ನಿಮ್ಮ ಅಹಂ ನಿಯಂತ್ರಣದಲ್ಲಿಟ್ಟುಕೊಳ್ಳಿ… ಬಿಸಿಸಿಐ ವಿರುದ್ಧ ಶಾಹಿದ್ ಅಫ್ರಿದಿ ಆಕ್ರೋಶ
ICC Champions Trophy 2025: 2008 ರಿಂದ ಟೀಮ್ ಇಂಡಿಯಾ ಕಿಸ್ತಾನಕ್ಕೆ ಪ್ರಯಾಣಿಸಿಲ್ಲ. ಅಲ್ಲದೆ ಕಳೆದ 12 ವರ್ಷಗಳಲ್ಲಿ ಉಭಯ ತಂಡಗಳು ಯಾವುದೇ ದ್ವಿಪಕ್ಷೀಯ ಸರಣಿಯನ್ನು ಸಹ ಆಡಿಲ್ಲ. ಇದೀಗ ಐಸಿಸಿ ಟೂರ್ನಿಗೆ ಪಾಕಿಸ್ತಾನ್ ಆತಿಥ್ಯವಹಿಸಲು ಸಜ್ಜಾಗಿದೆ. ಆದರೆ ಪಾಕ್ನಲ್ಲಿ ಟೂರ್ನಿ ನಡೆದರೆ ಭಾರತ ತಂಡ ಪಾಲ್ಗೊಳ್ಳುವುದಿಲ್ಲ ಎಂದು ತಿಳಿಸಿದೆ.
ಭಾರತ ಮತ್ತು ಪಾಕಿಸ್ತಾನ್ ನಡುವಣ ಚಾಂಪಿಯನ್ಸ್ ಟ್ರೋಫಿ ರಂಪ ಮುಂದುವರೆದಿದೆ. ಪಾಕ್ನಲ್ಲಿ ನಡೆಯಲಿರುವ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ಭಾರತ ಭಾಗವಹಿಸಲ್ಲ ಎಂಬ ಹೇಳಿಕೆಯೊಂದಿಗೆ ಶುರುವಾಗಿರುವ ಈ ಚರ್ಚೆಗೆ ಇದೀಗ ಪಾಕಿಸ್ತಾನ್ ತಂಡದ ಮಾಜಿ ನಾಯಕ ಶಾಹಿದ್ ಅಫ್ರಿದಿ ಕೂಡ ಎಂಟ್ರಿ ಕೊಟ್ಟಿದ್ದಾರೆ.
ಚಾಂಪಿಯನ್ಸ್ ಟ್ರೋಫಿಗೆ ಸಂಬಂಧಿಸಿದ ಸಮಸ್ಯೆ ಬಗ್ಗೆ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿರುವ ಶಾಹಿದ್ ಅಫ್ರಿದಿ, ‘ಕ್ರಿಕೆಟ್ ಒಂದು ಮಹತ್ವದ ಹಂತದಲ್ಲಿ ನಿಂತಿದೆ. ಬಹುಶಃ 1970 ರ ನಂತರ ಪಾಕಿಸ್ತಾನ್ ದೊಡ್ಡ ಸವಾಲನ್ನು ಎದುರಿಸುತ್ತಿದೆ. ಕ್ರೀಡೆಗಾಗಿ ನಾವು ಭಿನ್ನಾಭಿಪ್ರಾಯಗಳನ್ನು ಮರೆತು ಒಂದಾಗುವ ಸಮಯವಿದು. ಇತಿಹಾಸದಿಂದ ವಿಭಜಿಸಲ್ಪಟ್ಟ ಎರಡು ದೇಶಗಳು ಒಲಂಪಿಕ್ಗಾಗಿ ಒಟ್ಟುಗೂಡಬಹುದಾದರೆ, ನಾವು ಕ್ರಿಕೆಟ್‌ಗಾಗಿ ಮತ್ತು ಚಾಂಪಿಯನ್ಸ್ ಟ್ರೋಫಿಗಾಗಿ ಏಕೆ ಅದನ್ನು ಮಾಡಬಾರದು? ಎಂದು ಅಫ್ರಿದಿ ಪ್ರಶ್ನಿಸಿದ್ದಾರೆ.
ಕ್ರಿಕೆಟ್ನ ಮೇಲ್ವಿಚಾರಕರಾಗಿ, ಅಹಂಕಾರಗಳನ್ನು ನಿಯಂತ್ರಣದಲ್ಲಿಟ್ಟುಕೊಳ್ಳಬೇಕು. ಅಲ್ಲದೆ ಕ್ರಿಕೆಟ್ ಬೆಳವಣಿಗೆ ಮೇಲೆ ಗಮನ ಕೇಂದ್ರೀಕರಿಸುವುದು ನಿಮ್ಮ ಜವಾಬ್ದಾರಿಯಾಗಿದೆ ಎಂದು ಶಾಹಿದ್ ಅಫ್ರಿದಿ ತಿಳಿಸಿದ್ದಾರೆ.
ಚಾಂಪಿಯನ್ಸ್ ಟ್ರೋಫಿಯಲ್ಲಿ ಪ್ರತಿಯೊಂದು ತಂಡವನ್ನು ನೋಡಲು ನಾವು (ಪಾಕಿಸ್ತಾನ್) ಬಯಸುತ್ತೇವೆ. ಅಲ್ಲದೆ ನಮ್ಮ ಆತಿಥ್ಯದ ಮೂಲಕ ನಿಮಗೆ ಮರೆಯಲಾಗ ನೆನಪುಗಳನ್ನು ನೀಡುತ್ತೇವೆ ನಾನು ಭಾವಿಸುತ್ತೇನೆ ಎಂದು ಶಾಹಿದ್ ಅಫ್ರಿದಿ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.
