ಪಂದ್ಯದ ನಡುವೆ ಸ್ಟೇಡಿಯಂನಲ್ಲಿ ಮಗುವಿಗೆ ಜನ್ಮ ನೀಡಿದ ಮಹಿಳೆ
South Africa vs Pakistan: ಸೌತ್ ಆಫ್ರಿಕಾ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯನ್ನು ಪಾಕಿಸ್ತಾನ್ ಕ್ಲೀನ್ ಸ್ವೀಪ್ ಮಾಡಿಕೊಂಡಿದೆ. ಈ ಸರಣಿಯ ಮೊದಲ ಪಂದ್ಯದಲ್ಲಿ ಪಾಕಿಸ್ತಾನ್ 3 ವಿಕೆಟ್ಗಳ ಜಯ ಸಾಧಿಸಿತ್ತು. ಇನ್ನು ದ್ವಿತೀಯ ಪಂದ್ಯವನ್ನು 81 ರನ್ಗಳಿಂದ ಗೆದ್ದುಕೊಂಡಿದ್ದ ಪಾಕ್ ಪಡೆ ಇದೀಗ ಮೂರನೇ ಪಂದ್ಯದಲ್ಲಿ 36 ರನ್ಗಳ ಜಯಭೇರಿ ಬಾರಿಸಿದೆ.
ಪಂದ್ಯ ನಡುವೆ ಸ್ಟೇಡಿಯಂನಲ್ಲಿ ಪ್ರೇಮ ನಿವೇದನೆ ಮಾಡಿಕೊಳ್ಳುವುದನ್ನು ನೀವು ನೋಡಿರುತ್ತೀರಿ. ಆದರೆ ಇದೇ ಮೊದಲ ಬಾರಿಗೆ ಸ್ಟೇಡಿಯಂನಲ್ಲಿ ಮಹಿಳೆಯೊಬ್ಬರು ಮಗುವಿಗೆ ಜನ್ಮ ನೀಡಿದ್ದಾರೆ. ಇಂತಹದೊಂದು ಅಪರೂಪದ ಘಟನೆ ನಡೆದಿರುವುದು ಜೋಹಾನ್ಸ್ಬರ್ಗ್ನ ವಾಂಡರರ್ಸ್ ಸ್ಡೇಡಿಯಂನಲ್ಲಿ. ಭಾನುವಾರ ವಾಂಡರರ್ಸ್ ಸ್ಟೇಡಿಯಂನಲ್ಲಿ ಸೌತ್ ಆಫ್ರಿಕಾ ಮತ್ತು ಪಾಕಿಸ್ತಾನ್ ನಡುವಣ 3ನೇ ಏಕದಿನ ಪಂದ್ಯ ನಡೆಯುತ್ತಿತ್ತು. ಇದೇ ವೇಳೆ ಪಂದ್ಯ ವೀಕ್ಷಿಸಲು ಗರ್ಭಿಣಿ ಮಹಿಳೆ ಕೂಡ ಆಗಮಿಸಿದ್ದಾರೆ. ಪಂದ್ಯ ನಡುವೆ ಗ್ಯಾಲರಿಯಲ್ಲಿ ಕೂತಿದ್ದ ಮಹಿಳೆಗೆ ಹೆರಿಗೆ ನೋವು ಕಾಣಿಸಿಕೊಂಡಿದೆ.
ಶೀಘ್ರದಲ್ಲೇ ಮಹಿಳೆಯನ್ನು ವಾಂಡರರ್ಸ್ ಸ್ಟೇಡಿಯಂನಲ್ಲಿನ ವೈದ್ಯಕೀಯ ಕೇಂದ್ರಕ್ಕೆ ಶಿಫ್ಟ್ ಮಾಡಲಾಯಿತು. ಇದಾದ ಬಳಿಕ ಸ್ಟೇಡಿಯಂನಲ್ಲಿನ ಬಿಗ್ ಸ್ಕ್ರೀನ್ನಲ್ಲಿ ಶ್ರೀಮತಿ ರಾಬೆಂಗ್ ಅವರು ಗಂಡು ಮಗುವಿಗೆ ಜನ್ಮ ನೀಡಿದ್ದಾರೆ ಎಂದು ತೋರಿಸಲಾಗಿದ್ದು ವಿಶೇಷ. ಈ ಅಭಿನಂದನೆಯು ಬಿಗ್ ಸ್ಕ್ರೀನ್ನಲ್ಲಿ ಕಾಣಿಸಿಕೊಳ್ಳುತ್ತಿದ್ದಂತೆ ಸ್ಟೇಡಿಯಂನಲ್ಲಿದ್ದ ಪ್ರೇಕ್ಷಕರು ಚಪ್ಪಾಳೆಯೊಂದಿಗೆ ಪುಟ್ಟ ಪಾಪುವನ್ನು ಸ್ವಾಗತಿಸಿದರು.
