Sachin Tendulkar: ವಿಶೇಷ ಪಂದ್ಯಕ್ಕಾಗಿ ಸಚಿನ್ ತೆಂಡೂಲ್ಕರ್ ಕಂಬ್ಯಾಕ್..!

| Updated By: Digi Tech Desk

Updated on: Feb 14, 2024 | 3:12 PM

Sachin Tendulkar: ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ 664 ಪಂದ್ಯಗಳನ್ನಾಡಿರುವ ಸಚಿನ್ ತೆಂಡೂಲ್ಕರ್ ಒಟ್ಟು 34357 ರನ್ ಕಲೆಹಾಕಿದ್ದಾರೆ. ಈ ವೇಳೆ 100 ಶತಕ ಹಾಗೂ 164 ಅರ್ಧಶತಕಗಳನ್ನು ಸಿಡಿಸಿ ವಿಶ್ವ ದಾಖಲೆಯನ್ನು ನಿರ್ಮಿಸಿದ್ದಾರೆ.

Sachin Tendulkar: ವಿಶೇಷ ಪಂದ್ಯಕ್ಕಾಗಿ ಸಚಿನ್ ತೆಂಡೂಲ್ಕರ್ ಕಂಬ್ಯಾಕ್..!
Sachin Tendulkar
Follow us on

ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ (Sachin Tendulkar) ವಿದಾಯ ಹೇಳಿ ಒಂದು ದಶಕ ಕಳೆದಿದೆ. ಆದಾಗ್ಯೂ ಅವರು ಮೈದಾನದ ಬಳಿ ಕಾಣಿಸಿಕೊಂಡರೆ ಪ್ರತಿ ಬಾರಿ ಕೂಡ ಒಮ್ಮತದ ಸಚಿನ್ ಸಚಿನ್ ಹರ್ಷೋದ್ಘಾರ ಪ್ರತಿಧ್ವನಿಸುತ್ತದೆ. ಇದೀಗ ಮತ್ತೊಮ್ಮೆ ಸಚಿನ್ ತೆಂಡೂಲ್ಕರ್ ಮೈದಾನಕ್ಕಿಳಿಯಲು ಸಜ್ಜಾಗಿದ್ದಾರೆ. ಅದು ಕೂಡ ವಿಶೇಷ ಪಂದ್ಯವಾಡಲು ಎಂಬುದು ವಿಶೇಷ.

ಜನವರಿ 18 ರಂದು ಬೆಂಗಳೂರಿನ ಸಾಯಿ ಕೃಷ್ಣ ಕ್ರಿಕೆಟ್ ಸ್ಟೇಡಿಯಂನಲ್ಲಿ ಒನ್ ವರ್ಲ್ಡ್​ ಒನ್ ಫ್ಯಾಮಿಲಿ ಕಪ್ ಪ್ರದರ್ಶನ ಪಂದ್ಯ ನಡೆಯಲಿದೆ. ಈ ಪಂದ್ಯದಲ್ಲಿ ಸಚಿನ್ ತೆಂಡೂಲ್ಕರ್ ಕಣಕ್ಕಿಳಿಯಲಿದ್ದಾರೆ. ಸಾಮಾಜಿಕ ಉದ್ದೇಶವನ್ನು ಬೆಂಬಲಿಸಲು ಈ ಪಂದ್ಯವನ್ನು ಆಯೋಜಿಸಲಾಗುತ್ತಿದೆ. ಈ ಮೂಲಕ ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಕ್ಕೆ ಸಂಬಂಧಿಸಿದ ಉದಾತ್ತ ಕಾರಣಗಳಿಗಾಗಿ ಹಣವನ್ನು ಸಂಗ್ರಹಿಸಲಾಗುತ್ತದೆ.

