18 ಭರ್ಜರಿ ಸಿಕ್ಸ್, 10 ಫೋರ್: ಶರವೇಗದ ದ್ವಿಶತಕ ಸಿಡಿಸಿದ ಸಮೀರ್ ರಿಝ್ವಿ
ದೇಶೀಯ ಅಂಗಳದ ಅಂಡರ್-23 ಏಕದಿನ ಟೂರ್ನಿಯಲ್ಲಿ ಉತ್ತರ ಪ್ರದೇಶ್ ತಂಡವು 407 ರನ್ಗಳ ಕಠಿಣ ಗುರಿ ಬೆನ್ನತ್ತಿದ ಭರ್ಜರಿ ವಿಜಯ ಸಾಧಿಸಿದೆ. ಈ ಗೆಲುವಿನ ರೂವಾರಿ ಉತ್ತರ ಪ್ರದೇಶ್ ತಂಡದ ನಾಯಕ ಸಮೀರ್ ರಿಝ್ವಿ. ಈ ಮ್ಯಾಚ್ನಲ್ಲಿ 105 ಎಸೆತಗಳನ್ನು ಎದುರಿಸಿದ ರಿಝ್ವಿ 18 ಸಿಕ್ಸ್ ಹಾಗೂ 10 ಫೋರ್ಗಳೊಂದಿಗೆ ಸ್ಪೋಟಕ ದ್ವಿಶತಕ ಸಿಡಿಸಿ ಮಿಂಚಿದ್ದಾರೆ.
ಅಂಡರ್-23 ಟೂರ್ನಿಯಲ್ಲಿ ಸಮೀರ್ ರಿಝ್ವಿ ಸಿಡಿಲಬ್ಬರದ ಮುಂದುವರೆದಿದೆ. ತ್ರಿಪುರಾ ವಿರುದ್ಧದ ಪಂದ್ಯದಲ್ಲಿ ಅಜೇಯ ದ್ವಿಶತಕ ಸಿಡಿಸಿ ಮಿಂಚಿದ್ದ ಸಮೀರ್ ಇದೀಗ ಮತ್ತೊಮ್ಮೆ ಡಬಲ್ ಸೆಂಚುರಿ ಬಾರಿಸಿದ್ದಾರೆ. ಅದು ಕೂಡ ಕೇವಲ 105 ಎಸೆತಗಳಲ್ಲಿ ಎಂಬುದು ವಿಶೇಷ. ವಡೋದರಾದ ಜಿಎಸ್ಎಫ್ಸಿ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ಉತ್ತರ ಪ್ರದೇಶ್ ಮತ್ತು ವಿದರ್ಭ ತಂಡಗಳು ಮುಖಾಮುಖಿಯಾಗಿದ್ದವು. ಮೊದಲು ಬ್ಯಾಟ್ ಮಾಡಿದ ವಿದರ್ಭ ಪರ ಡ್ಯಾನಿಶ್ ಮಲೆವರ್ (124) ಹಾಗೂ ನಾಯಕ ಮೊಹಮ್ಮದ್ ಫೈಝ್ (100) ಶತಕ ಸಿಡಿಸಿದರು.
ಫೈಯ್ ಕೇವಲ 62 ಎಸೆತಗಳಲ್ಲಿ ಸೆಂಚುರಿ ಪೂರೈಸಿದರೆ, ಆ ಬಳಿಕ ಬಂದ ಜಗ್ಜೊತ್ 26 ಎಸೆತಗಳಲ್ಲಿ 61 ರನ್ ಚಚ್ಚಿದರು. ಈ ಮೂಲಕ ವಿದರ್ಭ ತಂಡವು 50 ಓವರ್ಗಳಲ್ಲಿ 6 ವಿಕೆಟ್ ಕಳೆದುಕೊಂಡು 406 ರನ್ ಕಲೆಹಾಕಿತು.
ಈ ಕಠಿಣ ಗುರಿ ಬೆನ್ನತ್ತಿದ ಉತ್ತರ ಪ್ರದೇಶ್ ತಂಡಕ್ಕೆ ಸೂರ್ಯಾಂಶ್ ಸಿಂಗ್ (62) ಹಾಗೂ ಸ್ವಸ್ತಿಕ್ (41) ಉತ್ತಮ ಆರಂಭ ಒದಗಿಸಿದ್ದರು. ಆ ಬಳಿಕ ಜೊತೆಗೂಡಿದ ಶೊಯೆಬ್ ಸಿದ್ದಿಕಿ ಹಾಗೂ ಸಮೀರ್ ರಿಝ್ವಿ ಇಡೀ ಪಂದ್ಯದ ಚಿತ್ರಣ ಬದಲಿಸಿದರು.
