ದಿ ಓವಲ್ ಮೈದಾನದಲ್ಲಿ ನಡೆದ ಇಂಗ್ಲೆಂಡ್ ವಿರುದ್ದದ ಮೊದಲ ಏಕದಿನ ಪಂದ್ಯದಲ್ಲಿ ಭಾರತ ತಂಡವು ಭರ್ಜರಿ ಜಯ ಸಾಧಿಸಿತು. ಈ ಪಂದ್ಯದಲ್ಲಿ ಜಸ್ಪ್ರೀತ್ ಬುಮ್ರಾ ಬೌಲಿಂಗ್ ಮೂಲಕ ಮಿಂಚಿದ್ರೆ, ರೋಹಿತ್ ಶರ್ಮಾ ಬ್ಯಾಟಿಂಗ ಮೂಲಕ ಗಮನ ಸೆಳೆದಿದ್ದರು. ಅದರಲ್ಲೂ ಹಿಟ್ಮ್ಯಾನ್ ಭರ್ಜರಿ ಹೊಡೆತಗಳ ಮೂಲಕ ಪ್ರೇಕ್ಷಕರನ್ನು ರಂಜಿಸಿದರು. ಹೀಗೆ ಹೊಡೆದ ಸಿಕ್ಸರ್ವೊಂದು ಪುಟ್ಟ ಬಾಲಕಿಯ ಮೇಲೆ ಬಿದ್ದ ಘಟನೆ ಕೂಡ ನಡೆಯಿತು. ಟೀಮ್ ಇಂಡಿಯಾ ಇನಿಂಗ್ಸ್ನ 5ನೇ ಓವರ್ನಲ್ಲಿ ವೇಗಿ ಡೇವಿಡ್ ವಿಲ್ಲಿ ಬೌಲಿಂಗ್ ಮಾಡಿದ್ದರು. ಮೊದಲ ಎರಡು ಎಸೆತಗಳಲ್ಲಿ ಯಾವುದೇ ರನ್ ಗಳಿಸದ ರೋಹಿತ್ ಮೂರನೇ ಎಸೆತದಲ್ಲಿ ಬ್ಯಾಕ್‌ವರ್ಡ್ ಸ್ಕ್ವೇರ್ ಲೆಗ್ ಕಡೆಗೆ ಭರ್ಜರಿ ಸಿಕ್ಸ್ ಸಿಡಿಸಿದರು. ಚೆಂಡು ನೇರವಾಗಿ ಹೋಗಿ ಸ್ಟ್ಯಾಂಡ್‌ನಲ್ಲಿ ಕುಳಿತಿದ್ದ ಪುಟಾಣಿ ಬಾಲಕಿಗೆ ಬಡಿಯಿತು. ಕ್ಯಾಮೆರಾಮನ್ ಇಡೀ ಘಟನೆಯನ್ನು ದೊಡ್ಡ ಪರದೆಯ ಮೇಲೆ ತೋರಿಸುತ್ತಿದ್ದಂತೆ, ಎಲ್ಲರೂ ಸ್ವಲ್ಪ ಸಮಯದವರೆಗೆ ಸ್ತಬ್ಧರಾದರು.
ಇದನ್ನು ನೋಡಿದ ತಕ್ಷಣವೇ ಇಂಗ್ಲೆಂಡ್ ತಂಡದ ಫಿಸಿಯೋ ಮತ್ತು ತಂಡದ ವೈದ್ಯರು ಹುಡುಗಿಯ ಬಳಿಗೆ ಓಡಿ ಬಂದರು. ಆ ಬಳಿಕ ಪಂದ್ಯವನ್ನು ಮುಂದುವರೆಸಲಾಯಿತು. ಅದರಂತೆ ಅಬ್ಬರಿಸಿದ ರೋಹಿತ್ ಶರ್ಮಾ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದರು. ಅಲ್ಲದೆ ಅರ್ಧಶತಕ ಸಿಡಿಸುವ ಮೂಲಕ 20 ಓವರ್ಗಳ ಒಳಗೆಯೇ ತಂಡಕ್ಕೆ ಜಯ ತಂದುಕೊಟ್ಟರು.
This six of #RohitSharma hit a little girl hope she is fine #ENGvsIND pic.twitter.com/uzg6MhSnco
— Abhishek (@itz_abhishek_45) July 12, 2022
ಇದಕ್ಕೂ ಮುನ್ನ ಟಾಸ್ ಗೆದ್ದ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಬೌಲಿಂಗ್ ಆಯ್ದುಕೊಂಡಿದ್ದರು. ನಾಯಕನ ನಿರ್ಧಾರವನ್ನು ಸಮರ್ಥಿಸುವಂತೆ ಬೌಲಿಂಗ್ ದಾಳಿ ಸಂಘಟಿಸಿದ ಟೀಮ್ ಇಂಡಿಯಾ ವೇಗಿಗಳು ಇಂಗ್ಲೆಂಡ್ಗೆ ಆರಂಭಿಕ ಆಘಾತ ನೀಡಿದ್ದರು. ಪರಿಣಾಮ ಕೇವಲ 26 ರನ್ಗಳಿಸುವಷ್ಟರಲ್ಲಿ ಇಂಗ್ಲೆಂಡ್ ತಂಡದ 5 ಪ್ರಮುಖ ಬ್ಯಾಟ್ಸ್ಮನ್ಗಳು ಪೆವಿಲಿಯನ್ಗೆ ಮರಳಿದ್ದರು.
Rohit Sharma’s six hits a little girl in the crowd.
England’s physios provide medical assistance.
