ಸುಖಾಸುಮ್ಮನೆ ವಿರಾಟ್ ಕೊಹ್ಲಿ ಕಿರಿಕ್: ತಿರುಗಿ ನಿಂತ ಸ್ಯಾಮ್ ಕೊನ್​ಸ್ಟಾಸ್

ಸುಖಾಸುಮ್ಮನೆ ವಿರಾಟ್ ಕೊಹ್ಲಿ ಕಿರಿಕ್: ತಿರುಗಿ ನಿಂತ ಸ್ಯಾಮ್ ಕೊನ್​ಸ್ಟಾಸ್

ಝಾಹಿರ್ ಯೂಸುಫ್
|

Updated on: Dec 26, 2024 | 7:09 AM

Australia vs India, 4th Test: ಮೆಲ್ಬೋರ್ನ್​ನ ಎಂಸಿಜಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಬಾಕ್ಸಿಂಗ್ ಡೇ ಟೆಸ್ಟ್​ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದೆ. ಅದರಲ್ಲೂ ಯುವ ದಾಂಡಿಗ ಸ್ಯಾಮ್ ಕೊನ್​ಸ್ಟಾಸ್ ಚೊಚ್ಚಲ ಪಂದ್ಯದಲ್ಲೇ ಅರ್ಧಶತಕ ಸಿಡಿಸುವ ಮೂಲಕ ಅಬ್ಬರಿಸಿದ್ದಾರೆ. ಇದರ ನಡುವೆ ವಿರಾಟ್ ಕೊಹ್ಲಿ ಸ್ಯಾಮ್ ಜೊತೆ ಕಿರಿಕ್ ಮಾಡಿಕೊಂಡು ಗಮನ ಸೆಳೆದಿದ್ದಾರೆ.

ಮೆಲ್ಬೋರ್ನ್​ನಲ್ಲಿ ನಡೆಯುತ್ತಿರುವ ಭಾರತ ಮತ್ತು ಆಸ್ಟ್ರೇಲಿಯಾ ನಡುವಣ 4ನೇ ಟೆಸ್ಟ್ ಪಂದ್ಯದ ಮೊದಲ ದಿನವೇ ಕಾವೇರಿದೆ. ಅದು ಕೂಡ ಆಟಗಾರರ ನಡುವಿನ ಕಿರಿಕ್​ನೊಂದಿಗೆ ಎಂಬುದು ವಿಶೇಷ. ಈ ಪಂದ್ಯದಲ್ಲಿ ಟಾಸ್ ಗೆದ್ದ ಆಸ್ಟ್ರೇಲಿಯಾ ತಂಡದ ನಾಯಕ ಪ್ಯಾಟ್ ಕಮಿನ್ಸ್ ಬ್ಯಾಟಿಂಗ್ ಆಯ್ದುಕೊಂಡಿದ್ದಾರೆ.
ಅದರಂತೆ ಮೊದಲ ಇನಿಂಗ್ಸ್ ಶುರು ಮಾಡಿರುವ ಆಸ್ಟ್ರೇಲಿಯಾ ತಂಡಕ್ಕೆ ಯುವ ದಾಂಡಿಗ ಸ್ಯಾಮ್ ಕೊನ್​ಸ್ಟಾಸ್ ಸ್ಪೋಟಕ ಆರಂಭ ಒದಗಿಸಿದ್ದರು.

ಆರಂಭದಿಂದಲೇ ಸ್ಪೋಟಕ ಬ್ಯಾಟಿಂಗ್ ಪ್ರದರ್ಶಿಸಿದ ಸ್ಯಾಮ್ ಚೊಚ್ಚಲ ಪಂದ್ಯದಲ್ಲೇ ಕೇವಲ 52 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ್ದರು.
ಇತ್ತ ಸ್ಯಾಮ್ ಕೊನ್​ಸ್ಟಾಸ್ ಅಬ್ಬರದಿಂದಾಗಿ ಆರಂಭದಲ್ಲೇ ಟೀಮ್ ಇಂಡಿಯಾ ಬೌಲರ್​​ಗಳು ಹೈರಾಣರಾದರು. ಇದರ ನಡುವೆ ವಿರಾಟ್ ಕೊಹ್ಲಿ ಯುವ ದಾಂಡಿಗನನ್ನು ಕೆಣಕುವ ಕಾಯಕಕ್ಕೆ ಕೈ ಹಾಕಿದರು.

10ನೇ ಓವರ್​ ಮುಗಿಯುತ್ತಿದ್ದಂತೆ ಸ್ಟ್ರೈಕ್ ಬದಲಿಸಲು ತೆರಳುತ್ತಿದ್ದ ಸ್ಯಾಮ್ ಕೊನ್​ಸ್ಟಾಸ್ ಅವರ ಭುಜಕ್ಕೆ ಭುಜ ನೀಡುವ ಮೂಲಕ ವಿರಾಟ್ ಕೊಹ್ಲಿ ಕಿರಿಕ್ ಶುರು ಮಾಡಿದರು. ಇದರ ವಿರುದ್ಧ ತಿರುಗಿ ನಿಂತ ಸ್ಯಾಮ್ ಕೊನ್​ಸ್ಟಾಸ್ ಕೂಡ ಮಾತಿನ ಚಕಮಕಿಗೆ ಇಳಿದರು. ಅಷ್ಟರಲ್ಲಿ ಉಸ್ಮಾನ್ ಖ್ವಾಜಾ ಹಾಗೂ ಅಂಪೈರ್ ಮಧ್ಯ ಪ್ರವೇಶಿಸುವ ಮೂಲಕ ಪರಿಸ್ಥಿತಿಯನ್ನು ತಿಳಿಗೊಳಿಸಿದರು. ಇದೀಗ ವಿರಾಟ್ ಕೊಹ್ಲಿಯ ಭುಜಬಲದ ಪರಾಕ್ರಮದ ವಿಡಿಯೋ ವೈರಲ್ ಆಗಿದ್ದು, ಕೊಹ್ಲಿಯ ನಡೆಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.

ಇನ್ನು ಈ ಪಂದ್ಯದ ಮೂಲಕ ಪಾದಾರ್ಪಣೆ ಮಾಡಿರುವ ಸ್ಯಾಮ್ ಕೊನ್​ಸ್ಟಾಸ್ 65 ಎಸೆತಗಳಲ್ಲಿ 2 ಸಿಕ್ಸ್ ಹಾಗೂ 6 ಫೋರ್​ಗಳೊಂದಿಗೆ 60 ರನ್ ಬಾರಿಸಿ ಔಟಾದರು. ಈ ಅರ್ಧಶತಕದ ನೆರವಿನಿಂದ ಆಸ್ಟ್ರೇಲಿಯಾ ತಂಡವು ಭೋಜನಾ ವಿರಾಮದ ವೇಳೆಗೆ 1 ವಿಕೆಟ್ ಕಳೆದುಕೊಂಡು 112 ರನ್ ಕಲೆಹಾಕಿದೆ. ಸದ್ಯ ಕ್ರೀಸ್​ನಲ್ಲಿ ಉಸ್ಮಾನ್ ಖ್ವಾಜಾ ಹಾಗೂ ಮಾರ್ನಸ್ ಲಾಬುಶೇನ್ ಬ್ಯಾಟಿಂಗ್ ಆಯ್ದುಕೊಂಡಿದ್ದಾರೆ.