T20 World Cup 2021: ಕ್ರಿಕೆಟ್​ ಅಂಗಳದಲ್ಲಿ ಪವಾಡ ನಡೆಯಲ್ವಾ?: ಟೀಮ್ ಇಂಡಿಯಾಗೆ ಸೆಮೀಸ್ ಚಾನ್ಸ್​ ಇಲ್ವಾ?

| Updated By: ಝಾಹಿರ್ ಯೂಸುಫ್

Updated on: Nov 01, 2021 | 6:07 PM

13ನೇ ಪಂದ್ಯದಲ್ಲಿ ಇಂಗ್ಲೆಂಡ್ ಹಾಗೂ ಪಾಕಿಸ್ತಾನ್ ತಂಡಗಳು ಮುಖಾಮುಖಿಯಾಗಿತ್ತು. ಟಾಸ್ ಗೆದ್ದ ಇಂಗ್ಲೆಂಡ್ ನಾಯಕ ಗ್ರಹಾಂ ಗೂಚ್ ಫೀಲ್ಡಿಂಗ್ ಆಯ್ಕೆ ಮಾಡಿದರು. ನಾಯಕನ ನಿರ್ಧಾರವನ್ನು ಸಮರ್ಥಿಸುವಂತೆ ಬೌಲಿಂಗ್ ಮಾಡಿದ ಇಂಗ್ಲೆಂಡ್ ವೇಗಿ ಡೆರೆಕ್ ಪ್ರಿಂಗಲ್ 8 ಓವರ್​ಗಳಲ್ಲಿ 5 ಮೇಡನ್ ಎಸೆದು 3 ವಿಕೆಟ್ ಉರುಳಿಸಿದರು.

T20 World Cup 2021: ಕ್ರಿಕೆಟ್​ ಅಂಗಳದಲ್ಲಿ ಪವಾಡ ನಡೆಯಲ್ವಾ?: ಟೀಮ್ ಇಂಡಿಯಾಗೆ ಸೆಮೀಸ್ ಚಾನ್ಸ್​ ಇಲ್ವಾ?
Team India
Follow us on

ಟಿ20 ವಿಶ್ವಕಪ್​ನ (T20 World Cup 2021) 28ನೇ ಪಂದ್ಯದಲ್ಲಿ ಭಾರತ ತಂಡ ನ್ಯೂಜಿಲೆಂಡ್ (India vs New Zealand) ವಿರುದ್ದ ಸೋತ ಬೆನ್ನಲ್ಲೇ ಅತ್ತ ಪಾಕಿಸ್ತಾನ್ ಮಾಜಿ ಆಲ್​ರೌಂಡರ್ ಶಹೀದ್ ಅಫ್ರಿದಿ ಒಂದು ಹೇಳಿಕೆ ನೀಡಿದ್ದಾರೆ. ಅದೇನೆಂದರೆ ಭಾರತ ಸೆಮಿಫೈನಲ್ ಪ್ರವೇಶಿಸಿದರೆ ಅದಕ್ಕಿಂತ ದೊಡ್ಡ ಪವಾಡ ಮತ್ತೊಂದಿಲ್ಲ ಎಂಬುದು. ಅಂದರೆ ಟಿ20 ವಿಶ್ವಕಪ್​ನಲ್ಲಿ ಟೀಮ್ ಇಂಡಿಯಾ ಕಥೆ ಮುಗಿದಿದೆ ಎಂಬಾರ್ಥದಲ್ಲಿ ಅಫ್ರಿದಿ ಹೇಳಿಕೆ ನೀಡಿದ್ದಾರೆ. ಆದರೆ ಇದೇ ಪಾಕಿಸ್ತಾನ್ ತಂಡ ಕೂಡ ಮೊದಲ ವಿಶ್ವಕಪ್​ ಟ್ರೋಫಿ ಗೆದ್ದಿದ್ದು ಕೂಡ ಇದೇ ಕ್ರಿಕೆಟ್ ಅಂಗಳದ ಪವಾಡದಿಂದ ಎಂಬುದನ್ನು ಖುದ್ದು ಅಫ್ರಿದಿ ಮರೆತಿದ್ದಾರೆ.

