನಿ
Rohit Sharma - Nita Ambani

Updated on: May 05, 2026 | 9:17 PM

IPL 2026: ಐಪಿಎಲ್ 2026ರ ಹೈ-ವೋಲ್ಟೇಜ್ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಮುಂಬೈ ಇಂಡಿಯನ್ಸ್ ಐತಿಹಾಸಿಕ ಜಯ ದಾಖಲಿಸಿದೆ. ಈ ಪಂದ್ಯದಲ್ಲಿ ಸ್ಫೋಟಕ ಬ್ಯಾಟಿಂಗ್ ಪ್ರದರ್ಶಿಸಿದ ರೋಹಿತ್ ಶರ್ಮಾಗೆ ಮುಂಬೈ ಇಂಡಿಯನ್ಸ್ ತಂಡದ ಮಾಲಕಿ ನೀತಾ ಅಂಬಾನಿ ಸರ್‌ಪ್ರೈಸ್ ಗಿಫ್ಟ್ ನೀಡಿದ್ದಾರೆ.

ಹಿಟ್​ಮ್ಯಾನ್ ಆರ್ಭಟ:

ಹ್ಯಾಮ್‌ಸ್ಟ್ರಿಂಗ್ ಗಾಯದ ಕಾರಣ ಕಳೆದ ಐದು ಪಂದ್ಯಗಳಿಂದ ಹೊರಗುಳಿದಿದ್ದ ರೋಹಿತ್ ಶರ್ಮಾ, ಈ ಪಂದ್ಯದ ಮೂಲಕ ಮೈದಾನಕ್ಕೆ ಮರಳಿದ್ದರು. ವಾಂಖೆಡೆ ಕ್ರೀಡಾಂಗಣದಲ್ಲಿ ಸಿಕ್ಸರ್ ಮತ್ತು ಬೌಂಡರಿಗಳ ಮಳೆ ಸುರಿಸಿದ ರೋಹಿತ್, ಕೇವಲ 44 ಎಸೆತಗಳಲ್ಲಿ 84 ರನ್ ಸಿಡಿಸಿದರು. ಇವರಿಗೆ ಸಾಥ್ ನೀಡಿದ ರಯಾನ್ ರಿಕೆಲ್ಟನ್ (32 ಎಸೆತಗಳಲ್ಲಿ 83 ರನ್) ಅವರೊಂದಿಗೆ ಮೊದಲ ವಿಕೆಟ್‌ಗೆ 143 ರನ್‌ಗಳ ಬೃಹತ್ ಜೊತೆಯಾಟವಾಡುವ ಮೂಲಕ ಮುಂಬೈ ತಂಡ 229 ರನ್‌ಗಳ ಗುರಿಯನ್ನು ಸುಲಭವಾಗಿ ತಲುಪಲು ನೆರವಾದರು.

‘ಬೆಸ್ಟ್ ಪಾರ್ಟ್‌ನರ್‌ಶಿಪ್’ ಗಾಗಲ್ಸ್!

ಮುಂಬೈ ಇಂಡಿಯನ್ಸ್ ತಂಡವು ಪ್ರತಿ ಪಂದ್ಯದ ನಂತರ ಡ್ರೆಸ್ಸಿಂಗ್ ರೂಮ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದ ಆಟಗಾರರಿಗೆ ಪದಕಗಳನ್ನು ನೀಡುವುದು ವಾಡಿಕೆ. ಆದರೆ, 2026ರ ಈ ಸೀಸನ್‌ನಲ್ಲಿ ನೀತಾ ಅಂಬಾನಿ ಅವರು ಹೊಸ ಸಂಪ್ರದಾಯವನ್ನು ಆರಂಭಿಸಿದ್ದಾರೆ.

ಜಯದ ಸಂಭ್ರಮದಲ್ಲಿದ್ದ ಡ್ರೆಸ್ಸಿಂಗ್ ರೂಮ್‌ಗೆ ಭೇಟಿ ನೀಡಿದ ನೀತಾ ಅಂಬಾನಿ, ಪಂದ್ಯದ ಶ್ರೇಷ್ಠ ಜೊತೆಯಾಟವಾಡಿದ ರೋಹಿತ್ ಶರ್ಮಾ ಮತ್ತು ರಯಾನ್ ರಿಕೆಲ್ಟನ್ ಅವರಿಗೆ ಸ್ಟೈಲಿಶ್ ಆದ “ಬೆಸ್ಟ್ ಪಾರ್ಟ್‌ನರ್‌ಶಿಪ್ ಗಾಗಲ್ಸ್” (ಕನ್ನಡಕ) ಉಡುಗೊರೆಯಾಗಿ ನೀಡಿದರು. ರೋಹಿತ್ ಶರ್ಮಾ ನಗುತ್ತಲೇ ಈ ಕಲರ್ ಫುಲ್ ಕನ್ನಡಕವನ್ನು ಧರಿಸಿದಾಗ ಇಡೀ ಡ್ರೆಸ್ಸಿಂಗ್ ರೂಮ್ ಚಪ್ಪಾಳೆಯಿಂದ ಮೊಳಗಿತು.

ಪಂದ್ಯದ ಮುಖ್ಯಾಂಶಗಳು:

  • ಲಕ್ನೋ ಸೂಪರ್ ಜೈಂಟ್ಸ್ 20 ಓವರ್​ಗಳಲ್ಲಿ 228 ರನ್​
  • ಮುಂಬೈ ಇಂಡಿಯನ್ಸ್​ 18.4 ಓವರ್​​ಗಳಲ್ಲಿ 229 ರನ್​.
  • ಫಲಿತಾಂಶ: ಮುಂಬೈ ಇಂಡಿಯನ್ಸ್ ತಂಡಕ್ಕೆ 6 ವಿಕೆಟ್‌ಗಳ ಭರ್ಜರಿ ಜಯ.

ಇದನ್ನೂ ಓದಿ: DC vs CSK IPL 2026 Live Score: ಕ್ಯಾಪಿಟಲ್ಸ್​​ಗೆ ಸೂಪರ್ ಕಿಂಗ್ಸ್​ ಸವಾಲು

ಈ ಗೆಲುವಿನೊಂದಿಗೆ ಮುಂಬೈ ಇಂಡಿಯನ್ಸ್ ತಂಡವು ತನ್ನ ಪ್ಲೇಆಫ್ ಆಸೆಯನ್ನು ಜೀವಂತವಿರಿಸಿಕೊಂಡಿದೆ. ಸದ್ಯ ಅಂಕ ಪಟ್ಟಿಯಲ್ಲಿ 9ನೇ  ಸ್ಥಾನದಲ್ಲಿರುವ ಮುಂಬೈ ಇಂಡಿಯನ್ಸ್ ತಂಡವು ಮುಂದಿನ 4 ಪಂದ್ಯಗಳಲ್ಲಿ ಭರ್ಜರಿ ಜಯ ಸಾಧಿಸಿ ದ್ವಿತೀಯ ಸುತ್ತಿಗೆ ಪ್ರವೇಶಿಸಲಿದೆಯಾ ಕಾದು ನೋಡಬೇಕಿದೆ.

 

 

Follow Us