Ranji Trophy Final: ಭರ್ಜರಿ ಶತಕ ಸಿಡಿಸಿ ರಣಜಿ ಕ್ರಿಕೆಟ್ನಲ್ಲಿ ದಾಖಲೆ ಬರೆದ ಸರ್ಫರಾಜ್ ಖಾನ್
Sarfaraz Khan: 2019-20 ರಲ್ಲಿ ಮುಂಬೈ ಪರ ಆಡಿದ್ದ ಸರ್ಫರಾಜ್ ಖಾನ್ 6 ಪಂದ್ಯಗಳ 9 ಇನ್ನಿಂಗ್ಸ್‌ಗಳಲ್ಲಿ 926 ರನ್ ಗಳಿಸಿದ್ದರು. ಅಂದರೆ 155ರ ಸರಾಸರಿಯಲ್ಲಿ ರನ್ ಕಲೆಹಾಕಿದ್ದರು. ಈ ವೇಳೆ ಒಂದು ತ್ರಿಶತಕ (301), 3 ಶತಕ ಹಾಗೂ 2 ಅರ್ಧ ಶತಕಗಳನ್ನೂ ಸಹ ಬಾರಿಸಿದ್ದರು.
ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಮಧ್ಯಪ್ರದೇಶ ವಿರುದ್ದದ ರಣಜಿ ಟ್ರೋಫಿ ಫೈನಲ್ನಲ್ಲಿ (Ranji Trophy Final 2022) ಮುಂಬೈ ತಂಡದ ಯುವ ಬ್ಯಾಟ್ಸ್ಮನ್ ಸರ್ಫರಾಜ್ ಖಾನ್ (Sarfaraz Khan) ಭರ್ಜರಿ ಶತಕ ಸಿಡಿಸಿ ಮಿಂಚಿದ್ದಾರೆ. ಮೊದಲ ದಿನದಾಟದಲ್ಲಿ 5 ವಿಕೆಟ್ ಕಳೆದುಕೊಂಡು 248 ರನ್ಗಳಿಸಿದ್ದ ಮುಂಬೈ ತಂಡಕ್ಕೆ 2ನೇ ದಿನವು ಸರ್ಫರಾಜ್ ಖಾನ್ ಆಸರೆಯಾದರು. ಅದರಂತೆ 190 ಎಸೆತಗಳನ್ನು ಎದುರಿಸಿದ ಸರ್ಫರಾಜ್ 12 ಬೌಂಡರಿಗಳೊಂದಿಗೆ ಶತಕ ಪೂರೈಸಿದರು. ಈ ಶತಕದೊಂದಿಗೆ ವಿಶೇಷ ದಾಖಲೆಗಳನ್ನು ಕೂಡ ತಮ್ಮದಾಗಿಸಿಕೊಂಡಿದ್ದಾರೆ. ಈ ಬಾರಿಯ ರಣಜಿ ಟೂರ್ನಿಯಲ್ಲಿ ಒಂದು ದ್ವಿಶತಕ (275 ರನ್), 4 ಶತಕ ಹಾಗೂ 2 ಅರ್ಧ ಶತಕ ಬಾರಿಸಿರುವ ಸರ್ಫರಾಜ್ 900 ಕ್ಕೂ ಅಧಿಕ ರನ್ ಕಲೆಹಾಕಿದ್ದಾರೆ. ಇದರೊಂದಿಗೆ ರಣಜಿ ಸೀಸನ್ಗಳಲ್ಲಿ 2 ಬಾರಿ 900+ ರನ್ಗಳಿಸಿದ ಮೂರನೇ ಆಟಗಾರ ಎನಿಸಿಕೊಂಡರು.
ಮುಂಬೈ ಪರ ಈ ಸಾಧನೆ ಮಾಡಿದ ಮೊದಲ ಆಟಗಾರ ಎಂದರೆ ಅಜಯ್ ಶರ್ಮಾ. 88 ವರ್ಷಗಳ ರಣಜಿ ಟ್ರೋಫಿ ಇತಿಹಾಸದಲ್ಲಿ ಮೊದಲ ಬಾರಿಗೆ ಅಜಯ್ ಶರ್ಮಾ ಈ ಸಾಧನೆ ಮಾಡಿದರು. ಅಜಯ್ ಶರ್ಮಾ 1991-92ರ ರಣಜಿ ಸೀಸನ್ನಲ್ಲಿ 993 ರನ್ ಮತ್ತು 1996-97ರ ಸೀಸನ್ನಲ್ಲಿ 1033 ರನ್ ಗಳಿಸಿದ್ದರು. ಇನ್ನು ಈ ಸಾಧನೆ ಮತ್ತೋರ್ವ ಆಟಗಾರೆಂದರೆ ವಾಸಿಂ ಜಾಫರ್.