ಎರಡು ತಂಡಗಳ ನಡುವಣ ಪೈಪೋಟಿ:

ಈ ಪ್ರದರ್ಶನ ಪಂದ್ಯದಲ್ಲಿ ಸಚಿನ್ ತೆಂಡೂಲ್ಕರ್ ಹಾಗೂ ಯುವರಾಜ್ ಸಿಂಗ್ ನೇತೃತ್ವದ ತಂಡಗಳು ಕಣಕ್ಕಿಳಿಯಲಿದೆ. ವಿಶೇಷ ಎಂದರೆ ಈ ಇಬ್ಬರು ಸ್ಟಾರ್​ಗಳೊಂದಿಗೆ ಇರ್ಫಾನ್ ಪಠಾಣ್, ಮುತ್ತಯ್ಯ ಮುರಳೀಧರನ್, ಮಾಂಟಿ ಪನೇಸರ್, ಮಖಯಾ ಎನ್ಟಿನಿ ಮುಂತಾದವರು ಕೈ ಜೋಡಿಸಲಿದ್ದಾರೆ. ಈ ಮೂಲಕ ಪರಿಪೂರ್ಣ ಕ್ರಿಕೆಟ್ ರಸದೌತಣ ಒದಗಿಸಲು ಆಯೋಜಕರು ಪ್ಲ್ಯಾನ್ ರೂಪಿಸಿದ್ದಾರೆ.

2013 ರಲ್ಲಿ ವಿದಾಯ:

ಸಚಿನ್ ತೆಂಡೂಲ್ಕರ್ ಸ್ಪರ್ಧಾತ್ಮಕ ಕ್ರಿಕೆಟ್​ಗೆ ವಿದಾಯ ಹೇಳಿ 10 ವರ್ಷಗಳೇ ಕಳೆದಿವೆ. 1989 ರಲ್ಲಿ ಚೊಚ್ಚಲ ಬಾರಿ ಟೀಮ್ ಇಂಡಿಯಾ ಪರ ಕಣಕ್ಕಿಳಿದಿದ್ದ ಅವರು 2013 ರಲ್ಲಿ ಕೊನೆಯ ಟೆಸ್ಟ್ ಪಂದ್ಯವಾಡಿದ್ದರು. ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ವೆಸ್ಟ್ ಇಂಡೀಸ್​ ವಿರುದ್ಧದ ಈ ಪಂದ್ಯದಲ್ಲಿ ಸಚಿನ್ ತೆಂಡೂಲ್ಕರ್ 74 ರನ್ ಬಾರಿಸಿದ್ದರು.

ಕೊನೆಯ ಪಂದ್ಯದಲ್ಲಿ ಅರ್ಧಶತಕ ಬಾರಿಸಿ ತಮ್ಮ ಕ್ರಿಕೆಟ್ ಜೀವನಕ್ಕೆ ವಿದಾಯ ಹೇಳಿದ್ದರು. ಇದಾಗ್ಯೂ ಅವರು ರೋಡ್ ಸೇಫ್ಟಿ ಸಿರೀಸ್ ಹಾಗೂ ಇನ್ನಿತರ ಕೆಲ ಲೀಗ್​ಗಳಲ್ಲಿ ಕಾಣಿಸಿಕೊಂಡಿದ್ದರು. ಇದೀಗ ಪ್ರದರ್ಶನ ಪಂದ್ಯದ ಮೂಲಕ ಮತ್ತೊಮ್ಮೆ ಮೈದಾನಕ್ಕಿಳಿಯಲು ಮಾಸ್ಟರ್ ಬ್ಲಾಸ್ಟರ್ ಸಜ್ಜಾಗಿದ್ದಾರೆ.

ಇದನ್ನೂ ಓದಿ: ಈ IPL ನಲ್ಲೂ RCBಗೆ ಸೋಲು: SRH ವಿನ್ನರ್..!

ಸಚಿನ್ ವಿಶ್ವ ದಾಖಲೆ:

ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ 664 ಪಂದ್ಯಗಳನ್ನಾಡಿರುವ ಸಚಿನ್ ತೆಂಡೂಲ್ಕರ್ ಒಟ್ಟು 34357 ರನ್ ಕಲೆಹಾಕಿದ್ದಾರೆ. ಈ ವೇಳೆ 100 ಶತಕ ಹಾಗೂ 164 ಅರ್ಧಶತಕಗಳನ್ನು ಸಿಡಿಸಿ ವಿಶ್ವ ದಾಖಲೆಯನ್ನು ನಿರ್ಮಿಸಿದ್ದಾರೆ.

 

 

Published On - 8:05 am, Sun, 14 January 24