ವಿಚಾರಣೆಗೆ ಬರುವಂತೆ ಶಿಖರ್ ಧವನ್ಗೆ ಸಮನ್ಸ್ ನೀಡಿದ ಇಡಿ; ಕಾರಣವೇನು?
Shikhar Dhawan Summoned by ED: ಭಾರತೀಯ ಕ್ರಿಕೆಟ್ ತಂಡದ ಮಾಜಿ ಆರಂಭಿಕ ಆಟಗಾರ ಶಿಖರ್ ಧವನ್ ಅವರಿಗೆ ಜಾರಿ ನಿರ್ದೇಶನಾಲಯ (ED) ಸಮನ್ಸ್ ಜಾರಿ ಮಾಡಿದೆ. ಆನ್‌ಲೈನ್ ಬೆಟ್ಟಿಂಗ್ ಪ್ಲಾಟ್‌ಫಾರ್ಮ್ 1xBet ನ ಪ್ರಚಾರ ಮಾಡಿದ ಆರೋಪದ ಮೇಲೆ ಈ ಸಮನ್ಸ್ ಜಾರಿಯಾಗಿದೆ. ಇದಕ್ಕೂ ಮುನ್ನ ಸುರೇಶ್ ರೈನಾ ಮತ್ತು ಹರ್ಭಜನ್ ಸಿಂಗ್ ಅವರನ್ನೂ ED ವಿಚಾರಣೆಗೆ ಕರೆದಿತ್ತು. ಅಕ್ರಮ ಬೆಟ್ಟಿಂಗ್ ಆ್ಯಪ್ ಪ್ರಚಾರದ ತನಿಖೆ ವ್ಯಾಪಕವಾಗಿದ್ದು, ಹಲವು ಬಾಲಿವುಡ್ ಮತ್ತು ದಕ್ಷಿಣ ಭಾರತದ ನಟರು ಕೂಡಾ ಈ ತನಿಖೆಯ ವ್ಯಾಪ್ತಿಯಲ್ಲಿದ್ದಾರೆ.

ಕಳೆದ ವರ್ಷ ಅಂತಾರಾಷ್ಟ್ರೀಯ ಕ್ರಿಕೆಟ್ ವಿದಾಯ ಹೇಳಿ ವೈಯಕ್ತಿಕ ಜೀವನದ ಕಡೆ ಗಮನಹರಿಸಿರುವ ಟೀಂ ಇಂಡಿಯಾದ ಮಾಜಿ ಆರಂಭಿಕ ಆಟಗಾರ ಶಿಖರ್ ಧವನ್ (Shikhar Dhawan) ಅವರಿಗೆ ಜಾರಿ ನಿರ್ದೇಶನಾಲಯ (ED) ಸಮನ್ಸ್ ಜಾರಿ ಮಾಡಿದೆ. ಬೆಟ್ಟಿಂಗ್ ಆ್ಯಪ್ ಪ್ರಚಾರಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಧವನ್ ಅವರನ್ನು ಜಾರಿ ನಿರ್ದೇಶನಾಲಯ ವಿಚಾರಣೆಗೆ ಕರೆದಿದೆ. ವಾಸ್ತವವಾಗಿ ಶಿಖರ್ ಧವನ್ ಸೋಶಿಯಲ್ ಮೀಡಿಯಾದಲ್ಲಿ ಆನ್‌ಲೈನ್ ಬೆಟ್ಟಿಂಗ್ ಪ್ಲಾಟ್‌ಫಾರ್ಮ್ 1xBet ನ ಪ್ರಚಾರ ಮಾಡಿದ್ದರು. ಹೀಗಾಗಿ ಈ ವಿಚಾರಕ್ಕೆ ಸಂಬಂಧಿಸಿದಂತೆ ಸ್ಪಷ್ಟೀಕರಣ ನೀಡಲು ಶಿಖರ್ ಧವನ್ ಅವರನ್ನು ವಿಚಾರಣೆಗೆ ಕರೆಯಲಾಗಿದೆ ಎಂದು ವರದಿಯಾಗಿದೆ. ವಾಸ್ತವವಾಗಿ ಶಿಖರ್ ಧವನ್ಗೂ ಮುನ್ನ ಟೀಂ ಇಂಡಿಯಾದ ಮಾಜಿ ಕ್ರಿಕೆಟಿಗರಾದ ಸುರೇಶ್ ರೈನಾ ಮತ್ತು ಹರ್ಭಜನ್ ಸಿಂಗ್ ಅವರನ್ನು ಸಹ ED ವಿಚಾರಣೆಗೆ ಒಳಪಡಿಸಿತ್ತು.