ಹೌದು, 1992 ರ ಏಕದಿನ ವಿಶ್ವಕಪ್….ಕಲರ್​ಫುಲ್ ಜೆರ್ಸಿಯಲ್ಲಿ ಒಟ್ಟು 9 ತಂಡಗಳು ಕಾಣಿಸಿಕೊಂಡಿದ್ದವು. ರೌಂಡ್ ರಾಬಿನ್-ನಾಕೌಟ್ ಮಾದರಿಯಲ್ಲಿ ನಡೆದ ಆ ವಿಶ್ವಕಪ್​ನಲ್ಲಿ ಪ್ರತಿ ತಂಡಗಳಿಗೆ 8 ಪಂದ್ಯಗಳನ್ನಾಡಬೇಕಿತ್ತು. ಇದರಲ್ಲಿ ಅತೀ ಹೆಚ್ಚು ಪಂದ್ಯ ಗೆದ್ದ ಟಾಪ್-4 ತಂಡಗಳು ಸೆಮಿಫೈನಲ್ ಪ್ರವೇಶಿಸಲಿತ್ತು.

ಅದರಂತೆ ಆಸ್ಟ್ರೇಲಿಯಾ-ನ್ಯೂಜಿಲೆಂಡ್​ನಲ್ಲಿ ನಡೆದ ಈ ಟೂರ್ನಿಯಲ್ಲಿ ಆತಿಥೇಯ ನ್ಯೂಜಿಲೆಂಡ್ ಭರ್ಜರಿ ಪ್ರದರ್ಶನ ನೀಡಿ 8 ಪಂದ್ಯಗಳಲ್ಲಿ 7 ರಲ್ಲಿ ಜಯ ಸಾಧಿಸಿ ಅಗ್ರಸ್ಥಾನ ಅಲಂಕರಿಸಿತ್ತು. ಇತ್ತ 5 ಗೆಲುವು ದಾಖಲಿಸಿದ ಇಂಗ್ಲೆಂಡ್ ತಂಡವು 2ನೇ ಸ್ಥಾನ ಹಾಗೂ ದಕ್ಷಿಣ ಆಫ್ರಿಕಾ ತಂಡ ಮೂರನೇ ಸ್ಥಾನ ಪಡೆಯಿತು. ಇದಾಗ್ಯೂ ನಾಲ್ಕನೇ ಸ್ಥಾನಕ್ಕೇರುವ ಅವಕಾಶ ಆಸ್ಟ್ರೇಲಿಯಾ ತಂಡಕ್ಕಿತ್ತು. ಆದರೆ ಅಲ್ಲೇ ನಡೆದಿದ್ದು ಕ್ರಿಕೆಟ್ ಅಂಗಳದ ಪವಾಡ.

13ನೇ ಪಂದ್ಯದಲ್ಲಿ ಇಂಗ್ಲೆಂಡ್ ಹಾಗೂ ಪಾಕಿಸ್ತಾನ್ ತಂಡಗಳು ಮುಖಾಮುಖಿಯಾಗಿತ್ತು. ಟಾಸ್ ಗೆದ್ದ ಇಂಗ್ಲೆಂಡ್ ನಾಯಕ ಗ್ರಹಾಂ ಗೂಚ್ ಫೀಲ್ಡಿಂಗ್ ಆಯ್ಕೆ ಮಾಡಿದರು. ನಾಯಕನ ನಿರ್ಧಾರವನ್ನು ಸಮರ್ಥಿಸುವಂತೆ ಬೌಲಿಂಗ್ ಮಾಡಿದ ಇಂಗ್ಲೆಂಡ್ ವೇಗಿ ಡೆರೆಕ್ ಪ್ರಿಂಗಲ್ 8 ಓವರ್​ಗಳಲ್ಲಿ 5 ಮೇಡನ್ ಎಸೆದು 3 ವಿಕೆಟ್ ಉರುಳಿಸಿದರು. ಇನ್ನೊಂದೆಡೆ ಫಿಲ್ ಡಿಫ್ರೀಟಾಸ್, ಇಯಾನ್ ಬೋಥಮ್ ಹಾಗೂ ಗ್ಲಾಡ್‌ಸ್ಟೋನ್ ಉತ್ತಮ ಸಾಥ್ ನೀಡಿ ತಲಾ 2 ವಿಕೆಟ್ ಕಬಳಿಸಿದರು. ಅಲ್ಲಿಗೆ ಕೇವಲ 74 ರನ್​ಗಳಿಗೆ ಪಾಕಿಸ್ತಾನ್ ತಂಡವು ಸರ್ವಪತನ ಕಂಡಿತು.

