16ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ (IPL 2023) ಇನ್ನೇನು ಕೆಲವೇ ತಿಂಗಳುಗಳಲ್ಲಿ ಪ್ರಾರಂಭವಾಗಲಿದೆ. ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ವೇಳಾಪಟ್ಟಿ ತಯಾರಿ ಮಾಡಿಕೊಳ್ಳುತ್ತಿದ್ದು, ಸದ್ಯದಲ್ಲಿ ಪ್ರಕಟವಾಗಲಿದೆ. ಇದೀಗ ಎಲ್ಲ 10 ಫ್ರಾಂಚೈಸಿಗಳು ಕೂಡ ಕೆಲಸ ಶುರು ಮಾಡಿಕೊಂಡಿವೆ. ಕಳೆದ ತಿಂಗಳು ಡಿಸೆಂಬರ್ನಲ್ಲಿ ಕೇರಳದ ಕೊಚ್ಚಿಯಲ್ಲಿ ಮಿನಿ ಹರಾಜು ಪ್ರಕ್ರಿಯೆ ನಡೆದಿತ್ತು. ಹಿಂದಿನ 15 ಆವೃತ್ತಿಗಳಲ್ಲಿ ಒಂದು ಬಾರಿಯೂ ಕಪ್ ಗೆಲ್ಲದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಆಕ್ಷನ್ನಲ್ಲಿ ಏಳು ಹೊಸ ಆಟಗಾರರನ್ನು ಖರೀದಿ ಮಾಡಿತ್ತು. ಸದ್ಯ ಆರ್ಸಿಬಿ (RCB) ತಂಡ ಮೇಲ್ನೋಟಕ್ಕೆ ಬಲಿಷ್ಠವಾಗಿರುವಂತೆ ಗೋಚರಿಸುತ್ತದೆ. ಇದರ ನಡುವೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಶುಭಸುದ್ದಿಯೊಂದು ಸಿಕ್ಕಿದೆ.
ಈ ಬಾರಿಯ ಐಪಿಎಲ್ನಲ್ಲಿ ಆಡುವುದು ಅನುಮಾನ ಎನ್ನಲಾಗಿದ್ದ ಆರ್ಸಿಬಿ ತಂಡದ ಸ್ಫೋಟಕ ಆಲ್ರೌಂಡರ್ ಗ್ಲೆನ್ ಮ್ಯಾಕ್ಸ್‌ವೆಲ್ ಇದೀಗ ಕ್ರಿಕೆಟ್ ಅಂಗಳಕ್ಕೆ ಕಾಲಿಡಲು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಆಂಗ್ಲ ಪತ್ರಿಕೆಯೊಂದು ಮಾಡಿರುವ ವರದಿಯ ಪ್ರಕಾರ, ಮ್ಯಾಕ್ಸ್‌ವೆಲ್ ಕೆಲವೇ ವಾರಗಳಲ್ಲಿ ರಾಷ್ಟ್ರೀಯ ತಂಡ ಸೇರಿಕೊಳ್ಳಲಿದ್ದಾರೆ ಎಂದು ಹೇಳಿದೆ. ಮ್ಯಾಕ್ಸ್‌ವೆಲ್ ಕಳೆದ ವರ್ಷ ನವೆಂಬರ್ನಲ್ಲಿ ಸ್ನೇಹಿತನ ಹುಟ್ಟುಹಬ್ಬದ ಪಾರ್ಟಿಗೆ ಹೋಗಿದ್ದರು. ಅಲ್ಲಿ ತನ್ನ ಸ್ನೇಹಿತನೊಂದಿಗೆ ಟೆನ್ನಿಸ್ ಅಂಕಣದಲ್ಲಿ ರನ್ನಿಂಗ್ ಮಾಡುವ ವೇಳೆ ನೆಲಕ್ಕೆ ಬಿದ್ದು ಎಡಗಾಲು ಮುರಿದಿದ್ದು, ಶಸ್ತ್ರಚಿಕಿತ್ಸೆ ಮಾಡಲಾಗಿತ್ತು. ಅವರು ಮುಂದಿನ 12 ವಾರಗಳ ಕಾಲ ಕ್ರಿಕೆಟ್‌ನಿಂದ ದೂರವಿರಬೇಕು ಎಂದು ವೈದ್ಯರು ಸೂಚಿಸಿದ್ದರು.