ಹಲವು ಸ್ಟಾರ್ಗಳ ತನಿಖೆ ನಡೆದಿದೆ
ಕಳೆದ ವರ್ಷದಿಂದ, ಅಕ್ರಮ ಬೆಟ್ಟಿಂಗ್ ಆ್ಯಪ್‌ಗಳನ್ನು ಪ್ರಚಾರ ಮಾಡಿದ್ದಕ್ಕಾಗಿ ಅನೇಕ ಬಾಲಿವುಡ್ ಮತ್ತು ದಕ್ಷಿಣ ಭಾರತದ ಚಲನಚಿತ್ರ ನಟರು ಮತ್ತು ಕ್ರಿಕೆಟಿಗರು ತನಿಖೆಗೆ ಒಳಗಾಗಿದ್ದಾರೆ. ಈ ಪಟ್ಟಿಯಲ್ಲಿ ವಿಜಯ್ ದೇವರಕೊಂಡ, ರಾಣಾ ದಗ್ಗುಬಾಟಿ, ಪ್ರಕಾಶ್ ರಾಜ್, ಹರ್ಭಜನ್ ಸಿಂಗ್, ಊರ್ವಶಿ ರೌಟೇಲಾ ಮತ್ತು ಸುರೇಶ್ ರೈನಾ ಸೇರಿದ್ದಾರೆ. ಈಗ ಶಿಖರ್ ಧವನ್ ಅವರ ಹೆಸರೂ ಇದಕ್ಕೆ ಸೇರ್ಪಡೆಯಾಗಿದೆ. ಇತ್ತೀಚೆಗೆ, ಭಾರತದ ಮಾಜಿ ಕ್ರಿಕೆಟಿಗರಾದ ಸುರೇಶ್ ರೈನಾ ಮತ್ತು ಹರ್ಭಜನ್ ಸಿಂಗ್ ಅವರು ಇಡಿ ಮುಂದೆ ತಮ್ಮ ಹೇಳಿಕೆಗಳನ್ನು ದಾಖಲಿಸಿದ್ದರು. ಈಗ ಈ ಪ್ರಕರಣದಲ್ಲಿ ಶಿಖರ್ ಧವನ್ ಅವರಿಗೆ ಇಡಿ ಸಮನ್ಸ್ ಜಾರಿ ಮಾಡಿದೆ.
ಕೋಟ್ಯಾಂತರ ರೂಪಾಯಿ ವಂಚನೆ
ಇಡಿ, ಅಕ್ರಮ ಬೆಟ್ಟಿಂಗ್ ಅಪ್ಲಿಕೇಶನ್‌ಗಳಿಗೆ ಸಂಬಂಧಿಸಿದ ಹಲವು ಪ್ರಕರಣಗಳ ತನಿಖೆ ನಡೆಸುತ್ತಿದೆ. ಇಂತಹ ಬೆಟ್ಟಿಂಗ್ ಅಪ್ಲಿಕೇಶನ್‌ಗಳು ಕಾನೂನುಬಾಹಿರ ಮಾತ್ರವಲ್ಲ, ಅವುಗಳ ಮೂಲಕ ದೊಡ್ಡ ಪ್ರಮಾಣದ ಹಣ ವರ್ಗಾವಣೆ ಚಟುವಟಿಕೆಗಳು ಸಹ ನಡೆಯುತ್ತಿವೆ ಎಂಬುದು ತನಿಖೆಯಿಂದ ತಿಳಿದುಬಂದಿದೆ. ಈ ಅಪ್ಲಿಕೇಶನ್‌ಗಳು ಲಕ್ಷಾಂತರ ಜನರನ್ನು ಮತ್ತು ಹೂಡಿಕೆದಾರರಿಗೆ ಕೋಟ್ಯಂತರ ರೂಪಾಯಿ ವಂಚಿಸಿದೆ ಅಥವಾ ಭಾರಿ ಪ್ರಮಾಣದ ತೆರಿಗೆಯನ್ನು ತಪ್ಪಿಸಿದೆ ಎಂದು ಆರೋಪಿಸಲಾಗಿದೆ.
ಹೊಸ ಪ್ರೇಯಸಿಗಾಗಿ ಐಷರಾಮಿ ಫ್ಲಾಟ್ ಖರೀದಿಸಿದ ಶಿಖರ್ ಧವನ್; ಇದರ ಬೆಲೆ ಎಷ್ಟು ಕೋಟಿ ಗೊತ್ತಾ?
ಶಿಖರ್ ಧವನ್ ವೃತ್ತಿಜೀವನ
ಶಿಖರ್ ಧವನ್ 2022 ರಲ್ಲಿ ತಮ್ಮ ಕೊನೆಯ ಅಂತರರಾಷ್ಟ್ರೀಯ ಕ್ರಿಕೆಟ್ ಪಂದ್ಯವನ್ನು ಆಡಿದ್ದರು, ನಂತರ ಅವರಿಗೆ ಟೀಂ ಇಂಡಿಯಾ ಪರ ಆಡಲು ಅವಕಾಶ ಸಿಗಲಿಲ್ಲ. ಅದೇ ಸಮಯದಲ್ಲಿ, 2024 ರ ಐಪಿಎಲ್ನಲ್ಲಿ ಆಡಿದ ನಂತರ ಧವನ್ ಎಲ್ಲಾ ಸ್ವರೂಪಗಳಿಂದ ನಿವೃತ್ತಿ ಘೋಷಿಸಿದ್ದರು. ಧವನ್ ಭಾರತೀಯ ಕ್ರಿಕೆಟ್‌ನ ಅತ್ಯುತ್ತಮ ಎಡಗೈ ಆರಂಭಿಕ ಬ್ಯಾಟ್ಸ್‌ಮನ್‌ಗಳಲ್ಲಿ ಒಬ್ಬರಾಗಿದ್ದು, ಐಸಿಸಿ ಪಂದ್ಯಾವಳಿಗಳಲ್ಲಿ ಅವರ ಪ್ರದರ್ಶನ ಅತ್ಯುತ್ತಮವಾಗಿದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:12 pm, Thu, 4 September 25
