ಆಸ್ಟ್ರೇಲಿಯಾ ವಿರುದ್ಧದ ಟಿ20 ಸರಣಿಯ ಮೊದಲ ಪಂದ್ಯದಲ್ಲಿ ಟೀಮ್ ಇಂಡಿಯಾ ಸೋಲಿನ ಬೆನ್ನಲ್ಲೇ ಇದೀಗ ಭಾರತೀಯ ಆಟಗಾರರ ಫಿಟ್‌ನೆಸ್ ಬಗ್ಗೆ ಪ್ರಶ್ನೆಗಳನ್ನೆತ್ತಿದ್ದಾರೆ ಪಾಕಿಸ್ತಾನ್ ತಂಡದ ಮಾಜಿ ಆಟಗಾರ ಸಲ್ಮಾನ್ ಬಟ್. ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಟೀಮ್ ಇಂಡಿಯಾ ಸೋಲಲು ಆಟಗಾರರ ಫಿಟ್‌ನೆಸ್ ಸಮಸ್ಯೆಯೇ ಕಾರಣ ಎಂದು ಪಾಕ್ ಆಟಗಾರ ಅಭಿಪ್ರಾಯಪಟ್ಟಿದ್ದಾರೆ. ಮೊಹಾಲಿಯಲ್ಲಿ ನಡೆದ ಮೊದಲ ಟಿ20 ಪಂದ್ಯದಲ್ಲಿ ಭಾರತದ ಬೌಲರ್‌ಗಳ ಪ್ರದರ್ಶನ ನಿರಾಶಾದಾಯಕವಾಗಿತ್ತು. ಇದರ ಜೊತೆ ಟೀಮ್ ಇಂಡಿಯಾ ಫೀಲ್ಡರ್‌ಗಳು ಕ್ಯಾಚ್‌ಗಳನ್ನು ಕೈಚೆಲ್ಲಿದ್ದರು. ಇದಕ್ಕೆ ಮುಖ್ಯ ಕಾರಣ ಭಾರತ ತಂಡದಲ್ಲಿನ ಫಿಟ್‌ನೆಸ್ ಕೊರತೆ ಎಂದು ಸಲ್ಮಾನ್ ಬಟ್ ಹೇಳಿದರು.
ಜನರು ಈ ಬಗ್ಗೆ ಯೋಚಿಸುತ್ತಾರೋ ಇಲ್ಲವೋ ನನಗೆ ಗೊತ್ತಿಲ್ಲ, ಆದರೆ ನನ್ನ ಪ್ರಕಾರ ಭಾರತೀಯ ಆಟಗಾರರ ಫಿಟ್‌ನೆಸ್ ಸೂಕ್ತವಾಗಿಲ್ಲ. ವಿರಾಟ್ ಕೊಹ್ಲಿ ಮತ್ತು ಹಾರ್ದಿಕ್ ಪಾಂಡ್ಯ ಅವರಂತಹ ಆಯ್ದ ಕೆಲವು ಆಟಗಾರರನ್ನು ಹೊರತುಪಡಿಸಿ, ಉಳಿದ ಆಟಗಾರರ ಫಿಟ್‌ನೆಸ್ ಹೊಂದಿಲ್ಲ. ಇದಲ್ಲದೆ ಟೀಮ್ ಇಂಡಿಯಾ ವೇಗದ ಬೌಲರ್‌ಗಳಿಗೆ ವೇಗದ ಕೊರತೆಯಿದೆ ಎಂದು ಸಲ್ಮಾನ್ ಬಟ್ ಅಭಿಪ್ರಾಯಪಟ್ಟರು.
ಟಿ20 ವಿಶ್ವಕಪ್‌ಗೂ ಮುನ್ನ ವೇಗದ ಬೌಲಿಂಗ್ ಮತ್ತು ಫಿಟ್‌ನೆಸ್ ಭಾರತ ತಂಡದ ಆತಂಕದ ವಿಷಯವಾಗಿದೆ. ಕೊಹ್ಲಿ, ಪಾಂಡ್ಯ ಅವರನ್ನು ಬಿಟ್ಟು ಬಿಡಿ, ನಾಯಕ ರೋಹಿತ್ ಶರ್ಮಾ, ಕೆಎಲ್ ರಾಹುಲ್ ಮತ್ತು ರಿಷಭ್ ಪಂತ್ ಅವರಂತಹ ಆಟಗಾರರು ತಮ್ಮ ಫಿಟ್‌ನೆಸ್ ಅನ್ನು ಸುಧಾರಿಸಬೇಕಾಗಿದೆ ಎಂದು ಪಾಕ್ ಆಟಗಾರ ಅಭಿಪ್ರಾಯಪಟ್ಟರು.
ಏಕೆಂದರೆ ಭಾರತೀಯ ಆಟಗಾರರು ಅತಿ ಹೆಚ್ಚು ಸಂಭಾವನೆ ಪಡೆಯುವ ಕ್ರಿಕೆಟಿಗರು. ಅವರು ಹೆಚ್ಚಿನ ಪಂದ್ಯಗಳನ್ನು ಸಹ ಆಡುತ್ತಾರೆ. ಇದಾಗ್ಯೂ ಅವರ ಫಿಟ್‌ನೆಸ್ ಸರಿಯಾಗಿಲ್ಲ ಎಂದರೆ ಏನರ್ಥ?. ಟೀಮ್ ಇಂಡಿಯಾ ಆಟಗಾರರನ್ನು ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್‌ನ ಆಟಗಾರರೊಂದಿಗೆ ಹೋಲಿಸಿದರೆ, ಭಾರತೀಯ ಕ್ರಿಕೆಟಿಗರು ಅವರಿಗಿಂತ ಬಹಳ ಹಿಂದೆ ಇದ್ದಾರೆ ಎಂದರು.
ಅಷ್ಟೇ ಅಲ್ಲದೆ ಫಿಟ್‌ನೆಸ್ ವಿಷಯದಲ್ಲಿ ಇತರೆ ಏಷ್ಯಾ ತಂಡಗಳು ಕೂಡ ಭಾರತಗಿಂತ ಮುಂದಿವೆ.
ಪ್ರಸ್ತುತ ಭಾರತ ತಂಡದಲ್ಲಿರುವ ಆಟಗಾರರನ್ನೇ ನೋಡಿ, ವಿರಾಟ್ ಕೊಹ್ಲಿ, ಹಾರ್ದಿಕ್ ಪಾಂಡ್ಯ ಅವರನ್ನು ಹೊರತುಪಡಿಸಿ ಉಳಿದ ಆಟಗಾರರು ಅಂತಹ ಫಿಟ್‌ನೆಸ್ ಹೊಂದಿಲ್ಲ. ರೋಹಿತ್ ಶರ್ಮಾ, ರಿಷಭ್ ಪಂತ್ ಅವರಂತಹ ಆಟಗಾರರು ಫಿಟ್‌ನೆಸ್ ಹೊಂದಿಲ್ಲ. ಅದರಲ್ಲೂ ಕೆಲ ಆಟಗಾರರು ತುಂಬಾ ದಪ್ಪಗಿದ್ದಾರೆ. ಅವರು ತಮ್ಮ ಫಿಟ್‌ನೆಸ್ ಮೇಲೂ ಕೂಡ ಗಮನ ಕೇಂದ್ರೀಕರಿಸಬೇಕಿದೆ ಎಂದು ಸಲ್ಮಾನ್ ಬಟ್ ಅಭಿಪ್ರಾಯಪಟ್ಟರು.