50 ಓವರ್​ಗಳಲ್ಲಿ ಇಂಗ್ಲೆಂಡ್​ಗೆ ಕೇವಲ 75 ರನ್​ಗಳ ಗುರಿ. ಈ ಸಾಧಾರಣ ಮೊತ್ತದ ಸವಾಲನ್ನು ಬೆನ್ನತ್ತಲಾರಂಭಿಸಿದ ಇಂಗ್ಲೆಂಡ್ 1 ವಿಕೆಟ್ ನಷ್ಟಕ್ಕೆ 24 ರನ್​ಗಳಿಸಿದ್ದ ವೇಳೆ ಮಳೆ ಬರಲಾರಂಭಿಸಿತು. ಇನ್ನೇನು 51 ರನ್​ಗಳಿಸಿದರೆ ಜಯ ಇಂಗ್ಲೆಂಡ್ ತಂಡದ ಪಾಲಾಗುತ್ತಿತ್ತು. ಆದರೆ ವರುಣನ ರೂಪದಲ್ಲಿ ಅದೃಷ್ಟ ಪಾಕ್ ಕೈ ಹಿಡಿಯಿತು. ಮಳೆಯ ಕಾರಣ ಪಂದ್ಯವನ್ನು ರದ್ದುಗೊಳಿಸಲಾಯಿತು. ಬಳಿಕ ಉಭಯ ತಂಡಗಳಿಗೂ ತಲಾ ಒಂದೊಂದು ಅಂಕ ನೀಡಲಾಯಿತು. ಈ ಒಂದು ಅಂಕ ಆ ಬಳಿಕ ಪಾಕಿಸ್ತಾನ್ ತಂಡವನ್ನು ಸೆಮಿಫೈನಲ್ ಪ್ರವೇಶಿಸುವಂತೆ ಮಾಡಿದ್ದು ಈಗ ಇತಿಹಾಸ.