A baby born at the stadium.#ThankYouSaimAyub pic.twitter.com/90i7YFlltt
— M (@anngrypakiistan) December 22, 2024
ಇನ್ನು ಈ ಪಂದ್ಯದಲ್ಲಿ ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಪಾಕಿಸ್ತಾನ್ ತಂಡವು ಸೈಮ್ ಅಯ್ಯೂಬ್ (101) ಅವರ ಶತಕದ ನೆರವಿನಿಂದ ನಿಗದಿತ 47 ಓವರ್ಗಳಲ್ಲಿ 9 ವಿಕೆಟ್ ಕಳೆದುಕೊಂಡು 308 ರನ್ ಕಲೆಹಾಕಿತು. ಈ ಗುರಿಯನ್ನು ಬೆನ್ನತ್ತಿದ ಸೌತ್ ಆಫ್ರಿಕಾ ತಂಡವು 42 ಓವರ್ಗಳಲ್ಲಿ 271 ರನ್ಗಳಿಸಿ ಆಲೌಟ್ ಆಗಿದೆ.
ಈ ಮೂಲಕ ಪಾಕಿಸ್ತಾನ್ ತಂಡವು ಮೂರನೇ ಏಕದಿನ ಪಂದ್ಯದಲ್ಲಿ 36 ರನ್ಗಳ ಜಯ ಸಾಧಿಸಿದೆ. ಈ ಗೆಲುವಿನೊಂದಿಗೆ 3 ಪಂದ್ಯಗಳ ಸರಣಿಯನ್ನು ಪಾಕ್ ಪಡೆ 3-0 ಅಂತರದಿಂದ ಕ್ಲೀನ್ ಸ್ವೀಪ್ ಮಾಡಿಕೊಂಡಿದೆ.
ಸೌತ್ ಆಫ್ರಿಕಾ ಪ್ಲೇಯಿಂಗ್ 11: ಟೋನಿ ಡಿ ಝೊರ್ಝಿ , ಟೆಂಬಾ ಬವುಮಾ (ನಾಯಕ) , ರಾಸ್ಸಿ ವ್ಯಾನ್ ಡೆರ್ ಡುಸ್ಸೆನ್ , ಐಡೆನ್ ಮಾರ್ಕ್ರಾಮ್ , ಹೆನ್ರಿಕ್ ಕ್ಲಾಸೆನ್ (ವಿಕೆಟ್ ಕೀಪರ್) , ಡೇವಿಡ್ ಮಿಲ್ಲರ್ , ಮಾರ್ಕೊ ಜಾನ್ಸೆನ್ , ಕಾರ್ಬಿನ್ ಬಾಷ್ , ಜೋರ್ನ್ ಫೋರ್ಚುಯಿನ್ , ಕಗಿಸೊ ರಬಾಡಾ , ಕ್ವೆನಾ ಮಫಕಾ.
ಇದನ್ನೂ ಓದಿ: 22ನೇ ವಯಸ್ಸಿನಲ್ಲೇ ಸೈಮ್ ಅಯ್ಯೂಬ್ ಅಬ್ಬರ: ಸಚಿನ್, ವಿರಾಟ್ ಕೊಹ್ಲಿ ದಾಖಲೆ ಶೇಕಿಂಗ್
ಪಾಕಿಸ್ತಾನ್ ಪ್ಲೇಯಿಂಗ್ 11: ಸೈಮ್ ಅಯ್ಯೂಬ್ , ಅಬ್ದುಲ್ಲಾ ಶಫೀಕ್ , ಬಾಬರ್ ಆಝಂ , ಮೊಹಮ್ಮದ್ ರಿಝ್ವಾನ್ (ನಾಯಕ) , ಕಮ್ರಾನ್ ಗುಲಾಮ್ , ಸಲ್ಮಾನ್ ಅಘಾ , ತಯ್ಯಬ್ ತಾಹಿರ್ , ಶಾಹೀನ್ ಅಫ್ರಿದಿ , ನಸೀಮ್ ಶಾ , ಮೊಹಮ್ಮದ್ ಹಸ್ನೈನ್ , ಸುಫಿಯಾನ್ ಮುಖೀಮ್.