ಭಾರತ ಮತ್ತು ಶ್ರೀಲಂಕಾ ನಡುವಣ ಟಿ20 ಸರಣಿಯು ಇಂದಿನಿಂದ (ಜುಲೈ 27) ಶುರುವಾಗಲಿದೆ. ಈ ಸರಣಿಯ ಮೂಲಕ ಸೂರ್ಯಕುಮಾರ್ ಯಾದವ್ ಪೂರ್ಣ ಪ್ರಮಾಣದ ನಾಯಕರಾಗಿ ಪಾದಾರ್ಪಣೆ ಮಾಡಲಿದ್ದಾರೆ. ಈ ಪಾದಾರ್ಪಣೆಗೂ ಮುನ್ನ ಸುದ್ದಿಗೋಷ್ಠಿಯಲ್ಲಿ ಕಾಣಿಸಿಕೊಂಡ ಸೂರ್ಯಕುಮಾರ್, ರೋಹಿತ್ ಶರ್ಮಾ ಅವರ ಪರಂಪರೆಯನ್ನು ಮುಂದುವರೆಸುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ರೋಹಿತ್ ಶರ್ಮಾ ನಾಯಕತ್ವದಲ್ಲಿ ಟೀಮ್ ಇಂಡಿಯಾ ಆಡಿದ ಆಕ್ರಮಣಕಾರಿ ಬ್ರಾಂಡ್ ಕ್ರಿಕೆಟ್ ಅನ್ನು ನಾವು ಕೂಡ ಮುಂದುವರೆಸುತ್ತೇವೆ. ಇಲ್ಲಿ ಬದಲಾಗಿರುವುದು ರೈಲಿನ ಇಂಜಿನ್ ಮಾತ್ರ. ಬೋಗಿಗಳು ಹಾಗೆಯೇ ಉಳಿದಿವೆ. ಹಾಗಾಗಿ ಹಳೆಯ ರೈಲೇ ಚಲಿಸಲಿದೆ ಎಂದು ಸೂರ್ಯಕುಮಾರ್ ಯಾದವ್ ಹೇಳಿದ್ದಾರೆ.
ನನ್ನ ಪ್ರಕಾರ, ಟೀಮ್ ಇಂಡಿಯಾದಲ್ಲಿ ಏನೂ ಬದಲಾಗುವುದಿಲ್ಲ. ಕ್ರಿಕೆಟ್ ಬ್ರ್ಯಾಂಡ್ ಒಂದೇ ಆಗಿರುತ್ತದೆ. ರೋಹಿತ್ ಶರ್ಮಾ ಅವರ ಜಾಗ ತುಂಬಿದ್ದಿರಂದ ನನ್ನಲ್ಲಿ ಹೆಚ್ಚಿನ ಜವಾಬ್ದಾರಿ ಇದೆ. ಹೀಗಾಗಿ ರೋಹಿತ್ ಶರ್ಮಾ ಹಾಕಿಕೊಟ್ಟ ಹಾದಿಯಲ್ಲಿ ಸಾಗಲು ಬಯಸುವುದಾಗಿ ಸೂರ್ಯಕುಮಾರ್ ಹೇಳಿದ್ದಾರೆ.
ರೋಹಿತ್ ಶರ್ಮಾ ಅವರಿಂದ ನಾನು ಕಲಿತ ಮುಖ್ಯ ವಿಷಯ ಎಂದರೆ, ಎಲ್ಲರೊಂದಿಗೆ ಬೆರೆಯುವುದು. ಅಲ್ಲದೆ ಮೈದಾನದಲ್ಲೂ ಮತ್ತು ಹೊರಗೂ ನಾಯಕನಾಗಿ ಉಳಿಯುವುದು. ಆದರೆ ನಮ್ಮಿಬ್ಬರ ನಡುವೆ ಸಾಕಷ್ಟು ವ್ಯತ್ಯಾಸವಿದೆ. ಇದಾಗ್ಯೂ ಟಿ20 ಕ್ರಿಕೆಟ್ ಆಡುವುದು ಹೇಗೆ ಮತ್ತು ಪಂದ್ಯಾವಳಿಯನ್ನು ಗೆಲ್ಲುವುದು ಹೇಗೆ? ಎಂಬುದನ್ನು ನಾನು ರೋಹಿತ್ ಶರ್ಮಾ ಅವರ ನಾಯಕತ್ವದಿಂದ ಕಲಿತಿದ್ದೇನೆ. ಅದನ್ನೇ ಮುಂದುವರೆಸುವ ವಿಶ್ವಾಸವಿದೆ ಎಂದು ಸೂರ್ಯಕುಮಾರ್ ಯಾದವ್ ಹೇಳಿದ್ದಾರೆ.
ಇನ್ನು ಹಾರ್ದಿಕ್ ಪಾಂಡ್ಯ ಬಗ್ಗೆ ಮಾತನಾಡಿದ ಸೂರ್ಯಕುಮಾರ್ ಯಾದವ್, ತಂಡದಲ್ಲಿ ಅವರ ಆಲ್ರೌಂಡರ್ ಪಾತ್ರ ಹಾಗೆಯೇ ಉಳಿಯಲಿದೆ. ಏಕೆಂದರೆ ಅವರು ತಂಡಕ್ಕೆ ಅತ್ಯಂತ ಪ್ರಮುಖ ಆಟಗಾರ. ವಿಶ್ವಕಪ್‌ನಲ್ಲಿ ಅವರು ಪ್ರದರ್ಶನ ನೀಡಿದ ರೀತಿಯನ್ನೇ ಇಲ್ಲೂ ಮುಂದುವರಿಸುತ್ತಾರೆ ಎಂದು ನಾನು ಭಾವಿಸುತ್ತೇನೆ ಸೂರ್ಯಕುಮಾರ್ ಯಾದವ್ ಹೇಳಿದರು.
ಇದನ್ನೂ ಓದಿ: IPL 2025: ಮುಂಬೈ ಇಂಡಿಯನ್ಸ್ ತಂಡಕ್ಕೆ ಸೂರ್ಯಕುಮಾರ್ ಯಾದವ್ ಗುಡ್ ಬೈ?
ಇದೇ ವೇಳೆ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಹಾಗೂ ರವೀಂದ್ರ ಜಡೇಜಾ ಅವರ ಸ್ಥಾನಗಳನ್ನು ತುಂಬುವವರು ಯಾರು ಎಂಬ ಪ್ರಶ್ನೆಗೆ ಉತ್ತರಿಸಿದ ಸೂರ್ಯ, ಈ ಮೂವರ ಸ್ಥಾನ ತುಂಬುವುದು ನನ್ನ ಪ್ರಕಾರ ದೊಡ್ಡ ಸವಾಲು. ಇದಾಗ್ಯೂ ಹೊಸ ಆಟಗಾರರು ಸಾಕಷ್ಟು ಪ್ರಯತ್ನದಲ್ಲಿದ್ದಾರೆ. ಹೀಗಾಗಿ ಮುಂಬರುವ ದಿನಗಳಲ್ಲಿ ಕೆಲ ಆಟಗಾರರು ದಿಗ್ಗಜರ ಸ್ಥಾನಗಳನ್ನು ತುಂಬುವ ನಿರೀಕ್ಷೆಯಿದೆ ಎಂದು ತಿಳಿಸಿದ್ದಾರೆ.