ಭಯ ಪಡಬೇಡ, ನೀನು ಆಡು ಬ್ರೋ: ಸರ್ಫರಾಝ್ ಮಾತು ಕೇಳಿ ಔಟಾದ ಲಂಕಾ ನಾಯಕ!

IND vs SL: ಕ್ರಿಕೆಟ್ ಮೈದಾನದಲ್ಲಿ ಸ್ಲೆಡ್ಜಿಂಗ್ ಮಾಡುವುದು ಹೊಸದೇನಲ್ಲ. ಆದರೆ ಎದುರಾಳಿ ಆಟಗಾರನಿಗೆ ಯಾವುದೇ ನಿಂದನಾತ್ಮಕ ಪದಗಳನ್ನು ಬಳಸದೆ, ಕೇವಲ ತನ್ನ ಚುರುಕಿನ ಮಾತುಗಳಿಂದಲೇ ಮಣಿಸುವುದು ಒಂದು ಅದ್ಭುತ ಕಲೆ! ಭಾರತ ಮತ್ತು ಶ್ರೀಲಂಕಾ ನಡುವಿನ ಎರಡನೇ ಟೆಸ್ಟ್ ಪಂದ್ಯದಲ್ಲಿ ಯುವ ಆಟಗಾರ ಸರ್ಫರಾಝ್ ಖಾನ್ ಮಾಡಿದ್ದು ಅದನ್ನೇ.

ಭಯ ಪಡಬೇಡ, ನೀನು ಆಡು ಬ್ರೋ: ಸರ್ಫರಾಝ್ ಮಾತು ಕೇಳಿ ಔಟಾದ ಲಂಕಾ ನಾಯಕ!
Sarfaraz Khan
Image Credit source: Sonyliv

Updated on: Aug 26, 2026 | 8:50 AM

ಭಾರತ ಹಾಗೂ ಶ್ರೀಲಂಕಾ ನಡುವಿನ ಎರಡನೇ ಟೆಸ್ಟ್ ಪಂದ್ಯದಲ್ಲಿ ಕೇವಲ ಬ್ಯಾಟಿಂಗ್-ಬೌಲಿಂಗ್ ಮಾತ್ರವಲ್ಲದೆ, ಸ್ಲೆಡ್ಜಿಂಗ್‌ ಕೂಡ ಪ್ರಮುಖ ಪಾತ್ರವಹಿಸುತ್ತಿದೆ. ಕೊಲೊಂಬೊದಲ್ಲಿ ನಡೆಯುತ್ತಿರುವ ಈ ಪಂದ್ಯದ 3 ನೇ ದಿನದಂದು ಭಾರತದ ಯುವ ಆಟಗಾರ ಸರ್ಫರಾಝ್ ಖಾನ್ ಅವರ ನಿರಂತರ ‘ವರ್ಬಲ್ ಪ್ರೆಶರ್’ ಹೇರಿ ಶ್ರೀಲಂಕಾ ತಂಡದ ನಾಯಕ ಔಟಾಗುವಂತೆ ಮಾಡಿದ್ದಾರೆ.

ಮೈದಾನದಲ್ಲಿ ನಡೆದಿದ್ದೇನು?

ಶ್ರೀಲಂಕಾ ಮೊದಲ ಇನ್ನಿಂಗ್ಸ್‌ನ 35ನೇ ಓವರ್‌ನಲ್ಲಿ ಈ ಹೈ-ಡ್ರಾಮಾ ನಡೆಯಿತು. ಎಡಗೈ ಸ್ಪಿನ್ನರ್ ಮಾನವ್ ಸುತಾರ್ ಬೌಲಿಂಗ್ ಮಾಡಲು ಸಜ್ಜಾಗಿದ್ದಾಗ, ಸೈಟ್‌ಸ್ಕ್ರೀನ್ ಬಳಿ ಏನೋ ಚಲನೆ ಇದೆ ಎಂದು ನೆಪವೊಡ್ಡಿ ಧನಂಜಯ ಡಿ ಸಿಲ್ವಾ ಆಟವನ್ನು ಕ್ಷಣಕಾಲ ನಿಲ್ಲಿಸಿದರು. ಈ ವೇಳೆ ಶಾರ್ಟ್ ಲೆಗ್‌ನಲ್ಲಿ ಫೀಲ್ಡಿಂಗ್ ಮಾಡುತ್ತಿದ್ದ ಸರ್ಫರಾಝ್ ಖಾನ್, ಲಂಕಾ ನಾಯಕನ ಏಕಾಗ್ರತೆ ಭಂಗ ಮಾಡಲು ಸ್ಲೆಡ್ಜಿಂಗ್ ಅಸ್ತ್ರ ಪ್ರಯೋಗಿಸಿದರು.