ಹೌದು, ಆರಂಭದ 5 ಪಂದ್ಯಗಳಲ್ಲಿ ಒಂದು ಗೆಲುವು ಮಾತ್ರ ಕಂಡಿದ್ದ ಪಾಕಿಸ್ತಾನ್ ಕೊನೆಯ ಮೂರು ಪಂದ್ಯಗಳಲ್ಲಿ ಜಯ ಸಾಧಿಸಿತು. ಇದರೊಂದಿಗೆ ನಾಲ್ಕು ಪಂದ್ಯಗಳಿಂದ 8 ಅಂಕಗಳನ್ನು ಪಡೆದುಕೊಂಡಿತು. ಅತ್ತ ಆಸ್ಟ್ರೇಲಿಯಾ ಕೂಡ 8 ಅಂಕಗಳೊಂದಿಗೆ ಪಾಯಿಂಟ್ ಟೇಬಲ್​ನಲ್ಲಿತ್ತು. ಇಲ್ಲಿ ನೆಟ್ ರನ್​ ರೇಟ್ ಲೆಕ್ಕಚಾರವನ್ನು ತೆಗೆದುಕೊಂಡರೂ ಆಸ್ಟ್ರೇಲಿಯಾ (0.201) ಪಾಕಿಸ್ತಾನ್​ಗಿಂತ (0.166) ಮುಂದಿತ್ತು. ಆದರೆ ಇಂಗ್ಲೆಂಡ್ ವಿರುದ್ದದ ಪಂದ್ಯ ರದ್ದಾದ ಕಾರಣ ಸಿಕ್ಕ ಆ ಒಂದು ಅಂಕ ಪಾಕ್ ಕೈ ಹಿಡಿಯಿತು. ಅದರಂತೆ 9 ಅಂಕಗಳೊಂದಿಗೆ ಪಾಕಿಸ್ತಾನ್ ಸೆಮಿಫೈನಲ್ ಪ್ರವೇಶಿಸಿತು. ಅಂದು ಇಂಗ್ಲೆಂಡ್ ವಿರುದ್ದ ಪಾಕಿಸ್ತಾನ್ ಸೋತಿದ್ದರೆ ಆಸ್ಟ್ರೇಲಿಯಾ ನೆಟ್​ ರನ್​ರೇಟ್ ಮೂಲಕ ಸೆಮಿಫೈನಲ್​ಗೇರುವುದು ಖಚಿತವಾಗಿತ್ತು.

ಆದರೆ ಅಂದು ಅದೃಷ್ಟ ವರುಣನ ರೂಪದಲ್ಲಿ ಪಾಕಿಸ್ತಾನ್ ಪರವಿತ್ತು. ಹೀಗಾಗಿ ಉತ್ತಮ ನೆಟ್​ ರನ್​ ರೇಟ್ ಹೊಂದಿದ್ದರೂ, ಪಾಕ್​ನಷ್ಟೇ ಪಂದ್ಯ ಗೆದ್ದಿದ್ದರೂ ಆಸ್ಟ್ರೇಲಿಯಾ ತಂಡ 5ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳಬೇಕಾಯಿತು. ಅದೃಷ್ಟದ ಮೇಲೆ ಸೆಮಿಫೈನಲ್ ಪ್ರವೇಶಿಸಿದ್ದ ಪಾಕ್​ ನ್ಯೂಜಿಲೆಂಡ್ ತಂಡವನ್ನು 4 ವಿಕೆಟ್​ಗಳಿಂದ ಮಣಿಸಿ ಫೈನಲ್​ಗೆ ಲಗ್ಗೆಯಿಟ್ಟಿತು. ಫೈನಲ್​ನಲ್ಲಿ ಇಂಗ್ಲೆಂಡ್ ವಿರುದ್ದ 22 ರನ್​ಗಳ ಜಯ ಸಾಧಿಸಿ ಇಮ್ರಾನ್ ಖಾನ್ ನೇತೃತ್ವದ ಪಾಕಿಸ್ತಾನ್ ತಂಡವು ಚೊಚ್ಚಲ ಬಾರಿ ವಿಶ್ವಕಪ್ ಕಿರೀಟವನ್ನು ತನ್ನದಾಗಿಸಿಕೊಂಡಿತು.

