T20 World Cup 2022: ಟಿ20 ವಿಶ್ವಕಪ್ನಲ್ಲಿ ಸಿಡಿಲಬ್ಬರದ ಬ್ಯಾಟಿಂಗ್ ಮೂಲಕ ಪಾಕಿಸ್ತಾನ್ ತಂಡಕ್ಕೆ ಸೋಲುಣಿಸಿ ವಿರಾಟ್ ಕೊಹ್ಲಿ (Virat Kohli) ಮತ್ತೊಮ್ಮೆ ಸಂಚಲನ ಸೃಷ್ಟಿಸಿದ್ದಾರೆ. ಕಳೆದ ಕೆಲ ತಿಂಗಳಿಂದ ಕಳಪೆ ಫಾರ್ಮ್ನಿಂದ ಬಳಲುತ್ತಿದ್ದ ಕೊಹ್ಲಿ ಏಷ್ಯಾಕಪ್ ಮೂಲಕ ಲಯಕ್ಕೆ ಮರಳಿದ್ದರು. ಇದೀಗ ಆಸ್ಟ್ರೇಲಿಯಾ ಪಿಚ್ನಲ್ಲಿ ಬಲಿಷ್ಠ ವೇಗದ ಬೌಲಿಂಗ್ ಲೈನಪ್ ಹೊಂದಿರುವ ಪಾಕ್ ತಂಡದ ವಿರುದ್ಧವೇ ಅಬ್ಬರಿಸುವ ಮೂಲಕ ತಮ್ಮ ಹಳೆಯ ಖದರ್ ತೋರಿಸಿದ್ದಾರೆ. ಆದರೆ ಈ ಅಬ್ಬರದ ಬೆನ್ನಲ್ಲೇ ವಿರಾಟ್ ಕೊಹ್ಲಿ ಟಿ20 ಕ್ರಿಕೆಟ್ನಿಂದ ನಿವೃತ್ತಿ ನೀಡಬೇಕೆಂಬ ಆಗ್ರಹ ವ್ಯಕ್ತಪಡಿಸಿದ್ದಾರೆ ಪಾಕಿಸ್ತಾನದ ಮಾಜಿ ವೇಗಿ ಶೊಯೇಬ್ ಅಖ್ತರ್.
ಪಾಕಿಸ್ತಾನ್ ವಿರುದ್ಧದ ಟೀಮ್ ಇಂಡಿಯಾ ಗೆಲುವಿನ ಬಳಿಕ ಮಾತನಾಡಿದ ಅಖ್ತರ್, ವಿರಾಟ್ ಕೊಹ್ಲಿ ಟಿ20 ಕ್ರಿಕೆಟ್ನಿಂದ ನಿವೃತ್ತರಾದರೆ ಉತ್ತಮ. ಏಕೆಂದರೆ ಆತ ತನ್ನೆಲ್ಲಾ ಎನರ್ಜಿಯನ್ನು ಟಿ20 ಕ್ರಿಕೆಟ್ನಲ್ಲಿ ಹಾಕುತ್ತಿರುವುದು ನನಗೆ ಯಾಕೋ ಸರಿ ಕಾಣುತ್ತಿಲ್ಲ ಎಂದಿದ್ದಾರೆ.
ಅಷ್ಟೇ ಅಲ್ಲದೆ ಪಾಕಿಸ್ತಾನ್ ವಿರುದ್ಧ ವಿರಾಟ್ ಕೊಹ್ಲಿ ಆಡಿದ ರೀತಿಯನ್ನು ನೋಡಿದರೆ, ಅವರು ಏಕದಿನ ಕ್ರಿಕೆಟ್ನಲ್ಲಿ 3 ಶತಕ ಬಾರಿಸಬಹುದಿತ್ತು. ಅಂತಹದೊಂದು ಬದ್ಧತೆಯನ್ನು ಅವರು ಆ ಪಂದ್ಯದಲ್ಲಿ ತೋರಿಸಿದ್ದರು. ಹೀಗಾಗಿ ತಮ್ಮೆಲ್ಲಾ ಸಾಮರ್ಥ್ಯವನ್ನು ಟಿ20 ಕ್ರಿಕೆಟ್ನಲ್ಲಿ ವ್ಯಯಿಸುರುತ್ತಿರುವುದು ನನಗೆ ಸರಿ ಕಾಣುತ್ತಿಲ್ಲ. ಹೀಗಾಗಿ ಅವರು ಟಿ20 ಕ್ರಿಕೆಟ್ಗೆ ನಿವೃತ್ತಿ ನೀಡಿ ಏಕದಿನ ಹಾಗೂ ಟೆಸ್ಟ್ ಕ್ರಿಕೆಟ್ನತ್ತ ಹೆಚ್ಚಿನ ಗಮನ ನೀಡಬೇಕೆಂದು ನಾನು ಬಯಸುತ್ತೇನೆ ಎಂದು ಶೊಯೇಬ್ ಅಖ್ತರ್ ತಿಳಿಸಿದ್ದಾರೆ.
ಇತ್ತ ಶೊಯೇಬ್ ಅಖ್ತರ್ ಅವರ ಈ ಹೇಳಿಕೆಯನ್ನು ಇದೀಗ ನೆಟ್ಟಿಗರು ವ್ಯಂಗ್ಯವಾಡುತ್ತಿದ್ದಾರೆ. ಒಬ್ಬ ಆಟಗಾರ ಟಿ20 ಕ್ರಿಕೆಟ್ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ್ದರೆ, ಏಕದಿನ ಕ್ರಿಕೆಟ್ನಲ್ಲೂ ಲೀಲಾಜಾಲವಾಗಿ ಬ್ಯಾಟ್ ಬೀಸಬಹುದಲ್ಲವೇ ಎಂದು ಅನೇಕರು ಪ್ರಶ್ನಿಸಿದ್ದಾರೆ.
ವಿರಾಟ್ ಕೊಹ್ಲಿ ಆಡಿದ್ರೂ ಸಮಸ್ಯೆ, ಆಡದಿದ್ದರೂ ಸಮಸ್ಯೆ…ಅವರ ಹೆಸರಿನಲ್ಲಿ ಕೆಲವರು ಸದಾ ಚರ್ಚೆಯಲ್ಲಿರುತ್ತಾರೆ. ಅಂತಹವರಲ್ಲಿ ನೀವು ಕೂಡ ಒಬ್ಬರು ಎಂದು ಶೊಯೇಬ್ ಅಖ್ತರ್ ಅವರ ಹೇಳಿಕೆಯನ್ನು ಕೊಹ್ಲಿ ಅಭಿಮಾನಿಯೊಬ್ಬರು ವ್ಯಂಗ್ಯವಾಡಿದ್ದಾರೆ.
Published On - 2:24 pm, Wed, 26 October 22