ಟಿ20 ವಿಶ್ವಕಪ್ನ (T20 World Cup 2021) ಅರ್ಹತಾ ಸುತ್ತಿನಲ್ಲಿ ಭರ್ಜರಿ ಪ್ರದರ್ಶನ ನೀಡಿದ ಸೂಪರ್ 12 ಹಂತಕ್ಕೇರಿದ ಬಾಂಗ್ಲಾದೇಶವು ತಂಡವು ಸತತ ಸೋಲಿನಿಂದ ಕಂಗೆಟ್ಟಿದೆ. ಇತ್ತ ಮೂರು ಸೋಲನುಭವಿಸಿರುವ ಬಾಂಗ್ಲಾ ತಂಡದ ಸೆಮಿಫೈನಲ್ ಕನಸು ಕೂಡ ಕಮರಿದೆ. ಇದರ ಬೆನ್ನಲ್ಲೇ ಇದೀಗ ತಂಡ ಸ್ಟಾರ್ ಆಲ್ರೌಂಡರ್ ಶಕೀಬ್ ಅಲ್ ಹಸನ್ (Shakib Al Hasan) ಕೂಡ ಗಾಯಗೊಂಡು ಹೊರನಡೆದಿದ್ದಾರೆ. ಹ್ಯಾಮ್ಸ್ಟ್ರಿಂಗ್ ಗಾಯದ ಸಮಸ್ಯೆಯ ಕಾರಣ ಶಕೀಬ್ ಮುಂದಿನ ಪಂದ್ಯಗಳಿಗೆ ಅಲಭ್ಯರಾಗಿದ್ದಾರೆ. ಕೊನೆಯ ಎರಡು ಪಂದ್ಯಗಳಲ್ಲಿ ಗೆಲ್ಲುವ ಮೂಲಕ ಮಾನ ಉಳಿಸಿಕೊಳ್ಳುವ ಇರಾದೆಯಲ್ಲಿರುವ ಬಾಂಗ್ಲಾ ಇದೀಗ ಶಕೀಬ್ ಅನುಪಸ್ಥಿತಿಯಲ್ಲಿ ಕಣಕ್ಕಿಳಿಯಲಿದೆ.
ಈ ಬಾರಿಯ ವಿಶ್ವಕಪ್ನಲ್ಲಿ ಎರಡು ವಿಕೆಟ್ ಪಡೆಯುವ ಮೂಲಕ ಶಕೀಬ್ ಅಲ್ ಹಸನ್ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್ನಲ್ಲಿ ಅತೀ ಹೆಚ್ಚು ವಿಕೆಟ್ ಪಡೆದ ದಾಖಲೆ ಬರೆದಿದ್ದರು. ಅಷ್ಟೇ ಅಲ್ಲದೆ ಟಿ20 ವಿಶ್ವಕಪ್ನಲ್ಲೂ ಅತೀ ಹೆಚ್ಚು ವಿಕೆಟ್ ಪಡೆದ ಬೌಲರ್ ಎಂಬ ದಾಖಲೆಯನ್ನೂ ಸಹ ನಿರ್ಮಿಸಿದ್ದರು. ಇದೀಗ ಟಿ20 ವಿಶ್ವಕಪ್ನಲ್ಲಿ ಶಕೀಬ್ ವಿಕೆಟ್ಗಳ ಸಂಖ್ಯೆಯು 40ಕ್ಕೇರಿದೆ. ಇದಕ್ಕೂ ಮುನ್ನ ಪಾಕಿಸ್ತಾನದ ಶಾಹಿದ್ ಅಫ್ರಿದಿ 39 ವಿಕೆಟ್ ಪಡೆದು ಟಿ20 ವಿಶ್ವಕಪ್ನ ಯಶಸ್ವಿ ಬೌಲರ್ ಎನಿಸಿಕೊಂಡಿದ್ದರು. ಇದೀಗ ಈ ದಾಖಲೆಯನ್ನು ನಿರ್ಮಿಸಿ ಶಕೀಬ್ ಅಲ್ ಹಸನ್ ಅರ್ಧದಲ್ಲೇ ಟೂರ್ನಿಯಿಂದ ನಿರ್ಗಮಿಸಿದ್ದಾರೆ.
ಅರ್ಹತಾ ಸುತ್ತಿನಿಂದ ಸೂಪರ್ 12ಗೆ ಎಂಟ್ರಿ ಕೊಟ್ಟಿದ್ದ ಬಾಂಗ್ಲಾ ಈ ಬಾರಿಯ ವಿಶ್ವಕಪ್ನಲ್ಲಿ ನೀರಸ ಪ್ರದರ್ಶನ ನೀಡಿತು. ಶ್ರೀಲಂಕಾ, ಇಂಗ್ಲೆಂಡ್ ಮತ್ತು ವೆಸ್ಟ್ ಇಂಡೀಸ್ ತಂಡಗ ಎದುರು ಬಾಂಗ್ಲಾ ತಂಡ ಸೋಲನುಭವಿಸಿತು. ಇನ್ನು ದಕ್ಷಿಣ ಆಫ್ರಿಕಾ ಮತ್ತು ಆಸ್ಟ್ರೇಲಿಯಾ ವಿರುದ್ಧದ ಪಂದ್ಯಗಳು ಬಾಕಿಯಿದ್ದು, ಈ ಪಂದ್ಯಗಳನ್ನು ಗೆಲ್ಲುವ ಮೂಲಕ ವಿಶ್ವಕಪ್ ಅಭಿಮಾನವನ್ನು ಅಂತ್ಯಗೊಳಿಸುವ ಇರಾದೆಯಲ್ಲಿದೆ.
ಇದನ್ನೂ ಓದಿ: IPL 2022: ನಾಲ್ವರು ಆಟಗಾರರಿಗೆ 42 ಕೋಟಿ ರೂ. ನಿಗದಿ: ಐಪಿಎಲ್ ಹೊಸ ರಿಟೈನ್ ನಿಯಮ
ಇದನ್ನೂ ಓದಿ: T20 World Cup 2021: ಸೆಮಿಫೈನಲ್ ಲೆಕ್ಕಾಚಾರ: ನ್ಯೂಜಿಲೆಂಡ್ ವಿರುದ್ದ ಟೀಮ್ ಇಂಡಿಯಾ ಗೆಲ್ಲಲೇಬೇಕು, ಯಾಕೆ ಗೊತ್ತಾ?
ಇದನ್ನೂ ಓದಿ: ICC T20 Batter Rankings: ನೂತನ ಟಿ20 ರ‍್ಯಾಂಕಿಂಗ್ ಪ್ರಕಟ: ಟೀಮ್ ಇಂಡಿಯಾದ ಇಬ್ಬರ ಸ್ಥಾನ ಕುಸಿತ
(Shakib Al Hasan ruled out of T20 World Cup 2021)