ಇಲ್ಲಿ ಶಾಹಿದ್ ಅಫ್ರಿದಿ ಕ್ರಿಕೆಟ್ ಮೇಲ್ವಿಚಾರಕರು ಎಂದು ಪರೋಕ್ಷವಾಗಿ ಬಿಸಿಸಿಐ ಹಾಗೂ ಜಯ್ ಶಾ ಅವರನ್ನು ಪ್ರಸ್ತಾಪಿಸಿದ್ದಾರೆ. ಅಂದರೆ ಇಡೀ ವಿಶ್ವ ಕ್ರಿಕೆಟ್ ಅನ್ನು ಶ್ರೀಮಂತ ಸಂಸ್ಥೆ ಬಿಸಿಸಿಐ ನಿಯಂತ್ರಿಸುತ್ತಿದೆ. ಇದೇ ಕಾರಣದಿಂದಾಗಿ ಅಹಂಕಾರಗಳನ್ನು ನಿಯಂತ್ರಣದಲ್ಲಿಟ್ಟುಕೊಂಡು, ಕ್ರಿಕೆಟ್ ಬೆಳವಣಿಗೆ ಮೇಲೆ ಗಮನ ಕೇಂದ್ರೀಕರಿಸಬೇಕೆಂದು ಅಫ್ರಿದಿ ಹೇಳಿದ್ದಾರೆ.
28 ವರ್ಷಗಳ ಬಳಿಕ ಆತಿಥ್ಯ:
ಪಾಕಿಸ್ತಾನ್ ಕ್ರಿಕೆಟ್ ಬೋರ್ಡ್ 28 ವರ್ಷಗಳ ಬಳಿಕ ಐಸಿಸಿ ಟೂರ್ನಿಗೆ ಆತಿಥ್ಯವಹಿಸಲು ಸಜ್ಜಾಗಿದೆ. 1996 ರಲ್ಲಿ ಏಕದಿನ ವಿಶ್ವಕಪ್ಗೆ ಆತಿಥ್ಯವಹಿಸಿದ್ದ ಪಾಕ್ನಲ್ಲಿ ಆ ಬಳಿಕ ಯಾವುದೇ ಐಸಿಸಿ ಟೂರ್ನಿ ನಡೆದಿರಲಿಲ್ಲ.
ಇದೀಗ 28 ವರ್ಷಗಳ ಬಳಿಕ ಸಿಕ್ಕ ಅವಕಾಶ ಕೂಡ ಕೈ ತಪ್ಪುವ ಭೀತಿ ಎದುರಾಗಿದೆ. ಏಕೆಂದರೆ ಪಾಕಿಸ್ತಾನದಲ್ಲಿ ಚಾಂಪಿಯನ್ಸ್ ಟ್ರೋಫಿ ನಡೆದರೆ ಭಾರತ ತಂಡ ಪಾಲ್ಗೊಳ್ಳುವುದಿಲ್ಲ ಎಂದು ಬಿಸಿಸಿಐ ಸ್ಪಷ್ಟಪಡಿಸಿದೆ. ಒಂದು ವೇಳೆ ಟೀಮ್ ಇಂಡಿಯಾ ಟೂರ್ನಿಯಲ್ಲಿ ಭಾಗವಹಿಸಬೇಕಿದ್ದರೆ, ಹೈಬ್ರಿಡ್ ಮಾದರಿಯಲ್ಲಿ ಪಂದ್ಯಾವಳಿಯನ್ನು ಆಯೋಜಿಸಬೇಕಾಗುತ್ತದೆ.
ಇದನ್ನೂ ಓದಿ: ಸೂರ್ಯನ ಬಳಿ ಚಾನ್ಸ್ ಕೇಳಿ ಸೆಂಚುರಿ ಸಿಡಿಸಿದ ತಿಲಕ್ ವರ್ಮಾ
ಅದರಂತೆ ಚಾಂಪಿಯನ್ಸ್ ಟ್ರೋಫಿ ಪಾಕ್ನಲ್ಲಿ ನಡೆದರೂ, ಭಾರತದ ಪಂದ್ಯಗಳಿಗೆ ಶ್ರೀಲಂಕಾ ಅಥವಾ ಯುಎಇ ಆತಿಥ್ಯವಹಿಸಲಿದೆ. ಆದರೆ ಪಾಕಿಸ್ತಾನ್ ಕ್ರಿಕೆಟ್ ಮಂಡಳಿ ಹೈಬ್ರಿಡ್ ಮಾದರಿಯಲ್ಲಿ ಟೂರ್ನಿ ಆಯೋಜಿಸಲು ಸಿದ್ಧರಿಲ್ಲ. ಹೀಗಾಗಿಯೇ ಇದೀಗ ಇಡೀ ಟೂರ್ನಿಯನ್ನು ಸೌತ್ ಆಫ್ರಿಕಾಗೆ ಶಿಫ್ಟ್ ಮಾಡುವ ಬಗ್ಗೆ ಐಸಿಸಿ ಚಿಂತಿಸಿದೆ.