Hope nothing serious! #ENGvIND #INDvENG #INDvsENG pic.twitter.com/xuH9rXH56R
— SportsBash (@thesportsbash) July 12, 2022
ಇದಾಗ್ಯೂ ನಾಯಕ ಜೋಸ್ ಬಟ್ಲರ್ 30 ರನ್ಗಳಿಸುವ ಮೂಲಕ ತಂಡಕ್ಕೆ ಆಸರೆಯಾಗಿದ್ದರು. ಆದರೆ ಮೊಹಮ್ಮದ್ ಶಮಿ ಎಸೆತಕ್ಕೆ ಭರ್ಜರಿ ಉತ್ತರ ನೀಡಲು ಹೋದ ಬಟ್ಲರ್ ಕೂಡ ಔಟಾದರು. ಒಂದು ಹಂತದಲ್ಲಿ ಕೇವಲ 68 ರನ್ಗಳಿಗೆ 8 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದ ತಂಡಕ್ಕೆ ಡೇವಿಡ್ ವಿಲ್ಲಿ ಆಸರೆಯಾಗಿ ನಿಂತರು. ಅದರಂತೆ ವಿಲ್ಲಿ 21 ರನ್ಗಳ ಉಪಯುಕ್ತ ಕಾಣಿಕೆ ನೀಡಿದರು. ಪರಿಣಾಮ ಇಂಗ್ಲೆಂಡ್ ತಂಡದ ಮೊತ್ತ ನೂರರ ಗಡಿದಾಟಿತು.
ಇದಾಗ್ಯೂ ಟೀಮ್ ಇಂಡಿಯಾ ಬೌಲರ್ಗಳ ಮುಂದೆ 26 ಓವರ್ಗಳನ್ನು ದಾಟಲು ಆಂಗ್ಲ ಆಟಗಾರರಿಗೆ ಸಾಧ್ಯವಾಗಿಲ್ಲ. ಅಂತಿಮವಾಗಿ ಜಸ್ಪ್ರೀತ್ ಬುಮ್ರಾ ದಾಳಿಗೆ ತತ್ತರಿಸಿದ ಇಂಗ್ಲೆಂಡ್ 25.2 ಓವರ್ಗಳಲ್ಲಿ ಕೇವಲ 110 ರನ್ಗಳಿಗೆ ಸರ್ವಪತನ ಕಂಡಿತು. ಟೀಮ್ ಇಂಡಿಯಾ ಪರ ಬುಮ್ರಾ ಕೇವಲ 19 ರನ್ ನೀಡಿ 6 ವಿಕೆಟ್ ಕಬಳಿಸಿದರೆ, ಮೊಹಮ್ಮದ್ ಶಮಿ 3 ವಿಕೆಟ್ ಪಡೆದರು.
ಇನ್ನು ಇಂಗ್ಲೆಂಡ್ ನೀಡಿದ 111 ರನ್ಗಳ ಟಾರ್ಗೆಟ್ ಅನ್ನು ಬೆನ್ನತ್ತಿದ ಟೀಮ್ ಇಂಡಿಯಾಗೆ ಆರಂಭಿಕರಾದ ರೋಹಿತ್ ಶರ್ಮಾ ಹಾಗೂ ಶಿಖರ್ ಧವನ್ ಭರ್ಜರಿ ಆರಂಭ ಒದಗಿಸಿದ್ದರು. ಅತ್ಯುತ್ತಮ ಜೊತೆಯಾಟವಾಡಿದ ಈ ಜೋಡಿ ಎಲ್ಲಾ ಹಂತದಲ್ಲೂ ಇಂಗ್ಲೆಂಡ್ ಬೌಲರ್ಗಳ ವಿರುದ್ದ ಮೇಲುಗೈ ಸಾಧಿಸಿದರು. ಅದರಂತೆ ರೋಹಿತ್ ಶರ್ಮಾ ಕೇವಲ 49 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಮತ್ತೊಂದೆಡೆ ಶಿಖರ್ ಧವನ್ ಉತ್ತಮ ಸಾಥ್ ನೀಡಿದರು.
ಅಂತಿಮವಾಗಿ ರೋಹಿತ್ ಶರ್ಜಾ ಅಜೇಯ 76 (58) ರನ್ ಬಾರಿಸಿದರೆ, ಶಿಖರ್ ಧವನ್ ಅಜೇಯ 31 (54) ರನ್ ಕಲೆಹಾಕಿದರು. ಪರಿಣಾಮ 18.4 ಓವರ್ಗಳಲ್ಲಿ ಟೀಮ್ ಇಂಡಿಯಾ ವಿಕೆಟ್ ನಷ್ಟವಿಲ್ಲದೆ 114 ರನ್ ಬಾರಿಸುವ ಮೂಲಕ 10 ವಿಕೆಟ್ಗಳ ಭರ್ಜರಿ ಜಯ ಸಾಧಿಸಿತು. ಈ ಗೆಲುವಿನೊಂದಿಗೆ ಟೀಮ್ ಇಂಡಿಯಾ 3 ಪಂದ್ಯಗಳ ಸರಣಿಯಲ್ಲಿ 1-0 ಅಂತರದಿಂದ ಮುನ್ನಡೆ ಪಡೆದಿದೆ. ಇನ್ನು ಈ ಪಂದ್ಯದಲ್ಲಿ 7.2 ಓವರ್ಗಳಲ್ಲಿ ಕೇವಲ 19 ರನ್ ನೀಡಿ 6 ವಿಕೆಟ್ ಉರುಳಿಸಿ ಮಿಂಚಿದ್ದ ಜಸ್ಪ್ರೀತ್ ಬುಮ್ರಾ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದರು.
Published On - 10:22 am, Wed, 13 July 22