ಆದರೀಗ ಮ್ಯಾಕ್ಸ್‌ವೆಲ್ ಗುಣಮುಖರಾಗಿದ್ದು ಆಸ್ಟ್ರೇಲಿಯಾ ತಂಡದ ಪರ ಆಡುವ ಜೊತೆಗೆ ಐಪಿಎಲ್ 2023 ವೇಳೆ ಆರ್ಸಿಬಿ ತಂಡ ಸೇರಿಕೊಳ್ಳುವುದು ಖಚಿತವಾಗಿದೆ. ಇದರಿಂದ ಬೆಂಗಳೂರು ತಂಡಕ್ಕೆ ಆನೆಬಲ ಬಂದಂತಾಗಿದೆ. ನಾಯಕ ಫಾಫ್ ಡುಪ್ಲೆಸಿಸ್, ವಿರಾಟ್ ಕೊಹ್ಲಿ ಖುಷಿ ಆಗಿದ್ದು ತಂಡ ಮತ್ತಷ್ಟು ಬಲಿಷ್ಠವಾಗಿದೆ. ದಿ ಏಜ್ ಪ್ರಕಾರ, ಫೆಬ್ರವರಿ 9 ರಂದು ಮೆಲ್ಬೋರ್ನ್ ಕ್ರಿಕೆಟ್ ಮೈದಾನದಲ್ಲಿ ನಡೆಯಲಿರುವ ಕ್ವೀನ್ಸ್‌ಲ್ಯಾಂಡ್ ವಿರುದ್ಧದ ಶೆಫೀಲ್ಡ್ ಶೀಲ್ಡ್ ಪಂದ್ಯಾವಳಿಯಲ್ಲಿ ಮ್ಯಾಕ್ಸಿ ವಿಕ್ಟೋರಿಯಾ ಪರವಾಗಿ ಕಣಕ್ಕಿಳಿಯಲಿದ್ದಾರಂತೆ.
Hardik Pandya: ತಂಡದ ಸೋಲಿಗೆ ಅಚ್ಚರಿಯ ಕಾರಣ ತಿಳಿಸಿದ ಹಾರ್ದಿಕ್ ಪಾಂಡ್ಯ: ಏನಂದ್ರು ನೋಡಿ
ಐಪಿಎಲ್ 2023 ಹರಾಜಿಗೂ ಮುನ್ನ ಆರ್ಸಿಬಿ ತನ್ನ ಪ್ರಮುಖ ಆಟಗಾರರನ್ನು ಉಳಿಸಿಕೊಂಡು, 5 ಆಟಗಾರರನ್ನು ಬಿಡುಗಡೆ ಮಾಡಿತ್ತು. ಬಳಿಕ ಆಕ್ಷನ್ನಲ್ಲಿ 7 ಕೋಟಿ ರೂ. ಖರ್ಚು ಮಾಡಿ 7 ಆಟಗಾರರ ಖರೀದಿ ಮಾಡಿತು. ಇಂಗ್ಲೆಂಡ್‌ನ ಎಡಗೈ ವೇಗಿ ರೀಸ್ ಟಾಪ್ಲೀ, ಆಲ್‌ರೌಂಡರ್ ವಿಲ್ ಜಾಕ್ಸ್, ದೇಶೀ ಪ್ರತಿಭೆ ಮನೋಜ್ ಭಂಡಾಜೆ, ಹಿಮಾಂಶು ಶರ್ಮಾ, ರಜನ್ ಕುಮಾರ್, ಅವಿನಾಶ್ ಸಿಂಗ್ ಹಾಗೂ ಸೋನು ಯಾದವ್ ಅವರನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ಹರಾಜಿನಲ್ಲಿ ಖರೀದಿ ಮಾಡಿತ್ತು.
ಆರ್ಸಿಬಿ ತಂಡ: ಫಾಫ್ ಡುಪ್ಲೆಸಿಸ್ (ನಾಯಕ), ವಿರಾಟ್ ಕೊಹ್ಲಿ, ದಿನೇಶ್ ಕಾರ್ತಿಕ್, ಮಹಿಪಾಲ್ ಲೊಮ್ರೋರ್, ಫಿನ್ ಅಲೆನ್, ರಜತ್ ಪಾಟಿದಾರ್, ಅನುಜ್ ರಾವತ್, ಗ್ಲೆನ್ ಮ್ಯಾಕ್ಸ್‌ವೆಲ್, ಡೇವಿಡ್ ವಿಲ್ಲಿ, ಸುಯಶ್ ಪ್ರಭುದೇಸಾಯಿ, ಹರ್ಷಲ್ ಪಟೇಲ್, ವನಿಂದು ಹಸರಂಗ, ಶಹಬಾಜ್ ಅಹಮದ್, ಸಿದ್ಧಾರ್ಥ್ ಕೌಲ್, ಮೊಹಮ್ಮದ್ ಸಿರಾಜ್, ಹಿಮಾಂಶು ಶರ್ಮಾ, ವಿಲ್ ಜಾಕ್ಸ್, ಮನೋಜ್ ಭಾಂಡಗೆ, ರಾಜನ್ ಕುಮಾರ್, ಅವಿನಾಶ್ ಸಿಂಗ್, ಸೋನು ಯಾದವ್, ಆಕಾಶ್ ದೀಪ್, ಜೋಶ್ ಹೇಜಲ್‌ವುಡ್, ಕರಣ್ ಶರ್ಮಾ, ರೀಸ್ ಟೋಪ್ಲಿ.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