
ಕ್ರಿಕೆಟ್ ಜಗತ್ತಿನಲ್ಲಿ ವೈಭವ್ ಸೂರ್ಯವಂಶಿ ಕುರಿತಾದ ಚರ್ಚೆಗಳು ಮುಂದುವರೆದಿದೆ. ಆದರೆ ಅದು ಭಾರತ ಮತ್ತು ಐರ್ಲೆಂಡ್ ನಡುವಣ ಪಂದ್ಯದ ವೇಳೆಯಲ್ಲ. ಬದಲಾಗಿ ಇಂಗ್ಲೆಂಡ್ ಮತ್ತು ನ್ಯೂಝಿಲೆಂಡ್ ನಡುವಣ ಟೆಸ್ಟ್ ಪಂದ್ಯದ ನಡುವೆ. ಈ ಪಂದ್ಯದ ವೇಳೆ ಕಾಮೆಂಟ್ರಿ ಬಾಕ್ಸ್ನಲ್ಲಿ ಕಾಣಿಸಿಕೊಳ್ಳುತ್ತಿರುವ ರಾಜಸ್ಥಾನ್ ರಾಯಲ್ಸ್ ತಂಡದ ಮುಖ್ಯ ಕೋಚ್ ಕುಮಾರ್ ಸಂಗಕ್ಕಾರ ಅವರು ‘ಸ್ಕೈ ಕ್ರಿಕೆಟ್’ಗೆ ವಿಶೇಷ ಸಂದರ್ಶನ ನೀಡಿದ್ದಾರೆ. ಈ ಸಂದರ್ಶನದಲ್ಲಿ ಸಂಗಾಕ್ಕರ ವೈಭವ್ ಅವರ ‘ಮಹಾ ವಿಶ್ವಾಸ’ದ ಕಥೆ ಬಿಚ್ಚಿಟ್ಟಿದ್ದಾರೆ.
ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್-19ರ 64ನೇ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ಹಾಗೂ ರಾಜಸ್ಥಾನ್ ರಾಯಲ್ಸ್ ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಲಕ್ನೋ ಸೂಪರ್ ಜೈಂಟ್ಸ್ ಕಲೆಹಾಕಿದ್ದು ಬರೋಬ್ಬರಿ 220 ರನ್ಗಳು.
ರಾಜಸ್ಥಾನ್ ರಾಯಲ್ಸ್ ತಂಡವು ಪ್ಲೇಆಫ್ ರೇಸ್ನಲ್ಲಿ ಉಳಿಯಬೇಕಿದ್ದರೆ ಈ ಮ್ಯಾಚ್ನಲ್ಲಿ ಗೆಲ್ಲುವುದು ಅನಿವಾರ್ಯವಾಗಿತ್ತು. ಇಂತಹ ಸಂದರ್ಭದಲ್ಲಿ ಬ್ಯಾಟಿಂಗ್‌ಗೆ ಹೊರಡುವ ಮುನ್ನ 15 ವರ್ಷದ ವೈಭವ್ ಸೂರ್ಯವಂಶಿ, ಕೋಚ್ ಸಂಗಕ್ಕಾರ ಕಡೆಗೆ ಕಣ್ಣು ಹೊಡೆದು, “ಕೋಚ್, ನೀವು ಯೋಚನೆ ಮಾಡಬೇಡಿ. ಪಂದ್ಯ ಮುಗಿಯಿತು” ಎಂದು ಹೇಳಿ ಮೈದಾನಕ್ಕಿಳಿದಿದ್ದರು!
221 ರನ್ಗಳ ಬೃಹತ್ ಗುರಿ ಬೆನ್ನತ್ತಲು ಹೊರಟ್ಟಿದ್ದ ವೈಭವ್ ಸೂರ್ಯವಂಶಿ ಕೇವಲ ಕೋಚ್‌ಗೆ ಮಾತ್ರ ಧೈರ್ಯ ತುಂಬಿರಲಿಲ್ಲ. ಬದಲಾಗಿ ಡಗೌಟ್‌ನಲ್ಲಿದ್ದ ಸಹ ಆಟಗಾರರಾದ ಡೊನೊವನ್ ಫೆರೇರಾ ಮತ್ತು ಲುಹಾನ್-ಡ್ರೆ ಪ್ರಿಟೋರಿಯಸ್ ಬಳಿ ಹೋಗಿ, “ನೋಡಿ, ನಾನು ಇಂದು 13 ಸಿಕ್ಸರ್‌ಗಳನ್ನು ಬಾರಿಸುತ್ತೇನೆ. ನಾನು ಔಟಾಗಿ ಬಂದ ಬಳಿಕ, ಉಳಿದ ರನ್‌ಗಳನ್ನು ನೀವು ಹೊಡೆಯಿರಿ” ಎಂದು ಆತ್ಮವಿಶ್ವಾಸದಿಂದ ಹೇಳಿ ಹೊರಟ್ಟಿದ್ದರು.