ಮುಂಬೈನ ಶ್ರೇಷ್ಠ ರಣಜಿ ಆಟಗಾರ ವಾಸಿಫ್ ಜಾಫರ್ 2008-09 ಸೀಸನ್ನಲ್ಲಿ 1260 ರನ್ ಬಾರಿಸಿದ್ದರು. ಇನ್ನು ತಮ್ಮ ವೃತ್ತಿಜೀವನದ ಕೊನೆಯ ದಿನಗಳಲ್ಲಿ ಜಾಫರ್ ವಿದರ್ಭ ಪರ ಆಡಿದ್ದರು. ಈ ವೇಳೆ 2020ರ ಸೀಸನ್ನಲ್ಲಿ 1037 ರನ್‌ಗಳನ್ನು ಬಾರಿಸಿ ಮಿಂಚಿದ್ದರು. ವಿಶೇಷ ಎಂದರೆ ರಣಜಿ ಸೀಸನ್ಗಳಲ್ಲಿ ಎರಡು ಬಾರಿ ಸಾವಿರ ರನ್ ಗಡಿ ದಾಟಿದ ಏಕೈಕ ಆಟಗಾರ ಎಂಬ ದಾಖಲೆ ಕೂಡ ವಾಸಿಂ ಜಾಫರ್ ಹೆಸರಿನಲ್ಲಿದೆ.
ಇದೀಗ 6 ಪಂದ್ಯಗಳಿಂದ 900+ ರನ್ಗಳಿಸುವ ಮೂಲಕ ಸರ್ಫರಾಜ್ ಖಾನ್ ಕೂಡ ಎರಡು ಸೀಸನ್ನಲ್ಲಿ ಒಂಬೈನೂರಕ್ಕಿಂತ ಅಧಿಕ ರನ್ಗಳಿಸಿದ ಆಟಗಾರರ ಪಟ್ಟಿಗೆ ಸೇರ್ಪಡೆಯಾಗಿದ್ದಾರೆ. ಇದಕ್ಕೂ ಮುನ್ನ 2019-20 ರಲ್ಲಿ ಸರ್ಫರಾಜ್ ಖಾನ್ 6 ಪಂದ್ಯಗಳ 9 ಇನ್ನಿಂಗ್ಸ್‌ಗಳಲ್ಲಿ 926 ರನ್ ಕಲೆಹಾಕಿದ್ದರು. ಅಂದರೆ 155ರ ಸರಾಸರಿಯಲ್ಲಿ ರನ್ಗಳಿಸಿದ್ದರು. ಈ ವೇಳೆ ಒಂದು ತ್ರಿಶತಕ (301), 3 ಶತಕ ಹಾಗೂ 2 ಅರ್ಧ ಶತಕಗಳನ್ನೂ ಸಹ ಬಾರಿಸಿದ್ದರು.
ಸದ್ಯ ಸರ್ಫರಾಜ್ ಖಾನ್ಗೆ ಈ ಪಂದ್ಯದ ಮೂಲಕ ಒಂದೇ ಸೀಸನ್ನಲ್ಲಿ 1000 ರನ್ ಪೂರೈಸುವ ಅವಕಾಶವಿದೆ. ಮುಂಬೈ ಪರ ಶ್ರೇಯಸ್ ಅಯ್ಯರ್ (1321 ರನ್), ವಾಸಿಂ ಜಾಫರ್ (1260 ರನ್), ಅಜಿಂಕ್ಯ ರಹಾನೆ (1089) ಮತ್ತು ರುಸಿ ಮೋದಿ (1008) ಮಾತ್ರ ಒಂದು ಸೀಸನ್ನಲ್ಲಿ ಸಾವಿರಕ್ಕೂ ಹೆಚ್ಚು ಗಳಿಸಿದ್ದರು. ಇದೀಗ ಈ ಸಾಧನೆ ಮಾಡುವ ಅವಕಾಶ ಸರ್ಫರಾಜ್ ಖಾನ್ ಮುಂದಿದ್ದು, ಅದರಂತೆ ಫೈನಲ್ ಪಂದ್ಯದ ಮೂಲಕ ಹೊಸ ದಾಖಲೆ ಬರೆಯಲಿದೆಯಾ ಕಾದು ನೋಡಬೇಕಿದೆ.
ಇನ್ನು ಈ ಪಂದ್ಯದಲ್ಲಿ ಸರ್ಫರಾಜ್ ಖಾನ್ ಅವರ ಶತಕದ ನೆರವಿನಿಂದ ಸದ್ಯ ಮುಂಬೈ ತಂಡವು 8 ವಿಕೆಟ್ ನಷ್ಟಕ್ಕೆ 351 ರನ್ ಕಲೆಹಾಕಿದೆ. ಸದ್ಯ ಮಧ್ಯಪ್ರದೇಶ ತಂಡವು ಮುಂಬೈ ತಂಡವನ್ನು ಆಲೌಟ್ ಮಾಡಲು ಇನ್ನಿಲ್ಲದ ಪ್ರಯತ್ನದಲ್ಲಿದ್ದು, ಅತ್ತ ಕ್ರೀಸ್ನಲ್ಲಿ ಅಜೇಯ 119 ರನ್ಗಳಿಸಿ ಸರ್ಫರಾಜ್ ಖಾನ್ ಹಾಗೂ ತುಷಾರ್ ದೇಶಪಾಂಡೆ ಬ್ಯಾಟಿಂಗ್ ಮುಂದುವರೆಸಿದ್ದಾರೆ.
ಕ್ರಿಕೆಟ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.