ಸ್ಪೋಟಕ ಬ್ಯಾಟಿಂಗ್ಗೆ ಒತ್ತು ನೀಡಿದ ಈ ಜೋಡಿಯು ವಿದರ್ಭ ಬೌಲರ್ಗಳ ಬೆಂಡೆತ್ತಿದರು. ಪರಿಣಾಮ ಸಮೀರ್ ರಿಝ್ವಿ ಬ್ಯಾಟ್ನಿಂದ ಸಿಕ್ಸ್ಗಳ ಸುರಿಮಳೆಯಾಯಿತು. ಅಲ್ಲದೆ ಕೇವಲ 105 ಎಸೆತಗಳಲ್ಲಿ 18 ಸಿಕ್ಸ್ ಹಾಗೂ 10 ಫೋರ್ಗಳೊಂದಿಗೆ ಅಜೇಯ 202 ರನ್ ಬಾರಿಸಿದರು. ‘
ರಿಝ್ವಿಗೆ ಉತ್ತಮ ಸಾಥ್ ನೀಡಿದ ಸಿದ್ದಿಕಿ 73 ಎಸೆತಗಳಲ್ಲಿ 96 ರನ್ ಸಿಡಿಸಿದರು. ಈ ಮೂಲಕ ಉತ್ತರ ಪ್ರದೇಶ್ ತಂಡವು 41.2 ಓವರ್ಗಳಲ್ಲಿ 2 ವಿಕೆಟ್ ಕಳೆದುಕೊಂಡು 409 ರನ್ಗಳಿಸಿ 8 ವಿಕೆಟ್ಗಳ ಅಮೋಘ ಜಯ ಸಾಧಿಸಿದೆ.
ಸಮೀರ್ ಸಿಡಿಲಬ್ಬರ:
ಸಮೀರ್ ರಿಝ್ವಿ ಅಂಡರ್-23 ಟೂರ್ನಿಯಲ್ಲಿ ದ್ವಿಶತಕ ಬಾರಿಸುತ್ತಿರುವುದು ಇದೇ ಮೊದಲೇನಲ್ಲ. ಇದಕ್ಕೂ ಮುನ್ನ ತ್ರಿಪುರಾ ವಿರುದ್ಧ ನಡೆದ ಪಂದ್ಯದಲ್ಲಿ 20 ಸಿಕ್ಸ್ ಹಾಗೂ 13 ಫೋರ್ಗಳೊಂದಿಗೆ ಕೇವಲ 97 ಎಸೆತಗಳಲ್ಲಿ ಅಜೇಯ 201 ರನ್ ಚಚ್ಚಿದ್ದರು.
ಇದನ್ನೂ ಓದಿ: ಬುಮ್ರಾ ಬೆಂಡೆತ್ತಿ ಹೊಸ ಇತಿಹಾಸ ರಚಿಸಿದ ಸ್ಯಾಮ್ ಕೊನ್ಸ್ಟಾಸ್
ಹಾಗೆಯೇ ಈ ಟೂರ್ನಿಯಲ್ಲಿ ಸಮೀರ್ ಆಡಿದ 6 ಇನಿಂಗ್ಸ್ಗಳಲ್ಲಿ ಕ್ರಮವಾಗಿ 27, 137*, 153, 201*, 8, 202* ರನ್ಗಳನ್ನು ಬಾರಿಸಿದ್ದಾರೆ. ಈ ಮೂಲಕ ದೇಶೀಯ ಅಂಗಳದಲ್ಲಿ ಯುವ ದಾಂಡಿಗ ಹೊಸ ಸಂಚಲನ ಸೃಷ್ಟಿಸಿದ್ದಾರೆ.
IPL 2025 ರಲ್ಲಿ ರಿಝ್ವಿ:
ಏಕದಿನ ಟೂರ್ನಿಯಲ್ಲಿ ಟಿ20 ಶೈಲಿಯಲ್ಲಿ ಬ್ಯಾಟಿಂಗ್ ಪ್ರದರ್ಶಿಸುತ್ತಿರುವ ಸಮೀರ್ ರಿಝ್ವಿ ಈ ಬಾರಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಪರ ಕಣಕ್ಕಿಳಿಯಲಿದ್ದಾರೆ. ಕಳೆದ ಸೀಸನ್ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದಲ್ಲಿ ಕಾಣಿಸಿಕೊಂಡಿದ್ದ ಸಮೀರ್ ರಿಝ್ವಿ ಅವರನ್ನು ಈ ಬಾರಿ ಡೆಲ್ಲಿ ಕ್ಯಾಪಿಟಲ್ಸ್ ಫ್ರಾಂಚೈಸಿ ಕೇವಲ 30 ಲಕ್ಷ ರೂ.ಗೆ ಖರೀದಿಸಿದೆ.