ಸ್ಟಂಪ್ ಮೈಕ್‌ನಲ್ಲಿ ಸರ್ಫರಾಜ್ ಆಡಿದ ಮಾತುಗಳು ಸ್ಪಷ್ಟವಾಗಿ ಕೇಳಿಸಿದ್ದು, ಅವು ಹೀಗಿದ್ದವು:

    • “ಅಲ್ಲಿ ಏನೂ ಇಲ್ಲ ಬ್ರೋ, ನೀನು ಸುಮ್ಮನೆ ಅಲ್ಲಿ ನೋಡುತ್ತಿದ್ದೀಯಾ.”
    • “ನೀನು ಕೇವಲ ಸಮಯ ವ್ಯರ್ಥ ಮಾಡುತ್ತಿದ್ದೀಯಾ ಅಷ್ಟೇ. ಭಯ ಪಡಬೇಡ. ನೀನು ತಂಡದ ಕ್ಯಾಪ್ಟನ್, ಆಡು ಬ್ರೋ!”
    • “ಆ ಕಡೆ ಯಾಕೆ ತಲೆ ಕೆಡಿಸಿಕೊಳ್ಳುತ್ತೀಯಾ? ನೇರವಾಗಿ ನೋಡು.”

ಎರಡೇ ಎಸೆತಗಳಲ್ಲಿ ವಿಕೆಟ್ ಪತನ!

ಸರ್ಫರಾಝ್ ಖಾನ್ ಅವರ ಈ ಸೈಕಾಲಜಿಕಲ್ ಗೇಮ್ ತಕ್ಷಣವೇ ಕೆಲಸ ಮಾಡಿತು. ಈ ಮಾತಿನಲ್ಲೇ ಒತ್ತಡ ಹೇರಿದ ಪರಿಣಾಮವೇನೋ, ಎರಡನೇ ಎಸೆತದಲ್ಲೇ ಧನಂಜಯ ಡಿ ಸಿಲ್ವಾ ಸಂಪೂರ್ಣ ಏಕಾಗ್ರತೆ ಕಳೆದುಕೊಂಡರು.

ಮಾನವ್ ಸುತಾರ್ ಎಸೆದ ಅದ್ಭುತ ಬಾಲ್‌ಗೆ ಡಿ ಸಿಲ್ವಾ ಡಿಫೆಂಡ್ ಮಾಡಲು ಹೋಗಿ ಬ್ಯಾಟ್‌ನ ಹೊರ ಅಂಚಿಗೆ ತಗುಲಿತು. ವಿಕೆಟ್‌ಕೀಪರ್ ಧ್ರುವ್ ಜುರೆಲ್ ಕೈಗೆ ತಗುಲಿ ಚಿಮ್ಮಿದ ಚೆಂಡನ್ನು ಸ್ಲಿಪ್‌ನಲ್ಲಿದ್ದ ಕೆ.ಎಲ್. ರಾಹುಲ್ ಸುಲಭವಾಗಿ ಕ್ಯಾಚ್ ಮಾಡಿದರು. ಪರಿಣಾಮ ಕೇವಲ 8 ರನ್ ಗಳಿಸಿ ಲಂಕಾ ನಾಯಕ ಪೆವಿಲಿಯನ್ ಹಾದಿ ಹಿಡಿದರು.

ಇದೀಗ ಸರ್ಫರಾಜ್ ಖಾನ್ ಅವರ ಈ ‘ವರ್ಬಲ್ ಪ್ರೆಶರ್’ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆ. ಯಾವುದೇ ರೀತಿಯ ನಿಂದನಾತ್ಮಕ ಅಥವಾ ಅಪಶಬ್ದಗಳನ್ನು ಬಳಸದೆ, ಕೇವಲ ಚತುರ ಮಾತಿನಲ್ಲೇ ಬ್ಯಾಟರ್‌ಗಳ ಏಕಾಗ್ರತೆ ಭಂಗ ಮಾಡಿ ಒತ್ತಡ ಹೇರುವ ಅವರ ಈ ತಂತ್ರಕ್ಕೆ ಕ್ರಿಕೆಟ್ ಪ್ರೇಮಿಗಳಿಂದ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಪಂದ್ಯದ ಮೇಲೆ ಟೀಮ್ ಇಂಡಿಯಾ ಹಿಡಿತ:

ದೇವದತ್ ಪಡಿಕ್ಕಲ್ ಮತ್ತು ಧ್ರುವ್ ಜುರೆಲ್ ಅವರ ಆಕರ್ಷಕ ಶತಕಗಳ ನೆರವಿನಿಂದ ಭಾರತ ತನ್ನ ಮೊದಲ ಇನ್ನಿಂಗ್ಸ್ ಅನ್ನು 503/9 ರನ್‌ಗಳಿಗೆ ಡಿಕ್ಲೇರ್ ಮಾಡಿಕೊಂಡಿತ್ತು. ಇದಕ್ಕೆ ಉತ್ತರವಾಗಿ ಬ್ಯಾಟಿಂಗ್ ಇಳಿದ ಶ್ರೀಲಂಕಾ ಮೂರನೇ ದಿನದಾಟದ ಅಂತ್ಯಕ್ಕೆ 8 ವಿಕೆಟ್ ಕಳೆದುಕೊಂಡು 265 ರನ್​ಗಳಿಸಿದೆ. ಇನ್ನೆರಡು ವಿಕೆಟ್ ಪಡೆದು ಟೀಮ್ ಇಂಡಿಯಾ ಕನಿಷ್ಠ 200 ರನ್​ಗಳ ಮುನ್ನಡೆ ಪಡೆದರೆ ಫಾಲೋಆನ್ ಹೇರಬಹುದು.

 

Loading...
Unable to load recommendations.
Follow Us