ವೈಭವ್ ಸೂರ್ಯವಂಶಿ ಈ ಪಂದ್ಯದಲ್ಲಿ ಅಬ್ಬರಿಸುತ್ತಿದ್ದಂತೆ, ಅದರಲ್ಲೂ ಆರಂಭದಲ್ಲೇ 5 ಸಿಕ್ಸರ್ ಬಾರಿಸುವಷ್ಟರಲ್ಲಿ, ಡೊನೊವನ್ ಮತ್ತು ಪ್ರಿಟೋರಿಯಸ್ ಆಶ್ಚರ್ಯಚಕಿತರಾಗಿದ್ದರು. ಅಲ್ಲದೆ ಈ ಹುಡುಗ ಏನು ಮಾತನಾಡಿದ್ದಾನೆ, ಅದನ್ನೇ ಮಾಡ್ತಿದ್ದಾನೆ. ಇವನ ಸಿಕ್ಸರ್‌ಗಳನ್ನು ಕೌಂಟ್ ಡೌನ್ ಮಾಡಲು ಶುರು ಮಾಡುವುದು ಒಳಿತು. ಏಕೆಂದರೆ ಇವನು ಹೇಳಿದ್ದನ್ನು ನಿಜವಾಗಿಯೂ ಮಾಡಿ ಮುಗಿಸಲು ಹೊರಟ್ಟಿದ್ದಾನೆ ಎಂದು ತಮ್ಮೊಳಗೆ ಮಾತನಾಡಿಕೊಂಡಿದ್ದರಂತೆ.
ವೈಭವ್ ಸೂರ್ಯವಂಶಿ ಹೇಳಿದಂತೆ ಈ ಪಂದ್ಯದಲ್ಲಿ ಅಬ್ಬರಿಸಿದ್ದರು. ಅಲ್ಲದೆ ಕೇವಲ 48 ಎಸೆತಗಳಲ್ಲಿ 10 ಸಿಕ್ಸರ್ ಹಾಗೂ ಭರ್ಜರಿ ಬೌಂಡರಿಗಳ ನೆರವಿನಿಂದ 93 ರನ್ ಚಚ್ಚಿದರು. ಕೇವಲ 3 ಸಿಕ್ಸರ್‌ಗಳಿಂದ ತಮ್ಮ 13 ಸಿಕ್ಸರ್‌ಗಳ ಭವಿಷ್ಯ ನುಡಿಯನ್ನು ಮಿಸ್ ಮಾಡಿಕೊಂಡರೂ, ತಂಡಕ್ಕೆ 7 ವಿಕೆಟ್‌ಗಳ ಭರ್ಜರಿ ಜಯ ತಂದು ಕೊಟ್ಟಿದ್ದರು.
ಇದನ್ನೂ ಓದಿ: 2.5 ವರ್ಷಗಳ ದಾಖಲೆಗೆ ಬ್ರೇಕ್: ಐರ್ಲೆಂಡ್ ವಿರುದ್ಧ ಟೀಮ್ ಇಂಡಿಯಾ ಸರಣಿ ಗೆಲ್ಲಲ್ಲ!
ಈ ಆತ್ಮ ವಿಶ್ವಾಸದವನ್ನೇ ಕುಮಾರ್ ಸಂಗಾಕ್ಕರ ಹಾಡಿ ಹೊಗಳಿದ್ದಾರೆ. ಅಲ್ಲದೆ ವೈಭವ್ ಸೂರ್ಯವಂಶಿ ಅವರ ಈ ಅದ್ಭುತ ಪ್ರದರ್ಶನ ಮತ್ತು ಅಪ್ರತಿಮ ಆತ್ಮವಿಶ್ವಾಸ, ಅವರು ಕೇವಲ ಒಬ್ಬ ಸಾಮಾನ್ಯ ಆಟಗಾರನಲ್ಲ, ಬದಲಿಗೆ ಕ್ರಿಕೆಟ್ ಜಗತ್ತನ್ನು ಆಳಲು ಬಂದಿರುವ ಭವಿಷ್ಯದ ಸೂಪರ್‌ಸ್ಟಾರ್ ಎಂದು ಸಂಗಾಕ್ಕರ ಭವಿಷ್ಯ ನುಡಿದಿದ್ದಾರೆ.