ಇದೀಗ ಟೀಮ್ ಇಂಡಿಯಾ ಸೆಮಿಫೈನಲ್ ಕನಸು ಬಹುತೇಕ ಕಮರಿದೆ. ಆದರೆ ಅದೃಷ್ಟ ಯಾವ ರೂಪದಲ್ಲಿ ಬರಲಿದೆ ಎಂಬುದು ಯಾರಿಗೂ ತಿಳಿದಿಲ್ಲ. ಏಕೆಂದರೆ ನ್ಯೂಜಿಲೆಂಡ್ ತಂಡ ಮುಂದಿನ ಮೂರು ಪಂದ್ಯಗಳಲ್ಲಿ ಒಂದರಲ್ಲೂ ಸೋತರೂ ಇತ್ತ ನೆಟ್​ ರನ್​ ರೇಟ್ ಮೂಲಕ ಸೆಮಿಫೈನಲ್​ಗೇರುವ ಅವಕಾಶ ಟೀಮ್ ಇಂಡಿಯಾಗೆ ಸಿಗಲಿದೆ. ಅದರಲ್ಲೂ ಭಾರತ ತಂಡ ಕೊನೆಯ ಪಂದ್ಯದಲ್ಲಿ ನಮೀಬಿಯಾ ವಿರುದ್ದ ಆಡಲಿದೆ. ಇಲ್ಲಿ ನ್ಯೂಜಿಲೆಂಡ್-ಅಫ್ಘಾನಿಸ್ತಾನ್ ವಿರುದ್ದ ಸೋತರೆ, ಅಥವಾ ಮುಂದಿನ ಮೂರು ಪಂದ್ಯಗಳಲ್ಲಿ ಒಂದು ಸೋತರೆ, ಅಥವಾ ಮಳೆಯಿಂದಾಗಿ ಪಂದ್ಯ ರದ್ದಾದರೆ…ಟೀಮ್ ಇಂಡಿಯಾದ ಅದೃಷ್ಟದ ಬಾಗಿಲು ತೆರೆಯಲಿದೆ. ಕೊನೆಯ ಪಂದ್ಯದಲ್ಲಿ ನಮೀಬಿಯಾ ವಿರುದ್ದ ಭರ್ಜರಿ ನೆಟ್​ ರನ್​ ರೇಟ್​ನೊಂದಿಗೆ ಭಾರತ ಗೆದ್ದು ಸೆಮಿಫೈನಲ್​ ಪ್ರವೇಶಿಸುವ ಅವಕಾಶ ದೊರೆಯಲಿದೆ.

ಒಟ್ಟಿನಲ್ಲಿ ಟೀಮ್ ಇಂಡಿಯಾ ಸೆಮಿಫೈನಲ್​ ಪ್ರವೇಶಿಸಿದರೆ ಅದುವೇ ದೊಡ್ಡ ಪವಾಡ ಎಂದು ಅಫ್ರಿದಿ ಹೇಳುವುದಾದರೆ, 1992 ರಲ್ಲಿ ಪವಾಡದಿಂದಲೇ ವಿಶ್ವಕಪ್ ಗೆದ್ದಿರುವ ಪಾಕ್ ತಂಡ ನಮ್ಮ ಕಣ್ಮುಂದಿದೆ. ಹೀಗಾಗಿ ಟೀಮ್ ಇಂಡಿಯಾ ಪಾಲಿಗೂ ಅಂಥಹದ್ದೇ ಪವಾಡ ನಡೆದರೂ ಅಚ್ಚರಿಪಡಬೇಕಿಲ್ಲ.

ಇದನ್ನೂ ಓದಿ: IPL 2022: ನಾಲ್ವರು ಆಟಗಾರರಿಗೆ 42 ಕೋಟಿ ರೂ. ನಿಗದಿ: ಐಪಿಎಲ್ ಹೊಸ ರಿಟೈನ್ ನಿಯಮ

ಇದನ್ನೂ ಓದಿ: T20 World Cup 2021: ಸೆಮಿಫೈನಲ್ ಲೆಕ್ಕಾಚಾರ: ನ್ಯೂಜಿಲೆಂಡ್ ವಿರುದ್ದ ಟೀಮ್ ಇಂಡಿಯಾ ಗೆಲ್ಲಲೇಬೇಕು, ಯಾಕೆ ಗೊತ್ತಾ?

ಇದನ್ನೂ ಓದಿ: ICC T20 Batter Rankings: ನೂತನ ಟಿ20 ರ‍್ಯಾಂಕಿಂಗ್ ಪ್ರಕಟ: ಟೀಮ್ ಇಂಡಿಯಾದ ಇಬ್ಬರ ಸ್ಥಾನ ಕುಸಿತ

(Shahid afridi may be forgotten pakistan 1992 world cup pakistan journey)